ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌, ಬಿಜೆಪಿ ನಡುವೆ ಪೈಪೋಟಿ, ಜನರಲ್ಲೂ ಸೋಲು ಗೆಲುವಿನ ಲೆಕ್ಕಾಚಾರ

ಶೋಧನೆಯಲ್ಲಿ ತೊಡಗಿದ ಮುಖಂಡರು
Last Updated 28 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಮತ ಎಣಿಕೆಗೆ ಇನ್ನು ಒಂದು ದಿನ ಬಾಕಿ ಇರುವಂತೆಯೇ ತಾಲ್ಲೂಕಿನ ಪಟ್ಟಣ, ಹೋಬಳಿ, ಗ್ರಾಮೀಣ ಪ್ರದೇಶಗಳಲ್ಲಿ ಫಲಿತಾಂಶದ ಬಗ್ಗೆ ಚರ್ಚೆ ಜೋರಾಗಿಯೇ ನಡೆಯುತ್ತಿದೆ.

ಅಭ್ಯರ್ಥಿಗಳು ಸೋಲು ಗೆಲುವಿನ ಚಿಂತೆಯಲ್ಲಿದ್ದರೆ, ಜನಸಮಾನ್ಯರು ಕೂಡ ಜಗಲಿ ಕಟ್ಟೆ, ಟೀ ಅಂಗಡಿಗಳು, ಸಾರ್ವಜನಿಕ ಸ್ಥಳಗಳಲ್ಲಿ ಸೋಲು ಗೆಲುವಿನ ಬಗ್ಗೆ ಚರ್ಚಿಸುತ್ತಿದ್ದಾರೆ.

ಇದು ಪಕ್ಷ ರಹಿತ ಚುನಾವಣೆಯಾಗಿದ್ದರೂ ಈ ಬಾರಿ ಪಕ್ಷಗಳ ಮುಖಂಡರ ಕಾರುಬಾರು ಪ್ರಬಲವಾಗಿತ್ತು. ಜನರು ಕೂಡ ಪಕ್ಷದ ಆಧಾರದಲ್ಲೇ ಚುನಾವಣೆಯನ್ನು ವಿಶ್ಲೇಷಿಸುತ್ತಿದ್ದಾರೆ.

ಈ ಅಭ್ಯರ್ಥಿಗೆ ಇಂತಿಷ್ಟು ಮನೆಗಳ ಮತಗಳು ಬಿದ್ದಿದ್ದರೆ ಗೆಲುವು ಖಚಿತ. ಯಾರೆಲ್ಲ ಮತಗಳನ್ನು ಹಾಕಿರಬಹುದು, ಯಾರು ಕೈಕೊಟ್ಟಿರಬಹುದು? ಎಂಬ ಚರ್ಚೆಗಳೇ ಹಳ್ಳಿ ಹಳ್ಳಿಯಲ್ಲೂ ನಡೆಯುತ್ತಿವೆ.

ಬೇರೆ ಗ್ರಾಮಗಳಲ್ಲಿರುವ ಬಂಧುಗಳು, ಸ್ನೇಹಿತರು ಹಾಗೂ ಮುಖಂಡರಿಗೆ ಕರೆ ಮಾಡಿ ಅಲ್ಲಿನ ಚಿತ್ರಣದ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವವರು ಪ್ರತಿ ಊರಿನಲ್ಲೂ ಕಾಣಸಿಗುತ್ತಿದ್ದಾರೆ.

ಅಭ್ಯರ್ಥಿಗಳ ವರ್ಚಸ್ಸು ಹೇಗಿದೆ? ಹೊಸಬರೇ ಅಥವಾ ಹಳಬರೇ? ಹಿಂದೆ ಹೇಗೆ ಕೆಲಸ ಮಾಡಿದ್ದಾರೆ? ಈ ಬಾರಿ ಮತದಾರರಿಗೆ ಎಷ್ಟು ಹಣ ಕೊಟ್ಟರು ಎಂಬ ಪ್ರಶ್ನೆಗಳು ಜನರ ಸಂಭಾಷಣೆಯ ನಡು ನಡುವೆ ಕೇಳಿಬರುತ್ತಿವೆ.

ತಾಲ್ಲೂಕಿನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಜಿದ್ದಾಜಿದ್ದಿನ ಪೈಪೋಟಿ ಕಂಡು ಬಂದಿದೆ ಎಂದು ಹೇಳಲಾಗುತ್ತಿದೆ.

ಪಂಚಾಯಿತಿಗಳಲ್ಲಿರುವ ಪಕ್ಷಗಳ ಮುಖಂಡರುಗ್ರಾಮದ ಯುವಕರಿಗೆ ಮತ್ತು ಗ್ರಾಮದ ನಂಬಿಕಸ್ಥ ಮುಖಂಡರಿಗೆ ಕರೆ ಮಾಡಿ ಈ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಊರಲ್ಲಿ ಯಾರ‍್ಯಾರು ಪ್ರತಿಸ್ಪರ್ಧಿ ಅಭ್ಯರ್ಥಿಗಳನ್ನು ಬೆಂಬಲಿಸಿರಬಹುದು ‌ಎಂಬ ಶೋಧನೆಗೂ ಇಳಿದಿದ್ದಾರೆ.

ಗೆಲುವು ನಮ್ಮದೇ: ಬಿಜೆಪಿ, ಕಾಂಗ್ರೆಸ್‌

ಈ ಮಧ್ಯೆ, ಚುನಾವಣೆಯಲ್ಲಿ ತಮ್ಮ ಪಕ್ಷ ಬೆಂಬಲಿತ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಹೆಚ್ಚಿನ ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿಯಲಿದ್ದಾರೆ ಎಂದು ಬಿಜೆ‍ಪಿ ಹಾಗೂ ಕಾಂಗ್ರೆಸ್‌ ಮುಖಂಡರು ಹೇಳುತ್ತಿದ್ದಾರೆ.

ಈ ವಿಚಾರವಾಗಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಸಿ.ಎಸ್‌.ನಿರಂಜನಕುಮಾರ್‌ ಅವರು, ‘ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಹರವೆ ಸೇರಿದಂತೆ 40 ಗ್ರಾಮ ಪಂಚಾಯಿತಿಯಲ್ಲಿ ಈ ಬಾರಿ 30ಕ್ಕಿಂತ ಅಧಿಕ ಪಂಚಾಯಿತಿಯಲ್ಲಿ ಪಕ್ಷ ಬೆಂಬಲಿತ ಅಭ್ಯರ್ಥಿಗಳುಗದ್ದುಗೆ ಹಿಡಿಯಲಿದ್ದಾರೆ. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಜನಪರ ಯೋಜನೆಗಳು ಈ ಸಲ ನಮ್ಮ ಕೈ ಹಿಡಿಯಲಿದೆ. ಜೊತೆಗೆ ಕ್ಷೇತ್ರದಲ್ಲಿ ವೈಯಕ್ತಿಕವಾಗಿ ಹೆಚ್ಚಿನ ಅಭಿವೃದ್ಧಿ ಮಾಡಿರುವುದರಿಂದ ಜನರು ಒಲವು ತೋರಿದ್ದಾರೆ’ ಎಂದರು.

ಕಾಂಗ್ರೆಸ್ ಮುಖಂಡ ಗಣೇಶ್ ಪ್ರಸಾದ್ ಅವರು ಪ್ರತಿಕ್ರಿಯಿಸಿ, ‘ಈ ಸಲ 23 ರಿಂದ 25 ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅಧಿಕಾರ ಹಿಡಿಯಲಿದ್ದಾರೆ. ಈ ಹಿಂದೆ ಎಂ.ಸಿ.ಮೋಹನಕುಮಾರಿ ‌ಮತ್ತು ಎಚ್‌.ಎಸ್‌.ಮಹದೇವಪ್ರಸಾದ್‌ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಜನರು ಒಲವು ತೋರಿದ್ದು, ಚುನಾವಣೆಗೂ ಮುನ್ನ ಅಧಿಕ ಕಾಂಗ್ರೆಸ್ ಬೆಂಬಲಿತರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT