ಮಂಗಳವಾರ, ಮೇ 18, 2021
22 °C

ಮಹದೇಶ್ವರಬೆಟ್ಟ: ಸಂಭ್ರಮದ ದೀಪಾವಳಿ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಂಗಳವಾರ ಮುಂಜಾನೆ ದೀಪಾವಳಿ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಇಂದು ರಾತ್ರಿ ನಡೆಯಲಿರುವ ತೆಪ್ಪೋತ್ಸವದೊಂದಿಗೆ ಬೆಟ್ಟದಲ್ಲಿ ದೀಪಾವಳಿ ಜಾತ್ರೆಗೆ ತೆರೆ ಬೀಳಲಿದೆ.

ಬೆಟ್ಟದಲ್ಲಿ ಸೋಮವಾರ ದೀಪಾವಳಿ ಜಾತ್ರಾ ಮಹೋತ್ಸವದ ಅಂಗವಾಗಿ ಹಾಲರವಿ ಉತ್ಸವ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು, ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು.

ಸೋಮವಾರ ಮುಂಜಾನೆ ಬೆಟ್ಟದ ತಪ್ಪಲಿನಲ್ಲಿರುವ ಹಾಲು ಹಳ್ಳದಿಂದ ಬೇಡಗಂಪಣ ಸಮುದಾಯದ 101 ಪುಟ್ಟ ಹೆಣ್ಣುಮಕ್ಕಳು ಸಣ್ಣಸಣ್ಣ ಕೊಡಗಳಲ್ಲಿ ನೀರನ್ನು ತಂಬಡಿಗೇರಿಯ ಮುಖ್ಯದ್ವಾರಕ್ಕೆ ತಂದು ವಿಶೇಷ ಪೂಜೆ ಸಲ್ಲಿಸಿದರು. ನಂತರ ಅಲ್ಲಿಂದ ಮೆರವಣಿಗೆಯಲ್ಲಿ ಸಾಗಿ ದೇವಾಲಯದ ಆವರಣಕ್ಕೆ ಬಂದರು. ಬೇಡಗಂಪಣ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ಕೊಡಗಳಿಗೆ ಪೂಜೆ ಸಲ್ಲಿಸಿ, ಆ ನೀರಿನಿಂದ ಮಹದೇಶ್ವರ ಸ್ವಾಮಿಗೆ ಅಭಿಷೇಕ ಮಾಡಲಾಯಿತು.

ಇದಕ್ಕೂ ಮುನ್ನ, ದೀಪಾವಳಿ ಅಮವಾಸ್ಯೆ ಪ್ರಯುಕ್ತ ಮುಂಜಾ ನೆಯಿಂದಲೇ ಮಹದೇಶ್ವರ ಸ್ವಾಮಿಗೆ ಎಣ್ಣೆಮಜ್ಜನ ಸೇವೆ, ತೈಲಾಭಿಷೇಕ, ಲಕ್ಷ ಬಿಲ್ವಾರ್ಚನೆ, ಮಹಾಮಂಗಳಾರತಿ ಮಾಡಲಾಯಿತು.

ಹರಕೆ ಹೊತ್ತ ಭಕ್ತರು ಹುಲಿವಾಹನ, ಬಸವವಾಹನ, ರುದ್ರಾಕ್ಷಿ ವಾಹನಗಳನ್ನು ಎಳೆದರು. ಇನ್ನೂ ಕೆಲ ಭಕ್ತರು ಧೂಪದ ಸೇವೆ, ಪಂಜಿನ ಸೇವೆ, ಉರುಳು ಸೇವೆ, ಆಲಂಬಾಡಿ ಬಸವನಿಗೆ ಎಣ್ಣೆ ಹಾಗೂ ಹಾಲಿನ ಅಭಿಷೇಕ ಮಾಡುವ ಮೂಲಕ ತಮ್ಮ ಹರಕೆ, ಕಾಣಿಕೆ ಸಲ್ಲಿಸಿದರು.

ರಾಜ್ಯ ಹಾಗೂ ನೆರೆ ರಾಜ್ಯಗಳ ನಾನಾ ಕಡೆಗಳಿಂದ ಬಂದಿದ್ದ ಲಕ್ಷಾಂತರ ಭಕ್ತರು, ಹಣ ನೀಡಿ ವಿಶೇಷ ದರ್ಶನ ಪಡೆದರೆ ಉಳಿದ ಕೆಲವು ಭಕ್ತರು ಬೆಳಿಗ್ಗೆಯಿಂದ ಸರತಿ ಸಾಲಿನಲ್ಲಿ ನಿಂತು ಮಾದಪ್ಪನ ದರ್ಶನ ಮಾಡಿ ಕೃತಾರ್ಥರಾದರು. ಅಂತರಗಂಗೆ, ಮುಡಿಸೇವಾ ಕೇಂದ್ರ, ಲಡ್ಡು ವಿತರಣಾ ಕೇಂದ್ರ, ದಾಸೋಹ ಭವನ ಭಕ್ತರಿಂದ ತುಂಬಿ ತುಳುಕುತ್ತಿವೆ.

ತುಂಬಿದ ವಸತಿಗೃಹಗಳು: ನಿರೀಕ್ಷೆಗೂ ಮೀರಿ ಭಕ್ತರು ಬಂದಿದ್ದರಿಂದ ವಸತಿಗೃಹಗಳೆಲ್ಲವೂ ಭರ್ತಿಯಾಗಿವೆ. ನಾಗಮಲೆ ಭವನ, ಗಿರಿದರ್ಶಿನಿ, ಪ್ರಿಯದರ್ಶಿನಿ, ಶಂಕಮ್ಮ ನಿಲಯ, ಜೇನುಮಲೆ  ಹಾಗೂ ಬಿಜಿಎಸ್ ವಸತಿಗೃಹಗಳು ಭಕ್ತರಿಂದ ತುಂಬಿವೆ. ಕೊಠಡಿ ಸಿಗುವುದೆಂದು ಮಹದೇಶ್ವರ ಬೆಟ್ಟಕ್ಕೆ ಬಂದಿದ್ದ ಕೆಲವು ಕುಟುಂಬಗಳ ಕೊಠಡಿಗಳಿಲ್ಲದೆ ರಂಗಮಂದಿರದ  ಆವರಣದಲ್ಲೇ ರಾತ್ರಿಯಿಡೀ ಕಳೆಯುವಂತಾಯಿತು.

ನಿರಂತರ ಅನ್ನದಾಸೋಹದ ವ್ಯವಸ್ಥೆಯೂ ಮಾಡಲಾಗಿತ್ತು.

ಗಮನ ಸೆಳೆದ ಕತ್ತಿ ಪವಾಡ

ಉತ್ತರದಿಂದ ಕತ್ತಲ ರಾಜ್ಯಕ್ಕೆ ಬಂದು ಕತ್ತಲೆ ರಾಜ್ಯವನ್ನು ಬೆಳೆಗಿದ ಮಹದೇಶ್ವರರು ಪವಾಡ ಪುರುಷರೆಂದೇ ಪ್ರಸಿದ್ಧಿ. ಇಂದಿಗೂ ಮಹದೇಶ್ವರ ಬೆಟ್ಟದಲ್ಲಿ ಮಹದೇಶ್ವರ ಹೆಸರಿನಲ್ಲಿ ಪವಾಡಗಳು ಆಚರಣೆಯಲ್ಲಿದ್ದು, ಅವುಗಳಲ್ಲಿ ಕತ್ತಿ ಪವಾಡವೂ ಒಂದು.

ಹಾಲರವಿ ಉತ್ಸವ ಜರಗುವುದಕ್ಕೂ ಮುನ್ನ ಕತ್ತಿ ಪ‍ವಾಡ ನಡೆಯುತ್ತದೆ. ಹರಕೆ ಹೊತ್ತ ಭಕ್ತರೊಬ್ಬರು ಕತ್ತಿಯ ಅಲಗಿನ ಮೇಲೆ ಮಲಗುತ್ತಾರೆ. ಅವರ ಮೇಲೆ ಬೇಡಂಗಪಣ ಅರ್ಚಕರು ನಡೆದುಕೊಂಡು ಹೋಗುತ್ತಾರೆ. 

10 ಕಿ.ಮೀ ದೂರದಿಂದ ಗಂಗೆಯನ್ನು (ನೀರು) ತರುವ ಪುಟ್ಟ ಬಾಲೆಯರು ಉಪವಾಸವಿದ್ದು, ಬರಿಗಾಲಲ್ಲಿ ನಡೆದು ಬರುತ್ತಾರೆ. ಮಾರ್ಗ ಮಧ್ಯೆ ಯಾವುದೇ ರೀತಿಯ ದುಷ್ಟ ಶಕ್ತಿಗಳ ಕಣ್ಣು ಬಿದ್ದಿದ್ದರೂ ಕತ್ತಿ ಪವಾಡ ಮಾಡುವ  ಸ್ಥಳದಲ್ಲಿ ಇವು ನಿಲ್ಲುವುದಿಲ್ಲ. ಕತ್ತಿ ಪವಾಡ ಮಾಡಿದ ಸ್ಥಳದಿಂದ ಹಾಲರವಿ ಗಂಗೆ ಶುದ್ಧಳಾಗುತ್ತಾಳೆ ಎಂಬ ನಂಬಿಕೆಯಿದೆ. ಗಂಗೆಯನ್ನು ಮಂಗಳ ವಾದ್ಯಗಳ ಸಮೇತವಾಗಿ ದೇವಾಲಯಕ್ಕೆ ತಂದು ಮಾದೇಶ್ವರರಿಗೆ ಅಭಿಷೇಕ ಮಾಡಲಾಗುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು