ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಕಾಂಗ್ರೆಸ್‌ನಿಂದ ಅಂಬೇಡ್ಕರ್‌ಗೆ ಮೋಸ, ಅಪಮಾನ -ಶಾಸಕ ಎನ್‌.ಮಹೇಶ್‌

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆ
Last Updated 26 ನವೆಂಬರ್ 2021, 16:48 IST
ಅಕ್ಷರ ಗಾತ್ರ

ಚಾಮರಾಜನಗರ:‘ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಗೌರವ ನೀಡುವ ಜೊತೆಗೆ ನ.26ರನ್ನು ಸಂವಿಧಾನ ಸಮರ್ಪಣಾ ದಿನವನ್ನಾಗಿ ಘೋಷಣೆ ಮಾಡಿ ವಿಶ್ವ ನಾಯಕರಾಗಿದ್ದಾರೆ’ ಎಂದು ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್.ಮಹೇಶ್ ತಿಳಿಸಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಎಸ್‌ಪಿ ಮೋರ್ಚಾದ ವತಿಯಿಂದ ನಡೆದ ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಹಿರಿಯ ದಲಿತ ಹೋರಾಟಗಾರ ವೆಂಕಟರಮಣಸ್ವಾಮಿ (ಪಾಪು) ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.

‘ಕಾಂಗ್ರೆಸ್ ಪಕ್ಷದ 65 ವರ್ಷಗಳ ಆಡಳಿತದಲ್ಲಿ ಎಂದೂ ಅಂಬೇಡ್ಕರ್ ಅವರಿಗೆ ಗೌರವ ನೀಡುವ ಕೆಲಸವಾಗಲಿಲ್ಲ. ಕೇವಲ ದಲಿತರ ಮತಗಳನ್ನು ಪಡೆಯುವ ಸಲುವಾಗಿ ಅಂಬೇಡ್ಕರ್ ಹೆಸರು ಹೇಳುತ್ತಿದ್ದಾರೆ ವಿನಃ ಕಾಂಗ್ರೆಸ್ ಇತಿಹಾಸವನ್ನು ಒಮ್ಮೆ ತಿರುಗಿ ನೋಡಿದಾಗ ನೆಹರು ಕುಟುಂಬ ಹಾಗೂ ಕಾಂಗ್ರೆಸ್ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಮಾಡಿದ ಮೋಸ, ಅಪಮಾನಗಳು ಕಣ್ಮುಂದೆ ಬರುತ್ತಿವೆ. ಕಾಂಗ್ರೆಸ್ ಪಕ್ಷದಲ್ಲಿರುವ ನಮ್ಮ ಬಂಧುಗಳಿಗೆ ಈ ಬಗ್ಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ. ಅವರು ಮಾಡುವ ಆರೋಪಗಳಿಗೆ ತಕ್ಕ ಉತ್ತರ ನೀಡದೇ ಸುಮ್ಮನಾದರೆ ಒಪ್ಪಿಕೊಂಡಂತೆ ಆಗುತ್ತದೆ’ ಎಂದರು.

‘ಅಂಬೇಡ್ಕರ್ ಅವರು ದೇಶಕ್ಕೆ ಸಂವಿಧಾನ ಸಮರ್ಪಣೆ ಮಾಡಿದ ದಿನ 1949 ನ.26. ಆದರೆ, ಕಾಂಗ್ರೆಸ್ ಪಕ್ಷದವರು ಈ ದಿನವನ್ನು ಕಾನೂನು ದಿನವನ್ನಾಗಿ ಮಾಡಿ, ಜ.26ರನ್ನು ಗಣರಾಜ್ಯ ದಿನವನ್ನಾಗಿ ಘೋಷಣೆ ಮಾಡಿದ್ದರ ಹಿಂದೆ ಅಂಬೇಡ್ಕರ್ ಹಾಗೂ ಸಂವಿಧಾನದ ಬಗ್ಗೆ ನಮ್ಮ ಬಂಧುಗಳು ಹೆಚ್ಚಿಗೆ ತಿಳಿದುಕೊಳ್ಳಬಾರದು ಎಂಬ ಕುತಂತ್ರ ಅಡಗಿತ್ತು. ಇದನ್ನು ತೆಗೆಯಲು 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬರಬೇಕಾಯಿತು. ಅವರು ನ 26ರಂದು ಸಂವಿಧಾನ ದಿನವನ್ನಾಗಿ ಮಾಡಿದಾಗ ನಮ್ಮವರೇ ಟೀಕೆ ಮಾಡಿದರು. ಆದರೆ, ವಾಸ್ತವವನ್ನು ಅರ್ಥ ಮಾಡಿಕೊಂಡು ಮಾತನಾಡುವುದು ಒಳಿತು. ನೊಂದವರ ಧ್ವನಿ ಹಾಗು ಕಷ್ಟ ಅರ್ಥವಾಗುವುದು ಅದನ್ನು ಅನುಭವಿಸಿದರಿಗೆ ಮಾತ್ರ. ನೆಹರು, ಇಂದಿರಾಗಾಂಧಿ, ರಾಜೀವ್‌ಗಾಂಧಿ ಅವರು ಏಕೆ ಇದನ್ನು ಜಾರಿ ಮಾಡಲಿಲ್ಲ. ಅವರಿಗೆ ನೊಂದವರ ಭಾವನೆ ಅರ್ಥವಾಗುತ್ತಿರಲಿಲ್ಲ’ ಎಂದರು.

ಕೇಂದ್ರ ಬರ ಪರಿಹಾರ ಸಮಿತಿಯ ಅಧ್ಯಕ್ಷ ಎಂ.ರಾಮಚಂದ್ರ ಮಾತನಾಡಿ, ‘ಅಂಬೇಡ್ಕರ್ ಅವರು ವ್ಯಕ್ತಿಯಲ್ಲ. ಒಂದು ಶಕ್ತಿಯಾಗಿದ್ದರು. ಅವರ ಆಶಯದಂತೆ ಬಿಜೆಪಿ ನಡೆದುಕೊಳ್ಳುತ್ತಿದೆ. ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳ ಮುಖಂಡರು ಬಿಜೆಪಿಯ ಏಳಿಗೆ ಸಹಿಸದೆ ವೃಥಾ ಆರೋಪ ಮಾಡುತ್ತಿದ್ದಾರೆ. ಬಿಜೆಪಿಯು ಪಕ್ಷದಲ್ಲಿರುವ ದಲಿತರಿಗೆ ಸೂಕ್ತ ಸ್ಥಾನಮಾನ ನೀಡುವ ಜೊತೆಗೆ ಗೌರವಯುತವಾಗಿ ನಡೆದುಕೊಂಡಿದೆ. ಕಾಂಗ್ರೆಸ್ ಪಕ್ಷ ದಲಿತರನ್ನು ಮತ ಬ್ಯಾಂಕ್ ಮಾಡಿಕೊಂಡಿತ್ತು ಎಂಬುದು ಎಲ್ಲರಿಗೂ ತಿಳಿದಿರುವ ಕಟು ಸತ್ಯ’ ಎಂದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ,ಸನ್ಮಾನ ಸ್ವೀಕರಿಸಿದ ವೆಂಕಟರಮಣಸ್ವಾಮಿ (ಪಾಪು), ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಕಿನಕಹಳ್ಳಿ ರಾಚಯ್ಯ, ಸಹಕಾರ ಪ್ರಕೋಷ್ಟದ ರಾಜ್ಯ ಸಂಚಾಲಕ ಎಸ್.ಬಾಲಸುಬ್ರಮಣ್ಯ ಮಾತನಾಡಿದರು.

ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷೆ ಆಶಾ, ಚುಡಾ ಅಧ್ಯಕ್ಷ ಶಾಂತಮೂರ್ತಿ, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ನಟರಾಜೇಗೌಡ, ಎಸ್‌ಟಿ ಮೋರ್ಚಾದ ಅಧ್ಯಕ್ಷ ಜಯಸುಂದರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮೂಡ್ನಾಕೂಡು ಪ್ರಕಾಶ್, ನಲ್ಲೂರು ಶ್ರೀನಾಥ್, ಕಬ್ಬಹಳ್ಳೀ ರೇವಣ್ಣ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT