ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಲಯ ಅಮಾವಾಸ್ಯೆ: ಮಹದೇಶ್ವರ ಬೆಟ್ಟಕ್ಕೆ ಭಕ್ತರ ದಂಡು

ಸಾವಿರಾರು ಜನರಿಂದ ಮಹದೇಶ್ವರ ಸ್ವಾಮಿ ದರ್ಶನ,. ಹೆಚ್ಚುವರಿ ಬಸ್‌ ವ್ಯವಸ್ಥೆ
Last Updated 25 ಸೆಪ್ಟೆಂಬರ್ 2022, 14:46 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ಇಲ್ಲಿನ ಪ್ರಸಿದ್ಧಯಾತ್ರಾ ಸ್ಥಳ ಮಲೆ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಮಹಾಲಯ ಅಮಾವಾಸ್ಯೆ ಪ್ರಯುಕ್ತ ಭಾನುವಾರ ವಿಶೇಷ ಪೂಜೆಗಳು ನಡೆದವು.

ಜಿಲ್ಲೆ, ಹೊರ ಜಿಲ್ಲೆ, ನೆರೆಯ ತಮಿಳುನಾಡಿನಿಂದ ಬಂದಿದ್ದ ಸಾವಿರಾರು ಭಕ್ತರು ಮಹದೇಶ್ವರ ಸ್ವಾಮಿಯ ದರ್ಶನ ಮಾಡಿ ಕಾಣಿಕೆ, ಹರಕೆ ಸೇವೆ ಸಲ್ಲಿಸಿದರು.

ಬೇಡಗಂಪಣ ಸಮುದಾಯದ ವಿಧಿ ವಿಧಾನದಲ್ಲಿ ಭಾನುವಾರ ಮುಂಜಾನೆ ನಾಲ್ಕರಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಸ್ವಾಮಿಗೆ ರುದ್ರಾಭಿಷೇಕ, ಕ್ಷೀರಾಭಿಷೇಕ, ಗಂಧಾಭಿಷೇಕ, ಮಹಾ ಮಂಗಳಾರತಿ ನೆರವೇರಿಸಲಾಯಿತು. ಆ ಬಳಿಕ ಭಕ್ತರಿಗೆ ಮಹದೇಶ್ವರ ಸ್ವಾಮಿಯ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.

ಮಹಾಲಯ ಅಮಾವಾಸ್ಯೆ ದಿನ ಸಾವಿರಾರು ಭಕ್ತರು ಬೆಟ್ಟಕ್ಕೆ ಬಂದು ಮಾದಪ್ಪನ ದರ್ಶನ ಪಡೆಯುವುದು ವಾಡಿಕೆ. ಎರಡು ವರ್ಷಗಳಿಂದ ಕೋವಿಡ್‌ ಕಾರಣಕ್ಕೆ ಭಕ್ತರ ಸಂಖ್ಯೆ ಕಡಿಮೆ ಇತ್ತು. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ಸರತಿ ಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನ ಮಾಡಿದರು. ₹300, ₹500 ಶುಲ್ಕದ ವಿಶೇಷ ದರ್ಶನ ವ್ಯವಸ್ಥೆಯೂ ಇತ್ತು.

ರಂಗ ಮಂದಿರ, ದೇವಾಲಯದ ಹೊರ ಆವರಣದಲ್ಲಿ ಭಕ್ತರ ಸಂಖ್ಯೆ ಹೆಚ್ಚಿತ್ತು. ಯಾವುದೇ ಅಹಿತಕರ ಘಟನೆ ತಡೆಯುವುದಕ್ಕಾಗಿ ಪೊಲೀಸರು ಬಿಗಿ ಬಂದೋಬಸ್ತ್‌ ಮಾಡಿದ್ದರು. ಬಂದ ಎಲ್ಲ ಭಕ್ತಾದಿಗಳಿಗಾಗಿ ನಿರಂತರ ದಾಸೋಹ ವ್ಯವಸ್ಥೆಯನ್ನು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮಾಡಿತ್ತು.

ವಿವಿಧ ಸೇವೆ: ಭಕ್ತರು ಹುಲಿವಾಹನ, ಬಸವವಾಹನ, ರುದ್ರಾಕ್ಷಿ ಮಂಟಪ, ಉರುಳು ಸೇವೆ, ಪಂಜಿನ ಸೇವೆ, ದೀವಟಿಗೆ ಸೇವೆ, ಕಡಲೆ ಸೇವೆ ಹಾಗೂ ಇನ್ನಿತರ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹರಕೆ ಮತ್ತು ಕಾಣಿಕೆಯನ್ನು ಸ್ವಾಮಿಯ ಮುಡಿಗೇರಿಸಿದರು.

ಹೆಚ್ಚುವರಿ ಬಸ್‌: ಸಾವಿರಾರು ಸಂಖ್ಯೆಯ ಭಕ್ತರ ಸುಗಮ ಸಂಚಾರಕ್ಕಾಗಿ ಕೆಎಸ್‌ಆರ್‌ಟಿಸಿಯು 350ರಿಂದ 400 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಿತ್ತು. ಜಾತ್ರೆಯ ಮೊದಲೆರಡು ದಿನ ಸಾಕಷ್ಟು ಸಂಖ್ಯೆಯಲ್ಲಿ ಬಸ್‌ ಇಲ್ಲದೆ ಜನರು ತೊಂದರೆ ಅನುಭವಿಸಿದ್ದರು. ಮಹದೇಶ್ವರ ಬೆಟ್ಟದಿಂದ ಬೆಂಗಳೂರು, ಮೈಸೂರು, ಚಾಮರಾಜನಗರ, ಮಂಡ್ಯ ಸೇರಿದಂತೆ ವಿವಿಧ ಕಡೆಗಳಿಗೆ ನೇರ ಬಸ್‌ ವ್ಯವಸ್ಥೆ ಮಾಡಲಾಗಿತ್ತು.

ನವರಾತ್ರಿ ವ್ರತ ಆರಂಭ: ದಸರಾ ಜಾತ್ರೆಗೆ ಮುನ್ನುಡಿ ಬರೆಯುವ ಶರವನ್ನವರಾತ್ರಿ ವ್ರತ ಸೋಮವಾರ (ಸೆ.26) ಆರಂಭವಾಗಲಿದೆ. ಉಯ್ಯಾಲೋತ್ಸಕ್ಕೂ ಚಾಲನೆ ಸಿಗಲಿದೆ.

ಅ.4ರಂದು ಮಹಾನವಮಿ, ಆಯುಧ ಪೂಜೆ ಕಾರ್ಯಕ್ರಮ ನಡೆಯಲಿದೆ. 5ರಂದು ವಿಜಯ ದಶಮಿ, ಕುದುರೆ ವಾಹನೋತ್ಸವ ಮತ್ತು ದಶಮಿ ಪೂಜೆಗಳು ನೆರವೇರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT