ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೋಡಶಿಯರಿಗೆ ಓಬವ್ವ ಆತ್ಮರಕ್ಷಣೆ ಕಲೆ ತರಬೇತಿ

ಬಿಳಿಗಿರಿರಂಗನಬೆಟ್ಟ: ಮೊರಾರ್ಜಿ ವಸತಿ ಶಾಲೆಗಳಲ್ಲಿ ಕರಾಟೆ ಕಲರವ
Last Updated 6 ಮೇ 2022, 23:30 IST
ಅಕ್ಷರ ಗಾತ್ರ

ಯಳಂದೂರು:ರಾಜ್ಯ ಸರ್ಕಾರವು ಹೆಣ್ಣು ಮಕ್ಕಳ ಅಭಿವೃದ್ಧಿ ಮತ್ತು ಕಲಿಕೆಗೆ ಹಲವು ಯೋಜನೆ ರೂಪಿಸಿದೆ. ಇದರ ಭಾಗವಾಗಿ ಕರಾಟೆ, ಬಾಕ್ಸಿಂಗ್, ಜಿಮ್ನಾಸ್ಟಿಕ್‌ನ ಸದ್ದು ವಸತಿ ಶಾಲೆಗಳಲ್ಲಿ ಕೇಳಿ ಬರುತ್ತಿದೆ.

ಅನಿರೀಕ್ಷಿತವಾಗಿ ಎದುರಾಗುವ ದೌರ್ಜನ್ಯಗಳನ್ನು ಮೆಟ್ಟಿ ನಿಲ್ಲಲು ‘ಓಬವ್ವ ಆತ್ಮ ರಕ್ಷಣೆ ಕಲೆ’ ಷೋಡಶಿಯರ ಪಾಲಿನ ಹೊಸ ಅಸ್ತ್ರವಾಗಲಿದೆ. ಹಾಗಾಗಿ, ಸರ್ಕಾರಿ ಶಾಲೆಗಳಲ್ಲಿ ಜವ್ವನೆಯರು ಕರಾಟೆ ಪಟ್ಟುಗಳ ಅಭ್ಯಾಸದಲ್ಲಿ ತೊಡಗಿದ್ದಾರೆ.

ತಾಲ್ಲೂಕಿನ ಬಿಳಿಗಿರಿಬೆಟ್ಟದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 100 ವಿದ್ಯಾರ್ಥಿನಿಯರು ವಾರದಲ್ಲಿ ಎರಡು ಅವಧಿಯಲ್ಲಿ ಕರಾಟೆ ತರಬೇತಿ ಪಡೆಯುತ್ತಿದ್ದಾರೆ. ಮಹಿಳಾ ಸೈನಿಕರಿಗೆ ನೀಡಲಾಗುವ ತರಬೇತಿ ಮಾದರಿ ಇಲ್ಲಿದೆ. ಇದು ಬಾಲೆಯರಲ್ಲಿ ಆತ್ಮಸ್ಥೈರ್ಯ, ಸುರಕ್ಷತೆ ಹೆಚ್ಚಿಸಿ ಮುಂದಿನ ದಿನಗಳಲ್ಲಿ ಸ್ಪರ್ಧೆಗಳಿಗೂ ನೆರವಾಗಲಿದೆ.

‘ಹೆಣ್ಣುಮಕ್ಕಳ ಮೇಲೆ ನಡೆಯುವ ಯಾವುದೇ ರೀತಿಯ ದೌರ್ಜನ್ಯಗಳನ್ನು ಸಮಾಜ ಸಹಿಸುವುದಿಲ್ಲ. ಹೆಣ್ಣು ಮಕ್ಕಳಲ್ಲಿ ಸ್ವಯಂ ರಕ್ಷಣ ಸಾಮರ್ಥ್ಯ, ವ್ಯಕ್ತಿತ್ವ ವಿಕಸನ, ದೈಹಿಕ ಮತ್ತು ಮನೋಬಲ ವೃದ್ಧಿಸುವ ಕರಾಟೆ ಕಲಿಕೆಯನ್ನು ಸರ್ಕಾರ ಶೈಕ್ಷಣಿಕ ಚಟುವಟಿಕೆಯ ಭಾಗವಾಗಿಸಿದೆ. ಪೋಷಕರು ಮಕ್ಕಳ ಸಾಧನೆ ಕಾಣುವ ತವಕದಲ್ಲಿ ಇದ್ದಾರೆ’ ಎಂದು ತರಬೇತಿ ಮಾಸ್ಟರ್‌ಗಳಾದ ಯೋಗೇಶ್, ರಮೇಶ್ ಹೇಳಿದರು.

ಬ್ಯ್ಯಾಕ್‌ ಬೆಲ್ಟ್ ಬಯಕೆ: ‘ಕರಾಟೆ ಪಟು ಆಗಬೇಕು ಎಂಬುದು ಬಾಲ್ಯದ ಕನಸು. ಬ್ಲ್ಯಾಕ್‌ಬೆಲ್ಟ್ ಪಡೆದು ‘ಮಾಸ್ಟರ್’ ಪಟ್ಟ ಪಡೆಯುವ ಆಸೆ ಇದೆ. ನಮ್ಮ ಪೋಷಕರು, ಹೆಚ್ಚು ಹಣ ನೀಡಿ ತರಬೇತಿ ಅಕಾಡೆಮಿಗಳಿಗೆ ಕಳುಹಿಸುವಷ್ಟು ಸ್ಥಿತಿವಂತರಲ್ಲ. ವಸತಿ ಶಾಲೆಯಲ್ಲಿ ಕರಾಟೆಗೆ ಅವಕಾಶ ಸಿಕ್ಕಿರುವುದರಿಂದ ಸಂತಸವಾಗಿದೆ’ ಎಂದು 9ನೇ ತರಗತಿಯ ರಾಧಾಮಣಿ, ಅಮೂಲ್ಯ ತಿಳಿಸಿದರು.

ಇದು ಕ್ರೀಡೆಯಲ್ಲ:ಜಪಾನ್ ಶಾಲೆಗಳಲ್ಲಿ ಸಮರಕಲೆ ಕಡ್ಡಾಯ. ಇದು ಕ್ರೀಡೆಯತ್ತ ಒಲವು ಬೆಳೆಸುತ್ತದೆ. ಜೊತೆಗೆ ಫಿಟ್‌ನೆಸ್‌ ಪಡೆಯಲೂ ಸಾಧ್ಯ. ಆದರೆ, ಭಾರತದಲ್ಲಿ ವಿದ್ಯಾರ್ಥಿಗಳು ಆಟೋಟಗಳ ಬಗ್ಗೆ ಅಷ್ಟಾಗಿ ಗಮನ ನೀಡುವುದಿಲ್ಲ. ಕರಾಟೆಯನ್ನು ಮೂರು ಹಂತಗಳಲ್ಲಿ ಹೇಳಿ ಕೊಡಬೇಕು. ದೇಹ ಹಾಗೂ ಅಂಗಾಂಗಗಳ ಬಳಕೆ ಬಗ್ಗೆ ತಿಳಿಸಬೇಕು. ಗೊಜುರಿಯೊ ಮತ್ತು ಶೋಟೊಕಾನ್ ಶೈಲಿಯ ಜೊತೆ ಸಾಫ್ಟ್ ಮತ್ತು ಹಾರ್ಡ್ ಅಭ್ಯಾಸವೂ ಸೇರಿದೆ.

ಬ್ಲಾಕ್ಸ್, ಕಿಕ್ಸ್, ಪಂಚ್ ಒಳಗೊಂಡ ಭಿನ್ನ ಕಲಿಕೆಯನ್ನು ಕರಾಟೆ ಒಳಗೊಂಡಿದೆ.ಜಪಾನಿನ ಒಕಿನೊವಾ ಕರಾಟೆ ಕಲೆಗಿಂತ ಅಮೆರಿಕ, ಕೆನಡಾ ಮಾದರಿಯನ್ನು ಭಾರತೀಯರು ಇಷ್ಟಪಡುತ್ತಾರೆ. ಪಟ್ಟಣಗಳಲ್ಲಿ ನಾಯಿಕೊಡೆಗಳಂತೆ ತರಬೇತಿ ಕೇಂದ್ರಗಳಿವೆ. ಆದರೆ, ಗುಣಮಟ್ಟ ಹೇಳುವಂತಿಲ್ಲ. ಹಾಗಾಗಿ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್ಟ್‌) ಮೂಲಕ ಕರಾಟೆ ಕಲಿಕೆ ಜಾರಿ ಮಾಡಲಾಗಿದೆ’ ಎಂದು ಪ್ರಾಂಶುಪಾಲ ಸುನಿಲ್‌ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಓಬವ್ವ ನಾಡಿನ ಅವ್ವ!

ಚಿತ್ರದುರ್ಗದ ಮದಕರಿನಾಯಕರ ಕೋಟೆಗೆ ಕಳ್ಳ ಮಾರ್ಗದಲ್ಲಿ ಮುತ್ತಿಗೆ ಹಾಕಿದ ಶತ್ರುಗಳ ಮೇಲೆ ರಣ ಕಹಳೆ ಊದಿದ ವೀರನಾರಿ ಓಬವ್ವ, ಒನಕೆಯನ್ನು ಆಯುಧವಾಗಿ ಬಳಸಿದಳು. ತನ್ನ ಶೌರ್ಯ, ಪರಾಕ್ರಮ, ಧೀರೋದಾತ್ತತೆ, ದೃಢಸಂಕಲ್ಪ, ನಾಡಪ್ರೇಮಗಳ ಸಂಕೇತವಾಗಿ ಈಗಲೂ ಈಕೆಗೆ ಅಗ್ರಸ್ಥಾನ ಇದೆ.

ಕಿತ್ತೂರು ಚನ್ನಮ್ಮ, ಬೆಳವಾಡಿ ಮಲ್ಲಮ್ಮ, ರಾಣಿ ಅಬ್ಬಕ್ಕರೂ ಕೂಡ ಪುರುಷ-ಸ್ತ್ರೀ ಎನ್ನದೇ ಸ್ಫೂರ್ತಿಯ ಕಿರಣವಾಗಿದ್ದಾರೆ. ಹಾಗಾಗಿ, ನಾಯಕ ಮನೆತನದ ಕೀರ್ತಿ ಪತಾಕೆ ಅರಳಿಸಿದ ವೀರವನಿತೆ ಒನಕೆ ಓಬವ್ವಳ ಹೆಸರಿನಲ್ಲಿ ಸರ್ಕಾರ ಆತ್ಮರಕ್ಷಣೆ ಕಲೆ ತರಬೇತಿ ಕಾರ್ಯಕ್ರಮ ಆಯೋಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT