ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಸ್ತ್ರಕ್ರಿಯೆ ನೇರಪ್ರಸಾರ: ಹೋಬಳಿ ಆಸ್ಪತ್ರೆಯಲ್ಲಿ ಇದೇ ಮೊದಲು

ಸಂತೇಮರಹಳ್ಳಿ ಸಮುದಾಯ ಆರೋಗ್ಯ ಕೇಂದ್ರ: ಆಧುನಿಕ ತಂತ್ರಜ್ಞಾನದಲ್ಲಿ ಸ್ತ್ರೀ ರೋಗಕ್ಕೆ ಶಸ್ತ್ರಚಿಕಿತ್ಸೆ
Last Updated 21 ಮಾರ್ಚ್ 2021, 16:38 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನಸಂತೇಮರಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಭಾನುವಾರ ಐವರು ಮಹಿಳೆಯರಿಗೆ ಮಾಡಲಾದ ವಿವಿಧ ಶಸ್ತ್ರಚಿಕಿತ್ಸೆಗಳನ್ನು ನೇರಪ್ರಸಾರ ಮಾಡಲಾಯಿತು.

ಇಡೀ ರಾಜ್ಯದಲ್ಲಿಯೇ, ಹೋಬಳಿ ಮಟ್ಟದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಆಧುನಿಕ ತಂತ್ರಜ್ಞಾನದ ಶಸ್ತ್ರಚಿಕಿತ್ಸೆಯ ನೇರಪ್ರಸಾರ ಮಾಡಿದ್ದು ಇದೇ ಮೊದಲು. ಖ್ಯಾತ ಸ್ತ್ರೀರೋಗ ತಜ್ಞ, ಬೆಂಗಳೂರಿನ ಡಾ.ಚಂದ್ರಶೇಖರ್‌ ನೇತೃತ್ವದ ತಂಡವು ಸ್ತ್ರೀರೋಗಕ್ಕೆ ಸಂಬಂಧಿಸಿದ ವಿವಿಧ ಐದು ಶಸ್ತ್ರಚಿಕತ್ಸೆಗಳನ್ನು ನಡೆಸಿತು.ರಾಜ್ಯದ ವಿವಿಧ ಭಾಗಗಳಲ್ಲಿ 150 ಮಂದಿ ತಜ್ಞ ವೈದ್ಯರು ಇದನ್ನು ವೀಕ್ಷಿಸಿದರು. ಶಸ್ತ್ರಕ್ರಿಯೆಗೆ ಸಂಬಂಧಿಸಿದಂತೆ ಆನ್‌ಲೈನ್‌ನಲ್ಲಿ ಸಂವಾದವೂ ನಡೆಯಿತು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ರೇಣುಕಾ ದೇವಿ ಅವರು, ‘ಬೆಂಗಳೂರು, ಮೈಸೂರಿನಂತಹ ಆಸ್ಪತ್ರೆಗಳಲ್ಲಿ, ವೈದ್ಯಕೀಯ ಕಾಲೇಜುಗಳಲ್ಲಿ ಇಂತಹ ಶಸ್ತ್ರಕ್ರಿಯೆ ನೇರಪ್ರಸಾರ ನಡೆಯುತ್ತದೆ. ಹೋಬಳಿ ಮಟ್ಟದ ಆಸ್ಪತ್ರೆಯಲ್ಲಿ ನಡೆದಿರುವುದು ಇದೇ ಮೊದಲು. ಡಾ.ಚಂದ್ರಶೇಖರ್‌ ಹಾಗೂ ಇತರ ವೈದ್ಯರ ತಂಡದಿಂದ ಇದು ಸಾಧ್ಯವಾಗಿದೆ. ಐವರು ಮಹಿಳೆಯರಿಗೆ ಯಶಸ್ವಿಯಾಗಿ ಆಧುನಿಕ ತಂತ್ರಜ್ಞಾನದಲ್ಲಿ ಶಸ್ತ್ರಕ್ರಿಯೆ ನಡೆಸಲಾಗಿದೆ’ ಎಂದು ಹೇಳಿದರು.

‘ಹೆರಿಗೆಯ ನಂತರ ಮಹಿಳೆಯರು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ.ಗರ್ಭಕೋಶ, ಜನನಾಂಗ, ಕಿಡ್ನಿ ಸೇರಿದಂತೆ ವಿವಿಧ ಅಂಗಗಳಿಗೆ ಸಂಬಂಧಿಸಿದ ಸಮಸ್ಯೆಗಳು ಅವರನ್ನು ಕಾಡುತ್ತಿರುತ್ತವೆ. ಆದರೆ, ಅವರು ಅದನ್ನು ಹೇಳಿಕೊಳ್ಳುವುದಿಲ್ಲ. ಕೆಲವರಿಗೆ ಮುಜುಗರವಾದರೆ, ಇನ್ನೂ ಕೆಲವರಿಗೆ ಚಿಕಿತ್ಸೆಗೆ ದುಡ್ಡು ಇರುವುದಿಲ್ಲ. ನಾವು ಒಂದು ತಿಂಗಳಿಂದ ಮಹಿಳೆಯರನ್ನು ಸಂಪರ್ಕಿಸಿ, ಶಸ್ತ್ರಚಿಕಿತ್ಸೆಗೆ ಮನವೊಲಿಸಿದ್ದೆವು. ಮೊದಲೆಲ್ಲ ಗರ್ಭಕೋಶಕ್ಕೆ ಸಂಬಂಧಿದ ಚಿಕಿತ್ಸೆಗಾಗಿ ಹೊಟ್ಟೆಯನ್ನು ಕುಯ್ಯಬೇಕಿತ್ತು. ಈಗ ಆಧುನಿಕ ತಂತ್ರಜ್ಞಾನದಲ್ಲಿ ಅದರ ಅಗತ್ಯವಿಲ್ಲ. ಹೊಟ್ಟೆಗೆ ಸಾಧನವನ್ನು ಕಳುಹಿಸಿ ಚಿಕಿತ್ಸೆ ನಡೆಸಬಹುದು. ಖಾಸಗಿ ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆ ದುಬಾರಿ. ನಮ್ಮ ಆಸ್ಪತ್ರೆಯಲ್ಲಿ ಅಂತಹ ಸೌಲಭ್ಯಗಳಿವೆ. ತಜ್ಞ ವೈದ್ಯರು ಹೊರಗಡೆಯಿಂದ ಬಂದು ಚಿಕಿತ್ಸೆ ಮಾಡುತ್ತಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

‘ಡಾ.ಚಂದ್ರಶೇಖರ್, ಡಾ.ಲಕ್ಷ್ಮಿ, ಡಾ.ಮಧುರ, ಡಾ.ಪ್ರದೀಪ್, ಡಾ. ಶ್ರೀಧರ್, ಡಾ.ಮಹೇಶ್, ಡಾ.ದೇವರಾಜು ಸೇರಿದಂತೆ ಹಲವು ವೈದ್ಯರು ಈ ಕಾರ್ಯದಲ್ಲಿ ಭಾಗಿಯಾಗಿ ನೇರ ಪ್ರಸಾರ ಕಾರ್ಯಾಗಾರವನ್ನು ಯಶಸ್ವಿಗೊಳಿಸಿದ್ದಾರೆ’ ಎಂದು ಡಾ.ರೇಣುಕಾದೇವಿ ಅವರು ಹೇಳಿದರು.

‘ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಹೆಚ್ಚು ಆಸಕ್ತಿ ವಹಿಸಿ ಈ ನೇರಪ್ರಸಾರ ಕಾರ್ಯಾಗಾರ ಏರ್ಪಡಿಸಿದ್ದರು. ಹೋಬಳಿ ಮಟ್ಟದಲ್ಲಿ ಇಂತಹ ಪ್ರಯತ್ನ ರಾಜ್ಯದಲ್ಲೇ ಮೊದಲು. ಇಲಾಖೆಯಿಂದ ಅವರಿಗೆ ಬೇಕಾದ ಎಲ್ಲ ನೆರವು ನೀಡಿದ್ದೇವೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಹಿಳೆಯರು ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಬೇಕು’
ಸಂತೇಮರಹಳ್ಳಿ: ನೇರಪ್ರಸಾರ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಎಂ.ಸಿ.ರವಿ ಅವರು, ‘ಮಹಿಳೆಯರಿಗೆ ಕಾಡುವ ಗರ್ಭಕೋಶ, ಜನನಾಂಗ ಮತ್ತು ಮೂತ್ರ ಕೋಶಗಳಲ್ಲಿ ಕಂಡು ಬರುವ ಅನೇಕ ಸಮಸ್ಯೆಗಳಿಗೆ ನೂತನ ತಂತ್ರಜ್ಞಾನದ ಮೂಲಕ ಶಸ್ತ್ರ ಚಿಕಿತ್ಸೆಗೆ ಒಳಪಡಿಸಿ ಮಹಿಳೆಯರ ಸಮಸ್ಯೆ ಬಗೆ ಹರಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮದಿಂದ ಬಡ ಜನರಿಗೆ ಈ ಯೋಜನೆಯನ್ನು ತಲುಪಿಸಲು ಅನುಕೂಲವಾಗಿದೆ. ಪಟ್ಟಣ ಪ್ರದೇಶ ಮತ್ತು ದೊಡ್ಡ ಆಸ್ಪತ್ರೆಗಳಲ್ಲಿ ಮಾತ್ರ ಈ ಚಿಕಿತ್ಸೆ ಲಭ್ಯವಿದ್ದು, ಗ್ರಾಮೀಣ ಜನರು ಈ ಚಿಕಿತ್ಸೆಯಿಂದ ದೂರ ಇದ್ದಾರೆ. ಇದೀಗ ಗ್ರಾಮೀಣ ಪ್ರದೇಶದ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶಸ್ತ್ರ ಚಿಕಿತ್ಸೆ ಲಭ್ಯವಿದೆ. ಮಹಿಳೆಯರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ಆಡಳಿತ ವೈದ್ಯಾಧಿಕಾರಿ ಡಾ.ರೇಣುಕಾದೇವಿ ಮಾತನಾಡಿ, ‘ಮಹಿಳೆಯರನ್ನು ಕಾಡುವ ಅನೇಕ ತೊಂದರೆಗಳಿಗೆ ಶಸ್ತ್ರ ಚಿಕಿತ್ಸೆ ಮೂಲಕ ಶಾಶ್ವತ ಪರಿಹಾರ ನೀಡಲಾಗುತ್ತದೆ. ಈ ಕಾರ್ಯಾಗಾರಕ್ಕೆ ವಿವಿಧ ಆಸ್ಪತ್ರೆಗಳಿಂದ ಪ್ರಸೂತಿ ತಜ್ಞರು ಶಸ್ತ್ರ ಚಿಕಿತ್ಸೆಯಲ್ಲಿ ಭಾಗಿಯಾಗಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT