ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ.2 ಗಂಟೆವರೆಗೆ ಲಾಕ್‌ಡೌನ್‌ ಸಡಿಲ

ಬೆ.6ರಿಂದ ಮ.2 ಗಂಟೆಯವರೆಗೆ ವಹಿವಾಟಿಗೆ ಅವಕಾಶ, ರಸ್ತೆಗಿಳಿಯಲಿದೆ ಸಾರಿಗೆ ಬಸ್‌
Last Updated 20 ಜೂನ್ 2021, 15:52 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಅನ್‌ಲಾಕ್‌ನ ಮೊದಲ ಹಂತ ಸೋಮವಾರ (ಜೂನ್‌ 21) ಬೆಳಿಗ್ಗೆ 6 ಗಂಟೆಯಿಂದ ಜಾರಿಗೆ ಬರಲಿದ್ದು, ಲಾಕ್‌ಡೌನ್‌ ನಿರ್ಬಂಧಗಳು ಮಧ್ಯಾಹ್ನ 2 ಗಂಟೆಯವರೆಗೂ ಸಡಿಲಿಕೆ ಆಗಲಿದೆ. ಸೋಮವಾರದಿಂದ (ಜೂನ್‌ 21) ಜುಲೈ 5ರವರೆಗೂ ಇದು ಜಾರಿಯಲ್ಲಿರಲಿದೆ.

ಹಣ್ಣು, ತರಕಾರಿ, ಮಾಂಸ, ದಿನಸಿ ಅಂಗಡಿಗಳು ಸೇರಿದಂತೆ ಅಗತ್ಯ ವಸ್ತುಗಳ ಮಾರಾಟ, ವಹಿವಾಟಿಗೆ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೂ ಅವಕಾಶ ನೀಡಲಾಗಿದೆ. ನ್ಯಾಯಬೆಲೆ ಅಂಗಡಿಗಳು, ಮದ್ಯದ ಅಂಗಡಿಗಳಿಗೂ ಮಧ್ಯಾಹ್ನ 2 ಗಂಟೆಯವರೆಗೆ ತೆರೆಯಲು ಅನುವು ನೀಡಲಾಗಿದೆ.ಬೀದಿ ಬದಿ ವ್ಯಾಪಾರಿಗಳಿಗೂ ಈ ಅವಕಾಶ ಇದೆ.

ಹೋಟೆಲ್‌, ಮದ್ಯದ ಅಂಗಡಿಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ. ಬೆಳಿಗ್ಗೆ 5ರಿಂದ 10 ಗಂಟೆಯವರೆಗೆ ಉದ್ಯಾನಗಳಲ್ಲಿ ವಾಯುವಿಹಾರಕ್ಕೆ ಅನುಮತಿಸಲಾಗಿದೆ.ಕಾರ್ಖಾನೆಗಳಲ್ಲಿ ಶೇ 50ರಷ್ಟು ಸಿಬ್ಬಂದಿ ಮತ್ತು ಗಾರ್ಮೆಂಟ್ಸ್‌ಗಳಲ್ಲಿ ಶೇ 30ರಷ್ಟು ಹಾಜರಾತಿಯೊಂದಿಗೆ ಕಾರ್ಯಾಚರಣೆ ಮಾಡಬಹುದು.

ಕಟ್ಟಡ ಮತ್ತು ಇತರ ನಿರ್ಮಾಣ ಕಾಮಗಾರಿಗೆ ಅವಕಾಶ ನೀಡಲಾಗಿದ್ದು, ಅದಕ್ಕೆ ಪೂರಕವಾಗಿ ಉಕ್ಕು, ಸಿಮೆಂಟ್‌ ಮತ್ತಿತರ ಸಾಮಗ್ರಿಗಳನ್ನು ಮಾರಾಟ ಮಾಡುವುದಕ್ಕೂ ಅನುವು ಮಾಡಲಾಗಿದೆ.

ವಾಹನಗಳ ಸಂಚಾರಕ್ಕೆ ಅವಕಾಶ: ಅನ್‌ಲಾಕ್‌ ಮೊದಲ ಹಂತದಲ್ಲಿ ಆಟೊ, ಟ್ಯಾಕ್ಸಿಗಳ ಸಂಚಾರಕ್ಕೆ ಅನುಮತಿ ನೀಡಲಾಗಿದ್ದು, ಇಬ್ಬರಿಗಿಂತ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯುವಂತಿಲ್ಲ.

ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ: ಒಂದೂವರೆ ತಿಂಗಳ ಬಳಿಕ ಕೆಎಸ್‌ಆರ್‌ಟಿಸಿ ಬಸ್‌ಗಳು ಸೋಮವಾರದಿಂದ ರಸ್ತೆಗಳಿಯಲಿವೆ. ಮೈಸೂರು ಜಿಲ್ಲೆ ಬಿಟ್ಟು, ರಾಜ್ಯದಾದ್ಯಂತ ಶೇ 50ರಷ್ಟು ಪ್ರಯಾಣಿಕರನ್ನು ಮಿತಿಗೊಳಿಸಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರಕ್ಕೆ ಸರ್ಕಾರ ಅನುಮತಿ ನೀಡಿದೆ.

ಏಪ್ರಿಲ್‌ 27ರಂದು ಲಾಕ್‌ಡೌನ್‌ ಜಾರಿಯಾದ ನಂತರ ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಸೌಲಭ್ಯ ಇರಲಿಲ್ಲ. ಅದಕ್ಕೂ ಮೊದಲು ಸಿಬ್ಬಂದಿ ಮುಷ್ಕರದ ಕಾರಣಕ್ಕೆ 15 ದಿನಗಳ ಕಾಲ ಬಸ್‌ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.

ಕಠಿಣ ಲಾಕ್‌ಡೌನ್‌ ಮುಂದುವರಿದಿರುವ ಮೈಸೂರು ಬಿಟ್ಟು, ಉಳಿದ ಎಲ್ಲ ಕಡೆಗಳಿಗೂ ಜಿಲ್ಲೆಯ ವಿವಿಧ ಭಾಗಗಳಿಂದ ಬಸ್‌ಗಳು ಸಂಚರಿಸಲಿವೆ.

‘ಶೇ 50ರಷ್ಟು ಆಸನ ಸಾಮರ್ಥ್ಯವನ್ನು ಭರ್ತಿ ಮಾಡಿಕೊಂಡು ಬಸ್‌ಗಳನ್ನು ಓಡಿಸಲು ಮುಖ್ಯ ಕಾರ್ಯದರ್ಶಿ ಅವರು ಆದೇಶ ನೀಡಿದ್ದಾರೆ. ಸೋಮವಾರದಿಂದ ನಾವು ಕಾರ್ಯಾಚರಣೆ ಮಾಡುತ್ತೇವೆ. ಮೈಸೂರಿಗೆ ಮಾತ್ರ ಹೋಗಲು ಅವಕಾಶ ಇಲ್ಲ’ ಎಂದು ಕೆಎಸ್‌ಆರ್‌ಟಿಸಿ ಚಾಮರಾಜನಗರ ವಿಭಾಗದ ನಿಯಂತ್ರಣಾಧಿಕಾರಿ ಶ್ರೀನಿವಾಸ ಬಿ. ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಯಾಣಿಕರ ಬೇಡಿಕೆ ಆಧರಿಸಿ ಬಸ್‌ಗಳನ್ನು ಓಡಿಸುತ್ತೇವೆ. ಕೋವಿಡ್‌ ನಿಯಮಗಳನ್ನು ಪಾಲಿಸಲಾಗುವುದು. ಎಲ್ಲ ಸಿಬ್ಬಂದಿಯನ್ನು ಕರ್ತವ್ಯಕ್ಕೆ ಹಾಜರಾಗಲು ಸೂಚಿಸಲಾಗಿದೆ. ಆರಂಭದಲ್ಲಿ ಕೋವಿಡ್‌ ಲಸಿಕೆ ಪಡೆದ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗುವುದು. ಲಸಿಕೆ ಪಡೆಯದ ಸಿಬ್ಬಂದಿ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಎಲ್ಲರಿಗೂ ಸೂಚರಿಸಲಾಗಿದೆ’ ಎಂದು ಅವರು ಹೇಳಿದರು.

ಖಾಸಗಿ ಬಸ್‌ಗಳ ಸಂಚಾರ ಇಲ್ಲ: ಜಿಲ್ಲೆಯಲ್ಲಿ ಖಾಸ‌ಗಿ ಬಸ್‌ಗಳು ಸದ್ಯಕ್ಕೆ ಸಂಚರಿಸುವುದಿಲ್ಲ. ಈ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ₹95 ಡೀಸೆಲ್‌ ಹಾಕಿ ಶೇ 50 ಆಸನಗಳನ್ನು ಭರ್ತಿಮಾಡಿಕೊಂಡು ಬಸ್‌ಗಳನ್ನು ಓಡಿಸಲು ಸಾಧ್ಯವಿಲ್ಲ ಎಂದು ಜಿಲ್ಲಾ ಬಸ್‌ ಮಾಲೀಕರ ಸಂಘದ ಕಾರ್ಯದರ್ಶಿ ತ್ಯಾಗರಾಜು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ನಿಷೇಧಾಜ್ಞೆ ಮುಂದುವರಿಕೆ

ನಿರ್ಬಂಧಗಳನ್ನು ಸಡಿಲಿಸಿದ್ದರೂ, ಜಿಲ್ಲೆಯಾದ್ಯಂತ ಜುಲೈ 5ರವರೆಗೆ ನಿಷೇಧಾಜ್ಞೆ ಮುಂದುವರಿಯಲಿದೆ. ವಾರದಲ್ಲಿ ಐದು ದಿನಗಳ ಕಾಲ ಮಾತ್ರ ನಿರ್ಬಂಧ ಸಡಿಲಿಕೆ ಇರುತ್ತದೆ.

ಪ್ರತಿ ದಿನ ಸಂಜೆ 7 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ವಾರಾಂತ್ಯದಲ್ಲಿ, ಅಂದರೆ ಪ್ರತಿ ಶುಕ್ರವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ಸಂದರ್ಭದಲ್ಲಿ ತುರ್ತು ಸೇವೆಗಳಿಗೆ ಮಾತ್ರ ಅವಕಾಶ ಇರಲಿದೆ.

ನಿರ್ಬಂಧ ಸಡಿಲಿಕೆ ಸಮಯದಲ್ಲಿ ಕೋವಿಡ್‌ ನಿಯಮಗಳನ್ನು ಪಾಲಿಸುವುದು ಕಡ್ಡಾಯ. ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಆದೇಶದಲ್ಲಿ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT