ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ವಹಣೆ ಕೊರತೆ: ಶಿಥಿಲಾವಸ್ಥೆಯಲ್ಲಿ ಸರ್ಕಾರಿ ಕಟ್ಟಡಗಳು

ಯಳಂದೂರು: ಕಚೇರಿಗೆ ಬರುವ ಸಾರ್ವಜನಿಕರಿಗೆ ಮೂಲಸೌಕರ್ಯಗಳಿಲ್ಲ, ಸ್ವಚ್ಛತೆಯೇ ಮಾಯ
Last Updated 22 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಯಳಂದೂರು:ಪಟ್ಟಣದ ಮಿನಿ ವಿಧಾನಸೌಧ ಮತ್ತು ಸರ್ಕಾರಿ ಕಚೇರಿಗಳು ತಾಲ್ಲೂಕಿನ ಮುಕುಟಗಳು. ಪಟ್ಟಣದಲ್ಲಿ ಇರುವ ತಾಲ್ಲೂಕು ಕಚೇರಿ, ತಾಲ್ಲೂಕು ಪಂಚಾಯಿತಿ ಕಾರ್ಯಾಲಯ ಹದಿನೆಂಟು ಇಲಾಖೆಗಳಿಗೆ ಆಶ್ರಯ ನೀಡಿದೆ. ನ್ಯಾಯಾಲಯ ಸಮುಚ್ಚಯಕ್ಕೆ ಇಲ್ಲಿಂದಲೇ ತೆರಳಬೇಕು. ಆದರೆ, ಇಲ್ಲಿನ ಬಹುತೇಕ ಸರ್ಕಾರಿ ಕಟ್ಟಡಗಳು ನಿರ್ವಹಣೆ ಕೊರತೆಯಿಂದ
ಸೊರಗಿವೆ.

ಪ್ರತಿದಿನ ನೂರಾರು ಸಿಬ್ಬಂದಿ ಕರ್ತವ್ಯ ನಿರ್ವಹಿಸುವ ಹಾಗೂ ಸಾವಿರಾರು ಸಾರ್ವಜನಿಕರು ಭೇಟಿ ನೀಡುವ ಸ್ಥಳದಲ್ಲಿ ಮೂಲ ಸೌಕರ್ಯಗಳ ಕೊರತೆಗಳು ರಾರಾಜಿಸುತ್ತಿವೆ. ಪ್ರತಿ ಹಂತದಲ್ಲೂ ಅಸರ್ಮಪಕ ನಿರ್ವಹಣೆ ಢಾಳಾಗಿ ಗೋಚರಿಸುತ್ತದೆ. ಸುಣ್ಣ ಬಣ್ಣ ಕಾಣದ ಗೋಡೆಗಳು, ಕತ್ತರಿಸಿದ ಮುಳ್ಳಿನ ಪೊದೆಗಳ ರಾಶಿ, ನೀರು ಕಾಣದ ತೊಂಬೆಗಳು, ಮಾಸಿದ ಫಲಕಗಳು, ಅಂಬು ಸಸ್ಯಗಳ ನಡುವಿನ ಶೌಚಾಲಯ, ಶಿಥಿಲ ಗೋಡೆಗಳು ಇಡೀ ಸಂಕೀರ್ಣದ ಅಂದಕ್ಕೆ ಕಪ್ಪುಚುಕ್ಕೆ ಇಟ್ಟಿವೆ.

‘ನಾಲ್ಕೈದು ವರ್ಷಗಳಿಂದ ಸ್ವಚ್ಛ ಭಾರತದ ಮಾತು ಇಡೀ ದೇಶದಲ್ಲೇ ಕೇಳಿ ಬರುತ್ತದೆ. ಕೆಲವೊಮ್ಮೆ ಸರ್ಕಾರಿ ಕಚೇರಿಗಳ ಬಳಿಯೇ ಸ್ವಚ್ಛತೆಯ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತದೆ. ಆದರೆ, ದೀಪದ ಅಡಿ ಕತ್ತಲು ಎಂದು ಹೇಳುವ ಹಾಗೆ, ಕಚೇರಿ ಆವರಣ ಸ್ವಚ್ಛವಾಗಿರಬೇಕಾದ್ದರ ಬಗ್ಗೆ ಸುಂದರವಾಗಿರಬೇಕಾದ್ದರ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ.ಕಚೇರಿ ಬಳಿ ಎಲ್ಲೆಂದರಲ್ಲಿ ನಿಲ್ಲುವ ದ್ವಿಚಕ್ರ ವಾಹನಗಳು, ಮುರಿದ ಸುತ್ತುಗೋಡೆ, ಕಳಚಿಬಿದ್ದ ಗೇಟು ಮತ್ತು ಸಮೀಪದಲ್ಲಿರುವ ರಾಜಕಾಲುವೆಯಲ್ಲಿ ಹರಿಯುವ ಕೊಳಚೆ ನೀರಿನ ವಾಸನೆ... ಎಲ್ಲವೂ ಇಲ್ಲಿಗೆ ಭೇಟಿ ನೀಡುವವರ ಕಣ್ಣಿಗೆ ಮತ್ತು ನಾಸಿಕಕ್ಕೆ ರಾಚುತ್ತದೆ. ನೀರು ಕಾಣದ ತೊಟ್ಟಿ, ಸುಟ್ಟಿರುವ ಮಸಿ, ಶೌಚಾಲಯದ ಬಳಿ ಆವರಿಸಿದ ಸಸ್ಯ ಕಚೇರಿಯ ಹಿಂಭಾಗದ ದುಃಸ್ಥಿತಿಯನ್ನು ಬಿಂಬಿಸುತ್ತದೆ’ ಎಂದು ಪಟ್ಟಣದ ನಿವಾಸಿ ರಾಜಣ್ಣ ಹೇಳಿದರು.

ಪಟ್ಟಣದಂಚಿನ ತೋಟಗಾರಿಕೆ ಇಲಾಖೆಯ ಕಟ್ಟಡದ ಚಾವಣಿ ಉದುರಿ ಬೀಳುತ್ತಿದೆ. ಇಲ್ಲಿ ಕುಳಿತು ಕೆಲಸ ಮಾಡಲು ಅಧಿಕಾರಿಗಳು ಭಯ ಪಡುವಂತೆ ಆಗಿದೆ. ಆದರೆ, ಹೊಸ ಕಟ್ಟಡ ನಿರ್ಮಿಸುವ ಭರವಸೆಯನ್ನು ನೀಡಿ ಹಲವು ವರ್ಷಗಳೇ ಕಳೆದಿವೆ ಎನ್ನುತ್ತಾರೆ ಸಾರ್ವಜನಿಕರು.

ಸರ್ಕಾರಿ ನೌಕರರ ಸಂಘದ ಕಟ್ಟಡ ಶಿಥಿಲಾವಸ್ಥೆ ತಲುಪಿ ದಶಕ ಕಂಡಿದೆ. ಇದನ್ನು ಕೆಡವಿ ಹೊಸದಾಗಿ ನಿರ್ಮಾಣ ಮಾಡಬೇಕಿದೆ. 700ಕ್ಕೂ ಹೆಚ್ಚು ನೌಕರರನ್ನು ಹೊಂದಿರುವ ತಾಲ್ಲೂಕಿನಲ್ಲಿ ಅವರು ಒಂದೆಡೆ ಕುಳಿತು ಚರ್ಚೆ ನಡೆಸಲು, ಮಾಹಿತಿ ವಿನಿಮಯ ಮಾಡಿಕೊಳ್ಳಲು ಸ್ಥಳದ ಅಭಾವ ಎದುರಾಗಿದೆ ಎಂಬುದು ಇಲ್ಲಿನ ನೌಕರರ ಅಳಲು.

‘ಪಟ್ಟಣದ ಮಧ್ಯ ಭಾಗದಲ್ಲಿ ಇರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕೆಪಿಎಸ್, ಪ್ರೌಢಶಾಲೆ, ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳಿವೆ. ಹತ್ತಾರು ಶೌಚಾಲಯಗಳನ್ನು ಮುಳ್ಳಿನ ಪೊದೆಗಳು ಆವರಿಸಿ, ಬಳಕೆಗೆ ಯೋಗ್ಯವಿಲ್ಲದಂತೆ ಮಾಡಿವೆ. ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲೇ ನಡೆಯುತ್ತವೆ. ತಾಲ್ಲೂಕು ನೂರಾರು ಕ್ರೀಡಾ ಪ್ರತಿಭೆಗಳಿಗೆ ಆಶ್ರಯ ನೀಡಿದ್ದರೂ, ಕ್ರಿಡಾಂಗಣ ಇಲ್ಲಿಲ್ಲ. ಹಾಗಾಗಿ, ಆಸಕ್ತರು ಸೌಲಭ್ಯ ಇಲ್ಲದೆ ಆಟೋಟಗಳನ್ನು ನಿಲ್ಲಿಸಿದ್ದಾರೆ. ಹೆಣ್ಣು ಮಕ್ಕಳಿಗೆ ಸುಸಜ್ಜಿತ ಅಭ್ಯಾಸ ತಾಣ ಇಲ್ಲಿಲ್ಲ’ ಎಂದು ವಿದ್ಯಾರ್ಥಿನಿಯರಾದ ಲಕ್ಷ್ಮಿ ಮತ್ತು ಮಹಾದೇವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲಾಧಿಕಾರಿ ದಿಢೀರ್ ಭೇಟಿ: ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಇತ್ತೀಚೆಗೆ ತಾಲ್ಲೂಕು ಕಚೇರಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಕಚೇರಿಗಳು ಹಾಗೂ ಆವರಣ ಸ್ವಚ್ಛವಾಗಿ ಇಟ್ಟುಕೊಳ್ಳದೇ ಇದ್ದುದಕ್ಕೆ ಆಕ್ಷೇಪವನ್ನೂ ವ್ಯಕ್ತಪಡಿಸಿದ್ದರು.

‘ಜಿಲ್ಲಾಧಿಕಾರಿ ಅವರು ಕಚೇರಿ ಸುತ್ತಮುತ್ತಲ ಅಂದವನ್ನು ಹೆಚ್ಚಿಸಲು ಕ್ರಮ ವಹಿಸುವಂತೆ ಸೂಚನೆ ನೀಡಿದರು. ಇದರ ಪರಿಣಾಮವಾಗಿ ಮುಳ್ಳಿನ ಪೊದೆ ಮತ್ತು ಶೌಚಾಲಯಗಳು ಸ್ವಚ್ಛ ಕಂಡವು. ಆದರೆ, ಮೂಲ ಸೌಕರ್ಯಗಳ ವಿಸ್ತರಣೆಗೆ ತಾಲ್ಲೂಕು ಆಡಳಿತ ಇನ್ನೂ ಗಮನ ಹರಿಸಿಲ್ಲ‍’ ಎಂದು ಪಟ್ಟಣದವರೇ ಆದ ರವಿ ಮತ್ತು ಸುರೇಶ್ ಹೇಳಿದರು.

15 ದಿನಗಳಲ್ಲಿ ಅಭಿವೃದ್ಧಿ ನೀಲನಕ್ಷೆ ತಯಾರಿ

ಈ ಬಗ್ಗೆ ‘ಪ್ರಜಾವಾಣಿ‍’ಗೆ ಪ್ರತಿಕ್ರಿಯಿಸಿದ ಯಳಂದೂರು ಪ್ರಭಾರ ತಹಶೀಲ್ದಾರ್‌ ಜೆ.ಮಹೇಶ್‌ ಅವರು, ‘ಜಿಲ್ಲಾಧಿಕಾರಿ ಅವರ ಸೂಚನೆಯಂತೆ ತಾಲ್ಲೂಕು ಕಚೇರಿಯ ಸ್ವಚ್ಛತೆಗೆ ಸಂಬಂಧ ಪಟ್ಟಂತೆ ಕ್ರಮ ವಹಿಸಲಾಗಿದೆ. ಮೂಲ ಸೌಕರ್ಯ ವಿಸ್ತರಿಸಲು ಯೋಜನೆ ರೂಪಿಸಲಾಗಿದೆ. ಚರಂಡಿ ಸ್ವಚ್ಛತೆ, ಶುದ್ಧ ಕುಡಿಯುವ ನೀರು, ಪೊದೆಗಳ ನಾಶ ಮತ್ತು ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಕಚೇರಿಯ ಮುಂಭಾಗದ ಉದ್ಯಾನದ ಅಭಿವೃಧ್ಧಿಗೆ ತಾಲ್ಲೂಕು ಪಂಚಾಯಿತಿ ಯೋಜನೆ ರೂಪಿಸಿದೆ. 15 ದಿನಗಳಲ್ಲಿ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸರ್ಕಾರಿ ನೌಕರರ ಭವನಕ್ಕೆ ಮನವಿ

‘ತಾಲ್ಲೂಕಿನ ಸರ್ಕಾರಿ ನೌಕರರ ಭವನ ಶಿಥಿಲಾವಸ್ಥೆ ತಲುಪಿದೆ. ಇದನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲು ಶಾಸಕ
ಎನ್. ಮಹೇಶ್ ಅವರು ಸೂಚಿಸಿದ್ದಾರೆ. ಆದರೆ, ಹೊಸ ಕಟ್ಟಡ ನಿರ್ಮಿಸಲು ಸ್ಥಳದ ಕೊರತೆ ಎದುರಾಗಿದೆ. ಈ ಬಗ್ಗೆ ಕ್ರಮ ವಹಿಸಲು ಪತ್ರ ವ್ಯವಹಾರ ನಡೆಸಲಾಗಿದೆ’ ಎಂದುಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷವೈ.ಎಂ.ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕಚೇರಿಗಳನ್ನು ಆಕರ್ಷಕಗೊಳಿಸಿ

ಪಟ್ಟಣದ ಸರ್ಕಾರಿ ಕಚೇರಿಗಳು ಶಿಥಿಲಾವಸ್ಥೆಯಲ್ಲಿವೆ. ಪ್ರವೇಶ ದ್ವಾರದಲ್ಲಿ ಕೆಲವೆಡೆ ಅಳವಡಿಸಿದ್ದ ಕಬ್ಬಿಣದ ಗೇಟುಗಳು ಮುರಿದು ಬಿದ್ದಿವೆ. ತಡೆಗೋಡೆ ಕಿತ್ತು ಬಂದಿದೆ. ಇದರಿಂದ ಆವರಣವು ರಜಾ ದಿನಗಳಲ್ಲಿ ಹಸು, ಆಡು, ಕುರಿ ಮೇಕೆಗಳ ಆಶ್ರಯ ತಾಣವಾಗಿದೆ

- ದೊರೆಸ್ವಾಮಿ,ಯಳಂದೂರು

***

ಉದ್ಯಾನ ಬೇಕು

ಏಳು ವರ್ಷಗಳ ಹಿಂದೆ ಇಲ್ಲಿ ಸುಂದರ ಉದ್ಯಾನ ನಿರ್ಮಿಸಲಾಗಿತ್ತು. ಅಲಂಕಾರಿಕ ಗಿಡಗಳು, ಹೂ ಸಸ್ಯಗಳು ಅರಳಿ ನಳನಳಿಸುತ್ತಿತ್ತು. ಅಂದು ಹಾಕಿದ ಸಸಿಗಳು ಈಗ ವೃಕ್ಷಗಳಾಗಿವೆ. ಆದರೆ, ನಿರ್ವಹಣೆಯ ಕೊರತೆಯಿಂದ ಮನುವನ ಹಾಳಾಗಿದೆ. ಪಟ್ಟಣದ ನಿವಾಸಿಗಳು ಮತ್ತು ಸಾರ್ವಜನಿಕರು ಒಂದೆಡೆ ವಿಶ್ರಮಿಸಲು ಪಟ್ಟಣಕ್ಕೆ ಒಂದಾದರೂ ಉದ್ಯಾನ ಅಭಿವೃದ್ಧಿಪಡಿಸುವ ಅವಶ್ಯಕತೆ ಇದೆ. ಪಟ್ಟಣದ ನಡುವೆ ಗ್ರಂಥಾಲಯ ಒದಗಿಸಲಿ

- ಶ್ರುತಿ, ಎಲೆಕೇರಿ ಬೀದಿ,ಯಳಂದೂರು

***

ಶೌಚಾಲಯಗಳು ಬೇಕು

ಸರ್ಕಾರಿ ಕಚೇರಿಗಳಲ್ಲಿಮಹಿಳೆಯರಿಗೆ ವಿಶೇಷ ಮತ್ತು ಗುಣಮಟ್ಟದ ಶೌಚಾಲಯ ನಿರ್ಮಿಸಬೇಕು. ಎಲ್ಲೆಂದರಲ್ಲಿ ಅಡ್ಡಾದಿಡ್ಡಿ ನಿಲ್ಲುವ ವಾಹನಗಳಿಂದ ಸಂಚಾರಕ್ಕೆ ಅಡಚಣೆ ಆಗಿದೆ. ಕಚೇರಿ ಪ್ರವೇಶಿಸುವುದೇ ತ್ರಾಸವಾಗಿದೆ. ಕಚೇರಿ ಜಗುಲಿಗಳಲ್ಲಿ ಅಡ್ಡವಾಗಿಟ್ಟ ಬೈಕ್ ಮತ್ತು ಅನುಪಯುಕ್ತ ವಸ್ತುಗಳನ್ನು ತೆರವುಗೊಳಿಸಬೇಕು

- ವೈ.ಎಂ.ಕೋಮಲ,ಯಳಂದೂರು

***

ಕುಳಿತುಕೊಳ್ಳುವ ವ್ಯವಸ್ಥೆ ಮಾಡಿ

ಜನರು ಕುಳಿತುಕೊಳ್ಳಲು ಕಚೇರಿ ಆವರಣದಲ್ಲಿ ಬೆಂಚಿನ ವ್ಯವಸ್ಥೆ ಮಾಡಬೇಕು. ಹಾದಿ ಬದಿಗಳನ್ನು ಸಿಮೆಂಟ್ ಕಾಂಕ್ರಿಟ್‌ನಿಂದ ಮುಚ್ಚಬೇಕಿದೆ. ಕಚೇರಿ ಸುತ್ತಮುತ್ತ ಕಾಣುವ ಬಿಲಗಳನ್ನು ಭದ್ರಪಡಿಸಬೇಕು. ಹಿಂಭಾಗದ ಗೋಡೆ ಮತ್ತು ಕಿಟಕಿಗಳ ತಳಭಾಗ ಉದುರಿ ಬೀಳುತ್ತಿವೆ

- ವೈ.ವಿ. ಉಮಾಶಂಕರ್,ಯಳಂದೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT