ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಚೇತರಿಕೆ ಕಾಣದ ಹೂ, ಮತ್ತೆ ಕುಸಿದ ಟೊಮೆಟೊ

Published 13 ಸೆಪ್ಟೆಂಬರ್ 2023, 6:53 IST
Last Updated 13 ಸೆಪ್ಟೆಂಬರ್ 2023, 6:53 IST
ಅಕ್ಷರ ಗಾತ್ರ

ಚಾಮರಾಜನಗರ: ತರಕಾರಿ ಮಾರುಕಟ್ಟೆಯಲ್ಲಿ ಟೊಮೆಟೊ ಧಾರಣೆ ಮತ್ತೆ ಕುಸಿದಿದೆ. ಹಾಪ್‌ಕಾಮ್ಸ್‌ನಲ್ಲಿ ಕೆಜಿ ಟೊಮೆಟೊ ₹10ಕ್ಕೆ ಸಿಗುತ್ತಿದೆ. 

ಏಳೆಂಟು ವಾರಗಳ ಹಿಂದೆ ಟೊಮೆಟೊ ಧಾರಣೆ ₹100ರ ಆಸುಪಾಸಿನಲ್ಲಿತ್ತು. ಕೆಲವೇ ವಾರಗಳ ಅಂತರದಲ್ಲಿ ಬೆಲೆ ಭಾರಿ ಪ್ರಮಾಣದಲ್ಲಿ ಇಳಿದಿದೆ. ರೈತರಿಗೂ ಕೆಜಿಗೆ ₹5ಕ್ಕಿಂತ ಕಡಿಮೆ ಸಿಗುತ್ತಿದೆ. 

‘ಎಪಿಎಂಸಿಗೆ ಹೆಚ್ಚು ಟೊಮೆಟೊ ಬರುತ್ತಿದೆ. ಗ್ರಾಹಕರಿಂದ ಬೇಡಿಕೆಯೂ ಇಲ್ಲ ಹಾಗಾಗಿ, ಬೆಲೆ ಕಡಿಮೆಯಾಗಿದೆ’ ಎಂದು ಹೇಳುತ್ತಾರೆ ವ್ಯಾಪಾರಿಗಳು. 

ಟೊಮೆಟೊ ಸೇರಿದಂತೆ ಒಂದೆರಡು ತರಕಾರಿಗಳನ್ನು ಬಿಟ್ಟು ಉಳಿದವುಗಳ ಬೆಲೆ ಸ್ಥಿರವಾಗಿದೆ. 

ಗೆಡ್ಡೆಕೋಸಿನ ಧಾರಣೆ ಕೆಜಿಗೆ ಈ ವಾರ ₹20ರಷ್ಟು ಹೆಚ್ಚಾಗಿದೆ. ಕಳೆದವಾರ ₹40 ಇತ್ತು. ದಪ್ಪಮೆಣಸಿನಕಾಯಿ ಬೆಲೆ ₹10 ಹೆಚ್ಚಾಗಿದೆ. 

ಬೀನ್ಸ್‌, ಕ್ಯಾರೆಟ್‌, ಆಲೂಗಡ್ಡೆ, ಮೂಲಂಗಿ  (₹30), ಈರುಳ್ಳಿ (₹35ರಿಂದ ₹40) ಸೇರಿದಂತೆ ಉಳಿದ ತರಕಾರಿಗಳ ಧಾರಣೆ ಸ್ಥಿರವಾಗಿದೆ. 

ಹಣ್ಣುಗಳ ಪೈಕಿ ಎಲ್ಲ ಫಲಗಳ ಧಾರಣೆಯಲ್ಲಿ ವ್ಯತ್ಯಾಸವಾಗಿಲ್ಲ. ಏಲಕ್ಕಿ ಬಾಳೆಹಣ್ಣಿನ ದುಬಾರಿ ಬೆಲೆ (₹100) ಈ ವಾರವೂ ಮುಂದುವರಿದಿದೆ. ಪಚ್ಚೆ ಬಾಳೆಗೂ ₹50 ಇದೆ. 

‌ಮೂಸಂಬಿ ಸೀಸನ್‌ ಆಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗುತ್ತಿದ್ದು, ಕೆಜಿಗೆ ₹60ರಿಂದ ₹70ರವರೆಗೆ ಇದೆ. 

ಚೆಂಡು ಹೂವಿನ ಬೆಲೆ ಪಾತಾಳಕ್ಕೆ: ಹೂವುಗಳ ಬೆಲೆ ಈ ವಾರವೂ ಚೇತರಿಕೆ ಕಂಡಿಲ್ಲ. ಚೆಂಡು ಹೂವನ್ನು ಕೇಳುವರೇ ಇಲ್ಲ. ಕೆಜಿಗೆ ₹5ಕ್ಕೆ ಕೊಟ್ಟರೂ ಖರೀದಿಸುವವರಿಲ್ಲ ಎಂದು ಹೇಳುತ್ತಾರೆ ಬಿಡಿ ಹೂವಿನ ವ್ಯಾಪಾರಿಗಳು. 

ನಗರದ ಚೆನ್ನಿಪುರಮೋಳೆಯ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಸೋಮವಾರ ಕನಕಾಂಬರಕ್ಕೆ ಕೆಜಿಗೆ ₹400, ಮಲ್ಲಿಗೆಗೆ ₹240, ಸುಗಂಧರಾಜಕ್ಕೆ ₹100, ಬಟನ್‌ಗುಲಾಬಿಗೆ ₹100ರಿಂದ ₹120ರವರೆಗೆ ಇತ್ತು. ಸೇವಂತಿಗೆಗೆ ಬೇಡಿಕೆ ಕುಸಿದಿದ್ದು, ಕೆಜಿಗೆ ₹10ರಿಂದ ₹20ಕ್ಕೆ ಮಾರಾಟವಾಗುತ್ತಿದೆ. 

ಮುಂದಿನವಾರ ಗಣೇಶನ ಹಬ್ಬ ಇರುವುದರಿಂದ ನಾಲ್ಕೈದು ದಿನಗಳಲ್ಲಿ ಹೂವಿಗೆ ಬೇಡಿಕೆ ಹೆಚ್ಚಾಗಲಿದ್ದು, ಬೆಲೆಯೂ ಏರಲಿದೆ ಎಂದು ಹೇಳುತ್ತಾರೆ ಬಿಡಿ ಹೂವಿನ ವ್ಯಾಪಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT