ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಲೆಗಳಲ್ಲಿ ಮೂಲಸೌಕರ್ಯ ಕೊರತೆ: ಮಕ್ಕಳ ನೆತ್ತಿಯ ಮೇಲೆ ಅಪಾಯದ ತೂಗುಗತ್ತಿ!

Published 17 ಜೂನ್ 2024, 6:48 IST
Last Updated 17 ಜೂನ್ 2024, 6:48 IST
ಅಕ್ಷರ ಗಾತ್ರ

ಚಾಮರಾಜನಗರ: ಬಣ್ಣ ಮಾಸಿರುವ ಕಟ್ಟಡಗಳು, ದುರ್ವಾಸನೆ ಬೀರುವ ಶೌಚಾಲಯಗಳು, ಬಿರುಕುಬಿಟ್ಟ ತರಗತಿ ಕೊಠಡಿಗಳು, ಅಲ್ಲಲ್ಲಿ ಕುಸಿದು ಬಿದ್ದಿರುವ ಕಾಂಪೌಂಡ್‌ ಗೋಡೆ, ಮಳೆಗಾಲದಲ್ಲಿ ಸೋರುವ ಮಾಡು, ಮುರಿದು ಬಿದ್ದ ಕಿಟಕಿಗಳು, ಕುಸಿಯುವ ಭೀತಿಯಲ್ಲಿರುವ ಗೋಡೆಗಳು..ಇವು ಜಿಲ್ಲೆಯ ಸರ್ಕಾರಿ ಶಾಲೆಗಳ ಸ್ಥಿತಿ ಗತಿ...

ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಶಿಥಿಲಗೊಂಡರಿವ ಶಾಲೆಗಳ ದುರಸ್ತಿಗೆ ತುರ್ತು ಕ್ರಮ ಕೈಗೊಳ್ಳಬೇಕಿದ್ದು ನಿರ್ಲಕ್ಷ್ಯ ವಹಿಸಿದರೆ ಅನಾಹುತ ಸಂಭವಿಸುವ ಅಪಾಯ ಕಣ್ಣೆದುರಿಗಿದೆ.

ಅಭಿವೃದ್ಧಿ ವಂಚಿತ ಗಡಿ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಚಾಮರಾಜನಗರ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿ ಉತ್ತಮವಾಗಿಲ್ಲ. ಶಿಕ್ಷಣ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ 807 ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿದ್ದು ಇವುಗಳ ಪೈಕಿ 297 ಶಾಲೆಗಳಲ್ಲಿ ಆಟದ ಮೈದಾನ ಇಲ್ಲ. 49 ಶಾಲೆಗಳಲ್ಲಿ ಬಾಲಕರ ಹಾಗೂ 12 ಶಾಲೆಗಳಲ್ಲಿ ಬಾಲಕಿಯರ ಶೌಚಾಲಯಗಳ ಕೊರತೆ ಇದೆ.

122 ಶಾಲೆಗಳಲ್ಲಿ ಭಾಗಶಃ ಮಾತ್ರ ಶಾಲಾ ಕಾಂಪೌಡ್ ಇದ್ದರೆ, 54 ಶಾಲೆಗಳಿಗೆ ಕಾಂಪೌಂಡ್ ಭಾಗ್ಯವೇ ಇಲ್ಲ. 3 ಶಾಲೆಗಳಲ್ಲಿ ಗ್ರಂಥಾಲಯಗಳ ಕೊರತೆ ಇದೆ. 42 ಶಾಲೆಗಳಲ್ಲಿ ಅಂಗವಿಕಲ ವಿದ್ಯಾರ್ಥಿಗಳು ತರಗತಿ ಪ್ರವೇಶಕ್ಕೆ ಅನುಕೂಲವಾಗುವ ರ‍್ಯಾಂಪ್ ವ್ಯವಸ್ಥೆ ಇಲ್ಲ. 52 ಶಾಲೆಗಳಲ್ಲಿ ಬಿಸಿಯೂಟ ತಯಾರಿಕೆಗೆ ಅಡುಗೆ ಮನೆಗಳ ಸೌಲಭ್ಯ ಇಲ್ಲ.

ಚಾಮರಾಜನಗರ ತಾಲ್ಲೂಕಿನಲ್ಲಿರುವ 282 ಸರ್ಕಾರಿ ಶಾಲೆಗಳ ಪೈಕಿ 14 ಶಾಲೆಗಳಲ್ಲಿ ರ‍್ಯಾಂಪ್‌. 105 ಶಾಲೆಗಳಲ್ಲಿ ಆಟದ ಮೈದಾನ, 21 ಶಾಲೆಗಳಲ್ಲಿ ಸಮರ್ಪಕ ಶೌಚಾಲಯ, 18 ಶಾಲೆಗಳಲ್ಲಿ ಕಾಂಪೌಂಡ್‌, 2 ಶಾಲೆಗಳಲ್ಲಿ ವಿದ್ಯುತ್‌ ಸಂಪರ್ಕ ಹಾಗೂ 24 ಶಾಲೆಗಳಲ್ಲಿ ಅಡುಗೆ ಮನೆ ಇಲ್ಲ.

ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ 194 ಸರ್ಕಾರಿ ಶಾಲೆಗಳಲ್ಲಿ 21 ಶಾಲೆಗಳಲ್ಲಿ ರ‍್ಯಾಂಪ್‌, 69 ಶಾಲೆಗಳಲ್ಲಿ ಆಟದ ಮೈದಾನ, 36 ಶಾಲೆಗಳಲ್ಲಿ ಶೌಚಾಲಯಗಳು, 14 ಶಾಲೆಗಳಲ್ಲಿ ಕಾಂಪೌಡ್‌, 3 ಶಾಲೆಗಳಲ್ಲಿ ಗ್ರಂಥಾಲಯ, 2 ಶಾಲೆಗಳಿಗೆ ವಿದ್ಯುತ್ ಸಂಪರ್ಕ ಹಾಗೂ 12 ಶಾಲೆಗಳಲ್ಲಿ ಅಡುಗೆ ಮನೆಗಳು ಇಲ್ಲ.

ಕೊಳ್ಳೇಗಾಲ ತಾಲ್ಲೂಕಿನ 104 ಶಾಲೆಗಳಲ್ಲಿ 7 ಶಾಲೆಗಳಲ್ಲಿ ರ‍್ಯಾಂಪ್‌, 25 ಶಾಲೆಗಳಲ್ಲಿ ಆಟದ ಮೈದಾನ, 4 ಶಾಲೆಗಳಲ್ಲಿ ಶೌಚಾಲಯ, 16 ಶಾಲೆಗಳಲ್ಲಿ ಕಾಂಪೌಂಡ್‌ 6 ಶಾಲೆಗಳಲ್ಲಿ ಅಡುಗೆ ಮನೆ ಸೌಲಭ್ಯಗಳಿಲ್ಲ.

ಹನೂರು ತಾಲ್ಲೂಕಿನ 164 ಶಾಲೆಗಳ ಪೈಕಿ 67 ಶಾಲೆಗಳಲ್ಲಿ ಕ್ರೀಡಾ ಅಂಗಳಗಳು ಇಲ್ಲ. 22 ಶಾಲೆಗಳಲ್ಲಿ ಭಾಗಶಃ ಕಾಂಪೌಂಡ್‌ಗಳಿಲ್ಲ. ಯಳಂದೂರು ತಾಲ್ಲೂಕಿನ 63 ಶಾಲೆಗಳಲ್ಲಿ 31 ಶಾಲೆಗಳಿಗೆ ಆಟದ ಮೈದಾನ, 6 ಶಾಲೆಗಳಲ್ಲಿ ಕಾಂಪೌಂಡ್‌, 10ಶಾಲೆಗಳಲ್ಲಿ ಅಡುಗೆ ಮನೆಯ ವ್ಯವಸ್ಥೆ ಇಲ್ಲ.   

ಇವಿಷ್ಟು ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿರುವ ಮೂಲಸೌಲಭ್ಯಗಳ ಕೊರತೆಯ ಮಾಹಿತಿಯಾಗಿದ್ದು ಅಗತ್ಯ ನೆರವು ಕೋರಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದು ಅನುದಾನ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಹೀಗೆ, ನಿರೀಕ್ಷೆಯಲ್ಲಿ ಕಾಯುತ್ತಲೇ ಹಲವು ವರ್ಷಗಳು ಕಳೆದರೂ ಸರ್ಕಾರಿ ಶಾಲೆಗಳಿಗೆ ಮಾತ್ರ ದುರಸ್ತಿ ಭಾಗ್ಯ ಸಿಕ್ಕಿಲ್ಲ.

ಚಾಮರಾಜನಗರದಲ್ಲಿ ವಾಸ್ತವ ಸ್ಥಿತಿ:

ಚಾಮರಾಜನಗರ ತಾಲ್ಲೂಕಿನ ಸರ್ಕಾರಿ ಶಾಲೆಗಳ ಸ್ಥಿತಿ ಅರಿಯಲು ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಪಕ್ಕದಲ್ಲೇ ಇರುವ ಉರ್ದು ಬಾಲಕಿಯರ ಶಾಲೆಗೆ ಭೇಟಿ ನೀಡಿದಾಗ ಹಲವು ಕೊರತೆಗಳು ಕಂಡುಬಂದವು. ಶಾಲೆಯು ಬಣ್ಣದ ಸ್ಪರ್ಶ ಕಂಡು ಹಲವು ವರ್ಷಗಳೇ ಕಳೆದಿವೆ. ಶಾಲೆಯ ಎರಡು ಕೊಠಡಿಗಳು ಬಿರುಕುಬಿಟ್ಟಿದ್ದು ಅಪಾಯದ ಸ್ಥಿತಿಯಲ್ಲಿವೆ. ಮಳೆಗಾಲದಲ್ಲಿ ಸೋರುತ್ತವೆ. ದಾಸ್ತಾನು ಕೊಠಡಿಯ ಮಾಡಿನಿಂದ ಚಕ್ಕೆಗಳು ಉದುರುತ್ತಿರುವುದು ಕಂಡುಬಂತು.

ಪಕ್ಕದಲ್ಲೇ ಇರುವ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿರುವ ಪ್ರೌಢಶಾಲೆ ವಿಭಾಗದ ಸ್ಥಿತಿ ಭಿನ್ನವಾಗಿಲ್ಲ. 4 ಕೊಠಡಿಗಳು ಸೋರುತ್ತಿದ್ದು ಗೋಡೆ ಮಳೆಯ ನೀರಿಗೆ ಶಿಥಿಲಗೊಂಡಿದೆ. ಅಲಲ್ಲಿ ಬಿರುಕುಗಳು ಮೂಡಿವೆ. ಬಣ್ಣ ಬಳಿದು 8 ವರ್ಷಗಳು ಕಳೆದಿವೆ. ಕಿಟಿಕಿಗಳು ಮುರಿದು ನೇತಾಡುತ್ತಿವೆ. ಶಾಲೆಯಲ್ಲಿರುವ 310 ವಿದ್ಯಾರ್ಥಿಗಳಿಗೆ ಇರುವುದು ನಾಲ್ಕು ಶೌಚಾಲಯಗಳು ಮಾತ್ರ.

ಪ್ರೌಢಾವಸ್ಥೆಯ ಬಾಲಕಿಯರು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದರಿಂದ ಹೆಚ್ಚುವರಿಯಾಗಿ 4 ಶೌಚಾಲಯಗಳ ಅಗತ್ಯವಿದೆ ಎನ್ನುತ್ತಾರೆ ಶಾಲೆಯ ಶಿಕ್ಷಕಿಯರು.

ಕೊಳ್ಳೇಗಾಲ; ಭೀತಿಯಲ್ಲಿ ಕೊಠಡಿಗಳು:

ಕೊಳ್ಳೇಗಾಲ: ಸರ್ಕಾರಿ ಶಾಲೆಗಳು ಆರಂಭವಾದರೂ ಶಾಲೆಗಳ ಸ್ಥಿತಿಗತಿ ಮಾತ್ರ ಸುಧಾರಿಸಿಲ್ಲ. ತಾಲೂಕಿನ ಬಹುತೇಕ ಸರ್ಕಾರಿ ಶಾಲೆಗಳ ಸ್ಥಿತಿ ಶೋಚನೀಯವಾಗಿದ್ದು ಕೆಲವು ಕುಸಿಯುವ ಅಪಾಯದಲ್ಲಿವೆ. ಶಾಲಾ ಕೊಠಡಿಗಳು, ಕೈತೋಟ, ಶೌಚಾಲಯ, ಆಟದ ಮೈದಾನಗಳ ಕೊರತೆ ಸೇರಿದಂತೆ ಹಲವು ಸಮಸ್ಯೆಗಳಿಂದ ಶಾಲೆಗಳು ನರಳುತ್ತಿವೆ.

ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆ ಶತಮಾನ ಕಂಡಿದ್ದು ತೀರಾ ದುಸ್ಥಿತಿ ತಲುಪಿದೆ. ಶಾಲೆಯಲ್ಲಿರುವ ನಾಲ್ಕರಿಂದ ಐದು ಕೊಠಡಿಗಳು ಪಾಳು ಬಿದ್ದಿವೆ. ಉಳಿದ ಕೊಠಡಿಗಳಲ್ಲಿ ಶಾಲಾ ಮಕ್ಕಳು ಪಾಠ ಪ್ರವಚನ ಕೇಳುತ್ತಿದ್ದಾರೆ.

ಮಕ್ಕಳು ಶಾಲಾ ಮೈದಾನದಲ್ಲಿ ಆಟವಾಡುವಾಗ ಪಾಳುಬಿದ್ದ ಕೊಠಡಿ ಪ್ರವೇಶ ಮಾಡುತ್ತಿದ್ದು ಅವಘಡ ಸಂಭವಿಸುವ ಆತಂಕ ಎದುರಾಗಿದೆ. ಉರ್ದುಶಾಲೆ ಮಾತ್ರವಲ್ಲ; ಕೊಳ್ಳೇಗಾಲ ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಹಲವು ಸರ್ಕಾರಿ ಶಾಲೆಗಳ ಸ್ಥಿತಿ ಉತ್ತಮವಾಗಿಲ್ಲ. ಆಟದ ಮೈದಾನಗಳ ಕೊರತೆ, ಶೌಚಾಲಯ ಕೊರತೆ ಹೆಚ್ಚಾಗಿದೆ.

ಯಳಂದೂರು ವರದಿ:‌

ತಾಲ್ಲೂಕಿನಲ್ಲಿ ಬಹುತೇಕ ಶಾಲೆಗಳು ದುಸ್ಥಿತಿಯಲ್ಲಿವೆ. ಶತಮಾನ ಕಂಡ ಶಾಲೆ ಹಾಗೂ ಐತಿಹಾಸಿಕ ಕಟ್ಟಡಗಳಲ್ಲಿ ನಡೆಯುತ್ತಿರುವ ಕಲಿಕಾ ಕೊಠಡಿಗಳಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ಛಾವಣಿ ಕುಸಿಯುವ ಸ್ಥಿತಿಯಲ್ಲಿದೆ, ಹೆಂಚುಗಳು ಒಡೆದು ಅಲ್ಲಲ್ಲಿ ಬೀಳುತ್ತಿವೆ. ಆಟದ ಮೈದಾನದ ಕೊರತೆ ಇದೆ.

ಶಾಲೆ ಪ್ರಾರಂಭವಾಗಿ ಮೂರು ವಾರ ಕಳೆಯುತ್ತಿದ್ದರೂ ಶಾಲೆ ದುರಸ್ತಿ ಕಾಣದಿರುವುದು ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಗುಂಡ್ಲುಪೇಟೆ ತಾಲ್ಲೂಕಿನ ಬೇರಾಂಬಾಡಿ ಶಾಲೆ ನಿರ್ವಹಣೆ ಕೊರತೆಯಿಂದ ದುಸ್ಥಿತಿ ತಲುಪಿರುವುದು
ಗುಂಡ್ಲುಪೇಟೆ ತಾಲ್ಲೂಕಿನ ಬೇರಾಂಬಾಡಿ ಶಾಲೆ ನಿರ್ವಹಣೆ ಕೊರತೆಯಿಂದ ದುಸ್ಥಿತಿ ತಲುಪಿರುವುದು
ಚಾಮರಾಜನಗರದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿರುವ ಪ್ರೌಢಶಾಲೆ ವಿಭಾಗ
ಚಾಮರಾಜನಗರದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿರುವ ಪ್ರೌಢಶಾಲೆ ವಿಭಾಗ
ಚಾಮರಾಜನಗರದಲ್ಲಿರುವ ಉರ್ದು ಶಾಲೆಯ ಕೊಠಡಿಯ ದುಸ್ಥಿತಿ
ಚಾಮರಾಜನಗರದಲ್ಲಿರುವ ಉರ್ದು ಶಾಲೆಯ ಕೊಠಡಿಯ ದುಸ್ಥಿತಿ
ಜಿಲ್ಲೆಯಲ್ಲಿ ಶಾಲಾ ಕೊಠಡಿಗಳ ದುರಸ್ತಿ ಶೌಚಾಲಯಗಳ ನಿರ್ಮಾಣಕ್ಕೆ ಜಿಲ್ಲಾ ಪಂಚಾಯಿತಿ ಹಾಗೂ ನರೇಗಾ ಯೋಜನೆಯಡಿ ಅನುದಾನ ದೊರೆತಿದೆ. ಸರ್ಕಾರದಿಂದಲೂ ಅಗತ್ಯ ಅನುದಾನ ಬಿಡುಗಡೆ ನಿರೀಕ್ಷೆ ಇದೆ.
– ರಾಮಚಂದ್ರ ರಾಜೇಅರಸ್ ಡಿಡಿಪಿಐ ಚಾಮರಾಜನಗರ
ಬೇರಂಬಾಡಿಯ ಶಾಲೆಯ ಸಮಸ್ಯೆಗಳು ಗಮನಕ್ಕೆ ಬಂದಿದ್ದು ಸರ್ಕಾರದಿಂದ ಅನುದಾನ ಬಂದ ಕೂಡಲೇ ದುರಸ್ತಿ ಮಾಡಲಾಗುವುದು.
–ರಾಜಶೇಖರ್ ಕ್ಷೇತ್ರ ಶಿಕ್ಷಣಾಧಿಕಾರಿ ಗುಂಡ್ಲುಪೇಟೆ
31 ಶಾಲೆಗಳು ದುರಸ್ತಿಯಲ್ಲಿದ್ದು ಕ್ರಿಯಾ ಯೋಜನೆ ತಯಾರು ಮಾಡಿ ಇಲಾಖೆಗೆ ಕಳುಹಿಸಲಾಗಿದೆ. ಶೀಘ್ರ ಶಾಲೆಗಳ ದುರಸ್ತಿ ಹಾಗೂ ಉನ್ನತೀಕರಣ ನಡೆಯಲಿದೆ. ಕೊಠಡಿ ಸಮಸ್ಯೆ ಕಂಡು ಬಂದರೆ ಪರ್ಯಾಐ ವ್ಯವಸ್ಥೆ ಮಾಡಲಾಗುವುದು.
– ಮಂಜುಳಾ ಕ್ಷೇತ್ರ ಶಿಕ್ಷಣಾಧಿಕಾರಿ ಕೊಳ್ಳೇಗಾಲ
ಸರ್ಕಾರಿ ಶಾಲೆಗಳ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲದೆ ಶಿಥಿಲಾವಸ್ಥೆ ತಲುಪಿವೆ. ಸಂತೇಮರಹಳ್ಳಿಯಲ್ಲಿ ನಾಲ್ಕು ಕೊಠಡಿಗಳು ದುರಸ್ತಿಯಲ್ಲಿವೆ. ಮಕ್ಕಳ ವ್ಯಾಸಂಗಕ್ಕೆ ಕೊಠಡಿಗಳ ಕೊರತೆ ಇದೆ. ಮಳೆಗಾಲದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಲಿದೆ.
–ರಾಜು ಸಂತೇಮರಹಳ್ಳಿ.
ತಾಲೂಕಿನಲ್ಲಿ ಬೆರಳೆಣಿಕೆ ಶಾಲೆಗಳು ಹಾಗೂ ಐತಿಹಾಸಿಕ ಕಟ್ಟಡಗಳಲ್ಲಿರುವ ಕೆಲವು ಕೊಠಡಿಗಳು ಬಳಕೆಗೆ ಸೂಕ್ತವಾಗಿಲ್ಲ. ಉಳಿದಂತೆ ಎಲ್ಲ ಶಾಲೆಗಳು ಸುಸ್ಥಿತಿಯಲ್ಲಿವೆ.
-ಕೆ. ಕಾಂತರಾಜು ಕ್ಷೇತ್ರ ಶಿಕ್ಷಣಾಧಿಕಾರಿ ಯಳಂದೂರು
ಸರ್ಕಾರಿ ಪ್ರಾಥಮಿಕ ಪ್ರೌಢಶಾಲೆಗಳ ವಿವರ
ತಾಲ್ಲೂಕು;ಶಾಲೆಗಳ ಸಂಖ್ಯೆ ಚಾಮರಾಜನಗರ;282 ಗುಂಡ್ಲುಪೇಟೆ;194 ಕೊಳ್ಳೇಗಾಲ;104 ಹನೂರು;164 ಯಳಂದೂರು;63
ಗುಂಡ್ಲುಪೇಟೆ ವರದಿ
ಕೋವಿಡ್  ಆರಂಭಕ್ಕೂ ಮುನ್ನ ತಾಲ್ಲೂಕಿನ ಮಾದರಿ ಶಾಲೆಗಳಲ್ಲಿ ಒಂದಾಗಿದ್ದ ಜಿಲ್ಲಾ ಮಟ್ಟದಲ್ಲಿ ಪರಿಸರ ಸ್ನೇಹಿ ಶಾಲೆ ಹಾಗೂ ತ್ಯಾಜ್ಯ ನೀರಿನ ಸಂಸ್ಕರಣ ಘಟಕವಿರುವ ರಾಜ್ಯದ ಮೊದಲ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ತಾಲ್ಲೂಕಿನ ಬೇರಂಬಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎರಡು ವರ್ಷಗಳಿಂದ ನಿರ್ವಹಣೆ ಕೊರತೆಯಿಂದ ಪಾಳುಬಿದ್ದಿದೆ. 160 ಮಕ್ಕಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ನಿರ್ವಹಣೆ ಕೊರತೆಯಿಂದ ಕೊಠಡಿಗಳು ಹಾಳಾಗಿದ್ದು ಪೋಷಕರು ಮಕ್ಕಳನ್ನು ಕಳುಹಿಸಲು ಆತಂಕ ಪಡುತ್ತಿದ್ದಾರೆ. ಇಲ್ಲಿರುವ ಆರು ಕೊಠಡಿಗಳು ಶಿಥಿಲವಾಗಿದ್ದು ಮಳೆ ಬಂದರೆ ಸೋರುತ್ತವೆ. ಮಕ್ಕಳಿಗೆ ಕೊಠಡಿಗಳಲ್ಲಿ  ಕೂರಲು ಆಗುತ್ತಿಲ್ಲ. ಜಾಗದ ಕೊರತೆಯಿಂದ ಬೇರೆ ತರಗತಿಗಳಲ್ಲಿ ಮಕ್ಕಳನ್ನು ಕೂರಿಸಿ ಪಾಠ ಮಾಡಲಾಗುತ್ತಿದೆ. ಶಾಲಾ ಆವರಣದಲ್ಲಿ ಅನೈರ್ಮಲ್ಯ ಕಾಣುತ್ತದೆ. ಶಾಲೆ ದುರಸ್ತಿಗೆ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎನ್ನುತ್ತಾರೆ ಶಾಲೆಯ ಸಿಬ್ಬಂದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT