ಭಾನುವಾರ, ಏಪ್ರಿಲ್ 11, 2021
32 °C
ಕೆಪಿಸಿಸಿಯ ನೂತನ ಕಾರ್ಯಾಧ್ಯಕ್ಷಗೆ ಜಿಲ್ಲಾ ಕಾಂಗ್ರೆಸ್‌ ಸಮಿತಿಯಿಂದ ಅಭಿನಂದನೆ

ಸೋತೆ ಎನ್ನುವ ದುಃಖ ಇಲ್ಲ. ಪಕ್ಷದ ಸಂಘಟನೆಯಲ್ಲಿ ತೊಡಗಿದ್ದೇನೆ: ಆರ್‌.ಧ್ರುವನಾರಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಲೋಕಸಭಾ ಚುನಾವಣೆಯಲ್ಲಿ ಸೋತೆ ಎನ್ನುವ ದುಃಖ ಇಲ್ಲ. ಪಕ್ಷದ ಸಂಘಟನೆಯಲ್ಲಿ ತೊಡಗಿದ್ದೇನೆ. ಪಕ್ಷಕ್ಕಿಂತ ದೊಡ್ಡವರು ಯಾರೂ ಇಲ್ಲ. ಅದು ನನಗೆ ತಾಯಿ ಸಮಾನ. ನನ್ನ ಋಣ ಯಾವತ್ತೂ ಪಕ್ಷಕ್ಕೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಅವರು ಶನಿವಾರ ಹೇಳಿದರು.

ಜಿಲ್ಲಾ ಕಾಂಗ್ರೆಸ್‌ ಸಮಿತಿ ವತಿಯಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ‘ಎರಡು ಬಾರಿ ಶಾಸಕನಾಗಿ, ಸಂಸದನಾಗಿ ಜಿಲ್ಲೆಯ ಅಭಿವೃದ್ಧಿಗಾಗಿ ದುಡಿದಿದ್ದೇನೆ. ನನ್ನ ಕೈಲಾದಷ್ಟು ಸಹಾಯ ಮಾಡಿದ ಆತ್ಮತೃಪ್ತಿ ಇದೆ. ಲೋಕಸಭಾ ಚುನಾವಣೆಯಲ್ಲಿ ಸೋಲಾದ ನಂತರ ಪಕ್ಷ ಸಂಘಟನೆ ತೀರ್ಮಾನಿಸಿ, ಮರು ದಿನದಿಂದಲೇ ಪ್ರವಾಸ ಆರಂಭಿಸಿದ್ದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ನಾನು ಕಾರ್ಯಾಧ್ಯಕ್ಷ ಆಗುವುದಕ್ಕೆ ಬೆಂಬಲಿಸಿದ್ದಾರೆ’ ಎಂದರು. 

‘ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ. ತಳಮಟ್ಟದಲ್ಲಿ ಪಕ್ಷ ಸಂಘಟಿಸಬೇಕಾಗಿದ್ದು, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ಇದಕ್ಕೆ ನಮ್ಮ ಸಹಕಾರ ಯಾವುತ್ತೂ ಇದೆ’ ಎಂದರು. 

ಮಹದೇವ ಪ್ರಸಾದ್‌ ಸ್ಮರಣೆ: ಲೋಕಸಭಾ ಚುನಾವಣೆಯಲ್ಲಿ ಗುಂಡ್ಲುಪೇಟೆ, ಚಾಮರಾಜನಗರ, ನಂಜನಗೂಡಿನಲ್ಲಿ ನನಗೆ ಹಿನ್ನಡೆಯಾಯಿತು. ಒಂದು ವೇಳೆ ಮಹದೇವ ಪ್ರಸಾದ್‌ ಇರುತ್ತಿದ್ದರೆ ನಾನು ಸೋಲುತ್ತಲೇ ಇರಲಿಲ್ಲ. ಆ ಮಟ್ಟಿಗೆ ಅವರು ಪಕ್ಷವನ್ನು ಸಂಘಟಿಸುತ್ತಿದ್ದರು ಎಂದು ಧ್ರುವನಾರಾಯಣ ಅವರು ಹೇಳಿದರು. 

ಬಿಜೆಪಿ ವಿರುದ್ಧ ವಾಗ್ದಾಳಿ: ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಧ್ರುವನಾರಾಯಣ ಅವರು, ‘ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿದೆ. ಆದರೆ, ಜನಪರ ಯೋಜನೆಗಳನ್ನು ಕೈಗೊಂಡಿಲ್ಲ. ಜಿಲ್ಲೆಗಾಗಿ ಯಾವ ಹೊಸ ಯೋಜನೆಯನ್ನು, ಅನುದಾನವನ್ನು ನೀಡಿಲ್ಲ. ಪ್ರತಿ ಸಂಪುಟ ಸಭೆಯಲ್ಲಿ ಶಿವಮೊಗ್ಗಕ್ಕೆ ಹೆಚ್ಚಿನ ಅನುದಾನ ನೀಡಲಾಗುತ್ತಿದೆ. ಅಧಿಕಾರಕ್ಕೆ ಏರಿ ಎರಡು ವರ್ಷವಾದರೂ ಯಡಿಯೂರಪ್ಪ ಅವರು ಒಂದು ಬಾರಿಯೂ ಚಾಮರಾಜನಗರಕ್ಕೆ ಬಂದಿಲ್ಲ. ಕಾಂಗ್ರೆಸ್‌ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು 12 ಬಾರಿ ಭೇಟಿ ನೀಡಿ, ₹10 ಸಾವಿರ ಕೋಟಿಗೂ ಹೆಚ್ಚು ಅನುದಾನ ನೀಡಿದ್ದಾರೆ’ ಎಂದರು.

ಕೇಂದ್ರದಿಂದ ಅನ್ಯಾಯ: ‘ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಈ ಬಾರಿಯ ಬಜೆಟ್‌ನಲ್ಲಿ ನೆರೆಯ ತಮಿಳುನಾಡಿಗ ₹60 ಸಾವಿರ ಕೋಟಿ, ಕೇರಳಕ್ಕೆ ₹35 ಸಾವಿರ ಕೋಟಿ ಹಾಗೂ ಪಶ್ಚಿಮ ಬಂಗಾಳಕ್ಕೆ ₹1 ಲಕ್ಷ ಕೋಟಿ ಅನುದಾನ ನೀಡಲಾಗಿದೆ. 25 ಬಿಜೆಪಿ ಸಂಸದರನ್ನು ನೀಡಿರುವ ರಾಜ್ಯಕ್ಕೆ ಏನೂ ಇಲ್ಲ’ ಎಂದು ದೂರಿದರು.

‘ಜಿಲ್ಲೆಯಲ್ಲಿ ಬಹಳಷ್ಟು ಯೋಜನೆಗಳು ನನೆಗುದಿಗೆ ಬಿದ್ದಿವೆ. ಕೆರೆ ತುಂಬಿಸುವ ಯೋಜನೆಗಳು ಇನ್ನೂ ಪೂರ್ಣಗೊಂಡಿಲ್ಲ. ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿ ವಿಳಂಬವಾಗುತ್ತಿದೆ. ಸ್ಥಳೀಯ ಸಂಸದರು ಈ ಬಗ್ಗೆ ಕೇಂದ್ರ ಸರ್ಕಾರದ ಮುಂದೆ ಧ್ವನಿ ಎತ್ತಬೇಕು’ ಎಂದರು. 

‘ಎನ್‌.ಮಹೇಶ್‌ ಅವರ ಮೇಲೆ ಕೊಳ್ಳೇಗಾಲದ ಜನರು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು. ಎಲ್ಲವೂ ಹುಸಿಯಾಗಿದೆ. ಕ್ಷೇತ್ರದಲ್ಲೂ ಏನೂ ಅಭಿವೃದ್ಧಿಯಾಗುತ್ತಿಲ್ಲ. ಅವರನ್ನು ಬೆಂಬಲಿಸಿದ ಹುಡುಗರಿಗೂ ನಿರಾಸೆಯಾಗಿದೆ. ಲೋಕಸಭಾ ಚುನಾವಣೆಯ ವೇಳೆ ಬಿವಿಎಸ್‌ ಸಂಘಟನೆಯು, ಅಂಬೇಡ್ಕರ್‌ ಅವರಿಗೆ ಕಾಂಗ್ರೆಸ್‌ ಅಪಮಾನ ಮಾಡಿದೆ ಎಂದು ಪ್ರಚಾರ ನಡೆಸಿತು. ಇದರಿಂದ ಕೊಂಚ ಹಿನ್ನಡೆಯಾಯಿತು. ವಾಸ್ತವವಾಗಿ ಅಂಬೇಡ್ಕರ್‌ ಅವರಿಗೆ ಕಾಂಗ್ರೆಸ್‌ ಅತಿ ಹೆಚ್ಚು ಗೌರವ ನೀಡಿತ್ತು’ ಎಂದರು.  

ಬಿಜೆಪಿ ಸರ್ಕಾರ ಕಿತ್ತೊಗೆಯುವುದು ಗುರಿಯಾಗಲಿ: ಖಾದರ್‌

ಕಾಂಗ್ರೆಸ್‌ ಮುಖಂಡ ಹಾಗೂ ಶಾಸಕ‌ ಯು.ಟಿ.ಖಾದರ್‌ ಅವರು ಮಾತನಾಡಿ, ‘ಕೇಂದ್ರ ಹಾಗೂ ರಾಜ್ಯದಲ್ಲಿ ಜನವಿರೋಧಿ ಸರ್ಕಾರಗಳಿವೆ. ಈ ಎರಡೂ ಸರ್ಕಾರಗಳನ್ನು ಕಿತ್ತೊಗೆಯುವುದು ನಮ್ಮ ಧ್ಯೇಯವಾಗಬೇಕು’ ಎಂದರು.

‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಜನಪರವಾದ ಒಂದೇ ಒಂದು ಯೋಜನೆ ಬಂದಿಲ್ಲ. ಜನರ ಪರವಾಗಿ ಯಾವುದೇ ಕೆಲಸ ಆಗುತ್ತಿಲ್ಲ. ಇಂಧನ, ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರಿಗೆ ಹೊರೆಯಾಗುತ್ತಿದೆ’ ಎಂದರು. 

‘ಸರ್ಕಾರದ ವೈಫಲ್ಯಗಳನ್ನು ನಮ್ಮ ಕಾರ್ಯಕರ್ತರು ಜನರಿಗೆ ತಿಳಿಸುವ ಕೆಲಸ ಮಾಡಬೇಕು. ಪ್ರತಿ ಬೂತಿನಲ್ಲೂ ನಮ್ಮ ಕಾರ್ಯಕರ್ತರು ಸಕ್ರಿಯರಾಗಬೇಕು. ಒಂದು ಬೂತಿನಲ್ಲಿ ಕನಿಷ್ಠ 100 ಮಂದಿ ಕಾಂಗ್ರೆಸ್‌ ಕಾರ್ಯಕರ್ತರಿದ್ದರೆ ನಮ್ಮನ್ನು ಸೋಲಿಸುವವರು ಯಾರೂ ಇಲ್ಲ’ ಎಂದರು. 

ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಆರ್.ನರೇಂದ್ರ, ಅನಿಲ್‌ ಚಿಕ್ಕಮಾದು, ವಿಧಾನಪರಿಷತ್‌ ಸದಸ್ಯ ಪಿ.ಧರ್ಮಸೇನ, ಮುಖಂಡರಾದ ಎಂ.ಶಿವಣ್ಣ, ಎ.ಆರ್.ಕೃಷ್ಣಮೂರ್ತಿ, ಜಯಣ್ಣ, ಬಾಲರಾಜು, ಕಳಲೆ ಕೇಶವಮೂರ್ತಿ ಮಾತನಾಡಿದರು. 

ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ, ಮೈಸೂರು ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಅರ್‌.ಮೂರ್ತಿ, ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಅಶ್ವಿನಿ, ಉಪಾಧ್ಯಕ್ಷೆ ಶಶಿಕಲಾ, ಜಿಲ್ಲಾ ಪಂಚಾಯಿಸದಿ ಸದಸ್ಯರು, ಪಕ್ಷದ ಪದಾಧಿಕಾರಿಗಳು ಮುಖಂಡರು ಇದ್ದರು.  

ಹಿಂದೂ ಬೇರೆ, ಹಿಂದುತ್ವ ಬೇರೆ: ಯತೀಂದ್ರ

ವರುಣಾ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು. 

‘ಆರ್‌ಎಸ್‌ಎಸ್‌ನವರು ಪ್ರತಿ ಮನೆಗಳಿಗೆ ಭೇಟಿ ನೀಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಕಾಂಗ್ರೆಸ್‌ ಹಿಂದುತ್ವದ ವಿರೋಧಿ ಎಂದು ಹೇಳುತ್ತಿದ್ದಾರೆ. ಹಿಂದುತ್ವ ಹಾಗೂ ಹಿಂದೂ ಎರಡು ಒಂದೇ ಅಲ್ಲ’ ಎಂದರು. 

‘ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕೋಮುವಾದ ಭಾವನೆ ಹೆಚ್ಚಾಗಿದೆ. ನಮ್ಮದು ಜಾತ್ಯತೀತ ರಾಷ್ಟ್ರ. ದೇಶ ಒಂದು ಧರ್ಮಕ್ಕೆ ಸೇರಿದ್ದಲ್ಲ. ಹಿಂದೂ ಧರ್ಮ ಬೇರೆ, ಹಿಂದುತ್ವವೇ ಬೇರೆ. ಹಿಂದುತ್ವವನ್ನು ಟೀಕೆ‌ ಮಾಡಿದ್ರೆ ಹಿಂದೂ ವಿರೋಧಿಗಳಲ್ಲ. ಹಿಂದುತ್ವ ಅನ್ನುವುದು ರಾಜಕೀಯ ಸಿದ್ಧಾಂತ. ಅಡಿಯಾಳಾಗಿ ಬದುಕಬೇಕೆಂಬುದು ಹಿಂದುತ್ವ. ಎಲ್ಲರನ್ನೂ ಜೊತೆಯಾಗಿ ತೆಗೆದುಕೊಂಡು ಹೋಗುವುದು ಹಿಂದೂ ಧರ್ಮ. ನಮ್ಮ ಕಾರ್ಯಕರ್ತರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಜನರಿಗೆ ಇದನ್ನು ವಿವರಿಸಬೇಕು’ ಎಂದರು.

ಅದ್ಧೂರಿ ಸ್ವಾಗತ, ಮೆರವಣಿಗೆ

ಆರ್‌.ಧ್ರುವನಾರಾಯಣ ಅವರಿಗೆ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಅದ್ಧೂರಿ ಸ್ವಾಗತ ನೀಡಿದರು. ಮರಿಯಾಲದ ಮುರುಘ ರಾಜೇಂದ್ರ ಮಠದ ಶಿಕ್ಷಣ ಸಂಸ್ಥೆಯ ಆವರಣದಲ್ಲಿರುವ ಧ್ರುವನಾರಾಯಣ ಅವರ ರಾಜಕೀಯ ಗುರು ಎಂ.ರಾಜಶೇಖರಮೂರ್ತಿ‌ ಅವರ ಸಮಾಧಿಗೆ ಪೂಜೆ ಸಲ್ಲಿಸಿದ ನಂತರ, ಬೈಕ್‌ ಹಾಗೂ ವಾಹನಗಳ ರ‍್ಯಾಲಿ ಮೂಲಕ ನಗರಕ್ಕೆ ಅವರನ್ನು ಕರೆದುಕೊಂಡು ಬರಲಾಯಿತು. ರಾಮಸಮುದ್ರದಲ್ಲಿರುವ ಅಂಬೇಡ್ಕರ್‌ ಪ್ರತಿಮೆ ಬಳಿಗೆ ತೆರಳಿ ಮಾಲಾರ್ಪಣೆ ಮಾಡಿದ ನಂತರ, ಚಾಮರಾಜೇಶ್ವರ ದೇವಸ್ಥಾನಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಲಾಯಿತು. 

ಅಲ್ಲಿಂದ ಧ್ರುವನಾರಾಯಣ ಅವರನ್ನು ಅಲಂಕೃತ ತೆರೆದ ವಾಹನದಲ್ಲಿ ಸಮಾರಂಭ ನಡೆದ ಸೋಮವಾರಪೇಟೆಯ ಶಿವಕುಮಾರಸ್ವಾಮಿ ಭವನದವರೆಗೂ ಅದ್ಧೂರಿ ಮೆರವಣಿಗೆಯ ಮೂಲಕ ಕರೆದುಕೊಂಡು ಬರಲಾಯಿತು.  

ಕಿತ್ತಳೆ, ಸೇಬು ಹಾರ: ಬೆಂಬಲಿಗರು ಹಾಗೂ ಮುಖಂಡರು ಕೆಪಿಸಿಸಿ ಕಾರ್ಯಾಧ್ಯಕ್ಷರಿಗೆ ಬೃಹತ್‌ ಗಾತ್ರದ ಹೂವಿನ ಹಾರಗಳನ್ನು ಹಾಕಿ ಅಭಿನಂದಿಸಿದರು. ಕಿತ್ತಳೆಗಳಿಂದ ಹಾಗೂ ಸೇಬುಗಳಿಂದ ಮಾಡಿದ ಹಾರಗಳೂ ಗಮನಸೆಳೆದರು. ಸೇಬಿನ ಹಾರ ಹಾಕಿ, ಫೋಟೊ ತೆಗೆಯುವುದರ ಒಳಗಾಗಿ, ಹಾರದಲ್ಲಿದ್ದ ಸೇಬುಗಳು ಖಾಲಿಯಾಗಿದ್ದವು!  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು