ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಗೂ ಕಾಲಿಟ್ಟ ಚರ್ಮಗಂಟು ಕಾಯಿಲೆ

Last Updated 7 ಅಕ್ಟೋಬರ್ 2022, 15:54 IST
ಅಕ್ಷರ ಗಾತ್ರ

ಯಳಂದೂರು: ಗಡಿ ಜಿಲ್ಲೆಯ ಗ್ರಾಮಗಳಲ್ಲಿ ಆಕಳು, ಎತ್ತು, ಕರುಗಳಿಗೆ ಕಾಲು, ಬಾಯಿ ಜ್ವರ ಮತ್ತು ಚರ್ಮಗಂಟು ರೋಗ ನಿಧಾನಕ್ಕೆ ಉಲ್ಬಣಗೊಳ್ಳುತ್ತಿದೆ. ಬಹುತೇಕ ಪಂಚಾಯಿತಿ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲು ಪಶು ವೈದ್ಯರ ಕೊರತೆ ಇದೆ. ಕೆಲವು ಗ್ರಾಮಗಳಲ್ಲಿ ಚಿಕಿತ್ಸಾಲಯಗಳಿಗೆ ಬೀಗ ಹಾಕಲಾಗಿದೆ. ಸ್ಥಳೀಯ ಪಶುಪಾಲಕರೇ ದನ, ಕರುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಸೆಪ್ಟೆಂಬರ್‌ ಕೊನೆಯವರೆಗೂ ಯಾವ ಗ್ರಾಮದಲ್ಲೂ ಚರ್ಮಗಂಟು ರೋಗದ ಲಕ್ಷಣ ಕಾಣಿಸಿರಲಿಲ್ಲ. ವೈದ್ಯರು ಪರೀಕ್ಷಿಸಿದಾಗ ರೋಗ ಲಕ್ಷಣಗಳು ಗೋಚರಿಸಿವೆ. ತಕ್ಷಣ ಚಿಕಿತ್ಸೆ ದೊರೆತರೆ ಜಾನುವಾರುಗಳು ಚೇತರಿಸಿಕೊಳ್ಳುತ್ತವೆ. ಆದರೆ, ವೈದ್ಯರ ಅಲಭ್ಯತೆಯಿಂದ ಕಾಲು, ಬಾಯಿ ಜ್ವರ ಹಾಗೂ ವಿವಿಧ ರೋಗಗಳಿಗೆ ಚಿಕಿತ್ಸೆ ಸಿಗುತ್ತಿಲ್ಲ ಎಂಬ ಆತಂಕ ಗ್ರಾಮಸ್ಥರಲ್ಲಿ ಮನೆಮಾಡಿದೆ.

ಬಾಗಿಲು ಮುಚ್ಚಿದ ಪಶು ಆಸ್ಪತ್ರೆ: ‘ಹಸು, ಕರುಗಳಿಗೆ ಜ್ವರ ಬಂದರೆ ಗ್ರಾಮಸ್ಥರು ಆತಂಕಗೊಳ್ಳುತ್ತಾರೆ. ಕಾಲು ಬಾಯಿ ಜ್ವರಕ್ಕೆ ಅವರೇ ಉಪಚಾರ ಮಾಡಿಕೊಳ್ಳುತ್ತಾರೆ. ಪಶು ಆಸ್ಪತ್ರೆಗೆ ಹೋದರೆ ಇವರ ಸಮಸ್ಯೆ ಕೇಳುವವರೇ ಇಲ್ಲ. ಬೆಟ್ಟದಲ್ಲಿ ಪಶು ಆಸ್ಪತ್ರೆ ಬಾಗಿಲು ಮುಚ್ಚಿ ಎರಡು ತಿಂಗಳಾಗಿದೆ. ಇದರಿಂದ ಜಾನುವಾರುಗಳಿಗೆ ರೋಗ ಬಂದರೆ, ಯಾವ ಚಿಕಿತ್ಸೆ ನೀಡಬೇಕು ಎಂಬುದನ್ನು ಅರಿಯದೆ ಸಾಕಣೆದಾರರು ಪರಿತಪಿಸುವಂತೆ ಆಗಿದೆ. ಸಾಕಣೆದಾರರಿಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿವರ ಸಿಗುವುದಿಲ್ಲ. ಲಸಿಕೆ ನೀಡುವವರು ಬರುವುದಿಲ್ಲ. ಕಾಲು, ಬಾಯಿ ಜ್ವರ ಹಾಗೂ ಚರ್ಮಗಂಟು ರೋಗಗಳ ಬಗ್ಗೆ ಇತರರನ್ನು ಕೇಳಿ ಚಿಕಿತ್ಸೆ ಮಾಡಿಕೊಳ್ಳಬೇಕಿದೆ. ಪಶು ವೈದ್ಯರನ್ನು ಮಾಲೀಕರು ಹುಡುಕಬೇಕಿದೆ’ ಎಂದು ಬಿಳಿಗಿರಿಬೆಟ್ಟದ ಪ್ರಭಾಕರ್ ದೂರಿದರು.

‘ಆಕಳು, ಎತ್ತುಗಳಿಗೆ ಚರ್ಮಗಂಟು ರೋಗ ಈಚೆಗೆ ಮಾರಕವಾಗುತ್ತಿದೆ. ತಕ್ಷಣ ಚಿಕಿತ್ಸೆ ನೀಡಲು ವೈದ್ಯರನ್ನು ನೇಮಿಸಬೇಕು. ರೋಗ ಹರಡದಂತೆ ತಡೆಯುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕು. ಕಾಡಂಚಿನ ಗ್ರಾಮಗಳ ಪಶುಗಳಿಗೆ ಚರ್ಮವ್ಯಾಧಿ ವ್ಯಾಪಿಸಿದರೆ ವನ್ಯ ಜೀವಿಗಳಿಗೂ ರೋಗ ತಗಲಬಹುದು. ಈ ನಿಟ್ಟಿನಲ್ಲಿ ಎಚ್ಚರ ಅಗತ್ಯ’ ಎಂದು ಪಟ್ಟಣದ ಸುರೇಶ್ ಕುಮಾರ್ ಹೇಳಿದರು.

‘ಆತಂಕ ಅಗತ್ಯವಿಲ್ಲ’

‘ಚರ್ಮಗಂಟು ರೋಗ (ಲಂಪಿ ಸ್ಕಿನ್ ಡಿಸೀಸ್) ಒಂದು ರೀತಿಯ ಅಂಟು ರೋಗ. ಬೇರೆಡೆಗೆ ಹೋಲಿಸಿದರೆ ನಮ್ಮಲ್ಲಿ ರೋಗ ವ್ಯಾಪಿಸುವ ವೇಗ ನಿಧಾನವಾಗಿದೆ. ಚಿಕಿತ್ಸೆ ದೊರೆತರೆ ಜಾನುವಾರುಗಳು ಚೇತರಿಸಿಕೊಳ್ಳುತ್ತವೆ. ಅಗರ ಭಾಗದಲ್ಲಿ ಎರಡು ಹಸುಗಳಿಗೆ ರೋಗ ಕಂಡುಬಂದಿದ್ದು, ಚಿಕಿತ್ಸೆ ನಂತರ ಪ್ರಾಣಾಪಾಯದಿಂದ ಪಾರಾಗಿವೆ. ಯಾವ ಗ್ರಾಮದಲ್ಲೂ ಜಾನುವಾರು ಸಾವು ಉಂಟಾಗಿಲ್ಲ. ಕೊಟ್ಟಿಗೆಗಳಲ್ಲಿ ಸೊಳ್ಳೆ ನಿಯಂತ್ರಣ ಮಾಡಬೇಕಿದೆ. ಶುಚಿಯಾಗಿ ಇಟ್ಟುಕೊಳ್ಳಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾನುವಾರು ಸಂರಕ್ಷಣೆ ಬಗ್ಗೆ ಮಾಹಿತಿ ನೀಡಲು ಸಿದ್ಧತೆ ನಡೆಸಲಾಗುವುದು. ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ಇದ್ದು, ಉತ್ತಮ ಚಿಕಿತ್ಸೆ ನೀಡಲು ಶಕ್ತಿ ಮೀರಿ ಪ್ರಯತ್ನಿಸಲಾಗುತ್ತಿದೆ’ ಎಂದು ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸುಗಂಧರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT