ಶುಕ್ರವಾರ, ಮಾರ್ಚ್ 5, 2021
29 °C
ಲಾಕ್‌ಡೌನ್‌ ಸಡಿಲಿಕೆ: ಮತ್ತೆ ವ್ಯಾಪಾರದ ನಿರೀಕ್ಷೆಯಲ್ಲಿ ಬಡಗಲಮೋಳೆ ಗ್ರಾಮಸ್ಥರು

ಚಾಮರಾಜನಗರ: ಪ್ಲಾಸ್ಟಿಕ್‌ ಹಗ್ಗ ತಯಾರಿಕೆ, ಮಾರಾಟಕ್ಕೂ ಕೋವಿಡ್‌ ಹೊಡೆತ

ಮಹದೇವ್‌ ಹೆಗ್ಗವಾಡಿಪುರ Updated:

ಅಕ್ಷರ ಗಾತ್ರ : | |

Prajavani

ಸಂತೇಮರಹಳ್ಳಿ: ಕೋವಿಡ್‌–19 ತಡೆಗೆ ಹೇರಲಾಗಿರುವ ಲಾಕ್‍ಡೌನ್ ಬಿಸಿ ಪ್ಲಾಸ್ಟಿಕ್ ಹಗ್ಗ ಮಾರಾಟಗಾರರಿಗೂ ತಟ್ಟಿದೆ. ಇದನ್ನೇ ನಂಬಿ ಬದುಕುತ್ತಿರುವ ಹೋಬಳಿಯ ಬಡಗಲಮೋಳೆ ಗ್ರಾಮದ ಕುಟುಂಬಗಳು ಕೂಲಿಗಾಗಿ ಬೀದಿಗೆ ಬಂದಿದ್ದರೂ, ಇವರಿಗೆ ಕೂಲಿ ಸಿಗದೇ ಬವಣೆ ಪಡುವಂತಾಗಿದೆ. 

ಗ್ರಾಮದಲ್ಲಿ 150 ಕುಟುಂಬಗಳಿವೆ. ಪ್ರತಿ ಕುಟುಂಬವೂ ಪ್ಲಾಸ್ಟಿಕ್ ಚೀಲದಿಂದ ಹಗ್ಗ ತಯಾರಿಸಿ ಸಂತೆಗಳು ಹಾಗೂ ಪಟ್ಟಣ ಪ್ರದೇಶಗಳಲ್ಲಿ ಹಗ್ಗಗಳನ್ನು ಮಾರಾಟ ಮಾಡಿ ಜೀವನ ಸಾ‌ಗಿಸುತ್ತಿತ್ತು. ಲಾಕ್‌ಡೌನ್‌ ಕಾರಣದಿಂದಾಗಿ ತಯಾರಿಸಿದ ಹಗ್ಗಗಳನ್ನು ಮಾರಾಟ ಮಾಡಲು ಸಾಧ್ಯವಾಗಿಲ್ಲ. ಮನೆಗಳಲ್ಲೇ ರಾಶಿ ಬಿದ್ದಿದೆ. ಬೇರೆ ಸಂಪಾದನೆ ಇಲ್ಲದೆ ಜೀವಜನ ನಡೆಸುವುದು ದುಸ್ತರವಾಗಿದೆ. 

ಈ ಗ್ರಾಮದಲ್ಲಿ ನೆಲೆಸಿರುವ ಕುಟುಂಬಗಳು ತಲತಲಾಂತರದಿಂದ ಹಗ್ಗ ತಯಾರಿಸುವುದನ್ನು ಕುಲಕಸುಬನ್ನಾಗಿಸಿವೆ. ಹಿಂದಿನ ಕಾಲದಲ್ಲಿ ಭೂತಾಳೆ ನಾರಿನಿಂದ ಹಗ್ಗ ತಯಾರಿಸುತ್ತಿದ್ದ ಕುಟುಂಬಗಳು ಕಾಲ ಮುಂದುವರಿದಂತೆ ಪ್ಲಾಸ್ಟಿಕ್ ಚೀಲದಿಂದ ಹಗ್ಗ ತಯಾರಿಸಲು ಆರಂಭಿಸಿದವು. ಮನೆಗಳು ಹಾಗೂ ಕಟ್ಟಡಗಳು ನಿರ್ಮಾಣವಾಗುವ ಸ್ಥಳಗಳಿಗೆ ಈ ಗ್ರಾಮಸ್ಥರು ಹೋಗಿ ಖಾಲಿಯಾದ ಸಿಮೆಂಟ್ ಚೀಲಗಳನ್ನು ₹2 ರಂತೆ ಖರೀದಿಸುತ್ತಾರೆ. ಅವುಗಳನ್ನು ಗ್ರಾಮಕ್ಕೆ ತಂದು ನೀರಿನಲ್ಲಿ ತೊಳೆದು ಮನೆ ಮಂದಿಯೆಲ್ಲಾ ಬಿಡಿಸಿ ರಾಟೆಯ ಮೂಲಕ ಹಗ್ಗ ತಯಾರಿಸುತ್ತಾರೆ.

ಸಣ್ಣ, ದಪ್ಪ ಹಗ್ಗ ಹಾಗೂ ವಿವಿಧ ಮಾದರಿಯಲ್ಲಿ ಹಗ್ಗಗಳನ್ನು ತಯಾರಿಸುತ್ತಾರೆ. ಇದರಲ್ಲಿ ಜಾನುವಾರುಗಳನ್ನು ಕಟ್ಟಲು, ಟ್ರ್ಯಾಕ್ಟರ್ ಹಾಗೂ ಲಾರಿಗಳಲ್ಲಿ ದೊಡ್ಡ ದೊಡ್ಡ ವಸ್ತುಗಳನ್ನು ಬಿಗಿದು ಕಟ್ಟಲು ಈ ಹಗ್ಗಗಳನ್ನು ಬಳಸುವುದುಂಟು. ಹಗ್ಗಗಳ ಉದ್ದ ಹಾಗೂ ದಪ್ಪದ ಆಧಾರದ ಮೇಲೆ ಬೆಲೆ ಕಟ್ಟಿ ಮಾರಾಟ ಮಾಡುತ್ತಾರೆ. ಜಿಲ್ಲೆಯಾದ್ಯಂತ ನಡೆಯುವ ಸಂತೆಗಳು ಹಾಗೂ ದೂರದ ಮೈಸೂರು, ಮಂಡ್ಯ, ಬೆಂಗಳೂರು, ಹಾಸನವರೆಗೂ ಮಾರಾಟ ಮಾಡಿ ಬರುತ್ತಾರೆ. ಒಬ್ಬ ವ್ಯಕ್ತಿ ಹಗ್ಗ ಮಾರಾಟದಿಂದ ₹3,000 ವರೆಗೆ ಸಂಪಾದಿಸುತ್ತಾರೆ. ಕೆಲವರು ಗ್ರಾಮಕ್ಕೇ ಬಂದು ಹಗ್ಗ ಖರೀದಿಸುತ್ತಾರೆ.

ಹಗ್ಗ ಮಾರಾಟ ಮಾಡುತ್ತಿದ್ದ ಇವರ ಕಸುಬಿಗೆ ಕೊರೊನಾ ಲಾಕ್‍ಡೌನ್ ಅಡ್ಡಗಾಲಾಗಿದೆ. ತಯಾರಾದ ಹಗ್ಗಳನ್ನು ಮನೆಯಲ್ಲಿ ಶೇಖರಿಸಿಡುವಂತಾಗಿದೆ. ಕೂಲಿಯಾದರೂ ಮಾಡಿ ಜೀವನ ಸಾಗಿಸಬೇಕು ಎಂಬ ಇವರ ಆಸೆಗೆ ಈ ಭಾಗದಲ್ಲಿ ಎಲ್ಲಿಯೂ ಕೂಲಿ ಕೆಲಸವೂ ಸಿಗುತ್ತಿಲ್ಲ.

ಜಿಲ್ಲೆಯಲ್ಲಿ ಲಾಕ್‌ಡೌನ್‌ ಬಹುತೇಕ ಸಡಿಲಿಕೆಯಾಗಿರುವುದರಿಂದ ವ್ಯಾಪಾರ ಆಗುವ ನಿರೀಕ್ಷೆಯಲ್ಲಿ ಗ್ರಾಮಸ್ಥರು ಇದ್ದಾರೆ. 

‘ಕಷ್ಟ ಕೇಳುವವರೇ ಇಲ್ಲ’

‘ಧವಸ ಧಾನ್ಯಗಳ ಖರೀದಿಗೂ ಇಲ್ಲಿನ ಜನರಿಗೆ ತೊಂದರೆಯಾಗಿದೆ. ಸಹಕಾರ ಸಂಘದಲ್ಲಿ ತಿಂಗಳ ಹಿಂದೆ ನೀಡಿದ್ದ ಪಡಿತರ ಮುಗಿದು ಹೋಗಿದೆ. ಸುತ್ತಲಿನ ಗ್ರಾಮಗಳಿಗೆ ಸಂಘ ಸಂಸ್ಥೆಯವರು ಆಹಾರದ ಕಿಟ್‍ಗಳನ್ನು ನೀಡಿದ್ದಾರೆ. ನಮ್ಮ ಗ್ರಾಮಕ್ಕೆ ಯಾರೂ ಬಂದಿಲ್ಲ. ನಮ್ಮ ಕಷ್ಟ ಕೇಳುವವರು ಯಾರೂ ಇಲ್ಲ’ ಎಂದು ನಿವಾಸಿ ಮಂಜುಳಾ ಅವರು ಅಳಲು ತೋಡಿಕೊಂಡರು. 

‘ಹಗ್ಗ ತಯಾರಿಸಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದೇವೆ. ಲಾಕ್‌ಡೌನ್‌ ಇದ್ದುದರಿಂದ ಬೇರೆಡೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಲು ಆಗಿಲ್ಲ. ಈ ಕಸುಬನ್ನೇ ನಂಬಿ ಬದುಕುತ್ತಿದ್ದೇವೆ. ನಮಗೆ ಬೇರೆ ಕೆಲಸ ಗೊತ್ತಿಲ್ಲ. ಆದ್ದರಿಂದ ನಮ್ಮ ಜೀವನಕ್ಕೆ ಜಿಲ್ಲಾಡಳಿತ ನೆರವು ನೀಡಬೇಕು’ ಎಂದು ಮಹೇಶ್‌ ಮನವಿ ಮಾಡಿದರು. 

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರು ಅವರು, ‘ಬಡಗಲಮೋಳೆ ಗ್ರಾಮಕ್ಕೆ ತೆರಳಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಗ್ರಾಮಸ್ಥರಿಗೆ ಕೆಲಸ ಕೊಡಲು ತಕ್ಷಣವೇ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದರು‌.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು