ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಜಿಲ್ಲೆಯಲ್ಲಿ ಕನ್ನಡದ ಅಸ್ತಿತ್ವಕ್ಕೆ ಧಕ್ಕೆ ಇಲ್ಲ

ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಂಜು ಕೋಡಿಉಗನೆ ಸ್ಪಷ್ಟನೆ
Last Updated 17 ಫೆಬ್ರುವರಿ 2021, 2:20 IST
ಅಕ್ಷರ ಗಾತ್ರ

ಚಾಮರಾಜನಗರ:ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿಯನ್ನು ಹಂಚಿಕೊಂಡಿದ್ದರೂ, ಕನ್ನಡದ ಅಸ್ಮಿತೆ, ಅಸ್ತಿತ್ವಕ್ಕೆ ಯಾವ ಧಕ್ಕೆಯೂ ಆಗಿಲ್ಲ ಎಂದು ಸಮ್ಮೇಳನಾಧ್ಯಕ್ಷ ಮಂಜು ಕೋಡಿಉಗನೆ ಅವರು ಮಂಗಳವಾರ ಸ್ಪಷ್ಟಪಡಿಸಿದರು.

ಜಿಲ್ಲಾ ಸಾಹಿತ್ಯ ಸಮ್ಮೇಳನದ ಎರಡನೇ ದಿನ ಸಮ್ಮೇಳನಾಧ್ಯಕ್ಷರೊಡನೆ ಸಂವಾದ ಕಾರ್ಯಕ್ರಮದಲ್ಲಿಗಡಿಜಿಲ್ಲೆಯಲ್ಲಿ ನೆರೆರಾಜ್ಯದ ಭಾಷೆಗಳ ಪ್ರಭಾವದ ಕುರಿತಾಗಿ ಪಶುಪತಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಗೋಪಿನಾಥಂ ಭಾಗದಲ್ಲಿ ತಮಿಳು ಪ್ರಭಾವ ಸ್ವಲ್ಪ ಹೆಚ್ಚಾಗಿದೆ. ಅಲ್ಲಿ ತಮಿಳು ಭಾಷೆ ಮಾತನಾಡುವವರು ಹೆಚ್ಚಿದ್ದಾರೆ. ಹಾಗೆಂದು ಕನ್ನಡಕ್ಕೆ ಏನೂ ತೊಂದರೆಯಾಗಿಲ್ಲ. ಗುಂಡ್ಲುಪೇಟೆ ಭಾಗದಲ್ಲಿ ಮಲಯಾಳ ಭಾಷೆಯ ಪ್ರಭಾವ ಇಲ್ಲ. ಚಾಮರಾಜನಗರಕ್ಕೆ ಹೊಂದಿಕೊಂಡಂತಿರುವ ತಾಳವಾಡಿ ತಮಿಳುನಾಡಿನಲ್ಲಿದ್ದರೂ, ಅಲ್ಲಿ ಕನ್ನಡ ಮಾತನಾಡುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಗಾಗಿ, ಜಿಲ್ಲೆಯಲ್ಲಿ ಕನ್ನಡ ಭಾಷೆಗೆ ಯಾವುದೇ ಅಡ್ಡಿ ಆತಂಕ ಬಂದಿಲ್ಲ’ ಎಂದರು.

ಗಂಜಿ, ಗಂಜಲ ಗಿರಾಕಿ ಎರಡೂ ಸರಿ ಅಲ್ಲ:ಕಾಂಗ್ರೆಸ್‌ ಬೆಂಬಲಿಸುವ ಸಾಹಿತಿಗಳನ್ನು ಗಂಜಿ ಗಿರಾಕಿ ಎಂದು, ಬಿಜೆಪಿಯನ್ನು ಬೆಂಬಲಿಸುವವರನ್ನು ಗಂಜಲ ಗಿರಾಕಿ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಉಲ್ಲೇಖಿಸುತ್ತಿರುವುದರ ಬಗ್ಗೆ ಪ್ರಶ್ನೆ ಕೇಳಿದ ‌ಗೌಡಹಳ್ಳಿ ಮಹೇಶ್‌ ಅವರು, ಚಂಪಾ ಮತ್ತು ದೊಡ್ಡರಂಗೇಗೌಡ ಅವರ ಹೆಸರುಗಳನ್ನು ಉಲ್ಲೇಖಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಮ್ಮೇಳನಾಧ್ಯಕ್ಷರು, ‘ಹಿಂದಿ ಹೇರಿಕೆ ಬಗ್ಗೆ ದೊಡ್ಡರಂಗೇಗೌಡ ಅವರು ನೀಡಿರುವ ಹೇಳಿಕೆಯನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಅವರು ಯಾಕೆ ಆ ರೀತಿ ಹೇಳಿದರು ಎಂಬುದು ತಿಳಿದಿಲ್ಲ. ಅಂತಹ ಹೇಳಿಕೆಗೆ ಕ್ಷಮೆ ಕೇಳಿ ದೊಡ್ಡತನವನ್ನೂ ಮರೆದಿದ್ದಾರೆ. ಎಲ್ಲ ಸಾಹಿತಿಗಳು ಗೌರವಾನ್ವಿತರು. ಅವರನ್ನು ಗಂಜಿ ಗಿರಾಕಿ, ಗಂಜಲ ಗಿರಾಕಿ ಎಂದು ಕರೆಯುವುದೆಲ್ಲ ಸರಿ ಅಲ್ಲ. ಯಾರನ್ನೂ ಆ ರೀತಿ ಕರೆಯಬಾರದು’ ಎಂದರು.

ಜಾನಪದ ತತ್ವಜ್ಞಾನದ ಕಲೆಗಾರಿಕೆ: ಅಧ್ಯಕ್ಷತೆ ವಹಿಸಿದ್ದ ವಿಮರ್ಶಕ ಡಾ.ಸುರೇಶ್‌ ನಾಗಲಮಡಿಕೆ ಅವರು ಮಂಜು ಕೋಡಿಉಗನೆ ಅವರ ಸಾಹಿತ್ಯದಲ್ಲಿ ಕಂಡು ಬರುವ ಗ್ರಾಮೀಣ ಸೊಗಡಿನ ಭಾಷಾ ಬಳಕೆಯನ್ನು ಪ್ರಸ್ತಾಪಿಸಿದರು. ಅವರ ಇತ್ತೀಚೆಗಿನ ಚೆಪ್ಪೋಡು ಕಾದಂಬರಿ ಬಗ್ಗೆ ಉಲ್ಲೇಖಿಸಿದ ಅವರು, ದೇವನೂರು ಮಹಾದೇವ ಅವರ ‘ಕುಸುಮ ಬಾಲೆ’ಯ ಮುಂದುವರಿದ ರೂಪದಂತೆ ಈ ಕಾದಂಬರಿ ಭಾಸವಾಗುತ್ತದೆ ಎಂದರು.

‘ಜಾನಪದ ತತ್ವಜ್ಞಾನವನ್ನು ಕಲೆಗಾರಿಕೆಯಾಗಿ ಮಾರ್ಪಡಿಸುವ ಪ್ರಯತ್ನವನ್ನು ಮಂಜುಕೋಡಿಉಗನೆ ಅವರ ಬರವಣಿಗೆಯಲ್ಲಿ ಕಾಣಬಹುದು. ಗ್ರಾಮೀಣ ಬದುಕಿನ ಪಲ್ಲಟಗಳು ಹಾಗೂ ಒಳಬಂಡವಾಳಶಾಹಿ ಮತ್ತು ಜಾಗತೀಕರಣಪ್ರೇರಿತ ಬಂಡವಾಳ ಶಾಹಿಗಳ ಪ್ರಭಾವ ಜೀವನದ ಮೇಲೆ ಉಂಟು ಮಾಡಿದ ಪರಿಣಾಮದ ಅಂಶಗಳು ಅವರ ಸಾಹಿತ್ಯದಲ್ಲಿ ಕಾಣಸಿಗುತ್ತವೆ’ ಎಂದು
ಬಣ್ಣಿಸಿದರು.

ಸಂವಾದದಲ್ಲಿ ಡಾ.ರವಿಕುಮಾರ್‌ ಬಾಗಿ, ವಿ.ಎಲ್‌.ನರಸಿಂಹಮೂರ್ತಿ, ವಿಶ್ವ ಮೂಡ್ನಾಕೂಡು, ಲಕ್ಷ್ಮಿ ಪ್ರೇಮ್‌ಕುಮಾರ್‌, ಡಾ.ಜಯಣ್ಣ ಅವರು ಭಾಗವಹಿಸಿದ್ದರು.

ಗಣಿಗಾರಿಕೆ ವಿರುದ್ಧ ಹೋರಾಟಕ್ಕೆ ಸಿದ್ಧ

ಗೋವಿಂದರಾಜು ಹಾಗೂ ಲಕ್ಷ್ಮೀಪುರ ಅವರು ಜಿಲ್ಲೆಯಲ್ಲಿ ನಡೆಯುತ್ತಿರುವ ಗಣಿಗಾರಿಕೆ ಹಾಗೂ ಅದರಿಂದಾಗಿ ಮೂಲನಿವಾಸಿಗಳಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಪ್ರಸ್ತಾಪಿಸಿದರು. ಜಿಲ್ಲೆಯಲ್ಲಿ ಪರಿಸರ ಸುಸ್ಥಿರ ಅಭಿವೃದ್ಧಿಯನ್ನು ಯಾವ ರೀತಿ ಮಾಡಬಹುದು ಎಂಬ ಪ್ರಶ್ನೆಯನ್ನು ಕೇಳಿದರು.

‘ಜಿಲ್ಲೆಯಲ್ಲಿ ಗಣಿಗಾರಿಕೆ ಹೆಚ್ಚಾಗಿರುವುದು ನಿಜ. ಜನರಿಗೆ ತೊಂದರೆಯಾಗುತ್ತಿರುವುದರ ಬಗ್ಗೆ ದೂರುಗಳೂ ಇವೆ. ಆದರೆ, ಗಣಿಗಾರಿಕೆ ವಿಚಾರ ಸರ್ಕಾರದ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳಬೇಕಾಗಿರುವುದು. ಸರ್ಕಾರವೇ ಪರವಾನಗಿ ನೀಡುತ್ತದೆ. ಗಣಿಗಾರಿಕೆ ಯಿಂದಾಗುತ್ತಿರುವ ತೊಂದರೆಗಳ ವಿರುದ್ಧ ಹೋರಾಟಕ್ಕೆ ನಿಂತರೆ, ಅವರನ್ನು ಬೆಂಬಲಿಸಲು ನಾನು ಸದಾ ಸಿದ್ಧನಿದ್ದೇನೆ’ ಎಂದು ಮಂಜು ಕೋಡಿಉಗನೆ ಅವರು ಹೇಳಿದರು.

‘ಸಾಹಿತ್ಯದಿಂದ ಸಾಮಾಜಿಕ ಕ್ರಾಂತಿ ಸಾಧ್ಯ’

ಕಾದಂಬರಿಕಾರರು, ಬರಹಗಾರರು ಸಾಹಿತ್ಯದ ಮೂಲಕ ದೊಡ್ಡ ಮಟ್ಟದ ಸಾಮಾಜಿಕ ಕ್ರಾಂತಿಯೇ ಆಗುತ್ತದೆ’ ಎಂದು ಸಾಹಿತಿ ಪ್ರೊ.ಮಹದೇವ ಭರಣಿ ಅವರು ಪ‍್ರತಿಪಾದಿಸಿದರು.

ಸಮ್ಮೇಳನಾಧ್ಯಕ್ಷರಿಗೆ ನುಡಿಗೌರವ ಸಲ್ಲಿಸಿದ ಅವರು, ‘ಸಾಹಿತಿಗಳಲ್ಲಿ ಸಾಮಾಜಿಕ ಪ್ರಜ್ಞೆ ಇರಬೇಕು. ಪ್ರಚಲಿತ ವಿದ್ಯಮಾನಗಳು, ಪ್ರಸ್ತುತ ಸ್ಥಿತಿಗತಿಗಳ‌ನ್ನು ಸಾಹಿತ್ಯದ ಮೂಲಕ ಧೈರ್ಯವಾಗಿ ಹೇಳುವ ಎದೆಗಾರಿಕೆ ಇರಬೇಕು. ಶೋಷಿತ‌, ಬಡವರು ದುಡಿಯುವ ವರ್ಗದ ಜನರ ಬಗ್ಗೆ ಕಾಳಜಿ ಇರಬೇಕು’ ಎಂದರು.

‘ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ, ಅಸಮಾನತೆಗಳನ್ನು ಕಲಾತ್ಮಕವಾಗಿ ವಿವರಿಸಿ, ಜನರಲ್ಲಿ ಜಾಗೃತಿ ಮೂಡಿಸುವ ಕಲೆ ಸಾಹಿತಿಗಳಲ್ಲಿ ಇರಬೇಕು. ಸಮ್ಮೇಳಾಧ್ಯಕ್ಷರಾದ ಮಂಜು ಕೋಡಿಉಗನೆ ಅವರ ಬರವಣಿಗೆಯಲ್ಲಿ ಈ ಎಲ್ಲ ಅಂಶಗಳು ಕಂಡು ಬರುತ್ತವೆ’ ಎಂದು ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT