ಹಣದ ವಿಚಾರಕ್ಕೆ ಮಹಿಳೆ ಹತ್ಯೆ: ಅಪರಾಧಿಗೆ ಜೀವಾವಧಿ ಶಿಕ್ಷೆ

ಚಾಮರಾಜನಗರ: ಹಣದ ವಿಚಾರಕ್ಕೆ ಮಹಿಳೆಯನ್ನು ಕೊಲೆ ಮಾಡಿದ್ದ ವ್ಯಕ್ತಿಗೆ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಗುರುವಾರ ಆದೇಶ ಹೊರಡಿಸಿದೆ.
ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ ಗ್ರಾಮದ ಆನಂದಕುಮಾರ ಶಿಕ್ಷೆಗೊಳಗಾದ ವ್ಯಕ್ತಿ. 2016ರ ಫೆಬ್ರುವರಿ 13ರಂದು ಕೊಲೆ ನಡೆದಿತ್ತು.
ತೆರಕಣಾಂಬಿ ಗ್ರಾಮದ ರತ್ನಮ್ಮ ಎಂಬ ಮಹಿಳೆಯ ಗಂಡ ರಾಮಚಂದ್ರ ಅವರಿಂದ ಆನಂದಕುಮಾರ ₹10 ಸಾವಿರ ಸಾಲ ಪಡೆದಿದ್ದ. ಅದನ್ನು ಮರುಪಾವತಿಗೆ ಹೋಗಿದ್ದ ಸಂದರ್ಭದಲ್ಲಿ, ಇದಕ್ಕೆ ಬಡ್ಡಿ ಸೇರಿಸಿ ಹೆಚ್ಚಿನ ಮೊತ್ತ ನೀಡಬೇಕು ಎಂದು ರತ್ನಮ್ಮ ಪಟ್ಟು ಹಿಡಿದಿದ್ದರು. ಆಗ ಇಬ್ಬರಿಗೂ ಜಗಳವಾಗಿತ್ತು. ಇದೇ ವಿಚಾರವಾಗಿ ಇಬ್ಬರ ನಡುವೆ ಪದೇ ಪದೇ ಜಗಳವಾಗುತ್ತಿತ್ತು.
ಇದೇ ದ್ವೇಷದಿಂದ 2016ರ ಫೆ.13ರಂದು ಸಂಜೆ 4.30ರಲ್ಲಿ ರತ್ನಮ್ಮ ಅವರು ಚಿನ್ನಮ್ಮ ಎಂಬುವವರೊಡನೆ ತೆರಕಣಾಂಬಿಯ ರಾಮಮಂದಿರದ ಬಳಿ ನಡೆದು ಹೋಗುತ್ತಿದ್ದಾಗ, ಸೈಕಲ್‌ನಲ್ಲಿ ಬಂದ ಆನಂದಕುಮಾರ, ‘ಸಾಲದ ಹಣ ಪಾವತಿ ಮಾಡಲು ಬಂದರೆ ಹೆಚ್ಚು ಹಣ ಕೇಳುತ್ತೀರಾ’ ಎಂದು ಅವಾಚ್ಯ ಶಬ್ದಗಳಿಂದ ಬೈದು ರತ್ನಮ್ಮಳ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದ. ತೀವ್ರವಾಗಿ ಗಾಯಗೊಂಡಿದ್ದ ರತ್ನಮ್ಮ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ತನಿಖೆ ನಡೆಸಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿ, ಆರೋಪ ಪಟ್ಟಿ ಸಲ್ಲಿಸಿದ್ದರು.
ಕೊಲೆ ಮಾಡಿರುವುದು ಸಾಬೀತು ಆಗಿರುವುದರಿಂದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸದಾಶಿವ ಎಸ್. ಸುಲ್ತಾನ್‌ಪುರಿ ಅವರು ಆನಂದನಿಗೆ ಜೀವಾವಧಿ ಶಿಕ್ಷೆ ಹಾಗೂ ₹6,500 ದಂಡ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಟಿ.ಎಚ್.ಲೋಲಾಕ್ಷಿ ವಾದ ಮಂಡಿಸಿದ್ದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.