ಶುಕ್ರವಾರ, ಜುಲೈ 23, 2021
23 °C
ರಾಜ್ಯದಲ್ಲೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ನೇಮಕ, ಫೆಬ್ರುವರಿಯಿಂದ ಕಾರ್ಯನಿರ್ವಹಣೆ

ಲೈಂಗಿಕ ಅಲ್ಪಸಂಖ್ಯಾತೆ, ಅರೆ ಕಾನೂನು ಸ್ವಯಂಸೇವಕಿ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಲೈಂಗಿಕ ಅಲ್ಪಸಂಖ್ಯಾತರೊಬ್ಬರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧೀನದಲ್ಲಿ ಅರೆ ಕಾನೂನು ಸ್ವಯಂ ಸೇವಕಿಯಾಗಿ (ಪ್ಯಾರಾ ಲೀಗಲ್‌ ವಾಲ್ಯುಂಟಿಯರ್‌–ಪಿಎಲ್‌ವಿ) ಕಾರ್ಯನಿರ್ವಹಿಸುತ್ತಿದ್ದಾರೆ. 

ಲೈಂಗಿಕ ಅಲ್ಪಸಂಖ್ಯಾತರ ಪರ ಕಾರ್ಯನಿರ್ವಹಿಸುತ್ತಿರುವ ಸಮತಾ ಸೊಸೈಟಿಯ ಜಿಲ್ಲಾ ಸಂಚಾಲಕಿ ಆಗಿರುವ ದೀಪಾ ಬುದ್ದೆ ಅವರು ಅರೆ ಕಾನೂನು ಸ್ವಯಂಸೇವಕಿಯಾಗಿ ನೇಮಕಗೊಂಡವರು. ಈ ವರ್ಷದ ಫೆಬ್ರುವರಿ 8ರಿಂದ ಅವರು ಕೆಲಸ ಮಾಡುತ್ತಿದ್ದಾರೆ. 

ಲೈಂಗಿಕ ಅಲ್ಪಸಂಖ್ಯಾತ ಸಮುದಾಯದವರನ್ನು ಪಿಎಲ್‌ವಿಯಾಗಿ ನೇಮಕ ಮಾಡಿದ್ದು ರಾಜ್ಯದಲ್ಲಿ ಇದೇ ಮೊದಲು. ಇತ್ತೀಚೆಗೆ ಉಡುಪಿ ಜಿಲ್ಲೆಯಲ್ಲಿ ಒಬ್ಬರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಸದಾಶಿವ ಸುಲ್ತಾನ್‌ಪುರಿ ಅವರು ಕೂಡ ಶನಿವಾರ ನ್ಯಾಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇದೇ ವಿಷಯವನ್ನು ಪ್ರಸ್ತಾಪಿಸಿದರು. ರಾಜ್ಯದಲ್ಲಿ ಮೊದಲ ಬಾರಿಗೆ ಲೈಂಗಿಕ ಅಲ್ಪಸಂಖ್ಯಾತರೊಬ್ಬರನ್ನು ಜಿಲ್ಲೆಯಲ್ಲಿ ನೇಮಿಸಲಾಗಿದೆ ಎಂದು ಹೇಳಿದರು. 

ಯಾರಿದು ಪಿಎಲ್‌ವಿ?: ಅರೆ ಕಾನೂನು ಸ್ವಯಂಸೇವಕರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಡಿಯಲ್ಲಿ ಆರು ತಿಂಗಳ ಅವಧಿಗೆ ಕಾರ್ಯನಿರ್ವಹಿಸುತ್ತಾರೆ. ಜನರಿಗೆ ವಿವಿಧ ಕಾನೂನುಗಳ ಬಗ್ಗೆ ಅರಿವು ಮೂಡಿಸುವುದು ಇವರ ಮುಖ್ಯ ಕೆಲಸ. 

‘ತಾಲ್ಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿ ಹಾಗೂ ವಿವಿಧ ಕಡೆಗಳಲ್ಲಿ ಇವರನ್ನು ನಿಯೋಜಿಸಲಾಗುತ್ತಿದೆ. ಕಾನೂನು ನೆರವು ಕೇಳಿಕೊಂಡು ಬರುವವರ ಸಮಸ್ಯೆಗಳನ್ನು ಕೇಳಿ ಅವರಿಗೆ ಕಾಯ್ದೆ, ಕಾನೂನುಗಳ ಬಗ್ಗೆ ತಿಳಿ ಹೇಳಿ, ಯಾವ ರೀತಿ ಹೋರಾಟ ಮಾಡಬಹುದು ಎಂಬುದನ್ನು ತಿಳಿಸುವುದು ಇವರ ಕೆಲಸ. ವಾರದಲ್ಲಿ ಕನಿಷ್ಠ ಎರಡು ಬಾರಿ (ಸಿಟ್ಟಿಂಗ್‌) ಅವರು ಈ ಸೇವೆ ಒದಗಿಸಬೇಕು. ಒಂದು ಸಲಕ್ಕೆ ₹500 ಗೌರವಧನ ಪಾವತಿಸಲಾಗುತ್ತದೆ’ ಎಂದು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದರು. 

‘ಸ್ವಯಂ ಸೇವಕರನ್ನು ಆಯ್ಕೆ ಮಾಡಿದ ನಂತರ ಅವರಿಗೆ, ಪ್ರಾಧಿಕಾರದ ವತಿಯಿಂದ ಮೂರು ದಿನಗಳ ಕಾಲ ತರಬೇತಿ ನೀಡಲಾಗುತ್ತದೆ. ಇದರ ಆಧಾರದಲ್ಲಿ ಅವರು ಜನರಲ್ಲಿ ಕಾನೂನು ಅರಿವು ಮೂಡಿಸುತ್ತಾರೆ. ಆರು ತಿಂಗಳ ಅವಧಿಗೆ ಅವರ ಸೇವೆಯನ್ನು ಬಳಸಲಾಗುತ್ತಿದೆ. ನಂತರ ಅವಧಿಯನ್ನು ನವೀಕರಣ ಮಾಡುವುದಕ್ಕೆ ಅವಕಾಶ ಇದೆ’ ಎಂದು ಅವರು ವಿವರಿಸಿದರು. 

ಲೈಂಗಿಕ ಅಲ್ಪಸಂಖ್ಯಾತರಿಗೆ ಕಾನೂನು ಜಾಗೃತಿ

ದೀಪಾ ಬುದ್ದೆ ಅವರು ಸಂತೇಮರಹಳ್ಳಿ ಹೋಬಳಿಯ ಹೆಗ್ಗವಾಡಿಪುರದವರು. ಕಲಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿ (ಅಂಬೇಡ್ಕರ್‌ ಅಧ್ಯಯನ) ಮಾಡಿರುವ ದೀಪಾ ಅವರು ಸಮತಾ ಸೊಸೈಟಿಯ ಸಂಚಾಲಕಿಯಾಗಿ ಲೈಂಗಿಕ ಅಲ್ಪಸಂಖ್ಯಾತರ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ.

‘2020ರಲ್ಲಿ ಅರೆ ಕಾನೂನು ಸ್ವಯಂ ಸೇವಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದೆ, ಅಕ್ಟೋಬರ್‌ನಲ್ಲಿ ಸಂದರ್ಶನಕ್ಕೆ ಹಾಜರಾಗಿ ಆಯ್ಕೆಯಾಗಿದ್ದೆ. ಫೆಬ್ರುವರಿ 8ರಿಂದ ಕೆಲಸ ಮಾಡುತ್ತಿದ್ದೇನೆ. ಬಹುಶಃ ಈ ಹುದ್ದೆಗೆ ನೇಮಕಗೊಂಡ ರಾಜ್ಯದ ಮೊದಲ ಲೈಂಗಿಕ ಅಲ್ಪಸಂಖ್ಯಾತೆ ನಾನು. ಬೇರೆ ಕಡೆ ಸ್ವಯಂ ಸೇವಕರಾಗಿ ದುಡಿಯುತ್ತಿರುವ ಲೈಂಗಿಕ ಅಲ್ಪಸಂಖ್ಯಾತರ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂದು ದೀಪಾ ಬುದ್ದೆ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಲೈಂಗಿಕ ಅಲ್ಪಸಂಖ್ಯಾತರಿಗೆ ಹಾಗೂ ಜನರಿಗೆ ಕಾನೂನುಗಳ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸುತ್ತಿದ್ದೇನೆ’ ಎಂದು ಅವರು ಹೇಳಿದರು. 

-----

ನಮ್ಮ ಸಮತಾ ಸೊಸೈಟಿಯಲ್ಲೇ ಕಾನೂನು ಘಟಕ ಇದೆ. ಅದರಲ್ಲಿ ನಾನು ಕೆಲಸ ಮಾಡುತ್ತೇನೆ. ಲೈಂಗಿಕ ಅಲ್ಪಸಂಖ್ಯಾತರಿಗೆ ಕಾನೂನು ಕಟ್ಟಳೆಗಳ ಬಗ್ಗೆ ತಿಳಿ ಹೇಳುತ್ತಿದ್ದೇನೆ
ದೀಪಾ ಬುದ್ದೆ, ಅರೆ ಕಾನೂನು ಸ್ವಯಂ ಸೇವಕಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು