ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ; ರೇಷ್ಮೆ ನಗರಿ ಅಲ್ಲ, ಕಸದ ನಗರಿ!

ಸಮರ್ಪಕವಾಗಿ ವಿಲೇವಾರಿಯಾಗದ ತ್ಯಾಜ್ಯ, ಬೇಕಾಬಿಟ್ಟಿಯಾಗಿ ತ್ಯಾಜ್ಯ ಎಸೆಯುವ ಜನ
Last Updated 31 ಜನವರಿ 2021, 15:52 IST
ಅಕ್ಷರ ಗಾತ್ರ

‌ಕೊಳ್ಳೇಗಾಲ: ಗಡಿ ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾದ ಕೊಳ್ಳೇಗಾಲ ರೇಷ್ಮೆ ನಗರಿ ಎಂದೇ ಪ್ರಸಿದ್ಧಿ. ಆದರೆ, ಈಗ ನಗರದಾದ್ಯಂತ ಒಂದು ಸುತ್ತು ಸಂಚಾರ ಮಾಡಿದರೆ, ರೇಷ್ಮೆ ನಗರಿ ಅಲ್ಲ, ಇದು ‘ಕಸದ ನಗರಿ’ ಎಂಬುದು ಸ್ಪಷ್ಟವಾಗುತ್ತದೆ.

ಸ್ವಚ್ಛ ಭಾರತ ಅಭಿಯಾನ ಕೇವಲ ದಾಖಲೆಗಳಲ್ಲಿ ಮಾತ್ರ ಇದೆಯೇನೋ ಎಂಬ ಅನುಮಾನವೂ ಬರುತ್ತದೆ. ಯಾಕೆಂದರೆ ನೋಡಿದಲ್ಲೆಲ್ಲ ಕಸದ ರಾಶಿಯೇ ಕಣ್ಣಿಗೆ ರಾಚುತ್ತದೆ. ನಗರಸಭೆಯು ಕಸ ಸಂಗ್ರಹ ಮಾಡುತ್ತಿದ್ದರೂ, ನಗರದಲ್ಲಿ ಹೆಜ್ಜೆ ಹೆಜ್ಜೆಗೂ ತ್ಯಾಜ್ಯ ಕಾಣಿಸುತ್ತದೆ.

ವರ್ಷದ ಹಿಂದಿನಿಂದ ನಗರದಲ್ಲಿ ಕಸದ ಸಮಸ್ಯೆ ಹೆಚ್ಚು ಕಾಣಿಸುತ್ತಿರಲಿಲ್ಲ. ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲೂ ನಗರ ತಕ್ಕ ಮಟ್ಟಿಗೆ ಸ್ವಚ್ಛವಾಗಿಯೇ ಇತ್ತು. ಅನ್‌ಲಾಕ್‌ ಆರಂಭವಾದ ನಂತರ ಕಸದ ಸಮಸ್ಯೆ ಮತ್ತೆ ಕಾಡಲು ಆರಂಭವಾಗಿದ್ದು, ಕಸದ ವಿಲೇವಾರಿ ಕೂಡ ಸರಿಯಾಗಿ ನಡೆಯುತ್ತಿಲ್ಲ.

ಕಸದ ರಾಶಿ ತಾಂಡವ: ನಗರದ ಪ್ರಮುಖ ರಸ್ತೆಗಳಲ್ಲಿ ತ್ಯಾಜ್ಯಗಳ ಹಾವಳಿ ಇರುವುದಿಲ್ಲ. ಕಾರಣ, ನಗರಸಭೆಯ ಸಿಬ್ಬಂದಿ ಪ್ರತಿನಿತ್ಯ ಈ ರಸ್ತೆಗಳಲ್ಲಿ ಬಿದ್ದಿರುವ ಕಸವನ್ನು ಸಂಗ್ರಹಿಸುತ್ತಾರೆ.

ಒಳ ರಸ್ತೆಗಳು ಹಾಗೂ ಕೆಲವು ಬಡಾವಣೆಗಳಲ್ಲಿ ಕಸದ ಸಂಗ್ರಹ ಹಾಗೂ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ.

ನಗರದ ಆರ್.ಎಂ.ಸಿ ಮುಖ್ಯ ರಸ್ತೆ, ದೇವಾಂಗ ಪೇಟೆ, ಮೋಳೆ, ನೂರ್ ಮೊಹಲ್ಲಾ, ಹಳೇ ಕುರುಬರ ಬೀದಿ, ಮುಡಿಗುಂಡ ಬಡಾವಣೆ, ಬಸ್ತೀಪುರ ಬಡಾವಣೆ, ಅಮ್ಮನ್‍ಕಾಲೋನಿ, ಸೇರಿದಂತೆ ಅನೇಕ ಬಡಾವಣೆಗಳಲ್ಲಿ ಕಸದ ರಾಶಿಗಳು ಕಾಣಸಿಗುತ್ತವೆ. ನಗರಸಭೆ ಸಿಬ್ಬಂದಿ ಎರಡು ಮೂರು ದಿನಗಳಿಗೊಮ್ಮೆ ಬಡಾವಣೆಗಳಿಗೆ ಕಸದ ಸಂಗ್ರಹಕ್ಕೆ ಬರುವುದರಿಂದ ಈ ಸಮಸ್ಯೆ ಆಗುತ್ತಿದೆ.

‘ನಗರಸಭೆಯ ವಾಹನಕ್ಕೆ ಕಸ ಹಾಕಬೇಕಾದ ಜನರು ಸಾರ್ವಜನಿಕ ಸ್ಥಳಗಳಲ್ಲಿ ಎಸೆಯುತ್ತಾರೆ. ಆಹಾರ ಹುಡುಕುತ್ತಾ ಕಸದ ರಾಶಿಯನ್ನು ಕೆದಕುವ ಹಸು, ನಾಯಿ ಹಂದಿಗಳು ತ್ಯಾಜ್ಯವನ್ನು ಚೆಲ್ಲಾಪಿಲ್ಲಿ ಮಾಡುತ್ತವೆ. ಗಾಳಿಯ ರಭಸಕ್ಕೆ ಪ್ಲಾಸ್ಟಿಕ್‌, ಕಾಗದಗಳು ತೂರಿಕೊಂಡು ಹೋಗುತ್ತವೆ. ಇದರಿಂದ ಬಡಾವಣೆಯ ಸೌಂದರ್ಯ ಹಾಳಾಗುತ್ತದೆ’ ಎಂದು ಅಗಸ್ಟೀನ್‌ ಕಾಲೋನಿಯ ನಿವಾಸಿ ಫಿಲೋಮಿನಾ ಅವರು ಹೇಳಿದರು.

ಮೂಲದಲ್ಲೇ ಬೇರ್ಪಡದ ಕಸ: ನಗರಸಭೆಯ ವ್ಯಾಪ್ತಿಯಲ್ಲಿ 31 ವಾರ್ಡ್‌ಗಳಿದ್ದು, ಅಧಿಕಾರಿಗಳು ನೀಡುವ ಅಂಕಿ ಅಂಶಗಳ ಪ್ರಕಾರ ಪ್ರತಿ ದಿನ 21 ಟನ್‌ ಕಸ ಸಂಗ್ರಹವಾಗುತ್ತದೆ. ಈ ಪೈಕಿ ಮೂರು ಟನ್‌ ಹಸಿ ಕಸವಾಗಿದ್ದರೆ, ಒಂದು ಟನ್‌ ಒಣ ಕಸ. 17 ಟನ್‌ಗಳು ಇತರ ತ್ಯಾಜ್ಯ.

ಮೂಲದಲ್ಲೇ ತ್ಯಾಜ್ಯವನ್ನು ಹಸಿ ಕಸ, ಒಣ ಕಸ ಎಂದು ಬೇರ್ಪಡಿಸಬೇಕು ಎಂಬ ನಿಯಮ ಇದೆ. ಆದರೆ, ನಗರದಲ್ಲಿ ಇದು ಪಾಲನೆಯಾಗುತ್ತಿಲ್ಲ. ಬಹುತೇಕ ಜನರು ಎಲ್ಲವನ್ನು ಒಟ್ಟಾಗಿಯೇ ನಗರಸಭೆಯ ವಾಹನಗಳಲ್ಲಿ ಹಾಕುತ್ತಿದ್ದಾರೆ. ಸಿಬ್ಬಂದಿ ತಮಗೆ ತಮ್ಮಿಂದ ಆದಷ್ಟು ಕಸವನ್ನು ಪ್ರತ್ಯೇಕಿಸುತ್ತಾರೆ. ಉಳಿದವೆಲ್ಲ ಹಾಗೆಯೇ ಇರುತ್ತದೆ. ಈ ಕಾರಣದಿಂದಲೂ ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ‘ನಗರ ಸಭೆಯಲ್ಲಿ ಕಸ ಸಂಗ್ರಹಣೆಗೆ ಮೂರು ಟ್ರ್ಯಾಕ್ಟರ್‌ ಹಾಗೂ 12 ಇತರ ವಾಹನಗಳಿವೆ. 31 ವಾರ್ಡ್‌ಗಳಲ್ಲೂ ಪ್ರತಿ ದಿನ ಕಸ ಸಂಗ್ರಹಣೆಗೆ ವಾಹನದ ವ್ಯವಸ್ಥೆ ಮಾಡಲಾಗಿದೆ. ಮನೆ ಮನೆಗಳಿಗೆ ತೆರಳಿ ಕಸ ಸಂಗ್ರಹಿಸಲಾಗುತ್ತಿದೆ’ಎಂದು ನಗರಸಭೆ ಆರೋಗ್ಯ ನಿರೀಕ್ಷಕಿ ಭೂಮಿಕಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಎಲ್ಲೆಂದರಲ್ಲಿ ಕಸ ಎಸೆಯುವ ಜನ

ತ್ಯಾಜ್ಯ ಸಂಗ್ರಹ ಹಾಗೂ ವಿಲೇವಾರಿ ವಿಚಾರದಲ್ಲಿ ನಗರದ ಜನರು ಕೂಡ ತಮ್ಮ ಜವಾಬ್ದಾರಿಯನ್ನು ಮರೆಯುತ್ತಿದ್ದಾರೆ. ಮೂಲದಲ್ಲಿ ಕಸವನ್ನು ಬೇರ್ಪಡಿಸದೇ ಇರುವುದು ಒಂದೆಡೆಯಾದರೆ, ಮನಸ್ಸಿಗೆ ಬಂದಂತೆ ಸಾರ್ವಜನಿಕ ಸ್ಥಳಗಳು ಹಾಗೂ ಖಾಲಿ ನಿವೇಶನಗಳಲ್ಲಿ ಕಸವನ್ನು ಎಸೆಯುತ್ತಿದ್ದಾರೆ. ಜನರ ಈ ಮನೋಭಾವದಿಂದಾಗಿ ಕಸ ಸಂಗ್ರಹ ಮಾಡಲು ನಗರಸಭೆ ವ್ಯವಸ್ಥೆ ಮಾಡಿದರೂ, ಶೇ 100ರಷ್ಟು ಯಶಸ್ಸು ಕಾಣುತ್ತಿಲ್ಲ.

ಪ್ರತಿಯೊಂದು ಬಡಾವಣೆಗೂ ಕಸದ ವಾಹನಗಳನ್ನು ನಿಯೋಜಿಸಲಾಗಿದೆ. ಪ್ರತಿ ದಿನ ಅಲ್ಲದಿದ್ದರೂ, ಎರಡು ದಿನಕ್ಕೊಮ್ಮೆ ವಾಹನ ಬಂದೇ ಬರುತ್ತದೆ. ಹಾಗಿದ್ದರೂ ಜನರು ಕಸವನ್ನು ಕೊಡುವುದಿಲ್ಲ. ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಇದರಿಂದ ಕಸ ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ ಅಲ್ಲದೇ, ಸಾರ್ಜನಿಕರ ಸ್ಥಳಗಳಲ್ಲಿ ಕಸ ಎಸೆಯುವುದರಿಂದ ಸುತ್ತಮುತ್ತಲಿನ ಜನರಿಗೆ ತೊಂದರೆಯಾಗುತ್ತಿದೆ ಎಂಬುದು ಅಧಿಕಾರಿಗಳ ಹೇಳಿಕೆ.

‘ಎಲ್ಲೆಂದರಲ್ಲಿ ಕಸ ಹಾಕುತ್ತಿರುವುದರಿಂದ ತೊಂದರೆಯಾಗುತ್ತಿರುವ ಬಗ್ಗೆ ಜನರಿಂದ ದೂರುಗಳು ಬಂದಿವೆ. ಮೂಲದಲ್ಲಿ ಕಸ ಬೇರ್ಪಡಿಸುವಿಕೆ ಹಾಗೂ ಬೇಕಾಬಿಟ್ಟಿಯಾಗಿ ತ್ಯಾಜ್ಯ ಎಸೆಯದಂತೆ ನಿರಂತರವಾಗಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಹಾಗಿದ್ದರೂ ಪ್ರಯೋಜನವಾಗುತ್ತಿಲ್ಲ. ಇದೇ ಧೋರಣೆ ಮುಂದುವರಿದರೆ, ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ’ ಎಂದು ನಗರಸಭೆಯ ಸಹಾಯಕ ಪರಿಸರ ಎಂಜಿನಿಯರ್‌ ಅಶ್ವಿನಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕ್ರಮಕ್ಕೆ ಅವಕಾಶ: ಆಯುಕ್ತ

ಈ ವಿಚಾರದ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನಗರಸಭೆ ಆಯುಕ್ತ ವಿಜಯ್‌ ಅವರು, ‘ಪ್ರತಿನಿತ್ಯ ವಾಹನಗಳ ಮೂಲಕ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುತ್ತಿದ್ದೇವೆ. ಹಾಗಿದ್ದರೂ ಕೆಲವರು ರಸ್ತೆಯ ಬದಿಗಳಲ್ಲಿ ಖಾಲಿ ನಿವೇಶನಗಳಲ್ಲಿ ಕಸ ಹಾಕುತ್ತಿದ್ದಾರೆ. ಕಸದ ಸಮರ್ಪಕ ವಿಲೇವಾರಿಗೆ ಜನರು ಕೂಡ ನಮಗೆ ಸಹಕರಿಸಬೇಕು. ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ ಇದೆ. ನಂತರವೂ ಅದೇ ವರ್ತನೆ ಮುಂದುವರಿಸಿದರೆ, ಅವರ ಮೇಲೆ ಪ್ರಕರಣವನ್ನೂ ದಾಖಲು ಮಾಡಬಹುದು’ ಎಂದು ಹೇಳಿದರು.

ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ. ಸುತ್ತಲಿನ ಪರಿಸರ ಸ್ವಚ್ಛವಾಗಿದ್ದರೆ ನಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ. ಎಲ್ಲೆಂದರಲ್ಲಿ ಕಸ ಎಸೆಯಬಾರದು
- ಪ್ರಭಾಕರ್, ಹಿರಿಯ ನಾಗರಿಕ

- ನಗರದಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಲು ಆದ್ಯತೆ ನೀಡಲಾಗುವುದು. ಕಸದ ರಾಶಿಗಳನ್ನು ಕೂಡಲೇ ಕೂಡಲೇ ತೆರವುಗೊಳಿಸಲಾಗುವುದು. ಇದಕ್ಕೆ ಜನ ಸಹಕಾರ ಬೇಕು
-ಗಂಗಮ್ಮ, ನಗರಸಭೆ ಅಧ್ಯಕ್ಷೆ

ಎಲ್ಲೆಂದರಲ್ಲಿ ಕಸ ಎಸೆಯುವಂತಿಲ್ಲ. ಜನರು ನಿಯಮ ಉಲ್ಲಂಘಿಸಿದರೆ ಮೊದಲಿಗೆ ದಂಡ ಹಾಕುತ್ತೇವೆ. ನಂತರವೂ ಚಾಳಿ ಬಿಡದಿದ್ದರೆ ಪ್ರಕರಣ ದಾಖಲಿಸುತ್ತೇವೆ
-ವಿಜಯ್‌, ನಗರಸಭೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT