ಬುಧವಾರ, ಏಪ್ರಿಲ್ 21, 2021
23 °C

ಜಲ ಜೀವನ್‌ ಮಿಷನ್‌; ಅಧಿಕಾರಿಗಳ ಧೋರಣೆಗೆ ಜಿ.ಪಂ. ಅಧ್ಯಕ್ಷೆ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಲ ಜೀವನ್‌ ಮಿಷನ್‌ ಯೋಜನೆಯ ಅಡಿಯಲ್ಲಿ ಜಿಲ್ಲೆಯ 424 ಗ್ರಾಮಗಳಲ್ಲಿ ₹165 ಕೋಟಿ ವೆಚ್ಚದಲ್ಲಿ ಮನೆ ಮನೆಗೆ ನಲ್ಲಿ ನೀರು ಸಂಪರ್ಕಿಸುವ ಯೋಜನೆ ಅನುಷ್ಠಾನದಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಂ.ಅಶ್ವಿನಿ ಅವರು ಸೋಮವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. 

ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಯೋಜನೆ ಬಗ್ಗೆ ಪ್ರಸ್ತಾಪವಾಗುತ್ತಲೇ, ಮಧ್ಯಪ್ರವೇಶಿಸಿದ ಎಂ.ಅಶ್ವಿನಿ ಅವರು, ಈ ಯೋಜನೆ ಜಾರಿ ವಿಚಾರದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರನ್ನು ಕತ್ತಲಲ್ಲಿ ಇಡಲಾಗಿದೆ. ನಮಗೆ ಯಾವುದೇ ಮಾಹಿತಿ ನೀಡದೇ ಅಧಿಕಾರಿಗಳೇ ಎಲ್ಲವನ್ನು ಅಧಿಕಾರಿಗಳೇ ಮಾಡುತ್ತಿದ್ದಾರೆ. ಸಮೀಕ್ಷೆಯನ್ನೂ ಸರಿಯಾಗಿ ನಡೆಸಿಲ್ಲ. ಸಮೀಕ್ಷೆ ನಡೆಸಿರುವುದು ನಮಗೆ ಗೊತ್ತೇ ಇಲ್ಲ. ಈ ಬಗ್ಗೆ ಮಾಹಿತಿ ಕೇಳಿದ್ದರೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ‌ಅವರು ಸ್ಪಂದಿಸಿಲ್ಲ. ಈ ಯೋಜನೆಗೆ ತಡೆ ಒಡ್ಡಬೇಕು’ ಎಂದು ಒತ್ತಾಯಿಸಿದರು. 

‘ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಶಿವಶಂಕರ್‌ ಅವರು ಮಾತನಾಡಿ, ‘ಆರು ತಿಂಗಳ ಹಿಂದೆಯೇ ಎಲ್ಲ ಗ್ರಾಮ ಪಂಚಾಯಿತಿ ಅಧಿಕಾರಿಗಳಿಂದ, ಗ್ರಾಮಗಳಲ್ಲಿರುವ ಮನೆಗಳ ಸಂಖ್ಯೆ, ಯಾರು ನೀರಿನ ಸಂಪರ್ಕ ಹೊಂದಿದ್ದಾರೆ, ಇಲ್ಲ ಎಂಬ ಮಾಹಿತಿಗಳನ್ನು ಸಂಗ್ರಹಿಸಿದ್ದೇವೆ. ಈಗಾಗಲೇ ಟೆಂಡರ್‌ ಕರೆಯಲಾಗಿದೆ’ ಎಂದು ಹೇಳಿದರು. 

ಅಶ್ವಿನಿ ಅವರು ಮಾತನಾಡಿ, ‘ಜಿಲ್ಲಾ ಪಂಚಾಯಿತಿಯಿಂದ ಜಾರಿ ಮಾಡುತ್ತಿರುವ ಯೋಜನೆಯ ಬಗ್ಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಒಮ್ಮೆಯೂ ಸಭೆ ನಡೆಸಿಲ್ಲ’ ಎಂದು ದೂರಿದರು. 

ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಹರ್ಷಲ್‌ ಭೊಯರ್‌ ನಾರಾಯಣ ರಾವ್‌ ಅವರು ಮಾತನಾಡಿ, ‘ಸಿಇಒ ನೇತೃತ್ವದ ಸಮಿತಿಯು ಈ ಯೋಜನೆಯನ್ನು ಅನುಷ್ಠಾನಗೊಳಿಸುವುದರಿಂದ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರ ಪಾತ್ರ ಇಲ್ಲ. ಯೋಜನೆಯ ಬಗ್ಗೆ ಎಲ್ಲರ ಗಮನಕ್ಕೆ ತರಲಾಗಿದೆ’ ಎಂದರು. 

ಶಾಸಕ ಎನ್‌.ಮಹೇಶ್ ಅವರು ಮಾತನಾಡಿ, ‘ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಅವರ ಗಮನಕ್ಕೆ ತರದೆ ನೀವು ಯೋಜನೆ ಹೇಗೆ ಅನುಷ್ಠಾನಗೊಳಿಸುತ್ತೀರಿ? ಇಂತಹ ವರ್ತನೆ ಸರಿಯಲ್ಲ. ಅಧಿಕಾರಿಗಳೇ ಅನುಷ್ಠಾನ ಮಾಡುತ್ತಿದ್ದರೂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಇತರ ಸದಸ್ಯರ ಗಮನಕ್ಕೆ ತರಲೇಬೇಕು. ಇಬ್ಬರೂ ಚರ್ಚಿಸಿ ಯೋಜನೆ ಜಾರಿಗೊಳಿಸಬೇಕು. ಇನ್ನಾದರೂ ಸಭೆ ನಡೆಸಿ, ಅವರೊಂದಿಗೆ ಮಾಹಿತಿ ಹಂಚಿಕೊಳ್ಳಿ’ ಎಂದರು.

ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಮಾತನಾಡಿ, ‘ಜನಪ್ರತಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಎಲ್ಲ ಯೋಜನೆಗಳ ಬಗ್ಗೆ ಅವರೊಂದಿಗೆ ಮಾಹಿತಿ ಹಂಚಿಕೊಳ್ಳಬೇಕು’ ಎಂದು ಸೂಚಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಹರ್ಷಲ್‌ ಅವರು, ‘ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಜಂಟಿ ಸಭೆ ನಡೆಸಿ ಯೋಜನೆಯ ಪೂರ್ಣ ವಿವರಗಳನ್ನು ನೀಡಲಾಗುವುದು’ ಎಂದು ಹೇಳಿದರು. 

ಕೋವಿಡ್‌ ಲಸಿಕೆ ಪಡೆಯಲು ಮನವೊಲಿಸಿ
ಜಿಲ್ಲೆಯ ಕೋವಿಡ್‌ ಸ್ಥಿತಿಗತಿ ಹಾಗೂ ಲಸಿಕೆ ವಿತರಣೆಯ ಪ್ರಗತಿಯ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ಅವರು ಮಾಹಿತಿ ನೀಡಿದರು. 

‘ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಕೋವಿಡ್‌ ಲಸಿಕೆ ವಿತರಿಸಲು 6,363 ಮಂದಿ ಆರೋಗ್ಯ ಕಾರ್ಯಕರ್ತರ ಹೆಸರು ನೋಂದಣಿ ಮಾಡಲಾಗಿದೆ. 4000 ಡೋಸ್‌ ಕೋವಿಶೀಲ್ಡ್‌ ಹಾಗೂ 320 ಡೋಸ್‌ ಕೋವ್ಯಾಕ್ಸಿನ್‌ ಜಿಲ್ಲೆಗೆ ಪೂರೈಕೆಯಾಗಿದೆ‌’ ಎಂದರು.  

ಶೇ 59ರಷ್ಟು ಸಾಧನೆ: ‘ಇದುವರೆಗೆ ಜಿಲ್ಲೆಯಲ್ಲಿ 2,528 ಮಂದಿಗೆ ಲಸಿಕೆ ಹಾಕುವ ಗುರಿ ನೀಡಲಾಗಿದೆ. ಈ ಪೈಕಿ 1,494 ಮಂದಿ ಲಸಿಕೆ ಹಾಕಿಸಿಕೊಂಡಿದ್ದು ಶೇ 59ರಷ್ಟು ಸಾಧನೆಯಾಗಿದೆ. ಕೆಲವರು ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ’ ಎಂದು ಡಾ.ರವಿ ಅವರು ಹೇಳಿದರು. 

‘ಇದುವರೆಗೆ ಮೂರು ಮಂದಿಯಲ್ಲಿ ಲಸಿಕೆಯ ಅಡ್ಡ ಪರಿಣಾಮ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ’ ಎಂದರು. 

ಸಚಿವರು, ಶಾಸಕರು ಮಾತನಾಡಿ, ‘ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರೇ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿದರೆ ಉಳಿದವರ ಪಾಡೇನು? ಲಸಿಕೆಯ ಬಗ್ಗೆ ವಿಶ್ವಾಸ ಮೂಡಿಸಲು ಕ್ರಮಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು