ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಣಗಳ್ಳಿ: ರಸ್ತೆಯೇ ಬಹಿರ್ದೆಸೆಯ ತಾಣ

ಶೌಚಾಲಯಗಳಿದ್ದರೂ ಬಳಸದ ಜನ.ಮೂಗು ಮುಚ್ಚಿಕೊಂಡು ಹೋಗಬೇಕಾದ ಸ್ಥಿತಿ
Last Updated 15 ಅಕ್ಟೋಬರ್ 2020, 13:20 IST
ಅಕ್ಷರ ಗಾತ್ರ

ಕೊಳ್ಳೇಗಾಲ: ತಾಲ್ಲೂಕಿನ ಕುಣಗಳ್ಳಿ ಗ್ರಾಮದ ರಸ್ತೆ ವಾಹನಗಳ ಸಂಚಾರ ಅಥವಾ ಜನರ ಓಡಾಟಕ್ಕೆ ಮಾತ್ರ ಇರುವುದಲ್ಲ; ರಾತ್ರಿ ಹೊತ್ತು ಅಥವಾ ಮುಂಜಾನೆ ಅದು ಶೌಚಾಲಯವಾಗಿ ಬದಲಾಗುತ್ತದೆ.

ಬೆಳಕು ಹರಿಯುವುದಕ್ಕೂ ಮುನ್ನ, ವಾಹನಗಳ ಸಂಚಾರ ಆರಂಭವಾಗುವುದಕ್ಕೂ ಮೊದಲೇ ಜನರು ರಸ್ತೆಯ ಇಕ್ಕೆಲಗಳಲ್ಲೂ ಮಲ ವಿಸರ್ಜನೆ ಮಾಡುತ್ತಾರೆ. ಹಗಲು ಹೊತ್ತಿನಲ್ಲಿ ರಸ್ತೆಯಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಂಡೇ ಹೋಗಬೇಕು. ಗ್ರಾಮದಿಂದ 15ಕ್ಕಿಂತಲೂ ಹೆಚ್ಚು ಹಳ್ಳಿಗಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಪ್ರತಿ ದಿನ ಸವಾರರು ವಾಸನೆ ತಿಂದುಕೊಂಡೇ ಸಂಚರಿಸಬೇಕಾಗಿದೆ.

ಗ್ರಾಮದಲ್ಲಿ 4,000 ಹೆಚ್ಚು ಜನಸಂಖ್ಯೆ ಇದೆ. ಬಹುತೇಕ ಬಡ ಕೂಲಿ ಕಾರ್ಮಿಕರೇ ವಾಸವಿದ್ದಾರೆ. ಗ್ರಾಮದಲ್ಲಿ ಕೆಲವರಿಗೆ ಪಂಚಾಯಿತಿ ವತಿಯಿಂದ ಮನೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇನ್ನೂ ಕೆಲವರು ಸ್ವಂತ ಶೌಚಾಲಯಗಳನ್ನು ಹೊಂದಿದ್ದಾರೆ. ಹಾಗಿದ್ದರೂ ಬಯಲು ಬಹಿರ್ದೆಸೆ ನಿಂತಿಲ್ಲ. ಬೆಳಿಗ್ಗೆ ಹಾಗೂ ಸಂಜೆಯ ಹೊತ್ತಿನಲ್ಲಿ ಮಹಿಳೆಯರು ಸೇರಿದಂತೆ ಎಲ್ಲರೂ ಬಕೆಟ್‌ ಅಥವಾ ಚೊಂಬುಗಳನ್ನು ಹಿಡಿದುಕೊಂಡು ಜನಸಂಚಾರ ವಿರಳ ಇರುವ ಪ್ರದೇಶಕ್ಕೆ ಹೋಗುವುದನ್ನು ಕಾಣಬಹುದು.

‘ಶೌಚಾಲಯದ ವ್ಯವಸ್ಥೆ ಇಲ್ಲದಿರುವವರು ಹೋಗುವುದು ಸರಿ, ಆದರೆ, ಮನೆಗಳಲ್ಲಿ ಶೌಚಾಲಯಗಳನ್ನು ಹೊಂದಿರುವವರಲ್ಲೂ ಕೆಲವರು ಅವುಗಳನ್ನು ಬಳಸದೆ, ಮಲ ಮೂತ್ರ ವಿಸರ್ಜನೆಗೆ ಬಯಲನ್ನೇ ಆಶ್ರಯಿಸಿದ್ದಾರೆ. ಇಡೀ ಗ್ರಾಮದ ಸೌಂದರ್ಯವೇ ಹಾಳಾಗಿದೆ’ ಎಂದು ಗ್ರಾಮದ ಸರೋಜ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಲವರಿಗೆ ಶೌಚಾಲಯಗಳು ಇಲ್ಲದ ಕಾರಣ ಗರ್ಭಿಣಿಯರು, ವೃದ್ಧರು, ಅಂಗವಿಕಲರು ಮಕ್ಕಳು ನಿತ್ಯವೂ ಕಷ್ಟ ಪಡುತ್ತಿದ್ದಾರೆ’ ಎಂದು ಅವರು ಹೇಳಿದರು.

ಕಸದ ರಾಶಿ: ಗ್ರಾಮದಲ್ಲಿ ಸ್ವಚ್ಛತೆಯ ಕೊರತೆಯೂ ಇದೆ.ಗ್ರಾಮದ ಬಡಾವಣೆಗಳಲ್ಲಿ ಅಲ್ಲಲ್ಲಿ ಕಸದ ರಾಶಿಗಳು ಕಂಡು ಬರುತ್ತಿದೆ. ಚರಂಡಿಗಳು ಸ್ವಚ್ಛವಾಗಿಲ್ಲ.

‘ಕಸಗಳು ಕೊಳೆತು ಕಬ್ಬು ನಾರುತ್ತಿದೆ ಮತ್ತು ಹೊಳು ತೆಗೆಯದೇ ಇರುವುದರಿಂದ ಚರಂಡಿ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗುತ್ತಿಲ್ಲ. ಪಂಚಾಯಿತಿಯವರು ಸರಿಯಾಗಿ ಸ್ವಚ್ಚತೆಗೆ ಕ್ರಮ ಕೈಗೊಂಡಿಲ್ಲ’ ಎಂದು ರಂಗಸ್ವಾಮಿ ಅವರು ದೂರಿದರು.

ಅಭಿವೃದ್ಧಿಯಾಗದ ಕೆರೆಗಳು

ಗ್ರಾಮದಲ್ಲಿ ಮೂರು ಕೆರೆಗಳಿದ್ದು, ಅಭಿವೃದ್ಧಿಯಾಗಿಲ್ಲ. ಕೆರೆಗಳು ಹೂಳು, ಕಳೆ ಗಿಡ ಗಂಟಿ, ತ್ಯಾಜ್ಯಗಳಿಂದ ಕೂಡಿವೆ.

‘ಮೂರು ಕೆರೆಗಳೂ ತಲಾ 50 ಎಕರೆ ವಿಸ್ತೀರ್ಣ ಹೊಂದಿದ್ದು, ಅನೇಕ ರೈತರು ಕೃಷಿಗೆ ಇವುಗಳ ನೀರನ್ನೇ ಅವಲಂಬಿಸಿದ್ದಾರೆ. 10 ವರ್ಷಗಳಿಂದಲೂ ಕೆರೆಗಳು ಅಭಿವೃದ್ದಿಯಾಗಿಲ್ಲ. ಗ್ರಾಮದ ಮುಖ್ಯ ರಸ್ತೆಯಲ್ಲಿ ಇರುವ ಕೆರೆಗೆ ಗ್ರಾಮದ ಚರಂಡಿ ನೀರನ್ನೇ ಬಿಡುತ್ತಾರೆ. ಇದರಿಂದ ಕೆರೆಯು ಸಂಪೂರ್ಣ ಮಲಿನವಾಗಿದೆ’ ಎಂದು ರೈತ ಮಹದೇವ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಕ್ರಿಯೆ ಪಡೆಯಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಕರೆ ಮಾಡಿದರೆ ಸಂಪರ್ಕಕ್ಕೆ ಸಿಗಲಿಲ್ಲ.

ತಾಲ್ಲೂಕು ಪಂಚಾಯಿತಿಯ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ್‌ ಅವರಿಗೆ ಕರೆ ಮಾಡಿದಾಗ, ‘ನಾನು ಪ್ರಭಾರವಾಗಿ ಈಗಷ್ಟೇ ಅಧಿಕಾರ ವಹಿಸಿಕೊಂಡಿದ್ದೇನೆ. ಶೀಘ್ರದಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಸಮಸ್ಯೆಗಳನ್ನು ಪರಿಶೀಲಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT