ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹದೇಶ್ವರಸ್ವಾಮಿ 18ನೇ ಆರಾಧನೆ; ಭಕ್ತರ ಸಂಭ್ರಮ

Published : 4 ಆಗಸ್ಟ್ 2024, 16:52 IST
Last Updated : 4 ಆಗಸ್ಟ್ 2024, 16:52 IST
ಫಾಲೋ ಮಾಡಿ
Comments

ಗುಂಡ್ಲುಪೇಟೆ: ತಾಲ್ಲೂಕಿನ ಕೋಡಹಳ್ಳಿಯ ಮಹದೇಶ್ವರ ದೇವಾಲಯದಲ್ಲಿ ಮಹದೇಶ್ವರಸ್ವಾಮಿ ಆರಾಧನೆ ಮತ್ತು 18ನೇ  ವಿಶೇಷ ಪೂಜಾ ಕಾರ್ಯಕ್ರಮ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಮಹದೇಶ್ವರ ದೇವಾಲಯದಲ್ಲಿ ಆರಾಧನೆ ಮತ್ತು ವಿಶೇಷ ಪೂಜೆ ಹಿನ್ನೆಲೆಯಲ್ಲಿ ಶನಿವಾರ ರಾತ್ರಿಯಿಂದಲೇ ವಿಶೇಷ ಪೂಜಾ ಕಾರ್ಯಗಳು ನಡೆದವು. ದೇವಾಲಯಕ್ಕೆ ಬಣ್ಣ ಬಳಿದು, ತಳಿರು- ತೋರಣ, ಹಸಿರು ಚಪ್ಪರ, ಹೂವಿನ ಮಾಲೆ ಮತ್ತು ವಿದ್ಯುತ್ ದೀಪಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ದೇವರ ಮೂರ್ತಿಯನ್ನು ನಾನಾ ಬಗೆಯ ಪುಷ್ಪಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು.

ಮುಂಜಾನೆ 4ರಿಂದ 6 ಗಂಟೆಯವರೆಗೆ ಶುಭ ಗಳಿಗೆಯಲ್ಲಿ ಲಿಂಗ ಸ್ವರೂಪಿ ಮಹದೇಶ್ವರ ಸ್ವಾಮಿಗೆ ದೇವಾಲಯದ ಪ್ರಧಾನ ಅರ್ಚಕರು ರುದ್ರಾಭಿಷೇಕ, ವಿಭೂತಿ ಧಾರಣೆ, ಬಿಲ್ವಪತ್ರೆ ಅಭಿಷೇಕ, ದೇವತಾ ಕಾರ್ಯಗಳನ್ನು ನೆರವೇರಿಸಿದರು. ನಂತರ ಮಹಾಮಂಗಳಾರತಿ ನೆರವೇರಿಸಿದರು. ಪೂಜಾ ಕಾರ್ಯಕ್ರಮಗಳ ಸಾನ್ನಿಧ್ಯವನ್ನು ಹಂಗಳಪುರ ಪಟ್ಟದ ಮಠದ ಚನ್ನಬಸವ ಸ್ವಾಮೀಜಿ ವಹಿಸಿದ್ದರು. ಹಂಗಳ ಮಠದ ಷಡಕ್ಷರ ಸ್ವಾಮೀಜಿ ಭಾಗವಹಿಸಿದ್ದರು.

ಸಾವಿರ ಸಂಖ್ಯೆಯ ಭಕ್ತರು: ಆರಾಧನೆ ಮತ್ತು ವಿಶೇಷ ಪೂಜೆಯಲ್ಲಿ ಭಕ್ತರು ಸಾವಿರ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ದೇವಾಲಯದ ಪೂರ್ವ ಪಾರ್ಶ್ವದ ಮಂಟಪದಲ್ಲಿ ಪ್ರತಿಷ್ಠಾಪಿಸಿದ್ದ ಬಸವನ ಮೂರ್ತಿ, ಹುಲಿ ವಾಹನ, ವೃಷಭ ವಾಹನ ಇತರೆ ದೇವರ ಉತ್ಸವ ಮೂರ್ತಿಗೆ ಭಕ್ತರು ಪೂಜೆ ಸಲ್ಲಿಸಿದರು. ನಂತರ ಸರದಿ ಸಾಲಿನಲ್ಲಿ ತೆರಳಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ಪ್ರಸಾದ ವಿನಿಯೋಗ: ಶಿವಪುರ, ಬೊಮ್ಮಲಾಪುರ, ಹುಂಡಿಮನೆ ಇತರೆ ಗ್ರಾಮಗಳ ಜನರ ಸಹಕಾರದಲ್ಲಿ ಪ್ರಸಾದ ವಿನಿಯೋಗದ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸ್ ಇಲಾಖೆ ಸಹಕಾರದಲ್ಲಿ ಸಂಜೆ ತನಕವೂ ಅಚ್ಚುಕಟ್ಟಾದ ರೀತಿಯಲ್ಲಿ ಪ್ರಸಾದ ವಿನಿಯೋಗ ನೆರವೇರಿತು.

ಶಾಸಕರ ಭೇಟಿ: ಆರಾಧನಾ ಮಹೋತ್ಸವದಲ್ಲಿ ಕ್ಷೇತ್ರದ ಶಾಸಕ ಎಚ್.ಎಂ.ಗಣೇಶ್‍ಪ್ರಸಾದ್, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು, ಗಣ್ಯರು ಭೇಟಿ ನೀಡಿ ದೇವರ ದರ್ಶನ ಪಡೆದರು.

ಆರಾಧನೆ ಮತ್ತು ವಿಶೇಷ ಪೂಜೆ ಹಿನ್ನೆಲೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯವರು ವಿಶೇಷ ಬಸ್ ಸಂಚಾರದ ವ್ಯವಸ್ಥೆ ಮಾಡಿದ್ದರು. ಖಾಸಗಿ ವಾಹನಗಳ ಓಡಾಟವೂ ಹೆಚ್ಚಿತ್ತು. ಸಾವಿರ ಸಂಖ್ಯೆಯಲ್ಲಿ ಜನರು ಸೇರಿದ್ದ ಹಿನ್ನೆಲೆಯಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ಪರಶಿವಮೂರ್ತಿ ನೇತೃತ್ವದಲ್ಲಿ ಬೀಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಪಿಎಸ್‍ಐಗಳಾದ ಸಾಹೇಬಗೌಡ, ಚಂದ್ರಪ್ಪ, ಎಎಸ್‍ಐಗಳು ಮತ್ತು ಪೊಲೀಸ್ ಸಿಬ್ಬಂದಿ ಸಂಚಾರ ನಿಯಂತ್ರಣವನ್ನು ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT