ಶುಕ್ರವಾರ, ಮಾರ್ಚ್ 31, 2023
24 °C

ಇಡಿ ದಾಳಿ ಮೂಲಕ ವಿರೋಧ ಪಕ್ಷಗಳ ಸದೆಬಡಿಯುವ ಯತ್ನ: ಧ್ರುವನಾರಾಯಣ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಶಾಸಕ ಜಮೀರ್‌ ಅಹಮದ್‌ ಖಾನ್‌ ಅವರ ಮೇಲೆ ನಡೆದಿರುವ ಆದಾಯ ತೆರಿಗೆ ಇಲಾಖೆ ದಾಳಿ ರಾಜಕೀಯ ಪ್ರೇರಿತ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅವರು ಗುರುವಾರ ಆರೋಪಿಸಿದರು. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ, ವಿರೋಧ ಪಕ್ಷಗಳು ಹಾಗೂ ಅವುಗಳ ಮುಖಂಡರನ್ನು ಸದೆಬ‌ಡಿಯುವ ಕೆಲಸವನ್ನು ಸತತವಾಗಿ ಮಾಡಲಾಗುತ್ತಿದೆ. ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡೇ ಇಡಿ, ಐಟಿ ದಾಳಿಗಳನ್ನು ನಡೆಸುತ್ತಿದ್ದಾರೆ.  ತಮಿಳುನಾಡು ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಸ್ಟಾಲಿನ್‌ ಸಬಂಧಿಕರ ಮೇಲೆ, ಪಶ್ಚಿಮ ಬಂಗಳಾದಲ್ಲಿ ಮಮತಾ ಬ್ಯಾನರ್ಜಿ ಅವರ ಸಂಬಂಧಿಕರ ಮೇಲೆ ಐಟಿ, ಇಡಿ ದಾಳಿ ನಡೆಸಲಾಗಿತ್ತು. ನಮ್ಮ ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್‌ ಅವರ ಮೇಲೆ ಇಡಿ, ಐಟಿ, ಸಿಬಿಐ ದಾಳಿಗಳನ್ನು ನಡೆಸಲಾಗಿತ್ತು’ ಎಂದು ಆರೋಪಿಸಿದರು.

‘ಕಾನೂನಾತ್ಮಕವಾಗಿ ಯಾವ ದಾಳಿ ನಡೆದರೂ ನಮ್ಮ ಆಕ್ಷೇಪ ಇಲ್ಲ. ಆದರೆ, ರಾಜಕೀಯ ಉದ್ದೇಶದಿಂದ ವಿರೋಧ ಪಕ್ಷದವರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ಬಸವನಗೌಡ ಪಾಟೀಲ ಯತ್ನಾಳ್‌, ಅಡಗೂರು ಎಚ್.ವಿಶ್ವನಾಥ್‌ ಅವರು ಈ ಹಿಂದೆ ಯಡಿಯೂರಪ್ಪ ಹಾಗೂ ಅವರ ಮಗನ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಕೇಂದ್ರ ಸರ್ಕಾರ ಅವರ ಮೇಲೆ ಇಡಿ, ಐಟಿ ದಾಳಿ ಯಾಕೆ ನಡೆಸಲಿಲ್ಲ’ ಎಂದು ಅವರು ಪ್ರಶ್ನಿಸಿದರು.

ಪ್ರಾದೇಶಿಕ ಅಸಮತೋಲನ: ‘ಬಿಜೆಪಿ ಸರ್ಕಾರದ ಹೊಸ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂಪುಟ ವಿಸ್ತರಣೆಯಲ್ಲೇ ಎಡವಿದ್ದಾರೆ. ಸಂಪುಟದಲ್ಲಿ ಪ್ರಾದೇಶಿಕ ಅಸಮತೋಲನ ಕಾಣುತ್ತಿದೆ. ಹಳೆ ಮೈಸೂರು ಭಾಗಕ್ಕೆ ಪ್ರಾತಿನಿಧ್ಯ ಸಿಕ್ಕಿಲ್ಲ. ಈ ಹಿಂದೆ ಯಡಿಯೂರಪ್ಪ ಅವರ ಸಂಪುಟದಲ್ಲೂ ಈ ಭಾಗವನ್ನು ಕಡೆಗಣಿಸಲಾಗಿತ್ತು. ಈಗ ಬೊಮ್ಮಾಯಿ ಅವರೂ ಕಡೆಗಣಿಸಿದ್ದಾರೆ’ ಎಂದರು.

‘ಕಾಂಗ್ರೆಸ್‌ ಸರ್ಕಾರದಲ್ಲಿ ಜಿಲ್ಲೆಯ ಮಹದೇವ ಪ್ರಸಾದ್‌, ಆ ಬಳಿಕ ಅವರ ಪತ್ನಿ ಮೋಹನಕುಮಾರಿ, ಮೈತ್ರಿ ಸರ್ಕಾರದಲ್ಲಿ ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಮೈಸೂರಿನಲ್ಲಿ ಶ್ರೀನಿವಾಸ ಪ್ರಸಾದ್‌ ಅವರಿಗೆ ಮಂತ್ರಿಗಿರಿ ನೀಡಲಾಗಿತ್ತು. ಬಿಜೆಪಿ ಸರ್ಕಾರದಲ್ಲಿ ಮೈಸೂರು ಭಾಗಕ್ಕೇ ಸಚಿವ ಸ್ಥಾನ ಕೊಟ್ಟಿಲ್ಲ. ಬೆಂಗಳೂರಿಗೇ ಸಿಂಹಪಾಲು ನೀಡಿದ್ದಾರೆ’ ಎಂದು ದೂರಿದರು. 

ನಗರಕ್ಕೆ ಬರಲಿ: ‘ಬಿಜೆಪಿ ಸರ್ಕಾರದಲ್ಲಿರುವವರು ಮೂಢನಂಬಿಕೆಗೆ ಜೋತು ಬಿದ್ದಿದ್ದಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಚಾಮರಾಜನಗರಕ್ಕೆ ಬರಲಿಲ್ಲ. ಹಾಗಿದ್ದರೂ ಅವರು ಅಧಿಕಾರ ಕಳೆದುಕೊಂಡರು. ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿ ನನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದು ಧ್ರುವನಾರಾಯಣ ಅವರು ಹೇಳಿದರು.

ಎನ್‌.ಮಹೇಶ್‌ ಬಿಜೆಪಿಗೆ: ಚುನಾವಣೆ ಎದುರಿಸಲು ಸವಾಲು

ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಅವರು ಬಿಜೆಪಿಗೆ ಸೇರಿರುವುದನ್ನು ಟೀಕಿಸಿರುವ ಆರ್‌.ಧ್ರುವನಾರಾಯಣ ಅವರು, ‘ಬಾಯಲ್ಲಿ‌ ಭೀಮ, ಹೃದಯದಲ್ಲಿ ರಾಮ ಕ್ಷೇತ್ರದ ಜನತೆಗೆ ಪಂಗನಾಮ ಎಂಬ ಮಾತು ಎನ್‌.ಮಹೇಶ್‌ ಅವರಿಗೆ ಅನ್ವಯವಾಗುತ್ತದೆ’ ಎಂದು ವ್ಯಂಗ್ಯವಾಡಿದರು. 

‘ಬಿಎಸ್‌ಪಿ ಟಿಕೆಟ್‌ನಿಂದ ಸ್ಪರ್ಧಿಸಿ ಅವರು ಶಾಸಕರಾಗಿದ್ದಾರೆ. ಈಗ ಅವರು ಬಿಜೆಪಿಗೆ ಸೇರಿದ್ದಾರೆ. ಯಾವುದೇ ಪಕ್ಷದ ಸೇರಲು ಅವರು ಸ್ವತಂತ್ರರು. ಆದರೆ, ಒಂದು ಪಕ್ಷದಿಂದ ಗೆದ್ದು ನಂತರ ಇನ್ನೊಂದು ಪಕ್ಷಕ್ಕೆ ಸೇರ್ಪಡೆಯಾದಾಗ ನೈತಿಕತೆ ಪ್ರಶ್ನೆ ಬರುತ್ತದೆ. ಕಾಂಗ್ರೆಸ್‌, ಜೆಡಿಎಸ್‌ ತೊರೆದು ಬಿಜೆಪಿಗೆ ಹೋದವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಚುನಾವಣೆ ಎದುರಿಸಿ ಗೆದ್ದಿದ್ದಾರೆ. ಅದೇ ರೀತಿ ಮಹೇಶ್‌ ಅವರು ಕೂಡ ರಾಜೀನಾಮೆ ನೀಡಿ ಚುನಾವಣೆ ಎದುರಿಸಲಿ’ ಎಂದು ಅವರು ಸವಾಲು ಹಾಕಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು