ಬುಧವಾರ, ಆಗಸ್ಟ್ 10, 2022
25 °C
ಅನುಭವ ಮಂಟಪ‍ ನಿರ್ಮಾಣಕ್ಕೆ ಶ್ರಮಿಸಿದವರಿಗೆ ವಿರಕ್ತಮಠದಿಂದ ಸನ್ಮಾನ

ಚಾಮರಾಜನಗರ | ಜಿಲ್ಲೆಯ ಮಠಾಧೀಶರ ಕಮ್ಮಟ ಶೀಘ್ರ: ಸೋಮಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಲ್ಲಿರುವ ವೀರಶೈವ ಲಿಂಗಾಯತ ಮಠಗಳ ಎಲ್ಲ ಮಠಾಧೀಶರನ್ನು ಒಂದೆಡೆ ಸೇರಿಸಿ ಶೀಘ್ರದಲ್ಲಿ ಕಮ್ಮಟ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಶನಿವಾರ ಹೇಳಿದರು. 

ನಗರದ ಸಿದ್ದಮಲ್ಲೇಶ್ವರ ವಿರಕ್ತ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಕಮ್ಮಟದಲ್ಲಿ ಮಠಗಳು ಹಾಗೂ ಸಮಾಜ ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿ, ಸರ್ಕಾರದ ವತಿಯಿಂದ ಅವುಗಳಿಗೆ ಯಾವ ರೀತಿ ಸ್ಪಂದಿಸುವ ಕೆಲಸ ಮಾಡಲಾಗುವುದು ’ ಎಂದರು. 

‘ಮಠ ಮಾನ್ಯಗಳು ಈ ದೇಶದ ಸಂಪತ್ತು. ನಮ್ಮ ದೇಶದ ಇತಿಹಾಸ ಭಾವೈಕ್ಯತೆ, ನಡುವಳಿಕೆಗಳನ್ನು ಬೇರೆ ರಾಷ್ಟ್ರಗಳಲ್ಲಿ ಕಾಣಲು ಸಾಧ್ಯವಿಲ್ಲ. 800 ವರ್ಷಗಳ ಹಿಂದೆ ಬಸವಣ್ಣ ಅವರು ಸಮಾಜವನ್ನು ಸರಿದಾರಿಗೆ ತರುವ ಕೆಲಸ ಮಾಡಿದರು. ಜಿಲ್ಲೆಯ ಅಭಿವೃದ್ಧಿಯಲ್ಲೂ ಮಠ ಮಾನ್ಯಗಳ ಕೊಡುಗೆ ಇದೆ’ ಎಂದರು. 

‘ಮಠಗಳಿಗೆ, ಮಠಾಧೀಶರಿಗೆ ಅಣ್ಣ, ತಮ್ಮ ಇತರೆ ಸಂಬಂಧಗಳಿಲ್ಲ. ಇಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣಲಾಗುತ್ತದೆ. ಸಿದ್ದಮಲ್ಲೇಶ್ವರ ವಿರಕ್ತ ಮಠವು ಕೇವಲ ವೀರಶೈವ ಲಿಂಗಾಯತರಿಗೆ ಸೀಮಿತವಾಗಿಲ್ಲ. ಎಲ್ಲ ಜಾತಿ ಧರ್ಮ ವರ್ಗಗಳ ಜನರು ಇಲ್ಲಿ ಬಂದು ಆಶೀರ್ವಾದ ಪಡೆಯುತ್ತಾರೆ. ಹಿರಿಯ ಸ್ವಾಮೀಜಿ ಅವರ ತಪಸ್ಸಶಕ್ತಿ ಮುಂದುವರಿದೆ. ಅದು ಇಲ್ಲಿ ಕಾಣಿಸುತ್ತಿದೆ’ ಎಂದರು. 

ತುಮಕೂರಿನ ಸಿದ್ಧಗಂಗಾ ಮಠ, ಕೊಪ್ಪಳದ ಗವಿಸಿದ್ದೇಶ್ವರ ಮಠ, ಸಾಲೂರು ಮಠ, ಮರಿಯಾಲದ ಮಠಗಳೊಂದಿಗಿನ ಒಡನಾಟವನ್ನು ಉಲ್ಲೇಖಿಸಿದ ಅವರು, ‘ಮಠಗಳಲ್ಲಿ ಪವಾಡಗಳು ನಡೆಯುತ್ತವೆ. ನನಗೆ ಅದು ಸ್ವತಃ ಅನುಭವಕ್ಕೆ ಬಂದಿದೆ’ ಎಂದರು. 

ಭಾವುಕರಾದ ಶ್ರೀಗಳು: ಪ್ರಸ್ತಾವಿಕವಾಗಿ ಮಾತನಾಡಿದ ವಿರಕ್ತಮಠದ ಚೆನ್ನಬಸವಸ್ವಾಮೀಜಿ ಅವರು ಹಲವು ಬಾರಿ ಭಾವುಕರಾದರು. 

‘ಅನುಭವ ಮಂಟಪ ನಿರ್ಮಿಸಬೇಕು ಎಂಬುದು ಹಿರಿಯ ಶ್ರೀಗಳ ಕನಸಾಗಿತ್ತು. ಆದರೆ, ಆಗ ಅಧು ಸಾಧ್ಯವಾಗಿರಲಿಲ್ಲ. 28 ವರ್ಷಗಳ ಬಳಿಕ ಭಕ್ತರ ಸಹಾಯದಿಂದ ಅದು ಸಾಧ್ಯವಾಗಿದೆ’ ಎಂದು ಭಾವುಕರಾದರು. 

‘ಪಟ್ಟಾಭಿಷೇಕ ಆದ ಸಂದರ್ಭದಲ್ಲಿ ನನಗೆ ಅನುಭವ ಇರಲಿಲ್ಲ. ಆ ಸಂದರ್ಭದಲ್ಲಿ ಮರಿಯಾಲದ ಮುರುಘ ರಾಜೇಂದ್ರ ಶ್ರೀಗಳು ಹಾಗೂ ಈಗಿನ ಇಮ್ಮಡಿ ಮುರುಘ ರಾಜೇಂದ್ರ ಶ್ರೀಗಳು ಮಾರ್ಗದರ್ಶನ ನೀಡಿದರು’ ಎಂದು ಹೇಳುತ್ತ ಮತ್ತೆ ಕಣ್ಣಂಚಿನಲ್ಲಿ ನೀರು ತಂದುಕೊಂಡರು.  

ಅನುಭವ ಮಂಟಪ ನಿರ್ಮಾಣ, ಉದ್ಘಾಟನೆ ಬಸವೇಶ್ವರ ಪ್ರತಿಮೆ ಅನಾವರಣೆ ಕಾರ್ಯಕ್ರಮ ಯಶಸ್ವಿಗೆ ಶ್ರಮಿಸಿದವರನ್ನು ಸ್ವಾಮೀಜಿ ಅವರು ಇದೇ ಸಂದರ್ಭದಲ್ಲಿ ಸ್ಮರಿಸಿದರು. 

ಸನ್ಮಾನ: ಅನುಭವ ಮಂಟಪ ನಿರ್ಮಾಣಕ್ಕೆ ನೆರವಾದ ಎಲ್ಲರನ್ನೂ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. 

ಮರಿಯಾಲ ಮಠದ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ, ಸಿದ್ದಮಲ್ಲೇಶ್ವರ ವಿರಕ್ತ ಗೌಡಹಳ್ಳಿ ಮಠದ ಮರಿತೋಂಟ ದಾರ್ಯ ಸ್ವಾಮೀಜಿ, ಕೊತ್ತಲವಾಡಿ ಮಠದ ಗುರುಸ್ವಾಮೀಜಿ, ಬಿಜೆಪಿ ಮುಖಂಡರಾದ ಅಮ್ಮನಪುರ ಮಲ್ಲೇಶ್‌, ನಾಗಶ್ರೀ ಪ್ರತಾಪ್‌, ಕಾಂಗ್ರೆಸ್‌ ಮುಖಂಡರಾದ ಮರಿಸ್ವಾಮಿ ಬಿ.ಕೆ.ರವಿಕುಮಾರ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್‌, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್‌.ಸುಂದರ್‌ರಾಜ್‌,  ವೀರ ಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಮೂಡ್ಲುಪುರ ನಂದೀಶ್‌, ಮುಖಂಡರಾದ ಹೊಸೂರು ನಟೇಶ್‌, ವೀರಭದ್ರಸ್ವಾಮಿ, ಕೋಡಿಮೋಳೆ ರಾಜಶೇಖರ್, ಕದಳಿ ಮಹಿಳಾ ವೇದಿಕೆ ಜಿಲ್ಲಾ ಅಧ್ಯಕ್ಷೆ ವಸಂತಮ್ಮ ಇತರರು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.