ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜಗನಗರ | ಪರಿಹಾರ ವಿತರಣೆಗೆ 20 ದಿನಗಳ ಗಡುವು

ಬರ ನಿರ್ವಹಣೆಯಲ್ಲಿ ಸರ್ಕಾರ ವಿಫಲ: ಕುರುಬೂರು ಶಾಂತಕುಮಾರ್ ಆರೋಪ
Published 16 ಮೇ 2024, 14:28 IST
Last Updated 16 ಮೇ 2024, 14:28 IST
ಅಕ್ಷರ ಗಾತ್ರ

ಚಾಮರಾಜಗನಗರ: ರಾಜ್ಯ ಸರ್ಕಾರ ಬರನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು, 20 ದಿನಗಳ ಒಳಗಾಗಿ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಬರ ಪರಿಹಾರ ವಿತರಣೆ ಮಾಡದಿದ್ದರೆ ಹೋರಾಟ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಗುರುವಾರ ಎಚ್ಚರಿಸಿದರು.

ನಗರದಲ್ಲಿ ಆಯೋಜಿಸಿಲಾಗಿದ್ದ ಜಿಲ್ಲೆಯ ರೈತರ ಸಭೆಯಲ್ಲಿ ಮಾತನಾಡಿದ ಅವರು, ‘ಸರ್ಕಾರ ಒಂಬತ್ತು ತಿಂಗಳ ಹಿಂದೆಯೇ 223 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿತ್ತು. ನಿಯಮದ ಪ್ರಕಾರ ಘೋಷಣೆಯಾದ ಒಂದು ತಿಂಗಳಲ್ಲಿ ಬರಪರಿಹಾರ ವಿತರಣೆ ಮಾಡಬಹುದು. ಆದರೆ, ಇನ್ನೂ ಸಮರ್ಪಕವಾಗಿ ವಿತರಣೆ ಮಾಡದೆ ಇಬ್ಬಗೆಯ ನೀತಿ ಅನುಸರಿಸುತ್ತಿದೆ’ ಎಂದು ದೂರಿದರು. 

‘ಒಂದು ಹೆಕ್ಟೇರ್ ನೀರಾವರಿ ಜಮೀನಿಗೆ ₹13,500, ಒಣಭೂಮಿಯಾದರೆ ₹23,500 ಬರ ಪರಿಹಾರ ನೀಡಬೇಕು. ಆದರೆ, ಸರ್ಕಾರ ರೈತರ ಖಾತೆಗೆ ಭಿಕ್ಷೆಯ ರೂಪದಲ್ಲಿ ₹1000, ₹500, ₹300 ಜಮೆ ಮಾಡುತ್ತಿದೆ. 70 ಲಕ್ಷಕ್ಕೂ ಹೆಚ್ಚು ರೈತರಿದ್ದು, 27 ಲಕ್ಷ ರೈತರ ಖಾತೆಗೆ ಮಾತ್ರ ಭಿಕ್ಷೆ ರೂಪದ ಪರಿಹಾರದ ಹಣ ಬಂದಿದೆ. ಈ ಸರ್ಕಾರಕ್ಕೆ ಜಾನುವಾರುಗಳಿಗೆ ಮೇವು, ನೀರು ಕೊಡುವುದಕ್ಕೂ ಆಗುತ್ತಿಲ್ಲ’ ಎಂದು ಕಿಡಿಕಾರಿದರು. 

ಸಾಲ ಮನ್ನಾ ಮಾಡಿ: ‘ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ 10 ದಿನಗಳ ಅವಧಿಯಲ್ಲಿ ಅಲ್ಲಲ್ಲಿ ಬಿರುಗಾಳಿ ಮಳೆಗೆ ರೈತರು ಸಾಲ ಮಾಡಿ ಬೆಳೆದ ಫಸಲು ಹಾನಿಯಾಗಿರುವುದರಿಂದ ಅಂತಹ ರೈತರ ಸಂಪೂರ್ಣ ಸಾಲ ಮಾಡಬೇಕು’ ಎಂದು ಒತ್ತಾಯಿಸಿದರು. 

‘ಗಾಳಿ ಮಳೆಗೆ ಬಾಳೆ, ಇನ್ನಿತರ ಫಸಲು ಹಾನಿಯಾಗಿದ್ದು, ರಾಜಸ್ವ ನಿರೀಕ್ಷಕರ ಮಹಜರು ಮಾಡಿರುವ ಪ್ರತಿಯನ್ನು ಪಡೆದು ಸಾಲ ಪಡೆದಿರುವ ಬ್ಯಾಂಕ್‌ಗಳಿಗೆ, ಜಿಲ್ಲಾಧಿಕಾರಿಗಳಿಗೆ ಬೆಳೆವಿಮೆ ಆಧಾರದಲ್ಲಿ ಸಾಲಮನ್ನಾ ಮಾಡುವಂತೆ ಅರ್ಜಿ ಸಲ್ಲಿಸಿ’ ಎಂದು ಶಾಂತಕುಮಾರ್‌ ರೈತರಿಗೆ ಮನವಿ ಮಾಡಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಕಹಳ್ಳಿ ಮಹದೇವಸ್ವಾಮಿ, ಜಿಲ್ಲಾ ಕಾರ್ಯಾಧ್ಯಕ್ಷ ಉಡಿಗಾಲ ರೇವಣ್ಣ ಮಾತನಾಡಿದರು. 

ರಾಜ್ಯ ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ್, ಜಿಲ್ಲಾ ಉಪಾಧ್ಯಕ್ಷ ಪಟೇಲ್ ಶಿವಮೂರ್ತಿ, ತಾಲ್ಲೂಕು ಅಧ್ಯಕ್ಷ ನಂಜದೇವನಪುರ ಸತೀಶ್, ಷಡಕ್ಷರಿ, ಯರಿಯೂರು ಮಹೇಶ್, ಉಡಿಗಾಲ ಸುಂದ್ರಪ್ಪ, ಹೆಗ್ಗೋಠಾರ ಶಿವಸ್ವಾಮಿ, ಕುರುಬೂರು ಸಿದ್ದೇಶ್, ಮಂಜು, ಕಿರಗಸೂರು ಶಂಕರ್, ಕುಮಾರ್, ಮಹದೇವಸ್ವಾಮಿ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT