ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು: ದಾಖಲೆ ಬಿಡುಗಡೆ ಮಾಡಲಿ–ಕಾರಜೋಳಗೆ ಸಿದ್ದರಾಮಯ್ಯ ಸವಾಲು

Last Updated 2 ಜನವರಿ 2022, 12:51 IST
ಅಕ್ಷರ ಗಾತ್ರ

ಚಾಮರಾಜನಗರ: ‘ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಪಕ್ಷದ ನಿಲುವಿನ ಬಗ್ಗೆ ದಾಖಲೆಗಳಿದ್ದರೆ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಬಿಡುಗಡೆ ಮಾಡಲಿ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಭಾನುವಾರ ಸವಾಲು ಹಾಕಿದರು.

ನಗರದಲ್ಲಿ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮೇಕೆದಾಟು ಪಾದಯಾತ್ರೆ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಹಿಂದೆ ಕಾಂಗ್ರೆಸ್‌ ಸರ್ಕಾರ ಇತ್ತು, ನಂತರ ಮೈತ್ರಿ ಸರ್ಕಾರ ಬಂತು. ಆಗ ಏನೂ ಮಾಡಲಿಲ್ಲ. ಈಗ ಕಾಂಗ್ರೆಸ್‌ನವರು ಪಾದಯಾತ್ರೆ ಮಾಡುವುದಕ್ಕೆ ಹೊರಟಿದ್ದಾರೆ. ಇದು ರಾಜಕೀಯ ಗಿಮಿಕ್‌ ಎಂದು ಜಲ ಸಂಪನ್ಮೂಲ ಸಚಿವ ಕಾರಜೋಳ ಅವರು ಹೇಳಿಕೆ ನೀಡಿದ್ದಾರೆ. ‘ನನ್ನ ಬಳಿ ಮಹತ್ವದ ದಾಖಲೆಗಳಿವೆ. ಸ್ಫೋಟ ಮಾಡುತ್ತೇನೆ’ ಎಂದು ಹೇಳಿದ್ದಾರೆ. ದಾಖಲೆ ಇದ್ದರೆ ಕಾರಜೋಳ ಅವರು ಬಿಡುಗಡೆ ಮಾಡಲಿ, ರಾಜ್ಯದ ಜನರು ಅವುಗಳನ್ನು ನೋಡಲಿ‌’ ಎಂದು ಹೇಳಿದರು.

'2018ರಲ್ಲೇ ಯೋಜನೆಯ ಸಮಗ್ರ ಯೋಜನಾ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಬಿಜೆಪಿ ಸರ್ಕಾರ ಬಂದು ಎರಡೂವರೆ ವರ್ಷಗಳಾದರೂ ಯೋಜನೆಗೆ ಅನುಮತಿ ಪಡೆಯಲು ಆಗಿಲ್ಲ. ಡಬ್ಬಲ್‌ ಎಂಜಿನ್‌ ಸರ್ಕಾರ ಇದೆ ಎಂದು ಮೋದಿ ಹೇಳುತ್ತಿದ್ದಾರೆ. ನಿಮ್ಮದೇ ಸರ್ಕಾರ ಇದ್ದರೂ ಏನು ಕಡೆದು ಕಟ್ಟ ಹಾಕಿದ್ದೀರಿ? ಕೇಂದ್ರ ಪರಿಸರ ಸಚಿವಾಲಯ ಅನುಮತಿ ಕೊಟ್ಟರೆ ಸಾಕು. ಯೋಜನೆ ಕುಡಿಯುವ ನೀರಿನ ಯೋಜನೆಯಾಗಿದ್ದು, ಯಾರೂ ತಡೆಯೊಡ್ಡಲು ಬರುವುದಿಲ್ಲ. ಯೋಜನೆ ಪ್ರಶ್ನಿಸಿ ತಮಿಳುನಾಡು ಸಲ್ಲಿಸಿದ್ದ ಅರ್ಜಿಗೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ’ ಎಂದರು.

ಬಿಜೆಪಿಯರು ತಮಿಳುನಾಡು ಪರ: ‘ರಾಜಕೀಯ ಕಾರಣಕ್ಕೆ ತಮಿಳುನಾಡು ಕ್ಯಾತೆ ತೆಗೆದಿದೆ. ಅವರ ಮಾತು ಕೇಳಿಕೊಂಡು ಕೇಂದ್ರ ಸರ್ಕಾರ ಅನುಮತಿ ನೀಡುತ್ತಿಲ್ಲ. ಬಿಜೆಪಿಯವರು ಓಟಿಗಾಗಿ ತಮಿಳುನಾಡಿನ ಪರವಾಗಿ ವಕಾಲತ್ತು ಮಾಡಲು ಆರಂಭಿಸಿದ್ದಾರೆ. ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೆ ಮೇಕೆದಾಟು ಯೋಜನೆಗೆ ಅನುಮತಿ ನೀಡಬಾರದು ಎಂದು ಧರಣಿ ಕೂರುತ್ತಾರೆ. ಅಲ್ಲಿನ ಬಿಜೆಪಿ ಉಸ್ತುವಾರಿ, ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಅವರು ತಮಿಳುನಾಡಿನವರ ಪರವಾಗಿ ಮಾತನಾಡುತ್ತಿದ್ದಾರೆ. ಅಣ್ಣಾಮಲೆ ಅವರನ್ನು ಎತ್ತಿಕಟ್ಟುತ್ತಿದ್ದಾರೆ. ಅದಕ್ಕಾಗಿ ಯೋಜನೆ ವಿಳಂಬ ಆಗುತ್ತಿದೆ' ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT