ಭಾನುವಾರ, ಆಗಸ್ಟ್ 14, 2022
26 °C

ಚಾಮರಾಜನಗರದಲ್ಲಿ 19ರಂದು ಲೋಕ ಅದಾಲತ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಇದೇ 19ರಂದು ಲೋಕ ಅದಾಲತ್‌ ನಡೆಯಲಿದ್ದು ಜಿಲ್ಲೆಯ ಜನರು ಇದರ  ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಸದಾಶಿವ ಎಸ್‌.ಸುಲ್ತಾನಪುರಿ ಅವರು ಬುಧವಾರ ಹೇಳಿದರು. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾರ್ವಜನಿಕರು ಇದರಲ್ಲಿ ಭಾಗವಹಿಸುವ ಮೂಲಕ ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಮುಂದಾಗಬೇಕು. ಅದಾಲತ್‌ನಲ್ಲಿ ನೀಡಲಾಗುವ ಆದೇಶ ಅಂತಿಮವಾಗಿದ್ದು, ಅದರ ಮೇಲೆ ಮೇಲ್ಮನವಿ ಸಲ್ಲಿಸಲು ಅವಕಾಶ ಇಲ್ಲ. ಹೀಗಾಗಿ, ವ್ಯಾಜ್ಯಗಳಿಗೆ ಇಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು’ ಎಂದು ಅವರು ಹೇಳಿದರು. 

‘ಕಳೆದ ಬಾರಿ ನಡೆದ ಲೋಕ ಅದಾಲತ್‌ನಲ್ಲಿ 723 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. 19ರಂದು ನಡೆಯುವ ಅದಾಲತ್‌ಗೆ 1,416 ಸಿವಿಲ್‌ ಹಾಗೂ 904 ಕ್ರಿಮಿನಲ್‌ ಪ್ರಕರಣಗಳನ್ನು ಗುರುತಿಸಲಾಗಿದೆ. ಅದಾಲತ್‌ನಲ್ಲಿ ಭಾಗವಹಿಸಲು ಪಕ್ಷಗಾರರು ಯಾವುದೇ ರೀತಿಯ ಶುಲ್ಕ, ದಂಡ ಪಾವತಿಸಬೇಕಾಗಿಲ್ಲ’ ಎಂದು ನ್ಯಾಯಾಧೀಶರು ತಿಳಿಸಿದರು. 

‘ಅದಾಲತ್‌ನಲ್ಲಿ ಒಬ್ಬ ನ್ಯಾಯಾಧೀಶ ಹಾಗೂ ಒಬ್ಬ ವಕೀಲರು ಸಂಧಾನಕಾರರಾಗಿ ಭಾಗವಹಿಸುವುದರಿಂದ ಅಲ್ಲಿ ಎರಡೂ ಪಕ್ಷದಾರರಿಗೆ ಒಳಿತು, ಹಿತ ನ್ಯಾಯವಾದ ತೀರ್ಮಾನ ಮಾಡಿದಂತಾಗುವುದು’ ಎಂದರು.  

‘ಸಾರ್ವಜನಿಕ ಹಿತಾಸಕ್ತಿ ಪ್ರಕರಣಗಳನ್ನು ಬಿಟ್ಟು, ಇತರ ಸಿವಿಲ್ ಪ್ರಕರಣಗಳು, ದಾಂಪತ್ಯ ಜೀವನ ಸಂಬಂಧ ಹಕ್ಕುಗಳ ಪುನರ್ ಸ್ಥಾಪನೆ, ಜೀವನಾಂಶ, ಮಕ್ಕಳ ಸಂರಕ್ಷಣೆ ಕುರಿತ ಎಲ್ಲ ಪ್ರಕರಣಗಳು, ವಾಹನ ಅಪಘಾತಕ್ಕೆ ಸಂಬಂಧಿಸಿದ ಪ್ರಕರಣಗಳು, ಕೈಗಾರಿಕಾ ವಿವಾದ ಕಾಯ್ದೆ ಅಡಿಯಲ್ಲಿರುವ ಪ್ರಕರಣಗಳು, ದಂಡ ಪ್ರಕ್ರಿಯಾ ಸಂಹಿತೆ ಕಲಂ 320(1) ಮತ್ತು 320(2) ಅಡಿಯಲ್ಲಿ ರಾಜಿ ಮಾಡಿಕೊಳ್ಳಬಹುದಾದ ಎಲ್ಲ ಅಪರಾಧಗಳು, ಚೆಕ್‌ ಅಮಾನ್ಯ ಪ್ರಕರಣಗಳು, ಕಾರ್ಮಿಕ ವಿವಾದಗಳು, ವಿದ್ಯುತ್ ಕಳವಿಗೆ ಸಂಬಂಧಿಸಿದ ಪ್ರಕರಣಗಳು, ಅಕ್ರಮ ಕಲ್ಲು, ಮರಳು ಸಾಗಾಣಿಕೆಗೆ ಸಂಬಂಧಿಸಿದ ಅಪರಾಧಗಳು, ಇತರೆ ಯಾವುದೇ ಅಪರಾಧಿಕ ಸ್ವರೂಪದ ರಾಜಿ ಆಗಬಹುದಾದ ಪ್ರಕಣಗಳು ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ರಾಜಿ ಮಾಡಿಕೊಳ್ಳಬಹುದು’ ಎಂದು ನ್ಯಾಯಾಧೀಶ ಸದಾಶಿವ ಎಸ್‌.ಸುಲ್ತಾನ್‌ಪುರಿ ಹೇಳಿದರು. 

ಹೆಚ್ಚುವರಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಡಿ.ವಿನಯ್‌, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಸಿ.ಜಿ.ವಿಶಾಲಾಕ್ಷಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್‌, ಪ್ರಧಾನ ಕಾರ್ಯದರ್ಶಿ ಹರವೆ ಎಸ್‌.ಮಂಜು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು