ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ: ಆನೆಗಳಿಗೆ ಗುಂಡಿಕ್ಕಿ ಪೊಲೀಸರಿಗೆ ಸಿಕ್ಕಿ ಬಿದ್ದ ಸೆಲ್ವಮೇರಿ

1993ರಲ್ಲಿ ಟಾಡಾ ಕಾಯ್ದೆಯಡಿ ದಾಖಲಾಗಿತ್ತು ಪ್ರಕರಣ, 26 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಸೆಲ್ವಮೇರಿ
Last Updated 2 ಫೆಬ್ರುವರಿ 2020, 14:49 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಕಾಡುಗಳ, ನರಹಂತಕ ವೀರಪ್ಪನ್‌ ತಂಡದಲ್ಲಿದ್ದ, ಟಾಡಾ ಕಾಯ್ದೆಯಡಿ ಪ್ರಕರಣ ದಾಖಲಾಗಿ 26 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಸೆಲ್ವಮೇರಿ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಕಥೆ ರೋಚಕ.

ತಾಲ್ಲೂಕಿನ ಜಾಗೇರಿ ಬಳಿ ತನ್ನ ಎರಡನೇ ಪತಿಯೊಂದಿಗೆ ಸೇರಿ ಗುತ್ತಿಗೆ ಪಡೆದಿದ್ದ ಕಬ್ಬಿನ ತೋಟಕ್ಕೆ ನಾಲ್ಕು ದಿನಗಳ ಹಿಂದೆ ಆನೆಗಳ ಹಿಂಡು ಬಂದಿತ್ತು. ಈ ಸಂದರ್ಭದಲ್ಲಿ ಆನೆಗಳನ್ನು ಓಡಿಸುವುದಕ್ಕಾಗಿ ಸೆಲ್ವ ಮೇರಿ ಬಂದೂಕಿನಿಂದ ಗುಂಡಿನ ದಾಳಿ ನಡೆಸಿದ್ದಳು. ಈ ಸಂದರ್ಭದಲ್ಲಿ ಬೆಂಕಿ ತೋಟಕ್ಕೆ ಬಿದ್ದು ಸ್ವಲ್ಪ ಹಾನಿಯಾಗಿತ್ತು.

‘ಕೊಳ್ಳೇಗಾಲ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ, ‘ಗುಂಡು ಹೊಡೆಯುವುದನ್ನು ಎಲ್ಲಿ ಕಲಿತೆ’ ಎಂದು ವಿಚಾರಣೆ ನಡೆಸಿದ್ದಾರೆ. ಆಗ, ವೀರಪ್ಪನ್‌ ತಂಡದಲ್ಲಿದ್ದುದು ಸೇರಿದಂತೆ ಎಲ್ಲ ವಿವರಗಳನ್ನು ಸೆಲ್ವಮೇರಿ ನೀಡಿದ್ದಾಳೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದ ಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಎರಡು ವರ್ಷ ವೀರಪ್ಪನ್‌ ತಂಡದಲ್ಲಿ

ಮಾರ್ಟಳ್ಳಿ ಗ್ರಾಮದವಳಾದಸೆಲ್ವಮೇರಿ 13ನೇ ವರ್ಷದಲ್ಲಿಯೇ ವೀರಪ್ಪನ್‌ ತಂಡದಲ್ಲಿ ಸೇರಿಕೊಂಡಿದ್ದಳು. ಎರಡು ವರ್ಷಗಳ ಕಾಲ ವೀರಪ್ಪನ್‌ ಜೊತೆಗಿದ್ದಳು. ಈ ಸಂದರ್ಭದಲ್ಲಿ ವೀರಪ್ಪನ್‌ ತಂಡ ನಡೆಸಿದ ಪಾಲಾರ್‌ ಬಾಂಬ್‌ ಸ್ಫೋಟ, ರಾಮಾಪುರ ಪೊಲೀಸ್‌ ಠಾಣೆ ಮೇಲಿನ ದಾಳಿಗೆ ಈಕೆಯೂ ಸಹಾಯ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ಇದೇ ಆರೋಪದಲ್ಲಿ ಟಾಡಾ ಕಾಯ್ದೆ ಅಡಿಯಲ್ಲಿ 1993ರಲ್ಲಿ ಪ್ರಕರಣ ದಾಖಲಾಗಿತ್ತು.

ಬಲವಂತದ ಮದುವೆ

ಕಾಡುಗಳ್ಳ ವೀರಪ್ಪನ್‌ ಕಾಡಿನಲ್ಲಿ ಹೂತಿಟ್ಟಿದ್ದ ಹಣವನ್ನು ಸೆಲ್ವಮೇರಿ ಭಾವ ಶೇಷರಾಜ್‌ ಅಪಹರಿಸಿದ್ದ. ಈ ವಿಚಾರ ತಿಳಿದ ವೀರಪ್ಪನ್‌, ಶೇಷರಾಜ್‌ ಹಾಗೂ ಸೆಲ್ವಮೇರಿಯನ್ನು ಅಪಹರಿಸಿ, ತನ್ನ ಹಣವನ್ನು ಕೊಡುವಂತೆ ಕೇಳಿದ್ದ. ಅದಕ್ಕೆ ಶೇಷ ರಾಜ್‌ ಒಪ್ಪಿದ್ದ.

‘ವೀರಪ್ಪನ್‌ ಸಹಚರ ವೇಲೆಯನ್‌ ಅಲಿಯಾಸ್‌ ಸುಂಡ ಎಂಬಾತ ಸೆಲ್ವಮೇರಿಯನ್ನು ಬಲವಂತವಾಗಿ ಮದುವೆ ಮಾಡಿಕೊಳ್ಳುತ್ತಾನೆ. ಹಾಗಾಗಿ ಆಕೆ ತಂಡದಲ್ಲಿ ಇದ್ದಳು’ ಎಂದು ಆನಂದ್‌ ಕುಮಾರ್‌ ಅವರು ಮಾಹಿತಿ ನೀಡಿದರು.

ವೇಲೆಯನ್‌ ಮೃತಪಟ್ಟ ನಂತರ ಸೆಲ್ವಮೇರಿ ವೇಲುಸ್ವಾಮಿ ಎಂಬಾತನನ್ನು ಮದುವೆಯಾಗಿದ್ದಳು. 23 ವರ್ಷದಿಂದ ತಲೆಮರೆಸಿಕೊಂಡಿದ್ದ ಆಕೆ, ಜಾಗೇರಿ ಬಳಿ ಗುತ್ತಿಗೆ ಆಧಾರದ ಮೇಲೆ ಆರು ಎಕರೆಯಲ್ಲಿ ಕಬ್ಬು ಬೆಳೆದಿದ್ದಳು’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT