ಸೋಮವಾರ, ಮಾರ್ಚ್ 8, 2021
29 °C
ಲಾಕ್‌ಡೌನ್‌ ಪರಿಣಾಮ, ಮನೆಯಲ್ಲೇ ‌ರಾಶಿ ಬಿದ್ದಿವೆ ಮಣ್ಣಿನ ಪಾತ್ರೆಗಳು

ಸಂತೇಮರಹಳ್ಳಿ: ಕುಂಬಾರರ ಸಂಕಷ್ಟ ಕೇಳೋರಿಲ್ಲ

ಮಹದೇವ್‌ ಹೆಗ್ಗವಾಡಿಪುರ Updated:

ಅಕ್ಷರ ಗಾತ್ರ : | |

Prajavani

ಸಂತೇಮರಹಳ್ಳಿ: ಕೋವಿಡ್‌–19 ತಡೆಗೆ ಜಾರಿಗೊಳಿಸಲಾದ ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೀಡಾದವರಲ್ಲಿ ಕುಂಬಾರರು ಸೇರಿದ್ದಾರೆ.

ಕುಂಬಾರಿಕೆಯನ್ನೇ ನಂಬಿ ಜೀವನ ನಡೆಸುತ್ತಿರುವ ಜಿಲ್ಲೆಯ ನೂರಾರು ಕುಟುಂಬಗಳು ಜೀವನ ನಿರ್ವಹಿಸಲು ಪರದಾಡುತ್ತಿವೆ. ಈಗ ಜಿಲ್ಲೆಯಲ್ಲಿ ಲಾಕ್‌ಡೌನ್‌ ಬಹುತೇಕ   ಸಡಿಲಗೊಂಡಿರುವುದರಿಂದ ವ್ಯಾಪಾರವಾಗುವ ನಿರೀಕ್ಷೆಯಲ್ಲಿ ಅವರಿದ್ದಾರೆ. 

ಸಂತೇಮರಹಳ್ಳಿ ಹೋಬಳಿಯ ಕಣ್ಣೇಗಾಲ ಗ್ರಾಮದ ಕುಂಬಾರರ ಬೀದಿಯಲ್ಲಿ ಕುಂಬಾರಿಕೆಯನ್ನೇ ನೆಚ್ಚಿಕೊಂಡಿರುವ 20 ಕುಟುಂಬಗಳಿವೆ. ಲಾಕ್‌ಡೌನ್‌ ಜಾರಿಯಾದ ನಂತರ ಕುಂಬಾರ ಬೀದಿಗೆ ಮಡಕೆ ಖರೀದಿಸುವವರು ಯಾರೂ ಸುಳಿದಿಲ್ಲ. ತಯಾರಿಸಿದ್ದಮಡಕೆ ಕುಡಿಕೆಗಳು ಮನೆಯೊಳಗೆ ರಾಶಿ ಬಿದ್ದಿವೆ.

ಮುಂಜಾನೆ ಎದ್ದು ಖಾಸಗಿ ಜಮೀನುಗಳಲ್ಲಿ ಒಂದು ಟನ್ ಮಣ್ಣಿಗೆ ₹500 ಕೊಟ್ಟು ಮನೆಗೆ ತಂದು ಮಡಕೆ ತಯಾರಿಸುತ್ತಾರೆ. ಹೆಚ್ಚಾಗಿ ಮಡಕೆ, ಹರವಿ, ದನ ಕರುಗಳಿಗೆ ನೀರು ಕುಡಿಸಲು ಕಲಗಚ್ಚು, ಒಲೆಗಳು, ಗುಂಭಗಳು ಹೀಗೆ ವಿವಿಧ ಆಕಾರದ ಮಣ್ಣಿನ ಪಾತ್ರೆಗಳನ್ನು ತಯಾರಿಸಿ ಮಾರಾಟ ಮಾಡುವ ಕೆಲಸವನ್ನು ತಲತಲಾಂತರದಿಂದ ಮಾಡುತ್ತಾ ಬಂದಿದ್ದಾರೆ. 

‘ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ನೀರು ತುಂಬಿಡುವ ಮಣ್ಣಿನ ಪಾತ್ರೆಗಳಿಗೆ ಹೆಚ್ಚು ಬೇಡಿಕೆ ಇರುತ್ತದೆ. ಈ ಬಾರಿ ಲಾಕ್‌ಡೌನ್‌ ಕಾರಣಕ್ಕೆ ಇಡೀ ಜಿಲ್ಲೆಯಲ್ಲೆ ಎಲ್ಲ ಚಟುವಟಿಕೆಗಳು ಸ್ಥಗಿತಗೊಂಡಿದ್ದರಿಂದ, ಖರೀದಿಸಲು ಯಾರೂ ಬಂದಿಲ್ಲ. ವ್ಯಾಪಾರ ಇಲ್ಲದೆ ಹಣಕಾಸಿಗೆ ತೊಂದರೆಯಾಗಿದೆ’ ಎಂದು ಕುಂಬಾರ ಬೀದಿಯ ಮಲ್ಲಮ್ಮ ಅವರು ‘ಪ್ರಜಾವಾಣಿ’ ಮುಂದೆ ಅಳಲು ತೋಡಿಕೊಂಡರು. 

ಈ ಭಾಗಗಳಲ್ಲಿ ಹಬ್ಬ ಹರಿ ದಿನಗಳಿಗೆ ಹೆಚ್ಚಾಗಿ ಮಡಕೆ ಹಾಗೂ ಹರವಿಗಳನ್ನು ಬಳಸುವುದುಂಟು. ಏಪ್ರಿಲ್, ಮೇ ತಿಂಗಳಲ್ಲಿ ಮದುವೆ, ಗೃಹಪ್ರವೇಶಗಳು ಹೆಚ್ಚು ನಡೆಯುವುದರಿಂದ ಮಣ್ಣಿನ ಹರವಿಗಳಿಗೆ ಬೇಡಿಕೆ ಇರುತ್ತದೆ. ಈಗ ಕಾರ್ಯಕ್ರಮಗಳು ನಡೆಯದ ಕಾರಣ ಖರೀದಿಸುವವರು ಇಲ್ಲದಂತಾಗಿದೆ.

‘ಗೌರಿ-ಗಣೇಶ ಹಬ್ಬ ಹಾಗೂ ಮಾರಿ ಹಬ್ಬಗಳಿಗೆ ಈಗಿನಿಂದಲೇ ಅಗತ್ಯವಿರುವ ಮಡಕೆಗಳನ್ನು ಸಿದ್ಧಪಡಿಸಿ ಇಡಲಾಗುತ್ತಿತ್ತು. ಆದರೆ, ಲಾಕ್‌ಡೌನ್‌ನಿಂದಾಗಿ ತಯಾರಿಸಿಟ್ಟಿರುವ ಮಡಕೆಗಳೇ ದೂಳು ತಿನ್ನುತ್ತಿವೆ. ಇದರಿಂದ ಮುಂದಿನ ದಿನಗಳಿಗೆ ಕುಂಬಾರಿಕೆ ಮಾಡಲು ಆಗುತ್ತಿಲ್ಲ. ಜತೆಗೆ ಮಣ್ಣು ಖರೀದಿಸಲು ಆಗುತ್ತಿಲ್ಲ ಎಂದು ಗ್ರಾಮದ ಬಡಾವಣೆಯ ನಿವಾಸಿಗಳು ಹೇಳುತ್ತಾರೆ.

ಕಷ್ಟಕ್ಕೆ ನೆರವಾಗಿ

ಗ್ರಾಹಕರು ಕುಂಬಾರರ ಮನೆಗಳಿಗೇ ಬಂದು ಮಡಕೆ–ಕುಡಿಕೆಗಳನ್ನು  ಖರೀದಿಸುತ್ತಿದ್ದರು. ಪ್ರತಿದಿನ ₹500ರವರೆಗೂ ಸಂಪಾದನೆ ಮಾಡುತ್ತಿದ್ದರು. ಇನ್ನೂ ಕೆಲವು ಕುಟುಂಬದವರು ಸಂತೆಗಳು ಹಾಗೂ ಜನಸಂದಣಿ ಇರುವ ಸ್ಥಳಗಳಿಗೆ ತೆರಳಿ ಅಲ್ಲಿ ವ್ಯಾಪಾರ ಮಾಡಿ ಬರುತ್ತಿದ್ದರು. ಇದೀಗ ಯಾವುದಕ್ಕೂ ಅವಕಾಶವಿಲ್ಲದೇ ಮುಂದಿನ ದಿನಗಳು ಹೀಗೆ ಮುಂದುವರಿದರೇ ಏನು ಮಾಡುವುದು ಎಂಬ ಚಿಂತೆ ಇವರನ್ನು ಕಾಡುತ್ತಿದೆ.

‘ಗ್ರಾಮದ ಈ ಜನಗಳಿಗೆ ಉತ್ತಮವಾದ ಮನೆಗಳ ವ್ಯವಸ್ಥೆಯೂ ಇಲ್ಲ. ಹೆಚ್ಚಾಗಿ ಗುಡಿಸಿಲಿನಲ್ಲಿ ವಾಸ ಮಾಡುತ್ತಿದ್ದಾರೆ. ಕುಲ ಕಸುಬು ಕುಂಬಾರಿಕೆ ಬಿಟ್ಟು ಬೇರೆ ಕೆಲಸಗಳಿಗೆ ತೊಡಗಿಸಿಕೊಂಡು ಅಭ್ಯಾಸವಿಲ್ಲ. ಜೀವನ ನಿರ್ವಹಣೆಯಲ್ಲಿ ಇವರಿಗೆ ಕೂಲಿಯು ಸಿಗುತ್ತಿಲ್ಲ. ಅನ್ನಬಾಗ್ಯ ಯೋಜನೆಯೇ ಆಧಾರವಾಗಿದೆ. ಎಲ್ಲಿಯವರೆಗೆ ಇದನ್ನೇ ನಂಬಿಕೊಳ್ಳಲು ಸಾಧ್ಯ’ ಎಂದು ಶಿವಯ್ಯ ಶೆಟ್ಟಿ ನೊಂದು ಹೇಳುತ್ತಾರೆ.

‘ನಮ್ಮ ಸಮಸ್ಯೆಗಳ ಬಗ್ಗೆ ಯಾರೂ ಗಮನ ಹರಿಸಿಲ್ಲ. ಸರ್ಕಾರ ಬೇರೆ ಸಮುದಾಯದವರಿಗೆ ವಿಶೇಷ ಪ್ಯಾಕೇಜ್‌ ಮಾಡಿದೆ. ಇದನ್ನೇ ನಂಬಿ ಬದುಕುತ್ತಿರುವ ನಮ್ಮನ್ನು ಕಡೆಗಣಿಸಿದೆ. ಪ್ರತಿದಿನ ಜೀವನ ನಡೆಸುವುದು ಕಷ್ಟವಾಗಿದೆ. ಜಿಲ್ಲಾಡಳಿತದವರು ಗ್ರಾಮಕ್ಕೆ ಬಂದು ನಮಗೆ ಏನಾದರೂ ಪರಿಹಾರ ಒದಗಿಸಿಕೊಡಬೇಕು’ ಎಂದು ಮಲ್ಲಣ್ಣ ಮನವಿ ಮಾಡಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು