ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನಪದ ಅಕಾಡೆಮಿ: ಚಾಮರಾಜನಗರದಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಪ್ರದಾನ

Last Updated 4 ಜನವರಿ 2021, 13:21 IST
ಅಕ್ಷರ ಗಾತ್ರ

ಚಾಮರಾಜನಗರ: 2020ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿರುವವರ ಹೆಸರುಗಳನ್ನು ನಗರದಲ್ಲಿ ಪ್ರಕಟಿಸಿರುವ ಆಕಾಡೆಮಿ ಅಧ್ಯಕ್ಷೆ ಬಿ.ಮಂಜಮ್ಮ ಜೋಗತಿ ಅವರು, ಪ್ರಶಸ್ತಿ ಪ್ರದಾನ ಸಮಾರಂಭವನ್ನು ಚಾಮರಾಜನಗರದಲ್ಲೇ ಆಯೋಜಿಸಲಾಗುವುದು ಎಂದುಘೋಷಿಸಿದ್ದಾರೆ.

ಜಾನಪದ ಕಲೆಯ ತವರೂರು ಎಂಬ ಹೆಗ್ಗಳಿಕೆಯನ್ನು ಪಡೆದಿರುವ ಚಾಮರಾಜನಗರದಲ್ಲಿ ಅಕಾಡೆಮಿಯಿಂದ ನಡೆಯುತ್ತಿರುವ ಮೊದಲ ರಾಜ್ಯ ಮಟ್ಟದ ಕಾರ್ಯಕ್ರಮ ಇದು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಂಜಮ್ಮ ಜೋಗತಿ ಅವರು, ‘ಸಾಮಾನ್ಯವಾಗಿ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿರುವವರನ್ನು ಘೋಷಿಸಿವುದು ಹಾಗೂ ಪ್ರದಾನ ಸಮಾರಂಭಗಳನ್ನು ಬೆಂಗಳೂರಿನಲ್ಲೇ ನಡೆಸಲಾಗುತ್ತದೆ. ನಾನು ಬಳ್ಳಾರಿಯವಳಾಗಿರುವುದರಿಂದ ಈ ವರ್ಷ ಅಲ್ಲಿಯೇ ಕಾರ್ಯಕ್ರಮ ಮಾಡಬೇಕೆಂದಿದ್ದೆ. ಆದರೆ, ಜಿಲ್ಲೆಯವರಾದ ಅಕಾಡೆಮಿ ಸದಸ್ಯ ಸಿ.ಎಂ.ನರಸಿಂಹಮೂರ್ತಿ ಅವರು ಹಲವು ಜನಪದ ಕಲೆಗಳ ತವರು ಆಗಿರುವ ಚಾಮರಾಜನಗರದಲ್ಲಿ ಕಾರ್ಯಕ್ರಮ ಮಾಡಬೇಕು ಎಂದು ಮನವಿ ಮಾಡಿದರು. ಇತರ ಸದಸ್ಯರೂ ಅದನ್ನು ಬೆಂಬಲಿಸಿದರು. ಅಂತಿಮವಾಗಿ ಇಲ್ಲಿಯೇ ನಡೆಸಲು ತೀರ್ಮಾನಿಸಲಾಯಿತು’ ಎಂದು ಹೇಳಿದರು.

‘ಫೆಬ್ರುವರಿ ಮೊದಲ ವಾರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ನಿರ್ಧರಿಸಲಾಗಿದೆ. ದಿನಾಂಕವನ್ನು ಇನ್ನಷ್ಟೇ ಅಂತಿಮಗೊಳಿಸಬೇಕಿದೆ. ಕಾರ್ಯಕ್ರಮ ಯಶಸ್ವಿಯಾಗಲು ಜಿಲ್ಲಾಡಳಿತದ ಸಂಪೂರ್ಣ ಸಹಕಾರ ಅಗತ್ಯ’ ಎಂದು ಅವರು ಹೇಳಿದರು.‌

ಪತ್ರಿಕಾಗೋಷ್ಠಿಯಲ್ಲಿದ್ದ ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರಿಗೆ ಮನವಿಯನ್ನೂ ಮಾಡಿದರು.ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು, ಎಲ್ಲ ಸಹಕಾರ ನೀಡುವ ಭರವಸೆ ನೀಡಿದರು.

ನಂತರ ಮಾತನಾಡಿದ ಅವರು, ‘ಜಾನಪದ ಕಲೆಗೂ ಚಾಮರಾಜನಗರ ಜಿಲ್ಲೆಗೂ ಅವಿನಾಭಾವ ಸಂಬಂಧ ಇದೆ. ಜನಪದ ಕಲೆಗಳ ತವರೂರು ಎಂದೇ ಕರೆಸಿಕೊಳ್ಳುವ ಜಿಲ್ಲೆಯಲ್ಲಿ ವಾ‌ರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸುವ ಐತಿಹಾಸಿ ತೀರ್ಮಾನವನ್ನು ಅಕಾಡೆಮಿ ಕೈಗೊಂಡಿರುವುದು ಖುಷಿಯ ವಿಚಾರ. ಸಮಾರಂಭದ ವ್ಯವಸ್ಥಿತ ಆಯೋಜನೆಗೆ ಜಿಲ್ಲಾಡಳಿತ ಎಲ್ಲ ಸಹಕಾರ ನೀಡಲಿದೆ’ ಎಂದು ಹೇಳಿದರು.

ಜಾನಪದ ಅಕಾಡೆಮಿ ಸದಸ್ಯ ಸಿ.ಎಂ.ನರಸಿಂಹಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಕೆ.ಗಿರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT