ಬುಧವಾರ, ಸೆಪ್ಟೆಂಬರ್ 22, 2021
22 °C

ತಾನೇ ಹೆತ್ತ ಕಂದಮ್ಮನ ಕೊಂದ ತಾಯಿಗೆ ಜೀವಾವಧಿ ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಳ್ಳೇಗಾಲ: ಜನ್ಮ ನೀಡಿದ ಮಗುವನ್ನು ಊರಿಗೆ ತೆಗೆದುಕೊಂಡು ಹೋಗಲು ಭಯಪಟ್ಟು ಕರುಳಬಳ್ಳಿ ಕತ್ತರಿಸುವ ಬ್ಲೇಡ್‌ನಿಂದ ಮಗುವನ್ನು ಕೊಂದು ಕೆರೆಗೆ ಎಸೆದು ಹೋಗಿದ್ದ ತಾಯಿಗೆ ಇಲ್ಲಿನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. 

ಹನೂರು ತಾಲ್ಲೂಕಿನ ಚಿಕ್ಕಮಾಲಾಪುರ ಗ್ರಾಮದ ಚಂದ್ರಮ್ಮ ಶಿಕ್ಷೆಗೆ ಗುರಿಯಾದವರು. 2015ರ ಮೇ 10ರಂದು ಈ ಪ್ರಕರಣ ನಡೆದಿತ್ತು. 

ಚಂದ್ರಮ್ಮ 15 ವರ್ಷಗಳ ಹಿಂದೆ (ಘಟನೆ ನಡೆಯುವದಕ್ಕಿಂತ) ಕೂಲಿ ಕೆಲಸಕ್ಕಾಗಿ ರಾಮನಗರಕ್ಕೆ ಹೋಗಿದ್ದಳು. ಅಲ್ಲಿ ಮರಿಯಪ್ಪ ಎಂಬ ವ್ಯಕ್ತಿಯ ಜೊತೆಗೆ ಸಂಬಂಧ ಹೊಂದಿದ್ದ ಆಕೆ ಗರ್ಭಿಣಿಯಾಗಿದ್ದಳು. ನಂತರ ಊರಿಗೆ ವಾಪಸ್‌ ಆಗಿದ್ದಳು. ಹೆಣ್ಣು ಮಗು ಜನಿಸಿತ್ತು. ಮರಿಯಪ್ಪ ಇಲ್ಲಿಗೆ ಬಾರದೇ ಇದ್ದಾಗ, ಚಂದ್ರಮ್ಮನೇ ಊರಿನಲ್ಲಿ ಕೂಲಿ ಕೆಲಸ ಮಾಡಿ ತಂದೆ, ತಾಯಿ ಹಾಗೂ ಮಗಳನ್ನು ನೋಡಿಕೊಂಡು ಇದ್ದಳು.

ನಾಲ್ಕು ವರ್ಷಗಳ ಹಿಂದೆ ಮತ್ತೆ ಅಕ್ರಮ ಸಂಬಂಧದಿಂದ ಆಕೆ ಗರ್ಭ ಧರಿಸಿದ್ದಳು. ಜನಿಸಿದ್ದ ಗಂಡು ಮಗುವನ್ನು ಮಾರಾಟವನ್ನೂ ಮಾಡಿದ್ದಳು. 2015ರಲ್ಲಿ ಮತ್ತೆ ಆಕೆ ಗರ್ಭಿಣಿಯಾಗಿದ್ದಳು. ಪದೇ ಪದೇ ಅಕ್ರಮವಾಗಿ ಗರ್ಭ ಧರಿಸಿದರೆ ಊರಿನ ಬಗ್ಗೆ ಕೆಟ್ಟ ಹೆಸರು ಬರುತ್ತದೆ ಎಂದು ಊರಿನ ಜನರು ಮಾತಾಡಿಕೊಂಡಿದ್ದರು. 

2015ರ ಮೇ 10ರಂದು ಹನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಂದ್ರಮ್ಮ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಹೆರಿಗೆ ನಂತರ ಮಗುವಿನೊಂದಿಗೆ ಆಸ್ಪತ್ರೆ ತೊರೆದಿದ್ದ ಆಕೆ, ಮಗುವನ್ನು ಊರಿಗೆ ಕರೆದುಕೊಂಡು ಬರಲು ಹೆದರಿದ್ದಳು. ರಾತ್ರಿ 8.30ರ ಹೊತ್ತಿಗೆ ಕರುಳು ಬಳ್ಳಿ ಕತ್ತರಿಸುವ ಬ್ಲೇಡ್‌ನಲ್ಲೇ ಮಗುವಿನ ಕತ್ತನ್ನು ಕತ್ತರಿಸಿ ಕೊಂದು ಕಾಮಗೆರೆಯ ಹೋಲಿಕ್ರಾಸ್‌ ಆಸ್ಪತ್ರೆಯ ಎದುರು ಇರುವ ಪೂವಿನಕಟ್ಟೆ ಕೆರೆಗೆ ಎಸೆದು ಹೋಗಿದ್ದಳು.

ಶಿಶುವಿನ ಮೃತದೇಹ ತೇಲಾಡುತ್ತಿದ್ದ ವಿಷಯವನ್ನು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದರು. ಚಂದ್ರಮ್ಮಳ ವಿರುದ್ಧ ಐಪಿಸಿ ಸೆಕ್ಷನ್‌ 302 (ಕೊಲೆ) ಐಪಿಸಿ ಸೆಕ್ಷನ್‌ 201ರ (ಸಾಕ್ಷ್ಯನಾಶ) ಅಡಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಆಗಿನ ಸರ್ಕಲ್‌ ಇನ್‌ಸ್ಪೆಕ್ಟರ್‌ ಸಿದ್ದಯ್ಯ ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 

ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ವಿನಯ್‌ ಅವರು ಚಂದ್ರಮ್ಮ ತಪ್ಪಿತಸ್ಥೆ ಎಂದು ಘೋಷಿಸಿ, ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಜೊತೆಗೆ ₹15 ಸಾವಿರ ದಂಡವನ್ನೂ ವಿಧಿಸಿದ್ದಾರೆ. 

ಪ್ರಾಸಿಕ್ಯೂಷನ್‌ ಪರವಾಗಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಉಷಾ ಅವರು ವಾದಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು