ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೃಷಿ ಕಾಯ್ದೆಗಳ ವಿರೋಧಿ ಜನಜಾಗೃತಿ ಜಾಥಾಗೆ ಚಾಲನೆ

ಮಹದೇಶ್ವರ ಬೆಟ್ಟದಿಂದ ಆರಂಭ, 15ಕ್ಕೆ ಬೆಂಗಳೂರಿಗೆ ತಲುಪಲಿರುವ ಜಾಥಾ
Published : 9 ಮಾರ್ಚ್ 2022, 11:01 IST
ಫಾಲೋ ಮಾಡಿ
Comments

ಮಹದೇಶ್ವರಬೆಟ್ಟ: ಕೇಂದ್ರ ಸರ್ಕಾರ ಮಾಡಿರುವ ರೀತಿ ರಾಜ್ಯ ಸರ್ಕಾರವೂ ಮೂರುಕೃಷಿ ವಿರೋಧಿ ಕಾನೂನುಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಕರ್ನಾಟಕ ಜನಾಂದೋಲನಗಳ ಮಹಾಮೈತ್ರಿ ವತಿಯಿಂದ ಬೆಂಗಳೂರುವರೆಗಿನ ಜನಜಾಗೃತಿ ಜಾಥಾಗೆ ಬುಧವಾರ ಮಹದೇಶ್ವರ ಬೆಟ್ಟದಲ್ಲಿ ಚಾಲನೆ ಸಿಕ್ಕಿತು.

ಮಲೆ ಮಹದೇಶ್ವರಸ್ವಾಮಿಯ ದೇವಾಲಯದ ಮುಂಭಾಗ ಸೇರಿದ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

’ರೈತರ ನಿರಂತರ ಹೋರಾಟಕ್ಕೆ ಮಣಿದು ಕೇಂದ್ರ ಸರ್ಕಾರ ಈಗಾಗಲೇ ಮೂರು ರೈತ ವಿರೋಧಿ ಶಾಸನಗಳನ್ನು ವಾಪಸ್‌ ಪಡೆದಿದೆ. ಆದರೆ ಕರ್ನಾಟಕ ಸರ್ಕಾರ ಕಾಯ್ದೆಗಳನ್ನು ಹಿಂಪಡೆದಿಲ್ಲ. ಇವುಗಳು ರೈತ, ದಲಿತ ಹಾಗೂ ಜನವಿರೋಧಿ ಕಾಯ್ದೆಗಳು. ಹೀಗಾಗಿ, 2020ರ ಕರ್ನಾಟಕ ಭೂ ಸುಧಾರಣಾ (ತಿದ್ದುಪಡಿ) ಕಾಯ್ದೆ, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ನಿಯಂತ್ರಣ ಅಭಿವೃದ್ಧಿ) ಕಾಯ್ದೆ ಹಾಗೂ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ (ನಿಷೇಧ ಮತ್ತು ಸಂರಕ್ಷಣೆ) ಕಾಯ್ದೆಯನ್ನು ರದ್ದುಗೊಳಿಸಬೇಕು‘ ಎಂದು ಆಗ್ರಹಿಸಿದರು.

’ಐತಿಹಾಸಿಕವಾದಂತಹ ಜನಜಾಗೃತಿ ಜಾಥಾ ರಾಜ್ಯದಾದ್ಯಂತ ನಡೆಯಲಿದೆ. ಉತ್ತರ ಕರ್ನಾಟಕದಲ್ಲಿ ಈಗಾಗಲೇ ಆರಂಭವಾಗಿದೆ. ಈ ಹೋರಾಟಕ್ಕೆ ವಿವಿಧ ಸಂಘಗಳ, ಜನ ಬೆಂಬಲ ದೊರೆಯುತ್ತಿದೆ. ಕಾಯ್ದೆಗಳ ಕುರಿತಾಗಿ ಜನ ಜಾಗೃತಿ ಮೂಡಿಸಲು ಹಾಗೂ ಸಾರ್ವಜನಿಕ ಬಹಿರಂಗ ಸಂವಾದಗಳನ್ನು ನಡೆಸಿ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಲಾಗುತ್ತಿದೆ. ಉಳುವವನೇ ಭೂ ಒಡೆಯನಾಗಬೇಕೆಂಬ ಪ್ರಧಾನ ಆಶಯಕ್ಕೆ ವಿರುದ್ಧವಾಗಿ ಉಳ್ಳವರಿಗೆ ಎಲ್ಲ ಭೂಮಿ ಎಂಬ ನೀತಿ ಜಾರಿಗೊಳಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ‘ ಎಂದು ಅಸಮಾಧಾನ ವ್ಯಕ್ತಪಡಿಸಿದರು.

’ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಯ್ದೆಯಿಂದ ಬಂಡವಾಳಶಾಹಿಗಳಿಗೆ ಲಾಭವಾಗಲಿದ್ದು, ರೈತರಿಗೆ ನಷ್ಟ ಉಂಟಾಗಲಿದೆ. ರೈತ ಮತ್ತು ಗ್ರಾಹಕ ಇಬ್ಬರಿಗೂ ಮೋಸ ಮಾಡಿ ಮಧ್ಯವರ್ತಿಗಳು ಲಾಭ, ಲೂಟಿ ಮಾಡಲು ಮುಕ್ತ ಅವಕಾಶ ಕಲ್ಪಿಸಲಾಗಿದೆ . ಜಾನುವಾರು ಹತ್ಯೆ ಪ್ರತಿಬಂಧಕ (ನಿಷೇಧ ಮತ್ತು ಸಂರಕ್ಷಣೆ) ಕಾಯ್ದೆಯು ಕೆಲವು ಮಾಂಸಹಾರಿಗಳ ಆಹಾರದ ಹಕ್ಕಿನ ಮೇಲಿನ ಗದಾಪ್ರಹಾರವಾಗಿದೆ. ರೈತರು ಸಾಕಲು ಸಾಧ್ಯವಾಗದ ಜಾನುವಾರುಗಳನ್ನು ಮಾರಾಟ ಮಾಡಲು ಅಡಚಣೆ ಎದುರಾಗಿದೆ. ಚಮ್ಮಾರಿಕೆಯ ಗ್ರಾಮೀಣ ಕುಶಲಕರ್ಮಿಗಳ ಜೀವನೋಪಾಯಕ್ಕೆ ಧಕ್ಕೆ ತಂದಿರುವ ಕಾನೂನು ಇದೆ. ಹೀಗಾಗಿ ರಾಜ್ಯ ಸರ್ಕಾರ ಈ ಕೂಡಲೇ ಮೂರೂ ಕಾಯ್ದೆಗಳನ್ನು ವಾಪಸ್‌ ಪಡೆಯಬೇಕು‘ ಎಂದು ಆಗ್ರಹಿಸಿದರು.

ಜನಾಂದೋಲನ ಮಹಾಮೈತ್ರಿ ಮೈಸೂರು ವಿಭಾಗದ ಸಂಚಾಲಕರಾದ ಉಗ್ರನರಸಿಂಹೇಗೌಡ, ಅಭಿರುಚಿ ಗಣೇಶ್, ಚಂದ್ರಶೇಖರ್‌, ಬಿ.ಕರುಣಾಕರ್, ಸಮಾಜವಾದಿ ಹೋರಾಟಗಾರ ಪಾ.ಮಲ್ಲೇಶ್, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಉಪಾಧ್ಯಕ್ಷ ಮಹೇಶ್‌ ಪ್ರಭು ಎಐಡಿವೈಓ ಸಂಚಾಲಕ ವಿನಯಸಾರಥಿ, ಮುಖಂಡರಾದ ಡಿಎಸ್‌ಎಸ್ ಶಿವಕುಮಾರ್, ಮಹದೇವಸ್ವಾಮಿ, ಸಿ.ಮಾದಯ್ಯ, ಅಂಬಳೆ ಶಿವಕುಮಾರ್, ಲಿಂಗಸ್ವಾಮಿ, ಚಂಗಡಿ ಕರಿಯಪ್ಪ, ಅಮ್ಜದ್‌ಖಾನ್, ವಿಜಿ ಹೆಗ್ಗೊಠಾರ ಇತರರು ಇದ್ದರು.

ಜಾಥಾವು ಬುಧವಾರ ರಾತ್ರಿ ಕೊಳ್ಳೇಗಾಲ ತಲುಪಿದ್ದು, ಗುರುವಾರ ಬೆಳಿಗ್ಗೆ ಕೊಳ್ಳೇಗಾಲದಿಂದ ಚಾಮರಾಜನಗರ ಗುಂಡ್ಲುಪೇಟೆಯತ್ತ ಸಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT