ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹದಿಂದ ಬೆಳೆ ನಾಶ, ₹32 ಲಕ್ಷ ಪರಿಹಾರಕ್ಕೆ ಶಿಫಾರಸು

591 ಎಕರೆ ಬೆಳೆ ನಾಶ; ಪ್ರವಾಹದಿಂದ ಮುಳುಗಿದ್ದ ಕೊಳ್ಳೇಗಾಲ ತಾಲ್ಲೂಕಿನ ಗ್ರಾಮಗಳು
Last Updated 11 ಸೆಪ್ಟೆಂಬರ್ 2018, 14:30 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಕೆಲವು ಭಾಗಗಳಲ್ಲಿ ಇತ್ತೀಚೆಗೆ ಉಂಟಾದ ಪ್ರವಾಹದಿಂದ 591 ಎಕರೆ ಕೃಷಿ ಜಮೀನಿಗೆ ಹಾನಿಯಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರ ನೇತೃತ್ವದಲ್ಲಿ ಮಂಗಳವಾರ ನಡೆದ ಜಿಲ್ಲಾ ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ತಿರುಮಲೇಶ್‌ ಈ ಮಾಹಿತಿ ನೀಡಿದರು.

ಕೊಳ್ಳೇಗಾಲ ತಾಲ್ಲೂಕಿನ ಮುಳ್ಳೂರು, ದಾಸನಪುರ, ಹಳೇ ಹಂಪಾಪುರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ನೆರೆ ಬಂದಿದ್ದರಿಂದ ಈ ರೈತರು ಬೆಳೆದಿದ್ದ ಭತ್ತ, ಮುಸುಕಿನ ಜೋಳ ಮತ್ತು ಕಬ್ಬು ಸಂಪೂರ್ಣವಾಗಿ ಹಾಳಾಗಿದೆ. ತೊಂದರೆಗೆ ಒಳಗಾದ ರೈತರಿಗೆ ಒಟ್ಟು ₹32.33 ಲಕ್ಷ ಪರಿಹಾರ ನೀಡಲು ಶಿಫಾರಸು ಮಾಡಲಾಗಿದೆ. ಪರಿಹಾರ ಧನಕ್ಕಾಗಿ ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ನಿಯಮಗಳ ಪ್ರಕಾರ, ಒಂದು ಎಕರೆಗೆ ₹13.5 ಸಾವಿರ ಪರಿಹಾರ ನೀಡಬೇಕಾಗುತ್ತದೆ ಎಂದು ತಿರುಮಲೇಶ್‌ ಹೇಳಿದರು.

ಆಕ್ಷೇಪ: ಸಭೆಯಲ್ಲಿ ಕೃಷಿ ಇಲಾಖೆಗೆ ಸಂಬಂಧಿಸಿದ ಪ್ರಗತಿ ವಿವರಗಳನ್ನು ಮಂಡಿಸಿ ತಿರುಮಲೇಶ್‌ ಅವರು, ಜಿಲ್ಲೆಯಲ್ಲಿ ಇದುವರೆಗೆ 88 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. 1.37 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿಯನ್ನು ಹೊಂದಲಾಗಿತ್ತು. ಶೇ 64ರಷ್ಟು ಪೂರ್ಣಗೊಂಡಿದೆ ಎಂದು ಹೇಳಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ಆರ್‌.ನರೇಂದ್ರ, ‘ಈ ಮಾಹಿತಿ ತಪ್ಪಾಗಿದೆ. ಖಂಡಿತವಾಗಿಯೂ ಅಷ್ಟು ಪ್ರಮಾಣದಲ್ಲಿ ಬಿತ್ತನೆ ಆಗಿಲ್ಲ. ಸರಿಯಾಗಿ ಮಳೆ ಬಾರದಿರುವುದರಿಂದ ಬಿತ್ತನೆ ಆದ ಕಡೆಯೂ ಸಮಸ್ಯೆ ಆಗಿದೆ‌’ ಎಂದರು.

‘ಹನೂರಿನಲ್ಲಿ ಬಿತ್ತನೆ ಆರಂಭವಾಗಿಲ್ಲ. ರಾಮಾಪುರ ಹೋಬಳಿಯಲ್ಲೂ ಆಗಿಲ್ಲ. ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಶೇ 18–19ರಷ್ಟು ಪ್ರದೇಶದಲ್ಲಿ ಮಾತ್ರ ಬಿತ್ತನೆ ಆಗಿದೆ’ ಎಂದು ತಿಳಿಸಿದರು.

ಇದಕ್ಕೆ ಸ್ಪಷ್ಟನೆ ನೀಡಿದ ತಿರುಮಲೇಶ್‌, ‘ತಾಲ್ಲೂಕು ಅಧಿಕಾರಿಗಳಿಂದ ಮಾಹಿತಿ ಪಡೆದು ವರದಿ ಸಿದ್ಧಪಡಿಸಲಾಗಿದೆ. ಇನ್ನೊಮ್ಮೆ ಈ ಬಗ್ಗೆ ವಿಚಾರಿಸಿ ಸ್ಪಷ್ಟ ಮಾಹಿತಿ ಪಡೆ‌ಯುತ್ತೇನೆ’ ಎಂದರು.

ಕೆಲವು ಬೆಳೆಗೆ ಮಳೆ ಕೊರತೆ: ಜಿಲ್ಲೆಯಲ್ಲಿ ಈ ವರ್ಷದ ಮುಂಗಾರಿನಲ್ಲಿ ಒಟ್ಟಾರೆ ಶೇ 18ರಷ್ಟು ಹೆಚ್ಚು ಮಳೆಯಾಗಿದೆ. ಆದರೆ, ಜುಲೈ ಮತ್ತು ಆಗಸ್ಟ್‌ ತಿಂಗಳಲ್ಲಿ ಮಳೆಯಾಗದೇ ಇರುವುದರಿಂದ ಹನೂರು, ರಾಮಾಪುರ ಸೇರಿದಂತೆ ಕೆಲವು ಕಡೆಗಳಲ್ಲಿ ಬಿತ್ತನೆ ವಿಳಂಬವಾಗಿದೆ ಎಂದು ತಿರುಮಲೇಶ್‌ ತಿಳಿಸಿದರು.

ಸದ್ಯಕ್ಕೆ ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆ ಇಲ್ಲ. ಭತ್ತ ನಾಟಿ ಆದ ಮೇಲೆ ಯೂರಿಯ ಕೊರತೆ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ, ಮೇಲಧಿಕಾರಿಗಳಿಗೆ ಈಗಾಗಲೇ ಬೇಡಿಕೆ ಇಟ್ಟಿದ್ದೇವೆ ಎಂದರು.

ಹೊಸ ಪೈಪ್‌ಲೈನ್‌ಗೆ ಆಗ್ರಹ: ‘ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಗ್ರಾಮಗಳಿಗೆ ನೀರಿನ ಸಂಪರ್ಕ ಕಲ್ಪಿಸಲು ಬಳಸಿರುವ ಪೈಪ್‌ಲೈನ್‌ ಹಳೆಯದಾಗಿದ್ದು, ಗ್ರಾಮಗಳಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ. ಹೊಸ ಪೈಪ್‌ಲೈನ್‌ ಅಳವಡಿಸಲು ಕ್ರಿಯಾಯೋಜನೆ ರೂಪಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಬರಗಿ ಚೆನ್ನಪ್ಪ ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ರವಿಕುಮಾರ್‌, ‘ಕೊಳ್ಳೇಗಾಲ, ಹನೂರು ತಾಲ್ಲೂಕುಗಳಲ್ಲಿ ಸ್ವಲ್ಪ ಸಮಸ್ಯೆ ಇದೆ. ಈಗ ಯೋಜನೆಯ ಎಸ್‌ಆರ್‌ ದರ ಶೇ 20ರಷ್ಟು ಜಾಸ್ತಿ ಆಗಿದೆ. ಹಾಗಾಗಿ ಸಮಸ್ಯೆಯಾಗಿದೆ’ ಎಂದರು.

ಕಳ್ಳಿದೊಡ್ಡಿ, ತೆಳ್ಳನೂರುಗಳಿಗೆ ನೀರು ಪೂರೈಕೆ ಮಾಡುವಂತೆ ಆರ್‌.ನರೇಂದ್ರ ಸೂಚಿಸಿದರು.

90 ಘಟಕಗಳಲ್ಲಿ ಒಂದೇ ಕಾರ್ಯಾರಂಭ!

ನೀರಿನ ಘಟಕಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದ ರವಿಕುಮಾರ್‌, ‘ಜಿಲ್ಲೆಯಾದ್ಯಂತ ವಿವಿಧ ಇಲಾಖೆಗಳ ಅಡಿಯಲ್ಲಿ213 ಘಟಕಗಳನ್ನು ತೆರೆಯಲು ಮಂಜೂರಾತಿ ಸಿಕ್ಕಿದೆ. ಈ ಪೈಕಿ 90 ಅನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಸ್ಥಾಪಿಸಲಾಗುತ್ತಿದೆ. ಇವುಗಳಲ್ಲಿ 16 ಘಟಕಗಳ ಸ್ಥಾಪನೆ ಪೂರ್ಣಗೊಂಡಿದೆ. ಒಂದು ಕಾರ್ಯಾರಂಭ ಮಾಡಿದೆ. ಉಳಿದ ಘಟಕಗಳ ಸ್ಥಾಪನೆ ಪ್ರಕ್ರಿಯೆ ಪ್ರಗತಿಯಲ್ಲಿದೆ’ ಎಂದರು.

ಇದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಸಚಿವರು, ‘ಘಟಕ ಸ್ಥಾಪನೆಗೆ ಎಷ್ಟು ದಿನ ಬೇಕು? 2 ತಿಂಗಳಲ್ಲಿ ಎಲ್ಲವೂ ಮುಗಿಯಬೇಕಿತ್ತು. ವರ್ಷವಾದರೂ ಮುಗಿದಿಲ್ಲ ಎಂದರೆ ಏನರ್ಥ? ಎಲ್ಲ ಘಟಕಗಳೂ ಶೀಘ್ರದಲ್ಲಿ ಕಾರ್ಯಾರಂಭ ಆಗುವಂತೆ ನೋಡಿಕೊಳ್ಳಬೇಕು’ ಎಂದು ತಾಕೀತು ಮಾಡಿದರು.

ಅಧಿಕಾರಿಗೆ ತರಾಟೆಗೆ

ಸತ್ತೇಗಾಲ, ಮಲೆಮಹದೇಶ್ವರ ಬೆಟ್ಟ ಮತ್ತು ಅಗರಗಳಲ್ಲಿ ಪಶುವೈದ್ಯಕೀಯ ಕೇಂದ್ರದ ಸ್ಥಾಪನೆಗೆ ಜಾಗ ಇಲ್ಲ ಎಂದು ಹೇಳಿ ವರದಿ ನೀಡಿದ್ದಕ್ಕೆ ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳನ್ನು ಆರ್‌.ನರೇಂದ್ರ ಹಾಗೂ ಸಿ.ಪುಟ್ಟರಂಗಶೆಟ್ಟಿ ತರಾಟೆಗೆ ತೆಗೆದುಕೊಂಡರು.

ಶಾಸಕರ ಬಳಿ ಚರ್ಚಿಸದೆ ಹೇಗೆ ವರದಿ ನೀಡಿದ್ದೀರಿ ಎಂದು ಖಾರವಾಗಿ ಪ್ರಶ್ನಿಸಿದ ಆರ್‌.ನರೇಂದ್ರ, ‘ಯೋಜನೆಗಳನ್ನು ತರುವುದು ಸುಲಭವಲ್ಲ. ಬಂದ ಯೋಜನೆಗಳನ್ನು ಹೀಗೆ ವಾಪಸ್‌ ಕಳುಹಿಸಿದರೆ ಹೇಗೆ’ ಎಂದು ಪ್ರಶ್ನಿಸಿದರು.

ಪಶುಸಂಗೋಪನಾ ಇಲಾಖೆಯಲ್ಲಿ ಜಿಲ್ಲೆಯಲ್ಲಿ 86 ಸಿಬ್ಬಂದಿ ಇರಬೇಕು. ಕೇವಲ 30 ಮಂದಿ ಇದ್ದಾರೆ. ವೈದ್ಯರ ಕೊರತೆ ಕಾಡುತ್ತಿದೆ. ಇದರಿಂದ ಸಮಸ್ಯೆಯಾಗುತ್ತಿದೆ ಎಂದು ಅಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT