ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷ ತೊಡಕು: ಮಾಂಸ ಖರೀದಿ ಭರಾಟೆ

ಚಾಮರಾಜನಗರ: ರಸ್ತೆಗಳೆಲ್ಲ ಖಾಲಿ ಖಾಲಿ, ಪೊಲೀಸರಿಂದ ಗಸ್ತು ಅನಗತ್ಯ ಓಡಾಟಕ್ಕೆ ಕಡಿವಾಣ
Last Updated 26 ಮಾರ್ಚ್ 2020, 15:31 IST
ಅಕ್ಷರ ಗಾತ್ರ

ಚಾಮರಾಜನಗರ: ದೇಶದಾದ್ಯಂತ ಹೇರಲಾಗಿರುವ ದಿಗ್ಬಂಧನದ ಎರಡನೇ ದಿನ ಜಿಲ್ಲೆಯಲ್ಲಿ ಜನರು ಯುಗಾದಿಯ ಮರುದಿನ ಆಚರಿಸಲಾಗುವ ವರ್ಷ ತೊಡಕಿಗಾಗಿ ಮಾಂಸ ಖರೀದಿ ಭರಾಟೆ ಜೋರಾಗಿತ್ತು.

ಬೆಳಿಗ್ಗೆ 6ರಿಂದ 10 ಗಂಟೆವರೆಗೆ ಚಾಮರಾಜನಗರದಲ್ಲಿ ಎಲ್ಲ ಅಗತ್ಯ ವಸ್ತುಗಳ ಅಂಗಡಿಗಳು ತೆರೆದಿದ್ದವು. ಮಾಂಸದ ಅಂಗಡಿ, ದಿನಸಿ ಅಂಗಡಿಗಳು, ತರಕಾರಿ ಅಂಗಡಿಗಳಲ್ಲಿ ಜನ ಸಂದಣಿ ಕಂಡು ಬಂತು. ಬಹುತೇಕ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡಿರಲಿಲ್ಲ.

ಕೆಲವು ಔಷಧಿ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕಾಗಿ ಅಂಗಡಿ ಎದುರು ಗುರುತು ಹಾಕಲಾಗಿತ್ತು. ಅದರಂತೆ ಜನರು ದೂರ ದೂರದಲ್ಲಿ ನಿಂತು ಅಗತ್ಯ ಔಷಧಿಗಳನ್ನು ಖರೀದಿಸಿದರು.

ಮೀನು, ಕೋಳಿ, ಆಡು ಕುರಿ ಮಾಂಸಗಳನ್ನು ಮಾರಾಟ ಮಾಡುತ್ತಿದ್ದ ಮಳಿಗೆಗಳ ಮುಂದೆ ಹೆಚ್ಚೆಚ್ಚು ಜನರು ಕಂಡು ಬಂದರು. ಹೊಸ ತೊಡಕು ಆಚರಣೆಗಾಗಿ ತುಂಬ ಹೊತ್ತು ಕಾದು ಕುಳಿತು ಮಾಂಸ ಕೊಂಡರು.

ಜಿಲ್ಲಾಡಳಿತ ಈ ಹಿಂದೆ ಹೊರಡಿಸಿದ್ದ ಆದೇಶದಂತೆ ಅಗತ್ಯ ಸೇವೆಗಳ ಅಂಗಡಿಗಳು ಬೆಳಿಗ್ಗೆ 10ರವರೆಗೆ ಸಂಜೆ 5ರಿಂದ 7ಗಂಟೆಯವರೆಗೆ ತೆರೆದಿದ್ದವು. ಆ ಸಮಯದ ನಂತರ ಪೊಲೀಸರು ಅಂಗಡಿಗಳನ್ನು ಮುಚ್ಚಿಸಿದರು. ಉಳಿದ ಹೊತ್ತಲ್ಲಿ ಹಾಲಿನ ಕೇಂದ್ರಗಳು ತೆರೆದಿದ್ದವು.

ಪೊಲೀಸರ ಗಸ್ತು

ಲಾಕ್‌ಡೌನ್‌ ಸಂದರ್ಭದಲ್ಲಿಯೂ ಅನಗತ್ಯವಾಗಿ ಓಡಾಡುತ್ತಿರುವವರನ್ನು ತಡೆಯುವುದಕ್ಕಾಗಿ ನಗರದದಾದ್ಯಂತ ಪೊಲೀಸರು ಗಸ್ತು ತಿರುಗುತ್ತಿದ್ದರು. ಬುಧವಾರ ಪೊಲೀಸ್‌ ಸಿಬ್ಬಂದಿ ಲಾಠಿ ರುಚಿ ತೋರಿಸಿದ್ದರಿಂದ ಗುರುವಾರ ಹೆಚ್ಚಿನ ಸಂಖ್ಯೆಯಲ್ಲಿ ಜನರು ರಸ್ತೆಗೆ ಇಳಿಯಲಿಲ್ಲ. ಎಲ್ಲವೂ ಖಾಲಿ ಖಾಲಿಯಾಗಿದ್ದವು.

ಕದ್ದು ಮುಚ್ಚಿ ಮಾಂಸ ಮಾರಾಟ

ಪೊಲೀಸರ ಕಟ್ಟೆಚ್ಚರದ ನಡುವೆಯೂಪಟ್ಟಣದ ಮಾಂಸದಂಗಡಿಗಳಲ್ಲಿ ವ್ಯಾಪಾರಿಗಳು, ಗ್ರಾಹಕರು ಕದ್ದು ಮುಚ್ಚಿ ವಹಿವಾಟು ನಡೆಸಿದರು.

ಯುಗಾದಿ ವರ್ಷ ತೊಡಕು ನಿಮಿತ್ತ ಬೆಳಿಗ್ಗೆಯೇ ಗ್ರಾಮೀಣ ಭಾಗಗಳಿಂದ ಪಟ್ಟಣದಲ್ಲಿ ಇರುವ ಕುರಿ,ಕೋಳಿ, ದನದ ಮಾಂಸದ ಅಂಗಡಿಗಳಿಗೆ ಗ್ರಾಹಕರು ಬಂದಿದ್ದರು. ಎರಡು ಅಡಿ ಅಂತರ ಮತ್ತು ನಿಯಮಗಳನ್ನು ಪಾಲನೆ ಮಾಡದೇ ಇದ್ದುದರಿಂದ ಪೊಲೀಸರು ಲಾಠಿ ಬೀಸಿದರು. ಬಳಿಕ ಅಂಗಡಿಗಳನ್ನು ಬಂದ್ ಮಾಡಿಸಿದರು. ಆದರೂ ಅಂಗಡಿಯವರು ಗ್ರಾಹಕರನ್ನು ಒಳಗೆ ಸೇರಿಸಿಕೊಂಡು ಮಾರಾಟ ಮಾಡಿದರು.

ಇಂತಹ ವಿಶೇಷ ದಿನಗಳಲ್ಲಿ ಚಿಕನ್‌ ಬೆಲೆ ಕೆಜಿಗೆ ₹500 ವರೆಗೂ ಹೋಗುತ್ತಿತ್ತು. ಈ ಭಾರಿ ₹100ರ ವರೆಗೆ ಇದೆ ಎಂದು ವ್ಯಾಪಾರಿಯೊಬ್ಬರು ತಿಳಿಸಿದರು.

ತರಕಾರಿ, ದಿನಸಿ, ಹಾಲು‌ ಮಾರಾಟದ ಸ್ಥಳಗಳಲ್ಲಿ ನಿಯಮ ಪಾಲನೆ ಆಯಿತು. ಪೊಲೀಸರು ಎರಡೆರಡು ಅಡಿಗೆ ಗುರುತು ಮಾಡಿನಿಲ್ಲುವಂತೆ ಸೂಚನೆ ನೀಡಿದ್ದರು. ಗ್ರಾಹಕರಿಗೆ ಮಾಲೀಕರು ನಿಯಮಗಳನ್ನು ಪಾಲಿಸುವಂತೆ ಸೂಚನೆ ನೀಡಿ ವಸ್ತುಗಳನ್ನು ಕೊಡುತ್ತಿದ್ದರು.

ಪಟ್ಟಣದ ಯುವಕರು ಗ್ರಾಹಕರಿಗೆ ಸಾಮಾಜಿಕ ಅಂತರದ ಬಗ್ಗೆ ಜಾಗೃತಿ ಮೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT