ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ತಮಿಳುನಾಡಿಗೆ ನೀರು: ಕಣ್ಣಿಗೆ ಕಪ‍್ಪು ಪಟ್ಟಿ ಧರಿಸಿ ಪ್ರತಿಭಟನೆ

Published 5 ಸೆಪ್ಟೆಂಬರ್ 2023, 12:29 IST
Last Updated 5 ಸೆಪ್ಟೆಂಬರ್ 2023, 12:29 IST
ಅಕ್ಷರ ಗಾತ್ರ

ಚಾಮರಾಜನಗರ: ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನು ಖಂಡಿಸಿ ಕರ್ನಾಟಕ ಸೇನಾ ಪಡೆಯ ಕಾರ್ಯಕರ್ತರು ಮಂಗಳವಾರವೂ ತಮ್ಮ ಹೋರಾಟ ನಡೆಸಿದ್ದು, ಕಣ್ಣಿಗೆ ಕಪ್ಪುಪಟ್ಟಿ ಧರಿಸಿ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಕೈಯಲ್ಲಿ ನಾಡಧ್ವಜ ಹಿಡಿದಿದ್ದ ಪ್ರತಿಭಟನಕಾರರು, ಚಾಮರಾಜೇಶ್ವರ ಉದ್ಯಾನದಿಂದ ಭುವನೇಶ್ವರಿ ವೃತ್ತದವರೆಗೂ ಮೆರವಣಿಗೆ ನಡೆಸಿದರು. ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿ ತಮಿಳುನಾಡು, ರಾಜ್ಯ ಸರ್ಕಾರ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. 

ಕರ್ನಾಟಕ ಸೇನಾ ಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ‘ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವ ಕ್ರಮ ವಿರೋಧಿಸಿ ರಾಜ್ಯದಾದ್ಯಂತ ಕನ್ನಡಪರ ಸಂಘಟನೆಗಳು ನಿರಂತರ ಹೋರಾಟ ಮಾಡುತ್ತಿದ್ದರೂ ಸರ್ಕಾರಕ್ಕೆ ಕಣ್ಣು ಇಲ್ಲ.  ನಾವು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ಹಾಗಿದ್ದರೂ, ಸರ್ಕಾರ ನೀರು ಬಿಡುತ್ತಿರುವುದನ್ನು ಸಮರ್ಥಿಸಿಕೊಳ್ಳುತ್ತಿದೆ’ ಎಂದು ದೂರಿದರು. 

‘ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ಕೆಲಸವನ್ನು ಸರ್ಕಾರ, ಶಾಸಕರು, ಸಂಸದರು ಮಾಡುತ್ತಿಲ್ಲ. ಸುಪ್ರೀಂಕೋರ್ಟ್ ಮೊರೆ ಹೋಗಿಲ್ಲ’ ಎಂದರು.

ಡಿಸಿಎಂ ಹೇಳಿಕೆ ಖಂಡನೀಯ 

‘ಉಪಮುಖ್ಯಮಂತ್ರಿ ಶಿವಕುಮಾರ್ ಅವರು, ‘ಮೇಕೆದಾಟು ಯೋಜನೆಗಾಗಿ ನಾವು ಹೋರಾಟ ಮಾಡುವಾಗ ಕನ್ನಡಪರ ಹೋರಾಟಗಾರರು ಎಲ್ಲಿದ್ದಿರಿ’ ಎಂದು ಹೇಳಿಕೆ ನೀಡಿರುವುದು ಖಂಡನೀಯ. ನೀವು ಮೇಕೆದಾಟು ವಿಚಾರವಾಗಿ ಒಂದು ವರ್ಷದಿಂದ ಹೋರಾಟ ಮಾಡುತ್ತಿದ್ದೀರಿ. ಆದರೆ ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು  ಹತ್ತಾರು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿವೆ. ಮೇಕೆದಾಟು ಒಂದೇ ಅಲ್ಲ ಕಚೇರಿ ವಿಚಾರವಾಗಿ, ಕಳಸ ಬಂಡೂರಿ ವಿಚಾರವಾಗಿ, ಹೊಗೆನಕಲ್ ವಿಚಾರವಾಗಿ ಧ್ವನಿ ಎತ್ತಿರುವುದು ಸಂಘಟನೆಗಳು ಮಾತ್ರ. ಇದನ್ನು ಶಿವಕುಮಾರ್ ಅರ್ಥಮಾಡಿಕೊಳ್ಳಬೇಕು’ ಎಂದರು. 

ಕನ್ನಡಪರ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ಶಾ.ಮುರಳಿ, ಪಣ್ಯದಹುಂಡಿರಾಜು, ನಿಜಧ್ವನಿಗೋವಿಂದರಾಜು, ಚಾ.ವೆಂ.ರಾಜ್‌ಗೋಪಾಲ್, ಮಹೇಶ್‌ಗೌಡ, ರವಿಚಂದ್ರಪ್ರಸಾದ್ ಕಹಳೆ, ನಂಜುಂಡಸ್ವಾಮಿ, ಚಾ.ಹ.ರಾಮು, ಗಡಿನಾಡು ಕನ್ನಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಚಾ.ರಾ.ಕುಮಾರ್, ಲಿಂಗರಾಜು, ನಾಗೇಶ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT