ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡೆಯಿಂದ ಬಾಂಧವ್ಯವೂ ವೃದ್ಧಿ: ನ್ಯಾಯಾಧೀಶ ಸದಾಶಿವ

ಮೂರು ದಿನಗಳ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ
Last Updated 5 ಮಾರ್ಚ್ 2021, 15:23 IST
ಅಕ್ಷರ ಗಾತ್ರ

ಚಾಮರಾಜನಗರ: ‘ಕ್ರೀಡೆಗಳು ದೈಹಿಕ, ಮಾನಸಿಕ ಆರೋಗ್ಯಕ್ಕೆ ಮಾತ್ರವಲ್ಲ, ಸ್ನೇಹ– ಸಂಬಂಧ, ವಿಶ್ವಾಸ ವೃದ್ಧಿಸಲೂ ಸಹಕಾರಿ.ಕ್ರೀಡಾಪಟುಗಳು ಸೋಲು ಗೆಲುವುಗಳ ಬಗ್ಗೆ ಚಿಂತನೆ ಬಿಟ್ಟು ಆಟದಲ್ಲಿ ತೊಡಗಬೇಕು’ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಸದಾಶಿವ ಎಸ್‌.ಸುಲ್ತಾನ್‌ಪುರಿ ಅವರು ಶುಕ್ರವಾರ ಪ್ರತಿಪಾದಿಸಿದರು.

ನಗರದ ಜಿಲ್ಲಾ ಪೊಲೀಸ್‌ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆಯ ಮೂರು ದಿನಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಕ್ರೀಡಾ ಚಟುವಟಿಕೆಗಳಲ್ಲಿ ತೊಡಗುವುದರಿಂದ ಶಾಂತಿ ಮತ್ತು ನೆಮ್ಮದಿ ದೊರಕುತ್ತದೆ. ಆಟೋಟಗಳಲ್ಲಿ ಸಕ್ರಿಯವಾಗಿ ತೊಡಗುವುದರಿಂದ ನಮ್ಮಲ್ಲಿರುವ ಕೆಲವು ಭಿನ್ನಾಭಿಪ್ರಾಯಗಳೂ ದೂರವಾಗುತ್ತವೆ’ ಎಂದು ಹೇಳಿದರು.

‘ಪೊಲೀಸರು ದಿನದ 24 ಗಂಟೆ ಕಾಲ ಕಾನೂನು ರಕ್ಷಣೆ, ಕಾನೂನು ಸುವ್ಯವಸ್ಥೆ, ಅಪರಾಧಿಗಳ ಹುಡುಕಾಟದಲ್ಲಿ ನಿರತರಾಗುವ ಮೂಲಕ ಸಮಾಜದ ಒಳಿತನ್ನು ಕಾಪಾಡಲು ಶ್ರಮಿಸುತ್ತಿದ್ದಾರೆ. ಅವರು ಇಲ್ಲದಿದ್ದರೆ ಸಮಾಜ ಸುಸ್ಥಿತಿಯಲ್ಲಿಡಲು ಸಾಧ್ಯವಿಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಮಾತನಾಡಿ, ‘ದೈನಂದಿನ ಕೆಲಸದ ಜಂಜಾಟದಲ್ಲಿ ಸಾಕಷ್ಟು ಸಮಯ ಕಳೆದು ಹೋಗುತ್ತದೆ. ಹೀಗಾಗಿ ಪೊಲೀಸರಿಗೆ ಕ್ರೀಡೆ ಬಹಳ ಅತ್ಯವಶ್ಯಕ. ದೈಹಿಕ ಹಾಗೂ ಮಾನಸಿಕ ಸದೃಢತೆ ಬಹಳ ಮುಖ್ಯ. ಯಾರೇ ಆಗಿರಲಿ ಮಾನಸಿಕವಾಗಿ ಸದೃಢವಾಗಿದ್ದರೆ ಕೆಲಸದಲ್ಲಿಯೂ ಅತ್ಯುನ್ನತ್ತ ಫಲಿತಾಂಶ ಕೊಡಲು ಸಾಧ್ಯ’ ಎಂದು ಹೇಳಿದರು.

‘ಕ್ರೀಡಾ ಜ್ಯೋತಿಯನ್ನು ಸಾಂಕೇತಿಕವಾಗಿ ಬಳಸುವ ಉದ್ದೇಶ ಕ್ರೀಡಾ ಸ್ಫೂರ್ತಿ ಮತ್ತು ಕ್ರೀಡಾ ಮನೋಭಾವವನ್ನು ತಿಳಿಸುವುದು. ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಕ್ರೀಡಾ ಮನೋಭಾವನೆಯನ್ನು ಜೀವನದಲ್ಲಿಯೂ ಅಳವಡಿಸಿಕೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಹರ್ಷಲ್ ಭೊಯರ್‌ ನಾರಾಯಣ ರಾವ್ ಅವರು ಮಾತನಾಡಿ, ‘ಇಂತಹ ಕ್ರೀಡಾಕೂಟಗಳು ಕೆಲಸದ ನಡುವೆಯೂ ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬದವರಿಗೆ ಸಂತೋಷ ಮತ್ತು ಹುರುಪು ತರುತ್ತದೆ’ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣವರ್, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಡಿವೈಎಸ್‌ಪಿ ಅನ್ಸರ್ ಅಲಿ ಇದ್ದರು.

ಭಾನುವಾರ ಸಮಾರೋಪ: ಕ್ರೀಡಾಕೂಟವು ಮೂರು ದಿನಗಳ ಕಾಲ ನಡೆಯಲಿದ್ದು ಭಾನುವಾರ (ಮಾರ್ಚ್‌ 7) ಮುಕ್ತಾಯ ಕಾಣಲಿದೆ. ಅಂದು ಸಂಜೆ 4 ಗಂಟೆಗೆ ಕ್ರೀಡಾಕೂಟದ ಸಮಾರೋಪ ನಡೆಯಲಿದೆ. ದಕ್ಷಿಣ ವಲಯದ ಐಜಿಪಿ ಪ್ರವೀಣ್ ಮಧುಕರ್ ಪವಾರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಬಹುಮಾನ ವಿತರಿಸುವರು.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್‌ಕುಮಾರ್, ಬಂಡೀಪುರ ಹುಲಿ ಯೋಜನೆ ನಿರ್ದೇಶಕ ನಟೇಶ್, ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಾಣಾಧಿಕಾರಿ ವಿ.ಏಡುಕುಂಡಲು, ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಸಂತೋಷ್‌ಕುಮಾರ್ ಅವರು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT