ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆ ಮಹದೇಶ್ವರ ವನ್ಯಧಾಮ: ಗಿಡಮೂಲಿಕಾ ವನ ನಿರ್ಮಾಣ

ಮಲೆ ಮಹದೇಶ್ವರ ವನ್ಯಧಾಮದ ಪ್ರಯತ್ನಲ ಹೂಗ್ಯಂ ವಲಯದಲ್ಲಿ ಅನುಷ್ಠಾನ
ಬಿ. ಬಸವರಾಜು
Published 10 ಡಿಸೆಂಬರ್ 2023, 5:15 IST
Last Updated 10 ಡಿಸೆಂಬರ್ 2023, 5:15 IST
ಅಕ್ಷರ ಗಾತ್ರ

ಹನೂರು: ಮಲೆಮಹದೇಶ್ವರ ವನ್ಯಧಾಮದ ವ್ಯಾಪ್ತಿಯಲ್ಲಿ ಕಂಡು ಬರುವ ಔಷಧಿ ಸಸ್ಯಗಳನ್ನು ಸಂರಕ್ಷಿಸುವುದರೊಂದಿಗೆ, ಅದರ ಬಗ್ಗೆ ಜನರಿಗೆ ತಿಳಿಸುವುದಕ್ಕಾಗಿ ಅರಣ್ಯ ಇಲಾಖೆಯು ಹೂಗ್ಯಂ ವನ್ಯಜೀವಿ ವಲಯದಲ್ಲಿ ಉದ್ಯಾನ ನಿರ್ಮಿಸುತ್ತಿದೆ.

ವನ್ಯಧಾಮದ ಅರಣ್ಯ ಪ್ರದೇಶದಲ್ಲಿ ಔಷಧಿ ಗಿಡಮೂಲಿಕೆಗಳು ಹೇರಳವಾಗಿದ್ದು, ಅದನ್ನು ಸಂಗ್ರಹಿಸುವ ಸಲುವಾಗಿ ಹಲವಾರು ಜನರು ಅತಿಕ್ರಮವಾಗಿ ಅರಣ್ಯ ಪ್ರವೇಶಿಸುತ್ತಿರುತ್ತಾರೆ. ಇದನ್ನು ತಪ್ಪಿಸುವ ಉದ್ದೇಶದಿಂದ ಅರಣ್ಯ ಇಲಾಖೆಯು ಅವರು ಸಂಗ್ರಹಿಸುತ್ತಿದ್ದ ಔಷಧಿ ಗಿಡಮೂಲಿಕೆಗಳನ್ನು ಪತ್ತೆ ಹಚ್ಚಿ ಅದರ ಬೀಜ ಮತ್ತು ಗಿಡಗಳನ್ನು ಸಂಗ್ರಹಿಸಿ ಉದ್ಯಾನದಲ್ಲಿ ಬೆಳೆಸುತ್ತಿದೆ. ಇದು ಮುಂದಿನ ದಿನಗಳಲ್ಲಿ ನಾಟಿ ವೈದ್ಯರಿಗೆ ಹಾಗೂ ಮುಂದಿನ ಪೀಳಿಗೆಗೆ ಅನುಕೂಲವಾಗಲಿದೆ ಎಂಬುದು ಅರಣ್ಯ ಇಲಾಖೆ ಆಶಯ.

ವಿದ್ಯಾರ್ಥಿಗಳ ಬಳಕೆ: ಮಲೆಮಹದೇಶ್ವರ ವನ್ಯಧಾಮದಲ್ಲಿ ವ್ಯಾಪಕವಾಗಿರುವ ಔಷಧಿ ಗಿಡಮೂಲಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ ಅರಣ್ಯ ಇಲಾಖೆಯು ಪರಿಸರ ವಿಜ್ಞಾನ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಬಳಸಿಕೊಂಡು ಔಷಧಿ ಗಿಡಗಳನ್ನು ಪತ್ತೆ ಮಾಡಿದೆ. ಈ ಗಿಡಗಳನ್ನು ಮಿಣ್ಯತ್ತಹಳ್ಳ ಜಲಾಶಯದ (ಹೂಗ್ಯಂ ಡ್ಯಾಂ) ಬಳಿ ನೆಟ್ಟು ಉದ್ಯಾನ ನಿರ್ಮಿಸಿದೆ. 

3.55 ಹೆಕ್ಟೇರ್ ಪ್ರದೇಶದಲ್ಲಿ 120 ಕ್ಕೂ ಹೆಚ್ಚು ಔಷಧಿ ಗಿಡಗಳನ್ನು ಬೆಳೆಸಲಾಗುತ್ತಿದೆ. ಅಲ್ಲ‌ದೇ ಸಾರ್ವಜನಿಕರಲ್ಲೂ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದೆ. ಈಗಾಗಲೇ ಔಷಧಿ ಗಿಡಮೂಲಿಕೆಗಳ ಉದ್ಯಾನಕ್ಕೆ ಸ್ಥಳೀಯ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಆಸಕ್ತರು ಭೇಟಿ ನೀಡುತ್ತಿದ್ದಾರೆ. 

‘ಅನಗತ್ಯವಾಗಿ ಬಿದ್ದಿದ್ದ ಸ್ಥಳದಲ್ಲಿ ಔಷಧಿ ಗಿಡಗಳನ್ನು ಬೆಳೆಸುತ್ತಿದ್ದೇವೆ. ಇದು ಮುಂದಿನ ದಿನಗಳಲ್ಲಿ ಉತ್ತಮ ಮಾಹಿತಿ ಕೇಂದ್ರವಾಗಲಿದೆ. ನಾಟಿ ಔಷಧಿ ನೀಡುವ ವೈದ್ಯರಿಗೆ ಇದು ಮಾಹಿತಿ ಕಣಜವಾಗಲಿದೆ. ಇದರಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಪಾತ್ರ ಮುಖ್ಯವಾಗಿದೆ. ಸ್ಥಳೀಯರು ಹಾಗೂ ಗಿರಿಜನರು ಬಳಸುವ ಔಷಧಿ ಗಿಡಗಳನ್ನು ಪತ್ತೆ ಹಚ್ಚಿ ಜನರಿಗೆ ಪ್ರಾಕೃತಿಕವಾಗಿ ಸಿಗುವ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಇಲಾಖೆ ಸಿಬ್ಬಂದಿ ಕಾರ್ಯವೈಖರಿ ಅತ್ಯಂತ ಮಹತ್ವವಾಗಿದೆ’ ಎಂದು ವಲಯ ಅರಣ್ಯಾಧಿಕಾರಿ ಗಿರಿಧರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಔಷಧಿ ಸಸ್ಯಗಳ ಉದ್ಯಾನದ ಪ್ರವೇಶದ್ವಾರ
ಔಷಧಿ ಸಸ್ಯಗಳ ಉದ್ಯಾನದ ಪ್ರವೇಶದ್ವಾರ

‘ಅರಣ್ಯದ ಅವಲಂಬನೆ ತಪ್ಪಲಿದೆ’ ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಲೆಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ.ಸಂತೋಷ್ ಕುಮಾರ್ ‘ಅರಣ್ಯದೊಳಗೆ ಸಿಗುವ ಮಾಗಳಿ ಬೇರಿಗೆ ಬೇಡಿಕೆಯಿದೆ. ಅದನ್ನು ಸಂಗ್ರಹಿಸಲು ಅರಣ್ಯದೊಳಗೆ ಅಕ್ರಮವಾಗಿ ಪ್ರವೇಶಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರ ಜತೆಗೆ ಔಷಧಿ ಗಿಡಗಳನ್ನು ತೆಗೆಯಲು ಎಗ್ಗಿಲ್ಲದೇ ಜನರು ಕಾಡಿಗೆ ಹೋಗುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಅರಣ್ಯದೊಳಗೆ ಸಿಗುವ ಔಷಧಿ ಗಿಡಗಳನ್ನು ಅರಣ್ಯ ಇಲಾಖೆಯೇ ಬೆಳೆಸುತ್ತಿದೆ. ಇದರ ಜತೆಗೆ ರೈತರಿಗೂ ತಮ್ಮ ಜಮೀನಿನಲ್ಲಿ ಬೆಳೆಸಲು ಪ್ರೋತ್ಸಾಹ ನೀಡುತ್ತಿದೆ. ಇದರಿಂದಾಗಿ ಜನರು ಅರಣ್ಯದ ಮೇಲೆ ಅವಲಂಬಿತವಾಗುವುದನ್ನು ಕಡಿಮೆ ಮಾಡಿದಂತಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT