ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ: ಎಗ್ಗಿಲ್ಲದೇ ನಡೆಯುತ್ತಿದೆ ಮರಳು ದಂಧೆ

ರಾತ್ರಿ ವೇಳೆ ಎತ್ತಿನ ಬಂಡಿಯಲ್ಲಿ ಸಾಗಾಟ, ಕ್ರಮಕ್ಕೆ ನದಿ ತೀರದ ಗ್ರಾಮಸ್ಥರ ಆಗ್ರಹ
Last Updated 3 ನವೆಂಬರ್ 2021, 16:32 IST
ಅಕ್ಷರ ಗಾತ್ರ

ಕೊಳ್ಳೇಗಾಲ: ತಾಲ್ಲೂಕಿನ ಕಾವೇರಿ ನದಿ ತೀರದ ಗ್ರಾಮಗಳಲ್ಲಿ ಮರಳು ಅಕ್ರಮ ದಂಧೆ ಎಗ್ಗಿಲ್ಲದೇ ನಡೆದಿದೆ.

ತಾಲ್ಲೂಕು ಆಡಳಿತದ ಅಧಿಕಾರಿಗಳು, ಪೊಲೀಸರು ಇದಕ್ಕೆ ಕಡಿವಾಣ ಹಾಕಲು ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ತಾಲ್ಲೂಕಿನಲ್ಲಿ ಹಾದು ಹೋಗಿರುವ ಕಾವೇರಿ ನದಿ ಪಾತ್ರದಲ್ಲಿ 9 ಗ್ರಾಮಗಳು ಬರುತ್ತವೆ. ಈ ಪೈಕಿ ಹಳೇ ಹಂಪಾಪುರ, ದಾಸನಪುರ ಗ್ರಾಮಗಳಲ್ಲಿ ಮರಳು ಅಕ್ರಮ ದಂಧೆ ವ್ಯವಸ್ಥಿತವಾಗಿ ನಡೆಯುತ್ತಿದೆ.

‘ಮರಳು ಗಣಿಗಾರಿಕೆಯಿಂದ ಹಲವು ಸಮಸ್ಯೆಗಳು ಉಂಟಾಗಿದೆ.ಭೂಮಿಯನ್ನು ಆಳವಾಗಿ ಬಗೆಯುವುದರಿಂದ ಕೃಷಿ ಭೂಮಿ ಬರಡಾಗುತ್ತಿದೆ. ಮರಳು ಫಿಲ್ಟರ್‌ಗೆ ಕೆರೆ ಕಟ್ಟೆಗಳ ನೀರು ಬಳಸುವುದು, ಕೆರೆ–ಕಟ್ಟೆಗಳ ಅಂಗಳದಲ್ಲೇ ಮರಳು ದೋಚುವುದರಿಂದ ನೀರಿನ ಮೂಲಗಳು ಬರಿದಾಗುತ್ತಿವೆ’ ಎಂದು ನದಿ ತೀರದ ಗ್ರಾಮಸ್ಥರು ಆರೋಪಿಸುತ್ತಾರೆ.

ರಾತ್ರಿಯ ಚಟುವಟಿಕೆ: ರಾತ್ರಿ ಹೊತ್ತಿನಲ್ಲಿ ಮರಳಿನಅಕ್ರಮ ಚಟುವಟಿಕೆ ನಡೆಯುತ್ತಿದೆ. ಮರಳು ಸಂಗ್ರಹ, ಸಾಗಾಟ ಎಲ್ಲವೂ ರಾತ್ರಿಯೇ ಮುಗಿದುಹೋಗುತ್ತದೆ. ಬೆಳಗಾಗುವಷ್ಟರಲ್ಲಿ ಏನೂ ನಡೆದಿಲ್ಲವೆನೋ ಎಂಬಂತಹ ವಾತಾವರಣ ಕಂಡು ಬರುತ್ತದೆ. ಪೊಲೀಸರಿಗೆ ತಿಳಿದೇ ಈ ಮರಳು ಸಂಗ್ರಹ, ಸಾಗಾಟ ನಡೆಯುತ್ತದೆ ಎಂದು ನೇರ ಆರೋಪ ಮಾಡುತ್ತಾರೆ ಗ್ರಾಮಸ್ಥರು.

ಎತ್ತಿನ ಗಾಡಿಗಳಲ್ಲಿ ಸಾಗಾಟ: ಸಂಗ್ರಹಿಸಿದ ಮರಳನ್ನು ಎತ್ತಿನ ಬಂಡಿಗಳಲ್ಲಿ ಸಾಗಾಟ ಮಾಡಲಾಗುತ್ತದೆ.

‘ಲಾರಿ, ಟ್ರಾಕ್ಟರ್‌ಗಳಲ್ಲಿ ಮರಳು ದಂಧೆ ನಡೆಯುವುದಿಲ್ಲ. ಹೊರಗಿನವರು ಯಾರೂ ಇಲ್ಲಿಗೆ ಬರುವುದಿಲ್ಲ. ಕೆಲವು ಗ್ರಾಮಸ್ಥರೇ ಈ ದಂಧೆಯಲ್ಲಿ ಭಾಗಿಯಾಗುತ್ತಿದ್ದಾರೆ. ಗ್ರಾಮಗಳಲ್ಲಿ ಅನೇಕರು ಎತ್ತಿನಗಾಡಿಗಳನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಆದರೆ, ಎಲ್ಲರೂ ಈ ದಂಧೆಯಲ್ಲಿ ತೊಡಗಿಲ್ಲ. ಕೆಲವರು ಮಾತ್ರ ಕಳ್ಳ ಕೆಲಸ ಮಾಡುತ್ತಿದ್ದಾರೆ’ ಎಂದು ನದಿ ತೀರದ ಗ್ರಾಮಸ್ಥ ರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾತ್ರಿಯಾದರೆ ಸಾಕು ದಂಧೆ ಶುರುವಾಗುತ್ತದೆ. ಇದನ್ನು ಕೇಳುವುದಕ್ಕೆ ಯಾರೂ ಇಲ್ಲ. ನಾವು ಕೇಳಿದರೆ ಜಗಳಕ್ಕೇ ಬರುತ್ತಾರೆ’ ಎಂದುಗ್ರಾಮಸ್ಥ ಸಿದ್ದರಾಜು ಅಸಹಾಯಕತೆ ವ್ಯಕ್ತಪಡಿಸಿದರು.

ಬೈಕ್‌ಗಳಲ್ಲೂ ಸಾಗಾಟ!

ನದಿಯಿಂದ ಸಂಗ್ರಹಿಸಿದ ಮರಳನ್ನು ಎತ್ತಿನಗಾಡಿಗಳಲ್ಲಿ ತಂದು ಗ್ರಾಮದ ಹೊರವಲಯದ ನಿರ್ಜನ ಪ್ರದೇಶ, ಜಮೀನು ಸೇರಿದಂತೆ ವಿವಿಧೆಡೆ ಮರಳನ್ನು ಸಂಗ್ರಹಿಸಲಾಗುತ್ತದೆ. ಅಲ್ಲಿಂದ ಬೇರೆ ಕಡೆಗಳಿಗೆ ಸರಬರಾಜು ಮಾಡಲಾಗುತ್ತಿದೆ.

‘ಬೆಳಗಿನ ಹೊತ್ತು ಮರಳನ್ನು ಚೀಲಗಳಲ್ಲಿ ತುಂಬಿ ಬೈಕ್‌ಗಳಲ್ಲಿ ನಗರಕ್ಕೆ ಸರಬರಾಜು ಮಾಡುತ್ತಾರೆ. 25 ಕೆ.ಜಿ. ಚೀಲದಲ್ಲಿ ಮರಳನ್ನು ಸಾಗಿಸುತ್ತಾರೆ. ಒಂದು ಚೀಲಕ್ಕೆ ₹ 150ರಿಂದ ₹ 200ರವರೆಗೆ ಬೆಲೆ ಇದೆ. ಕೆಲವು ಸಂದರ್ಭದಲ್ಲಿ ಮರಳು ಮೂಟೆಗಳನ್ನು ಕಾರಿನಲ್ಲಿ ಸಾಗಿಸುವವರೂ ಇದ್ದಾರೆ. ಮರಳು ಬೇಕಾದರೆ, ಕಟ್ಟಡ ನಿರ್ಮಾಣ ನಡೆಯುತ್ತಿರುವ ಜಾಗಕ್ಕೆ ನೇರವಾಗಿ ಬೈಕ್‌ಗಳಲ್ಲಿ ಪೂರೈಸುತ್ತಾರೆ’ ಎಂದು ನಗರದ ನಿವಾಸಿ ಮಹದೇವ ಹೇಳಿದರು.

--

ಮರಳು ದಂಧೆಗೆ ಅವಕಾಶ ಇಲ್ಲ. ನಡೆಸುತ್ತಿರುವವರ ವಿರುದ್ಧ ಕ್ರಮ ಖಚಿತ. ನದಿ ತೀರದ ಗ್ರಾಮಗಳಲ್ಲಿ ನಿಗಾ ವಹಿಸಲು ಸೂಚಿಸಿದ್ದೇನೆ
ಕೆ.ಎಸ್‌.ಸುಂದರ್‌ರಾಜ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ

---

ಪೊಲೀಸರಿಗೆ ಪರಿಶೀಲಿಸಲು ಸೂಚಿಸುತ್ತೇನೆ. ನಾನೂ ಗಮನಿಸತ್ತೇನೆ. ದಂಧೆ ನಡೆಯುತ್ತಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು
ಕುನಾಲ್, ತಹಶೀಲ್ದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT