ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಮೇಳ: 150 ಮಂದಿಗೆ ನೌಕರಿ ಭರವಸೆ

1,247 ಮಂದಿ ನೋಂದಣಿ, 29 ಕಂಪನಿಗಳು ಭಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು
Last Updated 9 ಫೆಬ್ರುವರಿ 2021, 16:29 IST
ಅಕ್ಷರ ಗಾತ್ರ

ಚಾಮರಾಜನಗರ:ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾ ಕೈಗಾರಿಕೆ ತರಬೇತಿ ಉದ್ಯೋಗ ಇಲಾಖೆ ಹಾಗೂ ರಾಷ್ಟ್ರೀಯ ವೃತ್ತಿ ಸೇವಾ ಯೋಜನೆಗಳ ಆಶ್ರಯದಲ್ಲಿ ಮಂಗಳವಾರ ನಗರದಲ್ಲಿ ನಡೆದ ಜಿಲ್ಲಾ ಮಟ್ಟದ ಉದ್ಯೋಗ ಮೇಳದಲ್ಲಿ ವಿವಿಧ ಕಂಪನಿಗಳು150 ಅಭ್ಯರ್ಥಿಗಳಿಗೆ ಉದ್ಯೋಗದ ಭರವಸೆ (ಆಫರ್‌ ಲೆಟರ್‌) ನೀಡಿವೆ.

ಎಟಿಎಸ್‌, ಜೆ.ಕೆ.ಟೈರ್ಸ್‌, ಕೇನ್ಸ್‌ ಟೆಕ್ನಾಲಜಿ, ಅಪೊಲೋ ಹೋಮ್‌ ಕೇರ್‌, ವಿವೇಕಾನಂದ ಇನ್‌ಸ್ಟಿಟ್ಯೂಟ್‌, ರಾಜ್‌ ಬಯೊ ಆರ್ಗಾನಿಕ್‌, ನವಭಾರತ ಫರ್ಟಿಲೈಸರ್ಸ್, ಫೀನಿಕ್ಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಏವಿಯೇಷನ್‌ ಅಂಡ್‌ ಹಾಸ್ಪಿಟಾಲಿಟಿ‌ ಸೇರಿದಂತೆ ಬೆಂಗಳೂರು, ಮೈಸೂರು, ಹಾಸನ, ಮದ್ದೂರಿನ ವಿವಿಧ 29 ಕಂಪನಿಗಳು ಮೇಳದಲ್ಲಿ ಭಾಗವಹಿಸಿದ್ದವು.

ನಗರದ ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಮೇಳದಲ್ಲಿ ಭಾಗವಹಿಸಲು 1,247 ಅಭ್ಯರ್ಥಿಗಳು (ಪುರುಷರು 637 ಹಾಗೂ ಮಹಿಳೆಯರು– 610) ನೋಂದಣಿ ಮಾಡಿಕೊಂಡಿದ್ದರು. 418 ಮಂದಿ ಆನ್‌ಲೈನ್‌ನಲ್ಲಿ, 829 ಮಂದಿ ನೇರವಾಗಿ ನೋಂದಣಿ ಮಾಡಿಕೊಂಡಿದ್ದರು.

ಜಿಲ್ಲೆಯ ಎಲ್ಲ ತಾಲ್ಲೂಕುಗಳಿಂದ ಉದ್ಯೋಗಾಕಾಂಕ್ಷಿಗಳು ಬಂದಿದ್ದರು. ಮೇಳದಲ್ಲಿ ಭಾಗವಹಿಸಿದ್ದವರಲ್ಲಿ ಹೆಚ್ಚಿನವರು ಕಾಲೇಜುಗಳ ವಿದ್ಯಾರ್ಥಿಗಳಾಗಿದ್ದರು. ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ ಡಿಪ್ಲೊಮಾ, ಪದವಿ ಸೇರಿದಂತೆ ವಿವಿಧ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿದ್ದ ಅಭ್ಯರ್ಥಿಗಳು ಮೇಳದಲ್ಲಿ ಭಾಗವಹಿಸಿ, ವಿವಿಧ ಕಂಪನಿಗಳ ಪ್ರತಿನಿಧಿಗಳನ್ನು ಭೇಟಿ ಮಾಡಿ ಉದ್ಯೋಗ ಮಾಹಿತಿ ಪಡೆದರು.

ಕೆಲವು ಕಂಪನಿಗಳ ಪ್ರತಿನಿಧಿಗಳು, ಅಭ್ಯರ್ಥಿಗಳನ್ನು ಅಲ್ಲಿಯೇ ಸಂದರ್ಶನ ಮಾಡಿದರಲ್ಲದೇ ಮುಂದಿನ ಪ್ರಕ್ರಿಯೆಗೆ ಕಚೇರಿಗೆ ಬಂದು ಭೇಟಿಯಾಗುವಂತೆ ತಿಳಿಸಿದರು.

ಸಂಘಟಿತ ವಲಯದ ಕೆಲಸಕ್ಕಾಗಿ ಕಾಯಬೇಡಿ: ಮೇಳದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಅವರು, ‘ಉದ್ಯೋಗ ಮೇಳಗಳಲ್ಲಿ ಭಾಗವಹಿಸಿ ಉದ್ಯೋಗ ಗಿಟ್ಟಿಸಿಕೊಂಡವರಲ್ಲಿ ಬಹುತೇಕ ಮಂದಿ ಕೆಲಸಕ್ಕೆ ಸೇರುವುದಿಲ್ಲ. ಮೈಸೂರು, ಬೆಂಗಳೂರು, ಹಾಸನ ಮುಂತಾದ ಊರುಗಳಿಗೆ ಹೋಗಬೇಕಾಗುತ್ತದೆ ಎಂದು ಹಿಂದೇಟು ಹಾಕುತ್ತಾರೆ. ಅವು ದೂರದ ಊರುಗಳೇನಲ್ಲ. ನಮ್ಮ ಜಿಲ್ಲೆಯಲ್ಲಿ ಜಾಸ್ತಿ ಉದ್ಯೋಗಾವಕಾಶ ಇಲ್ಲ. ಹಾಗಾಗಿ, ಕಂಪನಿಗಳು ಉದ್ಯೋಗದ ಭರವಸೆ ನೀಡಿದಾಗ ಸೇರಿಕೊಳ್ಳಬೇಕು’ ಎಂದರು.

‘ಸರ್ಕಾರಿ ಅಥವಾ ಸಂಘಟಿತ ವಲಯದಲ್ಲಿ ಕೆಲಸ ಸಿಗುವುದು ಈಗ ಅಷ್ಟು ಸುಲಭವಿಲ್ಲ. ಆದ್ದರಿಂದ ಎಲ್ಲರೂ ಸರ್ಕಾರಿ ನೌಕರಿಯನ್ನು ನಿರೀಕ್ಷಿಸಬೇಡಿ. ಪ್ರಭಾವ, ಲಂಚ ಈಗ ಕೆಲಸ ಮಾಡುವುದಿಲ್ಲ. ಅಲ್ಲಿ ಪೈಪೋಟಿ ಹೆಚ್ಚಿರುತ್ತದೆ. ಶೈಕ್ಷಣಿಕವಾಗಿ ಹೆಚ್ಚು ಶ್ರಮ ಹಾಕಬೇಕಾಗುತ್ತದೆ. ಖಾಸಗಿ ವಲಯ ಈಗ ವಿಸ್ತರಣೆಯಾಗುತ್ತಿದೆ. ಅಲ್ಲಿ ವಿಫುಲ ಅವಕಾಶಗಳಿವೆ. ಕೆಲಸ ಸಿಕ್ಕಿದ ತಕ್ಷಣ ಸೇರಿಕೊಳ್ಳಿ. ಉತ್ತಮವಾಗಿ ಕೆಲಸ ಮಾಡಿ. ವರ್ಷದಿಂದ ವರ್ಷಕ್ಕೆ ವೇತನವೂ ಏರುತ್ತದೆ. ಬಡ್ತಿಯೂ ಸಿಗುತ್ತದೆ’ ಎಂದರು.

‘ಕೋವಿಡ್‌ನಿಂದಾಗಿ ಮಧ್ಯಮ, ಸಣ್ಣ ಮತ್ತು ಅತಿ ಸಣ್ಣ ಉದ್ಯಮ ವಲಯ ತತ್ತರಿಸಿದೆ. ಬೆಂಗಳೂರಿನಲ್ಲಿ ಒಂದೇ ಕಡೆ 10 ಸಾವಿರಕ್ಕೂ ಹೆಚ್ಚು ಕಂಪನಿಗಳು ಮುಚ್ಚಿವೆ. ಸಾವಿರಾರು ಉದ್ಯೋಗ ನಷ್ಟ ಆಗಿದೆ. ಚೇತರಿಸಿಕೊಳ್ಳಲು ಇನ್ನೂ ಒಂದು ವರ್ಷ ಬೇಕು. ಹಾಗಾಗಿ, ‌ಯುವಜನತೆ ಸಿಕ್ಕಿದ ಉದ್ಯೋಗಕ್ಕೆ ಸೇರಿಕೊಳ್ಳಿ’ ಎಂದರು.

ತಿಂಗಳಿಗೊಮ್ಮೆ ಮೇಳ ಆಯೋಜಿಸಿ: ‘ತಿಂಗಳಿಗೊಮ್ಮೆ ಜಿಲ್ಲಾ ಮಟ್ಟದ ಉದ್ಯೋಗ ಮೇಳಗಳನ್ನು ಆಯೋಜಿಸಬೇಕು. ಇದಕ್ಕೆ ಅನುದಾನ ಕೊರತೆ ಇದ್ದರೆ ನಾವು ಪ್ರಾಯೋಜಕತ್ವ ವಹಿಸಿಕೊಳ್ಳುತ್ತೇವೆ’ ಎಂದು ಎನ್‌.ಮಹೇಶ್‌ ಹೇಳಿದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಮಾತನಾಡಿ, ‘ನಮ್ಮಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆಯಾದರೂ, ಕಾರ್ಖಾನೆಗಳು ಬಾರದೇ ಇರುವುದರಿಂದ ಜಿಲ್ಲೆಯ ಉದ್ಯೋಗಾಕಾಂಕ್ಷಿಗಳಿಗೆ ಕೆಲಸ ನೀಡಲು ಸಾಧ್ಯವಾಗುತ್ತಿಲ್ಲ. ಸಿದ್ದರಾಮಯ್ಯ ಅವರು ಈ ಹಿಂದೆ ಕೊಯಮತ್ತೂರಿನಲ್ಲಕಿ ರೋಡ್‌ ಶೋ ನಡೆಸಿದ್ದರು. ಈ ಸಂದರ್ಭದಲ್ಲಿ ಅಲ್ಲಿನ ಹಲವು ಕಂಪನಿಗಳು ಬರಲು ಒಪ್ಪಿಕೊಂಡಿದ್ದವು. ಅಲ್ಲಿ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರು ಅದಕ್ಕೆ ಅಡ್ಡಗಾಲು ಹಾಕಿದ್ದರು. ಹಾಗಾಗಿ, ಸಮಸ್ಯೆಯಾಯಿತು ಎಂದರು. ಉದ್ದಿಮೆಗಳು ನಮ್ಮಲ್ಲಿ ಸ್ಥಾಪನೆಯಾದರೆ ನಮ್ಮವರಿಗೆ ಇಲ್ಲಿಯೇ ಕೆಲಸ ಸಿಗಲಿದೆ’ ಎಂದರು.

‘ವಿದ್ಯಾರ್ಥಿಗಳು ಹಾಗೂ ಯುವಜನತೆ ಕೌಶಲ ವೃದ್ಧಿಗೆ ಹೆಚ್ಚು ಒತ್ತು ನೀಡಬೇಕು. ಈಗ ಕೌಶಲ ಇರುವವರಿಗೆ ಹೆಚ್ಚು ಬೇಡಿಕೆ ಇದೆ. ಕೌಶಲ ತರಬೇತಿಗಳನ್ನು ಪಡೆದರೆ, ಖಾಸಗಿ ವಲಯದಕ್ಕೆ ಕೆಲಸ ಪಡೆಯಲು ಅನುಕೂಲವಾಗುತ್ತದೆ’ ಎಂದರು.

‘ತಿಂಗಳಿಗೊಂದು ಉದ್ಯೋಗ ಮೇಳ ಆಯೋಜಿಸಿ. ಅದಕ್ಕೆ ಬೇಕಾದ ಎಲ್ಲ ಸಹಕಾರವನ್ನೂ ನೀಡುತ್ತೇನೆ’ ಎಂದು ಪುಟ್ಟರಂಗಶೆಟ್ಟಿ ಅವರು ಅಧಿಕಾರಿಗಳಿಗೆ ಹೇಳಿದರು.

ಚುಡಾ ಅಧ್ಯಕ್ಷ ಶಾಂತಮೂರ್ತಿ ಕುಲಗಾಣ ಅವರು ಮಾತನಾಡಿದರು.ಶಾಸಕರು ಸಮಾರಂಭದಲ್ಲಿ ಸಾಂಕೇತಿಕವಾಗಿ ಕೆಲವು ಅಭ್ಯರ್ಥಿಗಳಿಗೆ ಉದ್ಯೋಗ ಭರವಸೆ ಪತ್ರವನ್ನು ವಿತರಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶೋಭಾ, ನಗರಭಾ ಅಧ್ಯಕ್ಷೆ ಆಶಾ, ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ,ಜಿಲ್ಲಾ ಉದ್ಯೋಗಾಧಿಕಾರಿ ಮಹಮ್ಮದ್ ಅಕ್ಬರ್ ಇದ್ದರು.

––––

ಉದ್ಯೋಗಾಕಾಂಕ್ಷಿಗಳ ಅನಿಸಿಕೆ

ನಾನು ಪಿಯುಸಿ ಓದಿದ್ದೇನೆ. ಇದುವರೆಗೆ ಚಿನ್ನದ ಗಿರವಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿ ವೇತನ ಕಡಿಮೆ ಇತ್ತು. ಉದ್ಯೋಗ ಮೇಳದ ಮಾಹಿತಿ ಸಿಕ್ಕಿತು. ಪ್ರಯತ್ನ ಪಡೋಣ ಎಂದು ಬಂದೆ. ಕೆಲಸ ಸಿಗುವ ಭರವಸೆ ಇರಲಿಲ್ಲ. ಶ್ರೀಚಕ್ರಸುಧೆ ಸೌಹಾರ್ದ ಕ್ರೆಡಿಟ್‌ ಸಹಕಾರ ಸಂಸ್ಥೆ ಕೆಲಸ ನೀಡುವ ಭರವಸೆ ನೀಡಿದೆ

– ಬಿಂದು, ಗುಂಡ್ಲುಪೇಟೆ

ಬಿಕಾಂ ಪದವಿ ಮಾಡಿ ಎರಡು ವರ್ಷಗಳಾಯಿತು. ಕೋವಿಡ್‌ಗೂ ಮುನ್ನ ಬೆಂಗಳೂರಿನಲ್ಲಿ ಸಣ್ಣ ಕೆಲಸದಲ್ಲಿದ್ದೆ. ಲಾಕ್‌ಡೌನ್‌ ನಂತರ ಕೆಲಸ ಹೋಯಿತು. ಊರಿಗೆ ವಾಪಸ್‌ ಬಂದು ಕೃಷಿ ಮಾಡುತ್ತಿದ್ದೇನೆ. ಅದರ ಜೊತೆಗೆ ಸ್ಥಳೀಯವಾಗಿ ಕೆಲಸವನ್ನು ಹುಡುಕುತ್ತಿದ್ದೇನೆ. ಇಂದಿನ ಮೇಳಕ್ಕೆ ದೊಡ್ಡ ಸಂಸ್ಥೆಗಳು ಬಂದಿಲ್ಲ. ನನಗೆ ಆಗುವಂತಹ ಉದ್ಯೋಗವಾಶವೂ ಇಲ್ಲ

–ಮಣಿಕಂಠ, ಚಾಮರಾಜನಗರ

ಎರಡು ವರ್ಷಗಳ ಹಿಂದೆ ಐಟಿಐ ಮಾಡಿ ಕೊಳ್ಳೇಗಾಲದಲ್ಲಿ ಸಣ್ಣ ಕೆಲಸದಲ್ಲಿದ್ದೆ. ಉದ್ಯೋಗ ಮೇಳದಲ್ಲಿ ನೋಂದಣಿ ಮಾಡಿಕೊಂಡಿದ್ದೆ. ಈಗ ನವಭಾರತ್‌ ಫರ್ಟಿಲೈಜರ್ಸ್‌ನವರು ಕೆಲಸ ನೀಡುವುದಾಗಿ ಹೇಳಿದ್ದಾರೆ. ಮೈಸೂರಿನಲ್ಲಿ ತರಬೇತಿ ಪಡೆದು ಸ್ಥಳೀಯವಾಗಿ ಕೆಲಸ ಮಾಡಬಹುದು ಎಂದು ಹೇಳಿದ್ದಾರೆ. ಉತ್ತಮ ವೇತನ ಕೊಡುವ ಭರವಸೆ ನೀಡಿದೆ.

–ಡಿ.ನಾಗರಾಜು, ಟಗರುಪುರ, ಕೊಳ್ಳೇಗಾಲ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT