ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೇಮರಹಳ್ಳಿ: ಅಪರೂಪದ ಚಿತ್ರ ಕಲಾವಿದ ಮಧುಸೂದನ್‌

Published 9 ನವೆಂಬರ್ 2023, 6:22 IST
Last Updated 9 ನವೆಂಬರ್ 2023, 6:22 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಬಾಲ್ಯದಲ್ಲಿ ಗೋಡೆ ಮೇಲೆ ಚಿತ್ರ ಬಿಡಿಸುತ್ತಿದ್ದ ಬಾಲಕನೊಬ್ಬ ಇಂದು, ರಾಜ್ಯ, ದೇಶವೇ ಗುರುತಿಸುವ ಕಲಾವಿದರಾಗಿ ಬೆಳೆದಿದ್ದಾರೆ. 

ವೈವಿಧ್ಯಮಯ ಚಿತ್ರಗಳನ್ನು, ಸ್ತಬ್ಧಚಿತ್ರಗಳನ್ನು ರೂಪಿಸುವ ಕಲೆಯನ್ನು ಕರಗತಮಾಡಿಕೊಂಡಿರುವ ಚಾಮರಾಜನಗರ ತಾಲ್ಲೂಕಿನ ಮಂಗಲ ಹೊಸೂರು ಗ್ರಾಮದ ಮಧುಸೂದನ್‌ ಅಪರೂಪದ ಕಲಾವಿದ. 

ಇತ್ತೀಚೆಗೆ ನಡೆದ ಮೈಸೂರು ಜಂಬೂ ಸವಾರಿಯಲ್ಲಿ ಭಾಗವಹಿಸಿದ್ದ ಸ್ತಬ್ಧಚಿತ್ರಗಳಲ್ಲಿ ಉತ್ತಮ ಸ್ತಬ್ಧಚಿತ್ರ ಎಂಬ ಬಹುಮಾನ ಪಡೆದ ಜಿಲ್ಲೆಯ ‘ಜಾನಪದ ಭಕ್ತಿಯ ಬೀಡು ಹುಲಿ ಆನೆಗಳ ಕಾಡು’  ಸ್ತಬ್ಧಚಿತ್ರದಲ್ಲಿ ಮಧುಸೂದನ್‌ ಕೈಚಳಕ ಇತ್ತು. ಈ ಹಿಂದೆಯೂ ಹಲವು ಸ್ತಬ್ಧಚಿತ್ರಗಳ ತಯಾರಿಕೆಯಲ್ಲಿ ತಮ್ಮ ಕಲಾ ನೈಪುಣ್ಯ ಪ್ರದರ್ಶಿಸಿದ್ದಾರೆ. ಬಹುಮಾನಗಳನ್ನೂ ಗಳಿಸಿದ್ದಾರೆ. 

33ರ ಹರೆಯದ ಮಧುಸೂದನ್‌ ಅವರು ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದ ಉತ್ಸವಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ಪರ್ಧೆಗಳಲ್ಲಿ ಚಿತ್ರಗಳನ್ನು ಬಿಡಿಸಿ ಗಮನಸೆಳೆದಿದ್ದಾರೆ. 

ಜಾನಪದ, ಸಾಂಸ್ಕೃತಿಕ, ನೃತ್ಯ ಹಾಗೂ ಬುಡಕಟ್ಟು ಜನಾಂಗಗಳ ಕಲೆಗಳು, ಸಂಸ್ಕೃತಿ ಪರಂಪರೆಗಳನ್ನೇ ತಮ್ಮ ಚಿತ್ರಗಳಿಗೆ ವಸ್ತುವಾಗಿ ಆಯ್ಕೆ ಮಾಡುವುದು ಇವರ ವೈಶಿಷ್ಟ್ಯ. ಸ್ಪಾಟ್‌ ಪೇಂಟಿಂಗ್‌, ಅಂದರೆ ಎದುರಿಗಿದ್ದ ವ್ಯಕ್ತಿ, ವಸ್ತುವನ್ನು ನೋಡಿಕೊಂಡು ಅವರ ಚಿತ್ರವನ್ನು ಸ್ಥಳದಲ್ಲೇ ಬರೆಯುವ ಕಲೆಯೂ ಇವರಿಗೆ ಕರಗತ.

ಗೋಡೆಗಳಲ್ಲಿ ಮೂಡಿದ ಚಿತ್ರಗಳು: ಮಧುಸೂದನ್‌ ಅವರ ತಂದೆ ಗ್ರಾಮದಲ್ಲಿ ನಡೆಯುವ ಹಬ್ಬಗಳು ಹಾಗೂ ಆಯುಧ ಪೂಜೆ ಸಂದರ್ಭದಲ್ಲಿ ಬಣ್ಣದ ಕಾಗದಗಳನ್ನು ಕತ್ತರಿಸಿ ತೋರಣ ಕಟ್ಟುತ್ತಿದ್ದರು. ಇದರಿಂದ ಪ್ರೇರಿತರಾದ ಮಧುಸೂದನ್‌ ಗೋಡೆಗಳ ಮೇಲೆ ಚಿತ್ರಗಳನ್ನು ಬಿಡಿಸಲು ಆರಂಭಿಸಿದರು. ಅದೇ ಅವರಿಗೆ ಅಭ್ಯಾಸವಾಗಿ ಹೋಯಿತು. ತರಗತಿಯ ಒಳಗೂ ಚಿತ್ರ ಬಿಡಿಸುವ ಚಟವನ್ನು ಹತ್ತಿಸಿಕೊಂಡರು! 

ಶಾಲೆಯಲ್ಲಿ ಭಾಗವಹಿಸಿದ ಚಿತ್ರಕಲೆ ಸ್ಪರ್ಧೆಯಲ್ಲಿ ಬಹುಮಾನಗಳು ಬರಲಾರಂಭಿಸಿದವು. ಇದರಲ್ಲೇ ವೃತ್ತಿ ಜೀವನ ಕಂಡುಕೊಳ್ಳುವ ಉದ್ದೇಶದಿಂದ ಮೈಸೂರಿನ ವೈಜಯಂತಿ ಶಾಲೆಯಲ್ಲಿ ಚಿತ್ರಕಲೆಯ ಡಿಪ್ಲೊಮಾಗೆ ಸೇರಿಕೊಂಡರು. ಹಂಪಿ ವಿಶ್ವವಿದ್ಯಾಲಯದಲ್ಲಿ ಚಿತ್ರಕಲೆಯಲ್ಲಿ ಪದವಿ ಪಡೆದರು. ನಂತರ ಗುಲ್ಭರ್ಗ ವಿವಿಯಲ್ಲಿ ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡು ಉತ್ತಮ ಚಿತ್ರಕಲಾಕಾರರಾಗಿ ರಾಷ್ಟ್ರದ ಉದ್ದಗಲಕ್ಕೂ ಇಂದು ಸಂಚರಿಸುತ್ತಿದ್ದಾರೆ.

ವಾಲ್ ಪೇಂಟಿಂಗ್, ಪರಿಸರ ಜಾಗೃತಿ, ಅರಣ್ಯ ಇಲಾಖೆಯ ಪ್ರಾಣಿ ಸಂರಕ್ಷಣೆ, ಶಿಕ್ಷಣ ಇಲಾಖೆಯ ಶೈಕ್ಷಣಿಕ ಜಾಗೃತಿ ಸೇರಿದಂತೆ ಸಾಮಾಜಿಕವಾಗಿ ಪರಿಣಾಮ ಬೀರುವ ಚಿತ್ರಗಳನ್ನು ರಾಜ್ಯದ ಎಲ್ಲ ಜಿಲ್ಲೆಗಳ ಪ್ರಮುಖ ಕೇಂದ್ರಗಳಲ್ಲಿ ಬಿಡಿಸಿದ್ದಾರೆ. ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಹಾಗೂ ಕಲಾ ಶಿಬಿರಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದಾರೆ.  

2019ರಲ್ಲಿ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ ಮಧುಸೂದನ್‌ ಅವರನ್ನು ಅರಸಿಕೊಂಡು ಬಂದಿದೆ. 2021ರಲ್ಲಿ ದೃಶ್ಯ ಬೆಳಕು ಪ್ರಶಸ್ತಿಗೆ ಭಾಜನರಾಗಿದ್ದಾರೆ. 

ಗೋಡೆಯಲ್ಲಿ ಚಿತ್ರಬಿಡಿಸುವುದರಲ್ಲಿ ನಿರತ ಮಧುಸೂದನ್‌
ಗೋಡೆಯಲ್ಲಿ ಚಿತ್ರಬಿಡಿಸುವುದರಲ್ಲಿ ನಿರತ ಮಧುಸೂದನ್‌

‘ಕಲಾವಿದರಿಗೆ ಪ್ರೋತ್ಸಾಹ ಅಗತ್ಯ’

ಈ ಬಾರಿಯ ಜಂಬೂ ಸವಾರಿಯಲ್ಲಿ ಭಾಗವಹಿಸಿದ್ದ ಜಿಲ್ಲೆಯ ಸ್ತಬ್ಧಚಿತ್ರಕ್ಕೆ ಬಹುಮಾನ ಬಂದಿರುವುದಕ್ಕೆ ಮಧುಸೂದನ್‌ ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡರು.  ಕಲಾವಿದರ ಸಂಖ್ಯೆ ಕಡಿಮೆಯಾಗುತ್ತಿರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸುತ್ತಾರೆ.  ‘ಡಿಜಿಟಲ್ ಮಾಧ್ಯಮ ತಂತ್ರಜ್ಞಾನದಿಂದಾಗಿ ಈಗ ಚಿತ್ರ ಕಲಾವಿದರ ಕೊರತೆ ಕಾಡುತ್ತಿದೆ. ಮುಂದಿನ ದಿನಗಳಲ್ಲಿ ನಮ್ಮಂತಹ ಕಲಾವಿದರನ್ನು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಈ ಕಲೆಗೆ ಹೆಚ್ಚು ಒತ್ತು ನೀಡಿ ಜಿಲ್ಲೆಯ ಪ್ರತಿಭಾನ್ವಿತ ಕಲಾವಿದರನ್ನು ಹುಡುಕಿ ಪ್ರೋತ್ಸಾಹಿಸಬೇಕಾಗಿದೆ’ ಎಂದು ಮಧುಸೂದನ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT