ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಕತ್ತಿದ್ರೆ ಮೈಸೂರಲ್ಲಿ ಚುನಾವಣೆಗೆ ನಿಲ್ಲಲಿ: ಸಿದ್ದರಾಮಯ್ಯಗೆ ಪ್ರಸಾದ್ ಸವಾಲು

Last Updated 2 ಅಕ್ಟೋಬರ್ 2021, 13:12 IST
ಅಕ್ಷರ ಗಾತ್ರ

ಚಾಮರಾಜನಗರ: 'ವಿರೋಧ ಪಕ್ಷದ ಸಿದ್ದರಾಮಯ್ಯ ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಕ್ಷೇತ್ರದ ಹುಡುಕಾಟದಲ್ಲಿದ್ದಾರೆ. ತಾಕತ್ತಿದ್ದರೆ ಅವರು ಮೈಸೂರಿಗೆ ಬರಲಿ' ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ಶನಿವಾರ ಸವಾಲು ಹಾಕಿದರು.

ನಗರದಲ್ಲಿ ನಡೆದ, ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಬೆಂಬಲಿಗರ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಆರ್ ಎಸ್ ಎಸ್ ಅನ್ನು ತಾಲಿಬಾನ್‌ಗೆ ಹೋಲಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

'ವಿರೋಧ ಪಕ್ಷದ ನಾಯಕನಾಗಿ ಇಂತಹ ಮಾತನಾಡುವುದೇ? ಅತ್ಯಂತ ಅಮಾನುಷವಾಗಿ ವರ್ತಿಸುತ್ತಿರುವ ಹಾಗೂ ರಕ್ತದ ಕೋಡಿ ಹರಿಸುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿರುವ ತಾಲಿಬಾನಿಗಳಿಗೆ ದೇಶದ ಯಾವುದೇ ಸಂಘಟನೆ ಅಥವಾ ವ್ಯಕ್ತಿಗಳನ್ನು ಹೋಲಿಸಬಾರದು. ಅಂತಹದ್ದರಲ್ಲಿ ಆರ್ ಎಸ್ ಎಸ್ ಅನ್ನು ಹೋಲಿಸುವುದೇ? ಸಿದ್ದರಾಮಯ್ಯ ಅವರಬುದ್ಧಿ ಸ್ಥಿಮಿತದಲ್ಲಿಲ್ಲದೆ ಏನೇನೋ ಹೇಳುತ್ತಿದ್ದಾರೆ' ಎಂದು ಆಕ್ರೋಶ ಭರಿತರಾಗಿ ಹೇಳಿದರು.

' ಮೂರೂವರೆ ವರ್ಷಗಳ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಏನಾಯಿತು ಎಂಬುದು ಗೊತ್ತಿದೆ. ಕಾಂಗ್ರೆಸ್ ದೇಶದಲ್ಲಿ ಮಾತ್ರವಲ್ಲದೆ ರಾಜ್ಯದಲ್ಲೂ ಸೋತು ಸುಣ್ಣವಾಗಿದೆ. ಹಾಗಾಗಿ, ಮುಖಂಡರು ಹತಾಶೆಯ ಹೇಳಿಕೆಗಳನ್ನು‌ ನೀಡುತ್ತಿದ್ದಾರೆ' ಎಂದು ವ್ಯಂಗ್ಯವಾಡಿದರು.

'ದೇಶದ ಹಾಗೂ ರಾಜ್ಯದ ಮತದಾರರು, ಬಿಜೆಪಿಗೆ ಆದೇಶ ಮಾಡಿದ್ದಾರೆ. ಅದನ್ನು‌ ಒಪ್ಪಿಕೊಳ್ಳಬೇಕು. ದೇಶದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿಯನ್ನು‌ ಎದುರಿಸುವ ತಾಕತ್ತು ಕಾಂಗ್ರೆಸ್‌ಗೆ ಇದೆಯೇ? ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ(ರಾಹುಲ್ ಗಾಂಧಿ)ರಾಗಿದ್ದವರೇ ಅಮೇಥಿಯಲ್ಲಿ ಸೋತಿದ್ದಾರೆ. ಕೇರಳದ ವಯನಾಡಿಗೆ ವಲಸೆ ಬಂದು ಗೆದ್ದರು. ಪಂಜಾಬ್‌ನಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಪಕ್ಷದಿಂದ ದೂರ ಹೋಗಿದ್ದಾರೆ‌. ಕಾಂಗ್ರೆಸ್ ದುರ್ಬಲ ಆಗುತ್ತಿದೆ. ಮೊದಲು ಅದನ್ನು‌ ಕಟ್ಟಿ ಬೆಳೆಸಲಿ. ನಂತರ ಬಿಜೆಪಿಯ‌ ಬಗ್ಗೆ ಮಾತನಾಡಲಿ' ಎಂದು ಶ್ರೀನಿವಾಸ ಪ್ರಸಾದ್ ಅವರು ಹೇಳಿದರು.

'ಕಾಂಗ್ರೆಸ್ ಎಂತಹ ಪಕ್ಷವಾಗಿತ್ತು? ನಾನು ನಾಲ್ಕು ಬಾರಿ ಗೆದ್ದಿದ್ದೆ. ಈಗ ವಿರೋಧ ಪಕ್ಷದ ಸಾಲಿನಲ್ಲಿ ಕುಳಿತುಕೊಳ್ಳಲೂ ಆಗದ ಸ್ಥಿತಿ ಅದಕ್ಕೆ ಬಂದಿದೆ. ಅದನ್ನು ಅರ್ಥ ಮಾಡಿಕೊಳ್ಳಲಿ. ಜನರು ಈಗ ಎಲ್ಲವನ್ನೂ ಅರ್ಥಮಾಡಿಕೊಳ್ಳುತ್ತಾರೆ. ಯೋಚನೆ ಮಾಡುತ್ತಾರೆ. ನಾವು ಮುಂದಿನ ಚುನಾವಣೆಗೆ ಸಜ್ಜಾಗಿದ್ದೇವೆ. ಕಾಂಗ್ರೆಸ್ ‌ನವರು ಸಜ್ಜಾಗಿದ್ದಾರೆಯೇ? ಮೊದಲು ಪಕ್ಷ ಕಟ್ಟಲಿ. ನಂತರ ಬಿಜೆಪಿಯನ್ನು ಟೀಕಿಸಲಿ' ಎಂದು ಹೇಳಿದರು.

ಮಾತು ವಾಪಸ್ ತೆಗೆದುಕೊಳ್ಳಬೇಕು:'ವಿರೋಧ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಟೀಕೆ ಮಾಡಲಿ. ಅದನ್ನು‌ ಒಪ್ಪಿಕೊಳ್ಳೋಣ. ಆದರೆ ರಕ್ತದ ಕೋಡಿ‌ಹರಿಸುವ ತಾಲಿಬಾನಿಗಳಿಗೆ ಆರ್ ಎಸ್ ಎಸ್ ಅನ್ನು ಹೋಲಿಸಿರುವುದು ಖಂಡನೀಯ. ದೇಶದ ಯಾರನ್ನೂ ಆ ತಾಲಿಬಾನಿಗಳೊಂದಿಗೆ ಹೋಲಿಸಬಾರದು. ಹೇಳಿಕೆಯನ್ನು ಸಿದ್ದರಾಮಯ್ಯ ಅವರು ವಾಪಸ್ ಪಡೆಯಬೇಕು' ಎಂದು ಆಗ್ರಹಿಸಿದರು.

ಬೊಮ್ಮಾಯಿಗೆ ಮೆಚ್ಚುಗೆ: 'ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತಮವಾಗಿ‌‌ ಕೆಲಸ ಮಾಡುತ್ತಿದ್ದಾರೆ. ವಿಧಾನ ಮಂಡಲದ ಅಧಿವೇಶನದಲ್ಲಿ ಅತ್ಯಂತ ಸಮರ್ಥವಾಗಿ ವಿರೋಧ ಪಕ್ಷಗಳನ್ನು ಎದುರಿಸಿದ್ದಾರೆ. ಎಲ್ಲರಿಗೂ ಅರ್ಥವಾಗುವಂತೆ ಅತ್ಯಂತ ಸರಳವಾಗಿ ಚೆನ್ನಾಗಿ ಮಾತನಾಡಿದ್ದಾರೆ' ಎಂದು‌ ಮೆಚ್ಚುಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT