ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಮಳೆ ಎದುರಿಸಲು ಸಜ್ಜಾಗದ ನಗರ, ಪಟ್ಟಣ

Published 3 ಜೂನ್ 2023, 22:30 IST
Last Updated 3 ಜೂನ್ 2023, 22:30 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಮುಂಗಾರು ಪೂರ್ವ ಅವಧಿ ಮುಕ್ತಾಯಗೊಂಡು ಮುಂಗಾರು ಆರಂಭವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮಳೆ ಕಡಿಮೆಯಾಗಿದ್ದರೂ, ಮುಂಗಾರು ಪೂರ್ವ ಅವಧಿಯಲ್ಲಿ ತಕ್ಕ ಮಟ್ಟಿಗೆ ವರ್ಷಧಾರೆಯಾಗಿದೆ. ಪೂರ್ಣ ಪ‍್ರಮಾಣದ ಮಳೆಗಾಲ ಇನ್ನು ಶುರುವಾಗಬೇಕಿದೆ. ಆದರೆ. ಜಿಲ್ಲೆಯ ಐದು ನಗರ ಸ್ಥಳೀಯ ಸಂಸ್ಥೆಗಳು ಮಳೆಯನ್ನು ಎದುರಿಸಲು ಸಜ್ಜಾಗಿಲ್ಲ. 

ರಾಜಕಾಲುವೆ, ಚರಂಡಿಗಳಲ್ಲಿ ಹೂಳು, ಗಿಡಗಂಟಿಗಳು, ಪ್ಲಾಸ್ಟಿಕ್‌ ತ್ಯಾಜ್ಯಗಳು ತುಂಬಿದ್ದು ನೀರಿನ ಸರಾಗ ಹರಿವಿಗೆ ತಡೆ ಒಡ್ಡುತ್ತಿವೆ. ಯಳಂದೂರು ಬಿಟ್ಟು ಉಳಿದ ಕಡೆಗಳಲ್ಲಿ ರಾಜಕಾಲುವೆ, ಚರಂಡಿಗಳನ್ನು ಸ್ವಚ್ಛಗೊಳಿಸುವ ಕೆಲಸ ನಡೆದಿಲ್ಲ. ಯಳಂದೂರಿನಲ್ಲೂ ಈಗಷ್ಟೆ ಕೆಲಸ ಶುರುವಾಗಿದೆ.  ಚುನಾವಣೆ ಇದ್ದುದರಿಂದ ಚರಂಡಿ ಸ್ವಚ್ಛತಾ ಕೆಲಸಗಳು ವಿಳಂಬವಾಗಿವೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡುತ್ತಿದ್ದಾರೆ. 

ಜಿಲ್ಲಾ ಕೇಂದ್ರದಲ್ಲಿ ರಾಚಯ್ಯ ಜೋಡಿ ರಸ್ತೆಯಲ್ಲಿ ಐದು ದಿನಗಳ ಹಿಂದೆ ಸುರಿದ ಮಳೆಗೆ ಅವಾಂತರ‌ ಸೃಷ್ಟಿಯಾಗಿತ್ತು. ಹಲವು ವರ್ಷಗಳಿಂದಳೂ ಇದೇ ಸಮಸ್ಯೆ ಇದ್ದು, ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿಲ್ಲ. 

ಚಾಮರಾಜನಗರದ ವ್ಯಾಪ್ತಿಯಲ್ಲಿರುವ ರಾಜಕಾಲುವೆಗಳು, ದೊಡ್ಡ ಚರಂಡಿಗಳು ಸ್ವಚ್ಛವಾಗಿಲ್ಲ. ಬಡಾವಣೆಯ ಚರಂಡಿಗಳಲ್ಲೂ ಸರಾಗವಾಗಿ ನೀರು ಹರಿಯುತ್ತಿಲ್ಲ. ಸಣ್ಣ ಮಳೆ ಬಂದರೂ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗುತ್ತದೆ. ರಸ್ತೆಯಲ್ಲಿ ಹರಿಯುವ ನೀರು ಚರಂಡಿಗಳಿಗೆ ಹೋಗುತ್ತಿಲ್ಲ. 

ನಗರದಲ್ಲೂ ಚರಂಡಿ ಹಾಗೂ ಕಾಲುವೆಗಳು ಸ್ವಚ್ಛವಾಗಿಲ್ಲ 

ನಗರ ವ್ಯಾಪ್ತಿಯಲ್ಲಿ ತಿಂಗಳಿಂದ ಮಳೆಯಾಗುತ್ತಿದೆ. ಕಳೆದ ಬುಧವಾರ ತುರಿದ ಧಾರಾಕಾರ ಮಳೆಗೆ ನಗರದ ಡಾ.ರಾಜ್ ಕುಮಾರ್ ರಸ್ತೆ, ಡಾ.ಬಿ.ಆರ್ ಅಂಬೇಡ್ಕರ್ ರಸ್ತೆ ಜಲಾವೃತಗೊಂಡಿತ್ತು. ಇದರಿಂದ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ತೊಂದರೆ ಉಂಟಾಗಿತ್ತು. ನಂತರ ನಗರಸಭೆ ಅಧಿಕಾರಿಗಳು ಚರಂಡಿಯನ್ನು ಸ್ವಚ್ಛಗೊಳಿಸಿ ನೀರು ಹರಿಯುವುದಕ್ಕೆ ಅನುಕೂಲ ಮಾಡಿಕೊಟ್ಟರು. ಉಳಿದ ಕಡೆಗಳಲ್ಲಿ ಚರಂಡಿ ಸ್ವಚ್ಥತಾ ಕಾರ್ಯ ನಿಧಾನವಾಗಿದೆ.

ಮುಗಿಯದ ಸರ್ಕಟನ್‌ ಕಾಲುವೆ ಕಾಮಗಾರಿ

‘ಐದು ವರ್ಷ ಕಳೆದರೂ ಸರ್ಕಟನ್ ಕಾಲುವೆ ಕಾಮಗಾರಿ ಇನ್ನೂ ಮುಕ್ತಾಯವಾಗಿಲ್ಲ. ಆ ಕಾಲುವೆಯೂ ಸ್ವಚ್ಛವಾಗಿಲ್ಲ. ಕಳೆದ ಮಳೆಗಾಲದಲ್ಲಿ ಕಾಲುವೆಯ ಸಮೀಪದ ಬಡಾವಣೆಗಳು ಜಲಾವೃತಗೊಂಡಿತ್ತು. ಈ ವರ್ಷವೂ ಅದೇ ರೀತಿ ಆಗಲಿದೆ’ ಎಂದು ಹೇಳುತ್ತಾರೆ ಸಾರ್ವಜನಿಕರು. 

ಜನರ ಸಂಚಾರಕ್ಕೆ ತೊಂದರೆ

ಗುಂಡ್ಲುಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಸಣ್ಣ ಮಳೆಯಾದರೂ ರಸ್ತೆಗಳಲ್ಲಿ ನೀರು ನಿಂತು ಸಮಸ್ಯೆ ಸೃಷ್ಟಿಯಾಗುತ್ತದೆ. ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ, ಮಡಹಳ್ಳಿ ವೃತ್ತ, ಊಟಿ ಚೆಕ್‌ಪೋಸ್ಟ್‌ ವೃತ್ತದಲ್ಲಿ  ಸಂಚಾರಕ್ಕೆ ತೊಂದರೆಯಾಗುತ್ತದೆ. ಪಟ್ಟಣದಿಂದ ಮಡಹಳ್ಳಿಗೆ ಹೋಗುವ ರಸ್ತೆ ಏರು ಮುಖವಾಗಿರುವುದರಿಂದ ಮಡಹಳ್ಳಿ ಸುತ್ತಮುತ್ತಲಿನ ನೀರು ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಸೇರುತ್ತದೆ. ಇದರಿಂದಾಗಿ ಈ ಮಾರ್ಗವಾಗಿ ಸಂಚಾರ ಮಾಡುವ ಶಾಲಾ ಕಾಲೇಜು ಮಕ್ಕಳಿಗೆ ಸೇರಿದಂತೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. 

ರಸ್ತೆಯಲ್ಲೇ ನೀರು

ಹನೂರು ಪಟ್ಟಣದಲ್ಲಿ ಮಳೆಯಾದರೆ ಚರಂಡಿಗಳೆಲ್ಲಾ ತುಂಬಿ ರಸ್ತೆ ಮೇಲೆ ಹರಿಯುವುದು ಒಂದೆಡೆಯಾದರೆ ರಸ್ತೆಯೆ ಮೇಲೆ ಮಳೆ ನೀರು ನಿಂತು ವಾಹನ ಸವಾರರು ಪರದಾಡುವುದು  ಸಾಮಾನ್ಯವಾಗಿದೆ. 

ಪಟ್ಟಣದ ಮುಖ್ಯ ರಸ್ತೆ ಹಾಗೂ ಬಡಾವಣೆಯಲ್ಲಿರುವ ಚರಂಡಿಗಳಲ್ಲಿ ಹೂಳು ತುಂಬಿದೆ. ಮಳೆಗಾಲದ ಸಂದರ್ಭದಲ್ಲಿ ಮಳೆನೀರು ಚರಂಡಿಗೆ ನುಗ್ಗುವುದರಿಂದ ಚರಂಡಿಯೊಳಗಿರುವ ಹೂಳು ಕೂಡ ರಸ್ತೆ ಬರುವುದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ಸಂಚರಿಸುವುದೇ ಕಷ್ಟವಾಗಿದೆ.

ಬಡಾವಣೆ ರಸ್ತೆಗಳೆಲ್ಲ ಕಿತ್ತು ಬಂದಿದ್ದು, ಮಳೆ ಬಂದರೆ ರಸ್ತೆಯಲ್ಲಿ ನೀರು ನಿಂತು ಕೆಸರುಗದ್ದೆಯಂತಾಗುತ್ತದೆ. ಈ ಬಗ್ಗೆ ಅಧಿಕಾರಿಗಳಿಗೆ ಗೊತ್ತಿದ್ದರೂ ಸುಮ್ಮನಿದ್ದಾರೆ ಎಂಬುದು ನಿವಾಸಿಗಳ ಆರೋಪ. 

ರಾಜಕಾಲುವೆ ದುರಸ್ತಿ ಆರಂಭ

ಯಳಂದೂರು ಪಟ್ಟಣದ ಕೆಲವು ಭಾಗಗಳಲ್ಲಿ ರಾಜಕಾಲುವೆ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ಕೆಳ ಪಾತ್ರದ ವಾರ್ಡ್‌ಗಳಲ್ಲಿ ಚರಂಡಿಗೆ ಕೊಳಚೆ ನುಗ್ಗಿ ಹರಿಯುವ ಅವಾಂತರವನ್ನು ಸೃಷ್ಟಿಸುತ್ತಿದೆ. ಇದನ್ನು ಮನಗಂಡ ಪಂಚಾಯತಿ 11 ವಾರ್ಡ್‌ಗಳ  ವ್ಯಾಪ್ತಿಯಲ್ಲಿ ಮುಂಗಾರಿಗೂ ಮುನ್ನ ಸ್ವಚ್ಛತಾ ಕಾರ್ಯ ಆರಂಭಿಸಿದೆ. ಇದರಿಂದ ಬಳೆಪೇಟೆ ಮತ್ತು ಬಸ್ ನಿಲ್ದಾಣದ ಸುತ್ತಮುತ್ತಲ ಕಾಲುವೆಗಳಲ್ಲಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ನಿರ್ವಹಣೆ: ಸೂರ್ಯನಾರಾಯಣ ವಿ.

ಪೂರಕ ಮಾಹಿತಿ: ನಾ.ಮಂಜುನಾಥಸ್ವಾಮಿ, ಅವಿನ್‌ಪ್ರಕಾಶ್‌ ವಿ., ಮಲ್ಲೇಶ ಎಂ., ಬಿ.ಬಸವರಾಜು

ಚಾಮರಾಜನಗರ ಚೆನ್ನಿಪುರದಮೋಳೆಯ ಬಳಿ ಇರುವ ದೊಡ್ಡ ಚರಂಡಿಯಲ್ಲಿ ಕಳೆಗಿಡ ಹೂಳು ತುಂಬಿರುವುದು
ಚಾಮರಾಜನಗರ ಚೆನ್ನಿಪುರದಮೋಳೆಯ ಬಳಿ ಇರುವ ದೊಡ್ಡ ಚರಂಡಿಯಲ್ಲಿ ಕಳೆಗಿಡ ಹೂಳು ತುಂಬಿರುವುದು
ಚಾಮರಾಜನಗರ ಬಿ.ರಾಚಯ್ಯ ಜೋಡಿ ರಸ್ತೆಯ ಚರಂಡಿಯ ನೋಟ. ಸಾಧಾರಣ ಮಳೆ ಬಂದರೆ ಇದು ಉಕ್ಕಿ ರಸ್ತೆಗೆ ಕೊಳಚೆ ನೀರು ಹರಿಯುತ್ತದೆ
ಚಾಮರಾಜನಗರ ಬಿ.ರಾಚಯ್ಯ ಜೋಡಿ ರಸ್ತೆಯ ಚರಂಡಿಯ ನೋಟ. ಸಾಧಾರಣ ಮಳೆ ಬಂದರೆ ಇದು ಉಕ್ಕಿ ರಸ್ತೆಗೆ ಕೊಳಚೆ ನೀರು ಹರಿಯುತ್ತದೆ
ಗುಂಡ್ಲುಪೇಟೆಯ ರಾಷ್ಟ್ರೀಯ ಹೆದ್ದಾರಿ ಬದಿಯ ಚರಂಡಿಯ ಮೇಲಿನ ಕಾಂಕ್ರೀಟ್‌ ಕುಸಿದು ಬಿದ್ದು ಕಸ ತುಂಬಿರುವುದು
ಗುಂಡ್ಲುಪೇಟೆಯ ರಾಷ್ಟ್ರೀಯ ಹೆದ್ದಾರಿ ಬದಿಯ ಚರಂಡಿಯ ಮೇಲಿನ ಕಾಂಕ್ರೀಟ್‌ ಕುಸಿದು ಬಿದ್ದು ಕಸ ತುಂಬಿರುವುದು
ಯಳಂದೂರಿನಲ್ಲಿ ರಾಜಕಾಲುವೆಯನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿದೆ
ಯಳಂದೂರಿನಲ್ಲಿ ರಾಜಕಾಲುವೆಯನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿದೆ
ಕೊಳ್ಳೇಗಾಲದಲ್ಲಿ ಸಿಮೆಂಟ್‌ ಚರಂಡಿಯನ್ನು ಆವರಿಸಿರುವ ಕಳೆಗಿಡಗಳು
ಕೊಳ್ಳೇಗಾಲದಲ್ಲಿ ಸಿಮೆಂಟ್‌ ಚರಂಡಿಯನ್ನು ಆವರಿಸಿರುವ ಕಳೆಗಿಡಗಳು
ವಿನಯ್‌
ವಿನಯ್‌
ಅನಂತ ಪ್ರಸಾದ್‌‌
ಅನಂತ ಪ್ರಸಾದ್‌‌
ಮಹದೇವ ನಾಯ್ಕ
ಮಹದೇವ ನಾಯ್ಕ
ಶಶಿಕುಮಾರ್‌
ಶಶಿಕುಮಾರ್‌
ನವೀನ್‌ ಕುಮಾರ್‌
ನವೀನ್‌ ಕುಮಾರ್‌
ಎನ್‌.ರವಿಕೀರ್ತಿ
ಎನ್‌.ರವಿಕೀರ್ತಿ
ಎಚ್‌.ಎಂ.ಗಣೇಶ್‌ ಪ್ರಸಾದ್‌
ಎಚ್‌.ಎಂ.ಗಣೇಶ್‌ ಪ್ರಸಾದ್‌
ರಾಮದಾಸ್
ರಾಮದಾಸ್
ಎಂ. ರಾಜಣ್ಣ
ಎಂ. ರಾಜಣ್ಣ

Quote - ಚರಂಡಿ ಕಾಮಗಾರಿ ಕಳಪೆಯಾದ ಕಾರಣ ನೀರು ಚರಂಡಿಗೆ ಸೇರುವುದಿಲ್ಲ ಸಮಸ್ಯೆ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಎಚ್.ಎಂ.ಗಣೇಶ್ ಪ್ರಸಾದ್ ಗುಂಡ್ಲುಪೇಟೆ ಶಾಸಕ

Cut-off box - ಜನರು ಏನಂತಾರೆ? ಒತ್ತುವರಿ ತೆರವುಗೊಳಿಸಿ ಮಳೆಬಂದಾಗಲೆಲ್ಲ ಚಾಮರಾಜನಗರ ಜೋಡಿ ರಸ್ತೆಯಲ್ಲಿ ಅವಂತಾರ ಸೃಷ್ಟಿಸುವ ರಾಜಕಾಲುವೆ ಒತ್ತುವರಿಯಾಗಿದೆ. ಈ ರಾಜಕಾಲುವೆ ಕರಿವರದರಾಜನಬೆಟ್ಟದಿಂದ ದೊಡ್ಡರಾಯಪೇಟೆ ಕೆರೆಯವರೆಗೂ ಇದೆ. 33 ಅಡಿ ಅಗಲ ಇತ್ತು. ಈಗ ಅದು 10 ಅಡಿಯೂ ಇಲ್ಲ. ಕೆಲವು ಕಡೆಗಳಲ್ಲಿ ಪೂರ್ಣವಾಗಿ ಮುಚ್ಚಿಹೋಗಿದೆ. ಒತ್ತುವರಿ ತೆರವುಗೊಳಿಸುವಂತೆ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಎರಡು ಸ್ಥಳಗಳಿಗೆ ಜಿಲ್ಲಾಧಿಕಾರಿ ಹಾಗೂ ಭೂಮಾಪನ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು ಬಿಟ್ಟರೆ ಬೇರೇನೂ ಆಗಿಲ್ಲ. ರಾಜಕಾಲುವೆಯ ಒತ್ತುವರಿ ತೆರವುಗೊಳಿಸುವ ಕೆಲಸ ಆಗಬೇಕು. –ಸಿ.ಎಂ.ಕೃಷ್ಣಮೂರ್ತಿ ಚಾಮರಾಜನಗರ ಬದಲಾಗದ ಚಿತ್ರಣ ನಾವು ಮನೆ ಮುಂದೆ ಒಂದು ಹಳ್ಳ ತೋಡಿದರೆ ನಗರಸಭೆಯವರು ಇಲ್ಲದ್ದೆಲ್ಲ ಕಾನೂನು ಹೇಳುತ್ತಾರೆ. ಮಾನಸಿಕ ಕಿರುಕುಳ ನೋಡುತ್ತಾರೆ. ಜೋರಾಗಿ ಒಂದು ಮಳೆ ಬಂದರೆ ಸಾಕು ನಗರದ ಚರಂಡಿಗಳು ರಾಜಕಾಲುವೆಗಳು ಉಕ್ಕಿ ರಸ್ತೆಯಲ್ಲೇ ಹರಿಯುತ್ತವೆ. ಜನರು ಕಷ್ಟ ಪಡುತ್ತಿದ್ದರೆ ನಾವು ಆಯ್ಕೆ ಮಾಡಿದ ಜನಪ್ರತಿನಿಧಿಗಳು ಅಧಿಕಾರಿಗಳು ಮನೆಯಲ್ಲೋ ಅಥವಾ ಕಚೇರಿಯಲ್ಲಿ ಬೆಚ್ಚಗೆ ಇರುತ್ತಾರೆ. ನಾನು ಒಂದನೇ ಕ್ಲಾಸಿನಿಂದಲೂ ನೋಡಿಕೊಂಡು ಬರುತ್ತಿದ್ದೇನೆ. ಮಳೆ ಬಂದಾಗ ಚಾಮರಾಜನಗರದ ಜೋಡಿ ರಸ್ತೆಯ ಪರಿಸ್ಥಿತಿ ಅಂದು ಹೇಗಿತ್ತೋ 2023ರಲ್ಲೂ ಹಾಗೆಯೇ ಇದೆ. –ಅನಂತ ಪ್ರಸಾದ್‌ ಚಾಮರಾಜನಗರ   ಮಳೆ ಬಂದ ಮೇಲೆ ಶುರು! ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಎಂಬಂತೆ ನಮ್ಮ ನಗರಸಭೆಯವರು ಮಳೆಗಾಲಕ್ಕೂ ಮುನ್ನ ಚರಂಡಿ ಹಾಗೂ ಕಾಲುವೆಗಳನ್ನು ಸ್ವಚ್ಛ ಮಾಡುವುದನ್ನು ಬಿಟ್ಟು ಮಳೆ ಶುರುವಾದ ಮೇಲೆ ಮಾಡುತ್ತಾರೆ. ಇದರಿಂದ ಸಾರ್ವಜನಿಕರಿಗೆ ಹಾಗೂ ನಾಗರಿಕರಿಗೆ ತುಂಬಾ ತೊಂದರೆ ಉಂಟಾಗುತ್ತದೆ. –ವಿನಯ್ ಕೊಳ್ಳೇಗಾಲ ಕಾಲುವೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಪಟ್ಟಣದ ಮಹದೇಶ್ವರ ಚಿತ್ರಮಂದಿರದ ಸುತ್ತಲ ರಾಜಕಾಲುವೆ ಪ್ಲಾಸ್ಟಿಕ್ ಮತ್ತು ಹೂಳು ತುಂಬಿ ವಾಸನೆ ಬೀರುತ್ತಿದೆ. ಈ ಬಗ್ಗೆ ಪಂಚಾಯಿತಿಗೆ ದೂರು ಸಲ್ಲಿಸಿದರೂ ಸ್ವಚ್ಛಗೊಳಿಸಿಲ್ಲ. ಮಳೆ ಬಂದರೆ ಪ್ಲಾಸ್ಟಿಕ್ ತ್ಯಾಜ್ಯ ಮೇಲೆ ಬಂದು ಮನೆಗಳ ಒಳಗೆ ನುಗ್ಗುವ ಅಪಾಯ ಎದುರಾಗುತ್ತದೆ. ಸಾಂಕ್ರಾಮಿಕ ರೋಗಕ್ಕೆ ಕಾರಣವಾಗುತ್ತದೆ. ಈ ಬಗ್ಗೆ ಹೆಚ್ಚಿನ ಆದ್ಯತೆ ನೀಡಿ ಮಳೆಗಾಲಕ್ಕು ಮುನ್ನ ಸುಗಮವಾಗಿ ನೀರ ಹರಿಯಲು ವ್ಯವಸ್ಥೆ ಮಾಡಬೇಕು. – ಮಹಾದೇವ ನಾಯ್ಕ ಎಲೆಕೇರಿ ಬೀದಿ ಯಳಂದೂರು  ಸಮಸ್ಯೆ ಬಗೆಹರಿಸಿ ಹತ್ತಾರು ವರ್ಷಗಳಿಂದ ಮಳೆಯಾದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತಲೇ ಇದೆ. ಸರ್ಕಾರ ಬದಲಾದರೂ ಸಮಸ್ಯೆ ಬಗೆಹರಿದಿಲ್ಲ. ಈ ಮಳೆಗಾಲಕ್ಕಾದರೂ ಪಟ್ಟಣದ ಸಮಸ್ಯೆ ಬಗೆಹರಿಯಲಿ. – ಶಶಿಕುಮಾರ್ ಗುಂಡ್ಲುಪೇಟೆ ರಸ್ತೆ ಮೇಲೆಯೇ ನೀರು ಸಣ್ಣ ಮಳೆ ಬಂದರೂ ಚರಂಡಿಗಳೆಲ್ಲ ತುಂಬಿ ಹರಿಯುತ್ತವೆ. ಮಳೆ ನೀರಿನ ಜತೆಗೆ ಚರಂಡಿ ಹೂಳು ಕೂಡ ರಸ್ತೆ ಮೇಲೆಯೇ ಹರಿಯುತ್ತದೆ. –ನವೀನ್ ಕುಮಾರ್ ಹನೂರು

Cut-off box - ಅಧಿಕಾರಿಗಳು ಹೇಳುವುದೇನು? ಹೂಳು ತೆಗೆಯಲಾಗುವುದು ನಗರಸಭೆ ವ್ಯಾಪ್ತಿಯಲ್ಲಿರುವ ರಾಜಕಾಲುವೆ. ದೊಡ್ಡ ಚರಂಡಿಗಳಿಂದ ಹೂಳು ತೆಗೆಯಲು ಸಿದ್ಧತೆ ಮಾಡಿಕೊಂಡಿದ್ದೇವೆ. ಮಳೆ ನೀರು ನಿಲ್ಲುವ ತಗ್ಗು ಪ್ರದೇಶಗಳನ್ನು ಗುರುತಿಸಲಾಗಿದೆ. ಅಲ್ಲಿ ನೀರು ನಿಲ್ಲದಂತೆ ಕ್ರಮವಹಿಸಲಾಗುವುದು. ಜೋಡಿ ರಸ್ತೆಯಲ್ಲಿ ಹಾದುಹೋಗಿರುವ ರಾಜಕಾಲುವೆಗೆ ಅಡ್ಡಲಾಗಿ ಕಾವೇರಿ ನೀರಿನ ಪೈಪ್‌ ಹಾದು ಹೋಗಿದ್ದು ಮಳೆ ಬಂದಾಗ ಈ ಪೈಪ್‌ನಿಂದ ನೀರಿನ ಸರಾಗ ಹರಿವಿಗೆ ಧಕ್ಕೆಯಾಗುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ ಎಂದು ತಾಂತ್ರಿಕ ತಂಡದವರು ವರದಿ ನೀಡಿದ್ದಾರೆ. ಆ ಪೈಪ್‌ ತೆರವುಗಳಿಸಿದರೆ ಸಮಸ್ಯೆ ಉಂಟಾಗದು. ಇದಕ್ಕಾಗಿ ₹10.20 ಲಕ್ಷ ವೆಚ್ಚದ ಯೋಜನೆ ರೂಪಿಸಲಾಗಿದೆ. ಶಾಸಕರು ಹಾಗೂ ಜಿಲ್ಲಾಧಿಕಾರಿ ಕೂಡ ಬೇಗ ಪೈಪ್‌ ತೆರವುಗೊಳಿಸುವಂತೆ ಸೂಚಿಸಿದ್ದಾರೆ. ಶೀಘ್ರದಲ್ಲಿ ಪೈಪ್‌ ತೆರವುಗೊಳಿಸಲಾಗುವುದು –ಎಸ್‌.ವಿ.ರಾಮದಾಸ್‌ ಚಾಮರಾಜನಗರ ನಗರಸಭೆ ಆಯುಕ್ತ ಸ್ವಚ್ಛತಾ ಕಾರ್ಯ ಪ್ರಗತಿಯಲ್ಲಿ... ಒಂದು ವಾರದಿಂದ ನಗರಸಭೆಯ ವಾರ್ಡುಗಳನ್ನು ಸ್ವಚ್ಛತೆ ಮಾಡಲು ಮುಂದಾಗಿದ್ದೇವೆ. ಚರಂಡಿ ಸೇರಿದಂತೆ ಅನೇಕ ಗಿಡಗಂಟಿಗಳನ್ನು ತೆರವು ಮಾಡಲಾಗುತ್ತಿದೆ. ಮಳೆಗಾಲಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಂಡಿದ್ದೇವೆ. ಕೆಲವು ಚರಂಡಿಗಳ ಮೇಲೆ ಸ್ಪ್ಯಾಬ್ ಕಟ್ಟಿದ್ದಾರೆ ಅದನ್ನು ತೆರವು ಮಾಡಿದರೆ ಮಳೆ ನೀರು ಸರಗವಾಗಿ ಹರಿದು ಹೋಗುತ್ತದೆ ಹಾಗಾಗಿ ಸ್ಲ್ಯಾಚ್‌ಗಳನ್ನು ತೆರವು ಮಾಡಲು ಮುಂದಾಗಿದ್ದೇವೆ‌. –ರಾಜಣ್ಣ ಕೊಳ್ಳೇಗಾಲ ನಗರಸಭೆ ಆಯುಕ್ತ ಸ್ವಚ್ಛತೆ ಆರಂಭ ಹಲವು ವಾರ್ಡ್‌ಗಳ  ರಾಜಕಾಲುವೆಗಳನ್ನು ಸ್ವಚ್ಛ ಮಾಡಲಾಗುತ್ತಿದೆ. ಹೂಳು ತುಂಬಿ ನೀರಿನ ಹರಿವಿಗೆ ತಡೆಯಾಗಿದ್ದ ಪ್ರದೇಶಗಳಲ್ಲಿ ತ್ಯಾಜ್ಯವನ್ನು ಹೊರ ತೆಗೆದು ಸ್ವಚ್ಛಗೊಳಿಸುವ ಕೆಲಸ ಆರಂಭವಾಗಿದೆ. 11 ವಾರ್ಡ್‌ಗಳಲ್ಲಿ ಆದ್ಯತೆ ಮೇರೆಗೆ ಕೆಲಸ ನಿರ್ವಹಿಸಲಾಗುತ್ತಿದೆ. ಮಳೆಗಾಲ ಆರಂಭವಾಗುವುದಕ್ಕೂ ಮೊದಲು ನೈರ್ಮಲ್ಯ ಕಾಪಾಡುವುದಕ್ಕೆ ಆದ್ಯತೆ ನೀಡಲಾಗಿದೆ. –ಎನ್‌.ರವಿಕೀರ್ತಿ ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ ಯಳಂದೂರು ಮುಂಜಾಗ್ರತಾ ಕ್ರಮ ಈಗಾಗಲೇ ಪೂರ್ವಭಾವಿ ಸಭೆ ನಡೆಸಿ ಎಲ್ಲೆಲ್ಲಿ ಸಮಸ್ಯೆಗಳಿವೆ ಎಂದು ಪಟ್ಟಿ‌ ಮಾಡಲಾಗಿದೆ. ಮಳೆಗೂ ಮೊದಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು. –ಮಹೇಶ್ ಕುಮಾರ್ ಹನೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT