ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ | 'ಸವಲತ್ತು ಉಳ್ಳವರ ಪಾಲಾಗದಿರಲಿ'

ಪಂಚಾಯತ್ ರಾಜ್ ಸಬಲೀಕರಣ ದಿನಾಚರಣೆ: ಜೆ.ಸಿ.ಮಾಧುಸ್ವಾಮಿ
Published 26 ಡಿಸೆಂಬರ್ 2023, 7:14 IST
Last Updated 26 ಡಿಸೆಂಬರ್ 2023, 7:14 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಸವಲತ್ತುಗಳು ಉಳ್ಳವರ ಪಾಲಾಗಬಾರದು, ಜನಪ್ರತಿನಿದಿಗಳು ಹಾಗೂ ಅಧಿಕಾರಿಗಳು ನೈಜ ಫಲಾನುಭವಿಗಳನ್ನು ಗುರುತಿಸಿ ತಲುಪಸಿದಾಗ ಮಾತ್ರ ಸರ್ಕಾರದ ಯೋಜನೆಗಳು ಸಾರ್ಥಕವಾಗುತ್ತವೆ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಕರ್ನಾಟಕ ಪಂಚಾಯತ್ ರಾಜ್ ಪರಿಷತ್, ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟ, ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ, ಸಂಪನ್ಮೂಲ ವ್ಯಕ್ತಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಅಬ್ದುಲ್ ನಜೀರ್ ಸಾಬ್ ಜನ್ಮದಿನದ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ‘ಪಂಚಾಯತ್ ರಾಜ್ ಸಬಲೀಕರಣ ದಿನಾಚರಣೆ’ ಹಾಗೂ ಡಾ.ಚಿಕ್ಕಕೋಮಾರಿ ಗೌಡ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ವ್ಯವಸ್ಥೆ ಬಗ್ಗೆ ಜನರಿಗೆ ನಂಬಿಕೆ ಬರಬೇಕಾದರೆ ಸರ್ಕಾರ ಯೋಜನೆಯನ್ನು ಶೇ 80ರಷ್ಟು ಅನುಷ್ಠಾನ ಮಾಡಬೇಕು. ಆದರೆ ಶಕ್ತಿ, ಸ್ಥಾನಮಾನ ಹೊಂದಿರುವವರೆ ಸೌಲಭ್ಯವನ್ನು ನೈಜ ಫಲಾನುಭವಿಗಳಿಗೆ ಹೆಚ್ಚು ಪಡೆಯುತ್ತಿದ್ದಾರೆ. ಇದರಿಂದ ಬಡವರಿಗೆ ಸರಿಯಾಗಿ ಯೋಜನೆಗಳು ತಲುಪುತ್ತಿಲ್ಲ. ಸರ್ಕಾರದಿಂದ ಅನುದಾನ ಬಿಡುಗಡೆಯಾದರೂ ಜನರಿಗೆ ತಲುಪುವವರೆಗೆ ಹಲವು ಕವಲು ದಾರಿಗಳನ್ನು ಸುತ್ತಿ ಬರಬೇಕು. ಇದನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲ. ಮೋದಿ ಬಂದ ನಂತರ ಜನರ ಖಾತೆಗೆ ನೇರವಾಗಿ ಹೋಗುತ್ತಿದೆ. ಇದು ಕೂಡ ಸಮರ್ಪಕವಾಗಿ ಆಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಚುನಾಯಿತಿ ಪ್ರತಿನಿಧಿಗಳು ಶಾಸನ ಬದ್ದ ಹಕ್ಕು ಚಲಾಯಿಸುವುದನ್ನು ಕಲಿಯಬೇಕು. ನಿಮ್ಮ ಮೇಲೆ ಜನರು ವಿಶ್ವಾಸವಿಟ್ಟುಕೊಂಡಿದ್ದಾರೆ ಅದನ್ನು ಉಳಿಸಿಕೊಳ್ಳಬೇಕು. ಇದಕ್ಕೆ ಓದು ಹಾಗೂ ಚರ್ಚೆ ಬಹಳ ಮುಖ್ಯ. ಚುನಾಯಿತರು ಮತದಾರರಿಗೆ ಮಾತ್ರ ಹೆದರಿಕೊಳ್ಳಬೇಕಾಗಿದ್ದು, ಅಧಿಕಾರವನ್ನು ಅರ್ಥ ಮಾಡಿಕೊಂಡು ಬಳಸುವ ಪ್ರಯತ್ನ ಮಾಡಬೇಕು. ಇತ್ತೀಚೆಗೆ ಜನ ಪ್ರತಿನಿಧಿಗಳು ಗುತ್ತಿಗೆದಾರರಾಗುತ್ತಿದ್ದಾರೆ. ಇದು ದೂರವಾಗಿ ದುಡ್ಡಿಗಿಂತ ಗೌರವ ಮುಖ್ಯವೆಂದು ತಿಳಿದು ಗೌರವ ಸಂಪಾದಿಸಬೇಕು ಎಂದು ಸಲಹೆ ನೀಡಿದರು.

ರಾಜ್ಯ 5ನೇ ಹಣಕಾಸು ಆಯೋಗ ಹಾಗೂ ರಾಜ್ಯ ಪಂಚಾಯತ್ ರಾಜ್ ಪರಿಷತ್ ಕಾರ್ಯಾಧ್ಯಕ್ಷ ಸಿ.ನಾರಾಯಣಸ್ವಾಮಿ ಮಾತನಾಡಿ, ಗಾಂಧೀಜಿ ರಾಮರಾಜ್ಯ ಪರಿಕಲ್ಪನೆ ಜಾರಿಗೊಳಿಸಿ ಅವರ ಕನಸು ನನಸು ಮಾಡಲು ಪಂಚಾಯತ್ ರಾಜ್ಯ ವ್ಯವಸ್ಥೆಯನ್ನು ಅಬ್ದುಲ್ ನಜೀರ್ ಸಾಬ್ ಜಾರಿಗೆ ತಂದು ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ, ಗ್ರಾಮ ಪಂಚಾಯತಿಗೆ ಅಧಿಕಾರಿ ವಿಕೇಂದ್ರೀಕರಣ ಮಾಡಿದರು. ಕಟ್ಟಕಡೆಯ ವ್ಯಕ್ತಿಗೂ ಸರ್ಕಾರ ಸೌಲಭ್ಯ ಸಿಗಬೇಕಾದರೆ ಪಂಚಾಯತ್ ರಾಜ್ ಗಟ್ಟಿಯಾಗಿ ಅನುಷ್ಠಾನವಾಗಬೇಕು ಎಂದು ತಿಳಿಸಿದರು.

ಅಬ್ದುಲ್ ನಜೀರ್ ಸಾಬ್ ಅಧಿಕಾರ ವಹಿಸಿದ ಸಂದರ್ಭ ರಾಜ್ಯದಲ್ಲಿ ತೀವ್ರ ಬರಗಾಲ ಎದುರಾಗಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿ, ಧನ, ಕರು, ಜಾನುವಾರುಗಳಿಗೂ ಮೇವಿನ ಸಮಸ್ಯೆ ತಲೆದೋರಿತ್ತು. ಆಗ ಅತೀ ಹೆಚ್ಚು ಕೊಳವೆ ಬಾವಿ ಕೊರೆಸಿ, ರಾಜ್ಯದ ಎಲ್ಲಾ ಕಡೆಗೂ ಕೂಡ ನೀರು ನೀಡಿದರು. ಇದರಿಂದಲೇ ಅವರು ನೀರ್ ಸಾಬ್ ಎಂದು ಜನರ ಮನಸ್ಸಿನಲ್ಲಿ ನೆಲೆಯೂರಿದ್ದಾರೆ. ನಜೀರ್ ಸಾಬ್ ಬಯಸಿದ್ದರೆ ಯಾವ ಖಾತೆಯಾಗದರೂ ಸಿಗುತ್ತಿತ್ತು. ಯಾವುದಕ್ಕು ಆಸೆ ಪಡಲಿಲ್ಲ ಎಂದು ತಿಳಿಸಿದರು.

ಶಾಸಕ ಎಚ್.ಎಂ.ಗಣೇಶಪ್ರಸಾದ್, ಮಾಜಿ ಶಾಸಕ ಡಿ.ಆರ್.ಪಾಟೀಲ್, ಪಂಚಾಯತ್ ರಾಜ್ ಪರಿಷತ್ ರಾಜ್ಯ ಉಪಾಧ್ಯಕ್ಷ ವಿ.ವೈ. ಘೋರ್ಪಡೆ, ರಾಜ್ಯ ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್ ಮಾತನಾಡಿದರು.

ಪಂಚಾಯತ್ ರಾಜ್ ದಾರಿ ದೀಪ ‘ನಜೀರ್ ಸಾಬ್’ ಪುಸ್ತಕ ಹಾಗೂ ಗ್ರಾಮ ಸ್ವರಾಜ್ ಮಾಸ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ನಂತರ ಡಾ.ಚಿಕ್ಕಕೋಮಾರಿ ಗೌಡ ದತ್ತಿ ಪ್ರಶಸ್ತಿಯನ್ನು ಪಂಚಾಯತ್ ರಾಜ್ ವಿವಿಧ ಸಾಧನೆ ಮಾಡಿದ ಗಣ್ಯರು ಹಾಗೂ ಗ್ರಾಮ ಪಂಚಾಯತಿಗೆ ನೀಡಲಾಯಿತು.

ವಿಧಾನ ಪರಿಷತ್ ಸದಸ್ಯ ಡಾ.ತಿಮ್ಮಯ್ಯ, ಪಂಚಾಯಿತಿ ಅಭಿವೃದ್ಧಿ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಕುಮಾರಸ್ವಾಮಿ, ಜಿಲ್ಲಾಧ್ಯಕ್ಷ ಕೆಂಪರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ, ಖಜಾಂಚಿ ಶೋಭಾ, ಉಪಾಧ್ಯಕ್ಷ ಸಯೀದ್ ನಜ್ರುಲ್ಲಾ, ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ, ಜಯಂತಿ, ರಾಘವೇಂದ್ರ, ರಾಜಾ ಹುಣಸೂರು, ಚಲಪತಿ, ರಾಜ್ಯ ಗ್ರಾಪಂ ಸದಸ್ಯರ ಮಹಾ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಹಂಗಳ ವೃಷಬೇಂದ್ರ, ತಾಲ್ಲೂಕು ಅಧ್ಯಕ್ಷ ಹುಂಡೀಪುರ ಎಚ್.ಪಿ.ಮಹೇಂದ್ರ, ಪ್ರಧಾನ ಕಾರ್ಯದರ್ಶಿ ರಾಘವಾಪುರ ಆರ್.ಡಿ.ಉಲ್ಲಾಸ್, ಪದಾಧಿಕಾರಿಗಳಾದ ಪರಮೇಶ್, ತಿಬ್ಬಯ್ಯ, ಗೋಪಾಲ, ಸುರೇಶ್, ಬಂಗಾರನಾಯಕ, ಆರ್.ಮಹೇಶ್ ಸೇರಿದಂತೆ ಒಕ್ಕೂಟದ ಸರ್ವ ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT