ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತರಿಗೆ ಅಧಿಕಾರ ವಂಚಿಸುವ ಪ್ರಕ್ರಿಯೆ ಶುರು: ಎನ್‌.ಮಹೇಶ್‌

Last Updated 23 ಜೂನ್ 2021, 13:17 IST
ಅಕ್ಷರ ಗಾತ್ರ

ಚಾಮರಾಜನಗರ: ರಾಜ್ಯದಲ್ಲಿ ದಲಿತ ಸಮುದಾಯದವರಿಗೆ ಅಧಿಕಾರ ವಂಚಿಸುವ ಪ್ರಕ್ರಿಯೆ ಈಗಾಗಲೇ ಶುರುವಾಗಿದೆಎಂದು ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಅವರು ಬುಧವಾರ ಹೇಳಿದರು.

ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಮುಖ್ಯಮಂತ್ರಿ ಚರ್ಚೆಯ ಬಗ್ಗೆ ಯಳಂದೂರಿನಲ್ಲಿ ಪ್ರತಿಕ್ರಿಯಿಸಿರುವ ಅವರು, ‘ಕೂಸು ಹುಟ್ಟುವ ಮುಂಚೆಯೇ ಕುಲಾವಿ ಹೊಲಿಸುವ ಕೆಲಸವನ್ನು ಕಾಂಗ್ರೆಸ್‌ನವರು ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಎಂದು ಜಮೀರ್‌ ಹೇಳುತ್ತಿದ್ದಾರೆ. ಉಳಿದ ಶಾಸಕರೂ ಬೆಂಬಲಿಸುತ್ತಿದ್ದಾರೆ.ಇಡೀ ಪ್ರಕ್ರಿಯೆಯಲ್ಲಿ ಒಂದು ಅಂಶ ಬಿಟ್ಟು ಹೋಗುತ್ತಿದೆ. 30 ವರ್ಷಗಳಿಂದ ರಾಜ್ಯದ ಪ್ರಮುಖ ಸಮುದಾಯವಾದ ದಲಿತರು ನಿರಂತರವಾಗಿ ಅಧಿಕಾರದಿಂದ ವಂಚಿತರಾಗಿ ಬಂದಿದ್ದಾರೆ. ಈಗಿನ ಬೆಳವಣಿಗೆ ನೋಡಿದರೆ, ‘ದಲಿತರು ಸುಮ್ಮನೆ ಮತ ಹಾಕಿ, ನಾವು ರಾಜ್ಯಭಾರ ಮಾಡುತ್ತೇವೆ’ ಎಂಬ ಸಂದೇಶವನ್ನು ಕೊಡುತ್ತಾ ಇದ್ದಾರೆ’ ಎಂದರು.

‘ಬಿ.ರಾಚಯ್ಯ, ಕೆ.ಎಚ್‌.ರಂಗನಾಥ್‌, ಬಸವಲಿಂಗಪ್ಪ, ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ, ಕೆ.ಎಚ್‌.ಮುನಿಯಪ್ಪ.. ಇವರೆಲ್ಲ ದಲಿತ ಸಮುದಾಯದವರ ಹಿರಿಯ ಮುಖಂಡರು. ಮುಖ್ಯಮಂತ್ರಿಯಾಗುವ ಅರ್ಹತೆ ಇದ್ದವರು. ಆದರೆ, ಅಧಿಕಾರದಿಂದ ವಂಚಿತರಾಗಿದ್ದಾರೆ. ಈಗಲೂ ಅಧಿಕಾರದಿಂದ ವಂಚನೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರಿಗಿಂತ ಅನುಭವಿ, ಪ್ರಾಮಾಣಿಕ, ಪ್ರತಿಭಾವಂತ ರಾಜಕಾರಣಿ ಯಾರಿದ್ದಾರೆ’ ಎಂದು ಪ್ರಶ್ನಿಸಿದರು.

‘ದಲಿತರು ಮತ ಬ್ಯಾಂಕ್‌ ಆಗಿದ್ದಾರೆ. ಎಲ್ಲ ಸಾಮರ್ಥ್ಯ, ಪ್ರಾಮಾಣಿಕತೆ ಇದ್ದರೂ ಅವರಿಗೆ ಧ್ವನಿ ಇಲ್ಲ. ಅಂತೂ ಇಂತು ಕುಂತಿ ಮಕ್ಕಳಿಗೆ ರಾಜ್ಯ ಇಲ್ಲ ಎಂಬಂತೆ ಆಗಿದೆ. ಶೇ 1ರಷ್ಟು ಜನಸಂಖ್ಯೆ ಇಲ್ಲದ ಸಮುದಾಯದವರು ಮುಖ್ಯಮಂತ್ರಿಯಾಗಿದ್ದಾರೆ. ಎಸ್‌ಸಿ, ಎಸ್‌ಟಿ ಸಮುದಾಯದವರು ರಾಜ್ಯದಲ್ಲಿ 1.5 ಕೋಟಿ ಜನ ಇದ್ದರೂ ಯಾರೂ ಮುಖ್ಯಮಂತ್ರಿ ಆಗಿಲ್ಲ. ದಲಿತರಿಗೂ ಅವಕಾಶ ಸಿಗಬೇಕು. ಆಯಾ ಪಕ್ಷಗಳಲ್ಲಿ ಇರುವವರಿಗೆ ಇದು ಅನ್ನಿಸಬೇಕು. ಕಾಂಗ್ರೆಸ್‌ಗೆ ಮತ ಹಾಕುವವರು ಯಾರು’ ಎಂದು ಎನ್‌.ಮಹೇಶ್‌ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT