ಮಹದೇಶ್ವರ ಬೆಟ್ಟ: ಪ್ರಸಿದ್ದ ದಾರ್ಮಿಕ ಯಾತ್ರಾ ಸ್ಥಳವಾದ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಂಗಳವಾರ ಮಹಾಲಯ ಜಾತ್ರೆಯ ಪ್ರಯುಕ್ತ ಮಾದಪ್ಪನಿಗೆ ಎಣ್ಣೆ ಮಜ್ಜನದ ಸೇವೆ ನಡೆಯಿತು. ಸಾವಿರಾರು ಭಕ್ತರ ಉದ್ಘೋಷಗಳ ನಡುವೆ ಮಹದೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಬೇಡಗಂಪಣ ಪೂಜಾ ವಿಧಿ ವಿಧಾನದಂತೆ ಮಂಗಳವಾರ ಬೆಳಿಗ್ಗೆ ದೇವರಿಗೆ ಎಣ್ಣೆ ಮಜ್ಜನ ಸೇವೆ ಸಲ್ಲಿಸಿ ಬಗೆಬಗೆಯ ಫಲ ಪುಷ್ಪಗಳಿಂದ ಸಿಂಗರಿಸಿ, ಮಾದಪ್ಪನಿಗೆ ಪ್ರಿಯವಾದ ಬಿಲ್ವಾರ್ಚನೆ ನಡೆಯಿತು. ಬಳಿಕ ಮಹಾಮಂಗಳಾರತಿ ಮಾಡಿ ಭಕ್ತರಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.
ವರ್ಷಕ್ಕೊಮ್ಮೆ ನಡೆಯುವ ಮಹಾಲಯ ಜಾತ್ರೆಯನ್ನು ಕಣ್ತುಂಬಿಕೊಳ್ಳಲು ಹಾಗೂ ಮಾದಪ್ಪನಿಗೆ ಎಣ್ಣೆಮಜ್ಜನ ಸೇವೆಯಲ್ಲಿ ಭಾಗವಹಿಸಲು ರಾಜ್ಯದ ನಾನಾ ಭಾಗಗಳಿಂದ ಸಾಗರೋಪಾದಿಯಲ್ಲಿ ಭಕ್ತರು ಮಹದೇಶ್ವರ ಬೆಟ್ಟಕ್ಕೆ ಬಂದಿದ್ದರು. ಎಣ್ಣೆ ಮಜ್ಜನ ಸೇವೆಯ ಬಳಿಕ ಬೆಳ್ಳಿ ರಥೋತ್ಸವ ವೀಕ್ಷಣೆ ಮಾಡಿದರು. ಬಸವ ವಾಹನ, ಹುಲಿ ವಾಹನ, ರುಧ್ರಾಕ್ಷಿ ಮಂಟಪ, ಪಂಜಿನ ಸೇವೆ ಬಳಿಕ ಸಂಜೆ ವಿಜೃಂಭಣೆಯ ಚಿನ್ನದ ರಥೋತ್ಸವ ನಡೆಯಿತು.
ಕ್ಷೇತ್ರಕ್ಕೆ ಬಂದಿದ್ದ ಭಕ್ತರಿಗೆ ಹಲವು ಕಡೆಗಳಲ್ಲಿ ಕುಡಿಯುವ ನೀರು ಹಾಗೂ ಶೌಚಾಲಯಗಳ ವ್ಯವಸ್ಥೆ ಮಾಡಲಾಗಿತ್ತು. ಬಿಸಿಲಿನ ಬೇಗೆ ಕಡಿಮೆಗೊಳಿಸಲು ನೆರಳಿನ ವ್ಯವಸ್ಥೆ ಇತ್ತು. ಭಕ್ತರಿಗೆ ಜಾತ್ರೆಯ ಪ್ರಯುಕ್ತ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಭಕ್ತರು ದೇವಸ್ಥಾನದ ಸುತ್ತಲೂ ಉರುಳುಸೇವೆ ಮಾಡಿ ಹರಕೆ ಸಲ್ಲಿಸಿದರು.
ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು ಭೋಜನ ಶಾಲೆಯಲ್ಲಿ ತಯಾರಾದ ಪ್ರಸಾದವನ್ನು ಸೇವಿಸಿ ಗುಣಮಟ್ಟ ಹಾಗೂ ರುಚಿ ಪರಿಶೀಲಿಸಿದರು. ಭಕ್ತರಿಗೆ ತೊಂದರೆಯಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುವಂತೆ ಸಿಬ್ಬಂದಿಗೆ ನಿರ್ದೇಶನ ನೀಡಿದರು.
ಅಮಾವಾಸ್ಯೆ ಜಾತ್ರೆ ಅಂಗವಾಗಿ ಮಹದೇಶ್ವರ ಬೆಟ್ಟ ಪ್ರದೇಶ ಹಾಗೂ ದೇಗುಲದ ಪ್ರಾಂಗಣ, ದೇವಸ್ಥಾನಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ತುರ್ತು ಆರೋಗ್ಯ ಸೇವೆ ನೀಡಲು ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು.
ಚಾಮರಾಜನಗರ, ಕೊಳ್ಳೇಗಾಲ ತಾಲ್ಲೂಕಿನಿಂದ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಹೆಚ್ಚುವರಿ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳನ್ನು ಬಿಡಲಾಗಿತ್ತು. ಬೆಟ್ಟದಲ್ಲಿ ದಸರಾ ಉತ್ಸವವೂ ವಿಜೃಂಭಣೆಯಿಂದ ನಡೆಯಲಿದ್ದು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅ.3ರಿಂದ 9 ದಿನಗಳು ವಿಶೇಷ ಪೂಜೆಗಳು, ದೇವರ ಆರಾಧನೆ ನಡೆಯಲಿದೆ.
ಮಹದೇಶ್ವರನ ಸನ್ನಿಧಿಯಲ್ಲಿ ಮಾದಪ್ಪನ ಸ್ಮರಣೆ ಪಾದಯಾತ್ರೆ ಮೂಲಕ ಬಂದಿದ್ದ ಸಾವಿರಾರು ಭಕ್ತರು ಮಹಾಲಯ ಜಾತ್ರೆ, ರಥೋತ್ಸವ ಕಣ್ತುಂಬಿಕೊಂಡ ಭಕ್ತರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.