ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪತಿ ವಿಧವೆಯಾಗಿದ್ದರಿಂದ ಸಂಸತ್‌ ಭವನದ ಉದ್ಘಾಟನೆಗೆ ಕರೆದಿಲ್ಲ: ಕುಂ.ವಿ. ಬೇಸರ

ಚಾಮರಾಜನಗದರಲ್ಲಿ ಸಾಹಿತಿ ಕುಂ.ವೀರಭದ್ರಪ್ಪ ಹೇಳಿಕೆ: ಕೆ.ಶ್ರೀಧರ್‌ ರಚಿಸಿರುವ ಅಂತರಂಗದ ಅಸ್ಪೃಶ್ಯತೆ, ಅಂತರ್ಮುಖಿ ಕೃತಿ ಬಿಡುಗಡೆ ಸಮಾರಂಭದಲ್ಲಿ ಹೇಳಿಕೆ
Published 8 ಜೂನ್ 2023, 16:07 IST
Last Updated 8 ಜೂನ್ 2023, 16:07 IST
ಅಕ್ಷರ ಗಾತ್ರ

ಚಾಮರಾಜನಗರ: ‘ರಾಷ್ಟ್ರಪತಿಯವರು ಹಿಂದುಳಿದ ವರ್ಗಕ್ಕೆ ಸೇರಿದ ಮಹಿಳೆ. ಅವರು ವಿಧವೆಯಾಗಿರುವುದರಿಂದ ಉದ್ಘಾಟನೆಗೆ ಬಂದರೆ ಸಂಸತ್‌ ಕಟ್ಟಡ ಅಪವಿತ್ರ ಆಗುತ್ತದೆ ಎಂಬ ಕಾರಣಕ್ಕೆ ಆಮಂತ್ರಣ ನೀಡಿಲ್ಲ’ ಎಂದು ಸಾಹಿತಿ ಕುಂ.ವೀರಭದ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ದಾವಣಗೆರೆಯ ಕನ್ನಡ ಸಾಂಸ್ಕೃತಿಕ ಗತವೈಭವ ಅಕಾಡೆಮಿ, ಕೊಳ್ಳೇಗಾಲದ ಜೋಗಿ ರಂಗಜೋಳಿಗೆ ಮತ್ತು ಕಾವ್ಯ ಸ್ಪಂದನ ಪಬ್ಲಿಕೇಷನ್‌ ನಗರದಲ್ಲಿ ಹಮ್ಮಿಕೊಂಡಿದ್ದ ಯುವ ಸಾಹಿತಿ ಕೆ.ಶ್ರೀಧರ್‌ (ಕೆ.ಸಿರಿ) ಅವರು ಬರೆದಿರುವ ಅಂತರಂಗದ ಅಸ್ಪೃಶ್ಯತೆ (ನಾಟಕ) ಮತ್ತು ಅಂತರ್ಮುಖಿ (ಲೇಖನಗಳು) ಕೃತಿ ಬಿಡುಗಡೆ ಸಮಾರಂಭದಲ್ಲಿ  ಅವರು ಮಾತನಾಡಿದರು.

‘ಹೊಸ ಸಂಸತ್‌ ಕಟ್ಟಡದ ಉದ್ಘಾಟನೆ ವಿವಾದವನ್ನು ಪ್ರಸ್ತಾಪಿಸಿದ ಅವರು ‘ಸಂಸತ್‌ ಈ ದೇಶದ 135 ಕೋಟಿ ಜನರ ಪ್ರತಿನಿಧಿ. ಕೇವಲ ಶೇ 2ರಷ್ಟು ಇರುವ ಜನರದ್ದಲ್ಲ. ಅದು ದೇಶದ ಸಂಸತ್ತು. ಆದರೆ ಅದರ ಉದ್ಘಾಟನೆಗೆ ರಾಷ್ಟ್ರಪತಿಯವರನ್ನು ಕರೆಯಲಿಲ್ಲ. ಇದನ್ನು ನಾವು ಯಾರೂ ಪ್ರಶ್ನಿಸಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ರಾಜ್ಯದ ಹಿಂದಿನ ಬಿಜೆಪಿ ಸರ್ಕಾರ ಕೇಂದ್ರದ ಮೋದಿ ಸರ್ಕಾರವನ್ನು ಟೀಕಿಸಿದರು.  ‘ಯಾರನ್ನು ಸೋಲಿಸಬೇಕು ಎಂದುಕೊಂಡಿದ್ದೇವೋ ಅವರನ್ನು ಸೋಲಿಸಿದ್ದೇವೆ. ಯಾರನ್ನು ಗೆಲ್ಲಿಸಬೇಕು ಎಂದುಕೊಂಡಿದ್ದೇವೋ ಅವರು 135 ಸೀಟು ಪಡೆದಿದ್ದಾರೆ. ಕರ್ನಾಟಕದ ಜನರು ಸೋಲಿಸಬೇಕಾದವರನ್ನು ಸೋಲಿಸುತ್ತಾರೆ. ಗೆಲ್ಲಿಸಬೇಕಾದರವನ್ನು ಗೆಲ್ಲಿಸುತ್ತಾರೆ. ದೆಹಲಿಯಿಂದ ಬಂದರು. ಸಿನಿಮಾ ನಟರನ್ನು ಕರೆತಂದರು. ರಾಜ್ಯದ ಜನರು ಮೋಡಿಗೆ ಒಳಗಾಗಲಿಲ್ಲ. ಭ್ರಷ್ಟ ಶಕ್ತಿಗಳನ್ನು ಓಡಿಸಿದರು’ ಎಂದು ಪರೋಕ್ಷವಾಗಿ ಬಿಜೆಪಿಯನ್ನು ಕುಟುಕಿದರು. 

‘ಹಿಂದುಳಿದ ಸಮಾಜದಿಂದ ಬಂದ ಬರಹಗಾರರು ಸಾಹಿತ್ಯದ ಶಕ್ತಿ. ಈ ನೆಲದ ನೋವು, ನಲಿವು, ಕಷ್ಟ ಕಾರ್ಪಣ್ಯಗಳನ್ನು ಅರ್ಥಮಾಡಿಕೊಂಡಿದ್ದಾರೋ ಮತ್ತು ತಮ್ಮದೇ ಆದ ನುಡಿಗಟ್ಟಿನಲ್ಲಿ ಅದನ್ನು ಅಭಿವ್ಯಕ್ತಿಗೊಳಿಸುತ್ತಿದ್ದಾರೋ ಅವರು ನಿಜವಾದ ಲೇಖಕರು’ ಎಂದು ವೀರಭದ್ರಪ್ಪ ಅಭಿಪ್ರಾಯಪಟ್ಟರು.

‘ಜನರ ನೋವು, ಕಷ್ಟಗಳಿಗೆ ಸ್ಪಂದಿಸುವುದೇ ನಿಜವಾದ ಸಾಹಿತ್ಯ. ಕೆಟ್ಟ ರಾಜಕಾರಣವನ್ನು ಪ್ರತಿಭಟಿಸುವುದೂ ಸಾಹಿತ್ಯವೇ. ನಮ್ಮಲ್ಲಿ ಎರಡು ಬಗೆಯ ಸಾಹಿತಿಗಳಿರುತ್ತಾರೆ. ಉಪದ್ರವಿ ಮತ್ತು ನಿರುಪದ್ರಮಿ ಸಾಹಿತಿಗಳು. ಸರ್ಕಾರ, ಜಾತಿ ವ್ಯವಸ್ಥೆಯನ್ನು ಪ್ರತಿಭಟಿಸುತ್ತಾ ಆಡಳಿತ ನಡೆಸುವವರಿಗೆ ತೊಂದರೆ ಕೊಡುವವರು ಉಪದ್ರವಿ ಸಾಹಿತಿಗಳು. ರಾಜಕಾರಣಕ್ಕೆ, ವ್ಯವಸ್ಥೆಗೆ ಹೊಂದಿಕೊಂಡು ಹೋಗುವವರು ನಿರುಪದ್ರವಿ ಸಾಹಿತಿಗಳು’ ಎಂದು ಹೇಳಿದರು.

‘ಉಪದ್ರವ ಸಾಹಿತ್ಯವೇ ಕನ್ನಡ ಸಾಹಿತ್ಯದ ದೊಡ್ಡ ಶಕ್ತಿ. ಕನ್ನಡ ಸಾಹಿತ್ಯಕ್ಕೆ ಇರುವ ಶಕ್ತಿ ಬೇರೆಲ್ಲೂ ಇಲ್ಲ. ಪಂಪನಂತಹ ಕವಿ, ನಮ್ಮ ದೇವನೂರು ಮಹಾದೇವ ಅವರಂತಹ ಕಥೆಗಾರ ಬೇರೆಲ್ಲೂ ಸಿಗುವುದಕ್ಕೆ ಸಾಧ್ಯವಿಲ್ಲ’ ಎಂದರು. 

‘ಭಾರತದಲ್ಲಿ ಜಾತಿ ವ್ಯವಸ್ಥೆ ಇನ್ನೂ ಬೇರೂರಿದೆ. ಜಾತಿ ವ್ಯವಸ್ಥೆ ಇರುವವರೆಗೂ ನಾವು ಉದ್ಧಾರವಾಗಲು ಸಾಧ್ಯವಿಲ್ಲ. ಸಾಹಿತ್ಯಕ್ಕೆ ವೈಚಾರಿಕ ಹಿನ್ನೆಲೆ ಇದೆ. ಹಾಗಾಗಿ, ಸಾಹಿತಿಗಳಿಗೆ ಹೆಚ್ಚು ಜವಾಬ್ದಾರಿ ಇದೆ. ತಳ ಸಮುದಾಯದಿಂದ ಬಂದಿರುವ ಶ್ರೀಧರ್‌ ಅವರು ಎರಡು ಉತ್ತಮ ಕೃತಿಗಳನ್ನು ನೀಡಿದ್ದಾರೆ’ ಎಂದರು. 

ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ‘ಹಿಂದೆ ಸಾಹಿತ್ಯ ಅಂದರೆ ಕೈ ತೊಳೆದು ಮುಟ್ಟಬೇಕಾಗಿತ್ತು. ಇಂದು ಸಾಹಿತ್ಯ ಮುಟ್ಟಿ ಕೈತೊಳೆದುಕೊಳ್ಳಬೇಕಾಗಿದೆ. ಸಾಹಿತ್ಯವು ದೇಶವನ್ನು ಕಟ್ಟಬೇಕೇ ವಿನಾ, ಮನಸ್ಸು ಒಡೆಯಬಾರದು. ಅಸ್ಪೃಶ್ಯತೆ ಮಾನಸಿಕ ಕಾಯಿಲೆ. ಈ ದೇಶಕ್ಕೆ ಕಳಂಕ. ಅದು ಮಾನಸಿಕವಾಗಿಯೇ ಹೋಗಬೇಕು. ಇದನ್ನು ಹಿಮ್ಮೆಟ್ಟಿಸಲು ಜಾಗೃತ ಸಮಾಜ ನಿರ್ಮಾಣ ಆಗಬೇಕಾಗಿದೆ’ ಎಂದರು.

ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಗಾಂಧಿವಾದಿ ಸಿ.ಪಿ.ಹುಚ್ಚೇಗೌಡ ಮಾತನಾಡಿದರು. ಚಿಂತಕ ಹೊ.ಬ.ರಘೋತ್ತಮ ಅವರು ಅಂತರಂಗದ ಅಸ್ಲೃಶ್ಯತೆ ಕೃತಿ ಮತ್ತು ಸಾಹಿತಿ, ಪ್ರಕಾಶಕ ಭದ್ರಾವತಿ ರಾಮಾಚಾರಿ ಅವರು ಅಂತರ್ಮುಖಿ ಕೃತಿಗಳ ಪರಿಚಯ ಮಾಡಿದರು. 

ಕೃತಿಗಳ ಕರ್ತೃ ಶ್ರೀಧರ್ ಪ್ರಾಸ್ತಾವಿಕ ಮಾತನಾಡಿದರು. 

ಸಾಹಿತಿಗಳಾದ ಸ್ವಾಮಿ ಪೊನ್ನಾಚಿ, ಶಾಂತ ಜಯಾನಂದ್‌, ಶೀಲಾ ಸತ್ಯೇಂದ್ರಸ್ವಾಮಿ, ಮುಖಂಡರಾದ ವೆಂಕಟರಮಣಸ್ವಾಮಿ (ಪಾಪು), ಗಾಯಕ ಸಿ.ಎಂ.ನರಸಿಂಹಮೂರ್ತಿ, ನಿವೃತ್ತ ಅಧಿಕಾರಿ ಚಂದ್ರಶೇಖರಯ್ಯ, ಜೋಗಿ ರಂಗಜೋಳಿಗೆ ಅಧ್ಯಕ್ಷ ಜೆ.ಮೂರ್ತಿ ಮುಡಿಗುಂಡ ಇದ್ದರು. 

- ‘ಸೋಲಿಸಬೇಕಾದವರನ್ನು ಸೋಲಿಸಿದ್ದೇವೆ’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT