ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲೆಗಳನ್ನು ಬೆಳೆಸುವುದೇ ದೊಡ್ಡ ಸವಾಲು: ಸಚಿವ ಅರವಿಂದ ಲಿಂಬಾವಳಿ

ಜಾನಪದ ಅಕಾಡೆಮಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಚಿವ ಅರವಿಂದ ಲಿಂಬಾವಳಿ ಪ್ರತಿಪಾದನೆ
Last Updated 7 ಫೆಬ್ರುವರಿ 2021, 15:28 IST
ಅಕ್ಷರ ಗಾತ್ರ

ಚಾಮರಾಜನಗರ: ‘21ನೇ ಶತಮಾನದಲ್ಲಿ ಕಲೆಗಳನ್ನು ಬೆಳೆಸುವುದೇ ದೊಡ್ಡ ಸವಾಲು. ಮೊಬೈಲ್‌ಗಳಿಗೆ ಮಾರು ಹೋಗಿರುವ ಯುವಜನತೆಗೆ ನಮ್ಮ ಸಂಸ್ಕೃತಿ ಕಲಿಸಬೇಕಾಗಿದೆ. ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಅವರಿಗೆ ಹೇಗೆ ತಿಳಿಸಬಹುದು ಎಂಬುದರ ಬಗ್ಗೆ ಯೋಚನೆ ಮಾಡಬೇಕಾಗಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರು ಭಾನುವಾರ ಹೇಳಿದರು.

‌ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ನಡೆದ ಕರ್ನಾಟಕ ಜಾನಪದ ಅಕಾಡೆಮಿಯ 2020ನೇ ಸಾಲಿನ ವಾರ್ಷಿಕ ಪ್ರಶಸ್ತಿ, ತ‌ಜ್ಞ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಮ್ಮ ರಾಜ್ಯದಲ್ಲಿ 30ರಿಂದ 40 ಕಿ.ಮೀ ದೂರಕ್ಕೆ ಮಾತನಾಡುವ ಭಾಷೆಯಲ್ಲಿ ವ್ಯತ್ಯಾಸ ಇದೆ. ಪ್ರತಿ ಭಾಷೆಯೂ ಅದರದ್ದೇ ಆದ ಸೊಗಸನ್ನು ಹೊಂದಿದೆ. ಈ ಆಡು ಭಾಷೆಗಳಲ್ಲೂ ಜನಪದ ಕಲೆಗಳಿವೆ. ಓದೆಯಲು, ಬರೆಯಲು ಬರೆಯದಿದ್ದರೂ, ಜನಪದೀಯರು ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಪದಗಳನ್ನು ಕಟ್ಟುತ್ತಾರೆ. ಈ ಜಾನಪದ ಸಂಸ್ಕೃತಿಯನ್ನು ಜನರಿಗೆ ತೋರಿಸುವ ಕೆಲಸವಾಗಬೇಕು’ ಎಂದರು.

‘ನಮ್ಮ ಕನ್ನಡ ನೆಲದ ಜನರ ಸಂಸ್ಕೃತಿಯನ್ನು ಆಧುನಿಕ ಕಾಲಕಟ್ಟದ ಜನರಿಗೆ ಪರಿಚಯಿಸುವ ಕೆಲಸವಾಗಬೇಕು. ಆಧುನಿಕ ಮಾಧ್ಯಮಗಳನ್ನು ಬಳಸಿಕೊಂಡು ಅದನ್ನು ತೋರಿಸುವ ಕೆಲಸವಾಗಬೇಕು’ ಎಂದರು.

‘ಕನ್ನಡ ಭಾಷೆಗೆ 2,500 ವರ್ಷಗಳ ಇತಿಹಾಸವಿದೆ. ದೇವನಾಗರಿ ಭಾಷೆ ತಾಯಿಯಾದರೆ. ಕನ್ನಡ ಆಕೆಯ ಮೊದಲ ಮಗ. ಕನ್ನಡೇತರರಿಗೆ ಕನ್ನಡ ಕಲಿಸುವ ಕಾರ್ಯವನ್ನು ಇಲಾಖೆ ಕೈಗೆತ್ತಿಕೊಂಡಿದೆ’ ಎಂದು ಸಚಿವರು ಹೇಳಿದರು.

ಪ್ರಶಸ್ತಿ ಪುರಸ್ಕೃತರ ಹಾಗೂ ಪುಸ್ತಕ ಬಹುಮಾನಿತರನ್ನು ಪರಿಚಯಿಸುವ ‘ಜನಪದ ರತ್ನಗಳು’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು, ‘ಜಾನಪದ ಅಕಾಡೆಮಿ ಪ್ರಶಸ್ತಿ ವಿತರಣೆಗೆ ಚಾಮರಾಜನಗರ ಜಿಲ್ಲೆಗಿಂತ ಉತ್ತಮ ಜಿಲ್ಲೆ ಇನ್ನೊಂದು ಸಿಗಲಾರದು. ಮಂಜಮ್ಮ ಅವರದು ಸಾಹಸಮಯ ಜೀವನ. ಮೊನ್ನೆ ಅವರ ಆತ್ಮಕತೆ ಬಿಡುಗಡೆಯಾಯಿತು. ಒಬ್ಬ ವ್ಯಕ್ತಿ ಇಷ್ಟೆಲ್ಲ ಸಂಕಷ್ಟಗಳನ್ನು ಎದುರಿಸಿ, ನಂಬಿಕೆ ಬಿಡದೇ ಈ ಮಟ್ಟಕ್ಕೆ ಏರಿದ್ದಾರೆ. ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಅವರಿಗೆ ನಾಡಿನ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ’ ಎಂದರು.

‘ಮೋದಿ ನೇತೃತ್ವದ ಸರ್ಕಾರ ಬಂದ ಮೇಲೆ ಶಿಫಾರಸು ಇಲ್ಲದೆ ರಾಷ್ಟ್ರದ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಸಾಧಕರು ಆಯ್ಕೆಯಾಗುತ್ತಿದ್ದಾರೆ. ಪದ್ಮ ಪುರಸ್ಕಾರಗಳಿಗೆ ಮೆರುಗು ಬರುವ ರೀತಿಯಲ್ಲಿ ಉತ್ತಮ ಕಾರ್ಯವನ್ನು ಮೋದಿ ಸರ್ಕಾರ ಮಾಡಿದೆ’ ಎಂದರು.

ಪ್ರಸ್ತಾವಿಕವಾಗಿ ಮಾತನಾಡಿದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಅವರು, ‘ಕಲೆಗಳ ತವರೂರಾದ ಚಾಮರಾಜನಗರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿರುವುದು ಸಂತಸ ತಂದಿದೆ. ಕಾರ್ಯಕ್ರಮ ಅತ್ಯುತ್ತಮವಾಗಿ ನಡೆದಿದೆ. ಕೆಲವು ಜಿಲ್ಲೆಗಳನ್ನು, ರೇಷ್ಮೆ ನಗರಿ, ಅರಮನೆ ನಗರಿ ಮುಂತಾದ ವಿಶೇಷಣಗಳೊಂದಿಗೆ ಗುರುತಿಸುತ್ತಾರೆ. ಅದೇ ರೀತಿ ಚಾಮರಾಜನಗರವನ್ನು ಕಲೆಗಳ ಊರು ಎಂದು ಗುರುತಿಸಬೇಕು’ ಎಂದು ಹೇಳಿದರು.

‘ಸರ್ಕಾರ ಅಕಾಡೆಮಿಗಳಿಗೆ ಹೆಚ್ಚು ಅನುದಾನ ನೀಡಬೇಕು. ಇದರಿಂದ ಇನ್ನಷ್ಟು ಕೆಲಸ ಮಾಡಲು ಸಾಧ್ಯವಾಗಲಿದೆ’ ಎಂದು ಹೇಳಿದರು.

ಕಂಸಾಳೆ ನಾಡು: ಅಭಿನಂದನಾ ನುಡಿಗಳನ್ನಾಡಿದ ಸಂಗೀತ ನಿರ್ದೇಶಕ ಹಂಸಲೇಖ ಅವರು, ‘ಚಾಮರಾಜನಗರವನ್ನು ಕಂಸಾಳೆ ನಾಡು ಎಂದು ಕರೆಯೋಣ.ಈ ಹಬ್ಬ ಜನಪದ ರತ್ನಗಳಿಗೆ ಸನ್ಮಾನ ಮಾಡಿ ಅಭಿನಂದಿಸುವ ಹಬ್ಬ. 1967ರಲ್ಲಿ ತರೀಕೆರೆಯಲ್ಲಿ ಮೈಸೂರು ಮಹಾರಾಜರ ಅಧ್ಯಕ್ಷತೆಯಲ್ಲಿ ಕನ್ನಡ ನಾಡಿಗೆ ಜನಪದ ವಿಶ್ವವಿದ್ಯಾಲಯವಾಗಬೇಕು ಎಂಬ ಪ್ರಸ್ತಾಪವಾಯಿತು. ಆರೇಳು ದಶಕದ ನಂತರ ಅದು ಈಡೇರಿತು. ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಜಾನಪದ ವಿಶ್ವವಿದ್ಯಾಲಯ ದೊರಕಿತು. ಬಹುಶಃ ಇದು ದೇಶದ ಮೊದಲ ಜಾನಪದ ವಿವಿ’ ಎಂದರು.

‘ಜಾನಪದ ಪುನರುತ್ಥಾನ ಮಾಡುವುದೇ ಪ್ರತಿ ಸರ್ಕಾರಗಳ ಕರ್ತವ್ಯವಾಗಬೇಕು ಎಂಬುದು ಸಾಹಿತಿ ಡಾ.ದೇಜಗೌ ಅವರ ಆಶಯವಾಗಿತ್ತು. ನಮ್ಮಲ್ಲಿ ಜಾನಪದ ವಿ.ವಿ. ಮ್ಯೂಸಿಯಂ, ಕಲಾಶಾಲೆಗಳಾಗಿವೆ. ಯಾವುದೇ ಸರ್ಕಾರವಿರಲಿ, ಜಾನಪದಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ’ ಎಂದರು.

ನರಸಿಂಹ ಮೂರ್ತಿಗೆ ಮೆಚ್ಚುಗೆ: ಅಕಾಡೆಮಿ ಸದಸ್ಯ, ಸ್ಥಳೀಯ ಕಲಾವಿದ ಸಿ.ಎಂ.ನರಸಿಂಹಮೂರ್ತಿ ಅವರನ್ನು ಶ್ಲಾಘಿಸಿದ ಹಂಸಲೇಖ ಅವರು, ‘15 ವರ್ಷಗಳ ಹಿಂದೆ ದೇಸಿ ಶಾಲೆಗೆ ಹಾಡುವ ಗಾಯಕರು ಬೇಕು, ಕಪ್ಪಗಿರಬೇಕು ಎಂದು ಹುಡುತ್ತಿದ್ದಾಗ ಚಾಮರಾಜನಗರದಲ್ಲಿ ಸಿಕ್ಕಿದ ಪ್ರತಿಭೆ ನರಸಿಂಹಮೂರ್ತಿ. ಈಗ ಜಾನಪದ ಅಕಾಡೆಮಿ ಸದಸ್ಯನಾಗಿದ್ದಾರೆ. ಜಾನಪದ ಅಕಾಡೆಮಿ ಪ್ರಶಸ್ತಿ ಪ್ರಕಟಣೆ ಮಾತ್ರವಲ್ಲದೇ, ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಚೆಲುವ ಚಾಮರಾಜನಗರದಲ್ಲಿ ನಡೆಯಬೇಕು ಎಂದು ಆತ ಒತ್ತಾಯಿಸಿದ ಸಲುವಾಗಿ ಅದು ಇಲ್ಲಿ ನಡೆಯುತ್ತಿದೆ’ ಎಂದು ಹೇಳಿದರು.

ಮಂಜಮ್ಮ ಜೋಗತಿಗೆ ಸನ್ಮಾನ

ಈ ಸಾಲಿನ ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆಯಾದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಅವರನ್ನು ಸನ್ಮಾನಿಸಲಾಯಿತು.

ಸಚಿವರಾದ ಅರವಿಂದ ಲಿಂಬಾವಳಿ, ಎಸ್‌.ಸುರೇಶ್‌ ಕುಮಾರ್‌ ಅವರು ಮಂಜಮ್ಮ ಅವರ ಸಾಧನೆಯನ್ನು ಕೊಂಡಾಡಿದರು.

‘ಮಂಜಮ್ಮ ಜೋಗತಿಗೆ ಸಿಕ್ಕ ಗೌರವ ಇಡೀ ನಾಡಿಗೆ ದೊರಕಿದ ಗೌರವ. ಮನುಷ್ಯನ ಭಾವನೆಗೆ, ಪ್ರಕೃತಿದತ್ತವಾದ ಮಾನವೀಯತೆಗೆ ಸಿಕ್ಕ ಪುರಸ್ಕಾರ ಇದು. ಜೋಗತಿ ಅವರ ಸಾರ್ಥಕ ಕ್ಷಣಗಳು ಈಗ ‌ಪ್ರಾರಂಭವಾಗಿದೆ’ ಎಂದು ಹಂಸಲೇಖ ಅವರು ಕೊಂಡಾಡಿದರು.

ಮೆರುಗು ನೀಡಿದ ಮೆರವಣಿಗೆ

ಪ್ರಶಸ್ತಿ ಪ್ರದಾನಕ್ಕೂ ಮುನ್ನ ಜಿಲ್ಲಾಡಳಿತ ಭವನದಿಂದ ಡಾ.ಬಿ.ಆರ್.ಅಂಬೇಡ್ಕರ್ ಭವನದವರೆಗೆ ಜಾನಪದ ಕಲಾ ತಂಡಗಳ ಮೆರವಣಿಗೆ ಸಮಾರಂಭಕ್ಕೆ‌ ಮೆರುಗು ನೀಡಿತು.

ಗೌರವ ಪ್ರಶಸ್ತಿ ಪುರಸ್ಕೃತರನ್ನು 10 ಅಲಂಕೃತ ಎತ್ತಿನ ಬಂಡಿಗಳಲ್ಲಿ ಕುಳ್ಳಿರಿಸಿ‌ ಮೆರವಣಿಗೆಯಲ್ಲಿ ಕರೆತರಲಾಯಿತು.ಜಿಲ್ಲೆಯ ಜಾನಪದ ಸಂಸ್ಕೃತಿಯೇ ಮೆರವಣಿಯಲ್ಲಿ ಅನಾವರಣಗೊಂಡಿತು.

ಕಂಡಾಯ ಮತ್ತು ಬಿಳಿಗಿರಿರಂಗನ ಬೇಟೆ‌ಮನೆ ಸೇವೆ, ವೀರಗಾಸೆ, ಗೊರವರ ಕುಣಿತ, ಹುಲಿ ಕುಣಿತ, ಕಂಸಾಳೆ, ಮರಗಾಲು ಕಂಸಾಳೆ, ಡೊಳ್ಳು ಕುಣಿತ, ಗೊರುಕನಾ ನೃತ್ಯ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ನಾದಸ್ವರ, ಮಂಗಳ ವಾದ್ಯ, ತಮಟೆ, ಡೊಳ್ಳು, ನಗಾರಿ ಸ್ವರಗಳು ಮೆರುಗನ್ನು ಹೆಚ್ಚಿಸಿದವು.

ಶಾಸಕ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಕಂಡಾಯಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಮೆರವಣಿಗೆಯಲ್ಲಿ ಸ್ವಲ್ಪ ದೂರ ಹೆಜ್ಜೆ ಹಾಕಿದರು.

ಬಿ.ರಾಚಯ್ಯ ಜೋಡಿ ರಸ್ತೆ, ಭುವನೇಶ್ವರಿ ವೃತ್ತ, ಡೀವಿಯೇಷನ್ ರಸ್ತೆ, ಸತ್ಯಮಂಗಲ ರಸ್ತೆಯ ಮೂಲಕ ಡಾ.ಬಿ.ಆರ್. ಅಂಬೇಡ್ಕರ್ ಭವನಕ್ಕೆ ತಲುಪಿತು. ಸ್ಥಳೀಯರು ರಸ್ತೆಯ‌ ಇಕ್ಕೆಲಗಳಲ್ಲೂ ನಿಂತು ಮೆರವಣಿಗೆಯನ್ನು ಕಣ್ತುಂಬಿಕೊಂಡರು.

ಅಂಬೇಡ್ಕರ್‌ ಭವನ ಭರ್ತಿ

ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಪ್ರಶಸ್ತಿ ಪುರಸ್ಕೃತರ ಕುಟುಂಬದ ಸದಸ್ಯರು ಕೂಡ ಸಂತಸದ ಗಳಿಗೆಗೆ ಸಾಕ್ಷಿಯಾಗಲು ಬಂದಿದ್ದರು. ಜಿಲ್ಲೆಯ ಜಾನಪದ ಕಲಾವಿದರು, ಸಾರ್ವಜನಿಕರೂ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅಂಬೇಡ್ಕರ್‌ ಭವನ ಭರ್ತಿಯಾಗಿ ಕುರ್ಚಿಗಳು ಇಲ್ಲದೇ ಜನರು ನಿಂತುಕೊಂಡೇ ಕಾರ್ಯಕ್ರಮ ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT