ಭಾನುವಾರ, ಜನವರಿ 26, 2020
23 °C
ಬಾರ್‌ ಇಲ್ಲದಿದ್ದರೂ ಅಕ್ರಮ ಮದ್ಯ ಮಾರಾಟ, ಕುಡಿತ ಅವ್ಯಾಹತ; ಕ್ರಮಕ್ಕೆ ಆಗ್ರಹ

ಚಾಮರಾಜನಗರ| ಮಾದಪ್ಪನ ಬೆಟ್ಟದಲ್ಲಿ ಗುಂಡಿನ ಗಮ್ಮತ್ತು

ಜಿ.ಪ್ರದೀಪ್‌ ಕುಮಾರ್‌ Updated:

ಅಕ್ಷರ ಗಾತ್ರ : | |

Prajavani

ಮಹದೇಶ್ವರ ಬೆಟ್ಟ: ಪ್ರಸಿದ್ಧ ಯಾತ್ರಾಸ್ಥಳವಾದ ಮಹದೇಶ್ವರಬೆಟ್ಟದಲ್ಲಿ ಒಂದೇ ಒಂದು ಮದ್ಯದ ಅಂಗಡಿ ಇಲ್ಲ. ಹಾಗಿದ್ದರೂ, ಇಲ್ಲಿ ಮದ್ಯ ಸಿಗುತ್ತದೆ. ಅಕ್ರಮ ಮದ್ಯ ಮಾರಾಟ ಅವ್ಯಾಹತವಾಗಿದ್ದು, ಬೆಳ್ಳಂಬೆಳಿಗ್ಗೆ ಸಾರ್ವಜನಿಕ ಸ್ಥಳಗಳಲ್ಲೇ ಮದ್ಯಪ್ರಿಯರು ಮದಿರೆಯನ್ನು ಸೇವಿಸಿ ತೂರಾಡುತ್ತಾರೆ. 

ಕ್ಷೇತ್ರದ ವ್ಯಾಪ್ತಿಯಲ್ಲಿ ಮದ್ಯಪಾನಕ್ಕೆ ನಿಷೇಧವಿದೆ. ಮದ್ಯ ಮಾರಾಟಕ್ಕೂ ಅವಕಾಶ ಇಲ್ಲ. ಹಾಗಿದ್ದರೂ ಇಲ್ಲಿ ಮದ್ಯ ಲಭ್ಯವಿದೆ. ಬೆಟ್ಟಕ್ಕೆ ಹೊಂದಿಕೊಂಡಿರುವ ಅಕ್ಕ‍ಪಕ್ಕದ ಗ್ರಾಮಗಳಲ್ಲಿ ಮದ್ಯವನ್ನು ಎಗ್ಗಿಲ್ಲದೆ ಮಾರಾಟ ಮಾಡಲಾಗುತ್ತಿದೆ. 

ಈ ಬಗ್ಗೆ ಅಬಕಾರಿ ಇಲಾಖೆಗೆ ಹಾಗೂ ಪೊಲೀಸ್‌ ಸಿಬ್ಬಂದಿಗೆ ಮಾಹಿತಿ ಇದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಭಕ್ತರ ಆರೋಪ.

‘ಬೆಟ್ಟದ 40 ಕಿ.ಮೀ ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಬಾರದು ಎಂದು ಸರ್ಕಾರ ಸೂಚಿಸಿತ್ತು. ಆದರೆ, ಬೆಟ್ಟಕ್ಕೆ ಮದ್ಯ ಸರಬರಾಜು ಆಗುವುದು ನಿಂತಿಲ್ಲ. ಪುರುಷರು ಎಲ್ಲಿಂದಲೋ ಸಂಗ್ರಹಿಸಿ ತರುತ್ತಿದ್ದಾರೆ. ಪ್ರತಿ ನಿತ್ಯ ಕುಡಿಯುತ್ತಿದ್ದಾರೆ. ಕುಟುಂಬದವರು ಬೀದಿ ಪಾಲಾಗುತ್ತಿದ್ದಾರೆ. ಪವಿತ್ರವಾದ ಕ್ಷೇತ್ರದಲ್ಲಿ ಇಂತಹ ಪರಿಸ್ಥಿತಿ ಇದ್ದರೆ, ಸಾಮಾನ್ಯ ಗ್ರಾಮಗಳಲ್ಲಿ ಪರಿಸ್ಥಿತಿ ಹೇಗಿರಬಹುದು’ ಎಂದು ಸ್ಥಳೀಯರಾದ ರಾಜೇಶ್ವರಿ ಪ್ರಶ್ನಿಸಿದರು. 

ಬೆಟ್ಟದಲ್ಲೇ ರಹಸ್ಯವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಸ್ಥಳೀಯ ಮಹಿಳೆಯರು ಆರೋಪಿಸುತ್ತಾರೆ. ಬೆಟ್ಟದಲ್ಲಿ ಒಂದು ಸುತ್ತು ಹಾಕಿದರೆ, ಮದ್ಯದ ಬಾಟಲಿಗಳು, ಪೌಚುಗಳು, ಮದ್ಯ ಕುಡಿಯಲು ಬಳಸಿದ ಲೋಟಗಳು ಸಾಕಷ್ಟು ಕಾಣಸಿಗುತ್ತವೆ. 

ದೇವಾಲಯದ ಮುಂಭಾಗದಲ್ಲಿರುವ ರಂಗಮಂದಿರದ ಆವರಣ ವಿಶಾಲವಾಗಿರುವುದರಿಂದ ಕೆಲವರು ಅಲ್ಲಿಯೇ ಯಾರ ಭಯವೂ ಇಲ್ಲದೆ ಮಧ್ಯವನ್ನು ಸೇವಿಸುತ್ತಿದ್ದಾರೆ. ಇದರಿಂದಾಗಿ ದೇವಾಲಯಕ್ಕೆ ಬರುವಂತಹ ಭಕ್ತರು ಮುಜುಗರ ಪಡುವಂ‌ತಾಗಿದೆ. 

ರಂಗಮಂದಿರದ ಆವರಣದಲ್ಲಿ ಮದ್ಯ ಸೇವಿಸುತ್ತಿದ್ದ ವ್ಯಕ್ತಿಯನ್ನು ಗಮನಿಸುತ್ತಿದ್ದ ಬೆಂಗಳೂರಿನಿಂದ ಬಂದಿದ್ದ ಚಂದ್ರನಾಯಕ ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಯಾತ್ರಾ ಸ್ಥಳಗಳಲ್ಲಿ ಇಂತಹ ಪರಿಸ್ಥಿತಿ ಇರಬಾರದು. ಅತ್ಯಂತ ಪ್ರಸಿದ್ಧ ದೇವಾಲಯವಾದ ಮಹದೇಶ್ವರ ಬೆಟ್ಟದಲ್ಲಿ ಈ ದೃಶ್ಯ ನೋಡುತ್ತಿರುವುದಕ್ಕೆ ಬೇಸರವಾಗಿದೆ. ಸಂಬಂಧಿಸಿದ ಇಲಾಖೆ ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು. 

‘ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ’ 

ಈ ಸಂಬಂಧ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಅಬಕಾರಿ ಉಪ ಆಯುಕ್ತ ಮಾದೇಶ್‌ ಅವರು, ‘ಬೆಟ್ಟದಲ್ಲಿ ಮದ್ಯದ ಅಂಗಡಿಗಳು ಇಲ್ಲ. ಕೆಲವರು ಅಕ್ರಮವಾಗಿ ಮಾರಾಟ ಮಾಡುತ್ತಿರುವುದು  ಗಮನಕ್ಕೆ ಬಂದಿದ್ದು, ಕಾರ್ಯಾಚರಣೆ ನಡೆಸಿದ್ದೇವೆ. ಅಕ್ರಮವಾಗಿ ಮಾರಾಟ ಮಾಡುತ್ತಿರುವವರ ಬಗ್ಗೆ ಖಚಿತ ಮಾಹಿತಿ ಸಿಕ್ಕಿದರೆ, ತಕ್ಷಣ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು. 

ಬೆಟ್ಟದ ಪೊಲೀಸ್ ಇನ್‌ಸ್ಪೆಕ್ಟರ್‌ ಬಿ.ಮಹೇಶ್‌ ಅವರು ಪ್ರತಿಕ್ರಿಯಿಸಿ, ‘ಅಕ್ರಮ ಮದ್ಯ ಮಾರಾಟ  ನಡೆಯುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಆದರೆ, ಅದರ ಬಗ್ಗೆ ನಿಖರ ಮಾಹಿತಿ ದೊರೆಯುತ್ತಿಲ್ಲ. ತಕ್ಷಣ ಈ ಬಗ್ಗೆ ಮಾಹಿತಿ ಕಲೆ ಹಾಕಿ ಮಾರಾಟಕ್ಕೆ ಸಂಪೂರ್ಣ ಕಡಿವಾಣ ಹಾಕಲಾಗುವುದು’ ಎಂದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು