ಚಾಮರಾಜನಗರ: ‘ಗಡಿ ಜಿಲ್ಲೆಗೆ ಬರುವುದು, ಇಲ್ಲಿನ ಜನರ ಕಲ್ಯಾಣ ಮಾಡುವುದು ನನ್ನ ಕರ್ತವ್ಯ. ನಾನು ಬಾರದಿದ್ದರೆ ಕರ್ತವ್ಯ ಲೋಪವಾಗುತ್ತಿತ್ತು. ನಾನು ಮತ್ತೆ ಚಾಮರಾಜನಗರಕ್ಕೆ ಬಂದೇ ಬರುವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಸ್ಪಷ್ಟಪಡಿಸಿದರು.
ಹೊಸ ಬೋಧನಾ ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಾನು ಚಾಮರಾಜನಗರ ಜಿಲ್ಲೆಗೆ ಬರುವ ವಿಚಾರ ಸಾಕಷ್ಟು ಚರ್ಚೆಯಾಗಿತ್ತು. ಇಲ್ಲಿಗೆ ಬರುವುದು ನನ್ನ ಕರ್ತವ್ಯ. ಚಾಮರಾಜನಗರ ಕರ್ನಾಟಕದ ಅವಿಭಾಜ್ಯ ಅಂಗ. ಕರ್ತವ್ಯ ಲೋಪವಾಗುವುದಕ್ಕೆ ನನಗೆ ಇಷ್ಟ ಇಲ್ಲ’ ಎಂದರು.
‘ಒಳ್ಳೆಯ ಮನಸ್ಸಿನಿಂದ ಕೆಲಸ ಮಾಡಿದರೆ ಒಳ್ಳೆಯದೇ ಆಗುತ್ತದೆ. ಯಾರು ಏನೇ ಹೇಳಲಿ. ಅದರ ಬಗ್ಗೆ ನಾನು ಯೋಚನೆ ಮಾಡುವುದಿಲ್ಲ. ನಾನು ಮತ್ತೆ ಚಾಮರಾಜನಗರಕ್ಕೆ ಬರುತ್ತೇನೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸುತ್ತೇನೆ’ ಎಂದು ಹೇಳಿದರು.
‘ಸಂಕುಚಿತ ಭಾವನೆಯಿಂದ ಹೊರಗಡೆ ಬಂದು ವೈಜ್ಞಾನಿಕ ವಾಗಿ ಯೋಚನೆ ಮಾಡಬೇಕು. ವೈಜ್ಞಾನಿಕ ಆಧರಿತವಾದ ಯುವ ಪೀಳಿಗೆಯನ್ನು ನಾವು ನಿರ್ಮಾಣ ಮಾಡಬೇಕು’ ಎಂದು ಅವರು ಹೇಳಿದರು.
ಎಂಟು ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು: ‘ರಾಜ್ಯದ ಎಂಟು ಜಿಲ್ಲೆಗಳಲ್ಲಿ ಇನ್ನೂ ವೈದ್ಯಕೀಯ ಕಾಲೇಜುಗಳು ಆಗಬೇಕಿದೆ. ಇನ್ನು ಒಂದೂವರೆ ವರ್ಷದಲ್ಲಿ ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣವಾಗಲಿದೆ. ಈ ವರ್ಷ ಹಾವೇರಿ ಚಿಕ್ಕಮಗಳೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ’ ಎಂದು ಬೊಮ್ಮಾಯಿ ಅವರು ಹೇಳಿದರು.
ಅಸಮತೋಲನ ನಿವಾರಣೆ: ಜಿಲ್ಲೆಗಳ ನಡುವೆ ಶೈಕ್ಷಣಿಕವಾಗಿ, ಅರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಇರುವ ಅಸಮತೋಲನವನ್ನು ತೊಡೆದು ಹಾಕುವ ಪ್ರತಿಜ್ಞೆಯನ್ನೂ ಅವರು ಮಾಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.