ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ: ಸಂತೆಯಿಂದ ಕೇರಳದ ಕಸಾಯಿಖಾನೆಗೆ ಜಾನುವಾರುಗಳ ಸಾಗಾಟ

Published 22 ನವೆಂಬರ್ 2023, 5:51 IST
Last Updated 22 ನವೆಂಬರ್ 2023, 5:51 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ರಾಜ್ಯದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ಜಾರಿಯಲ್ಲಿದ್ದರೂ  ತಾಲ್ಲೂಕಿನ ಬೇಗೂರು ಮತ್ತು ತೆರಕಾಣಾಂಬಿಯಲ್ಲಿ ಪ್ರತಿ ವಾರ ನಡೆಯುವ ಸಂತೆಯಿಂದ ಜಾನುವಾರುಗಳನ್ನು ಕೇರಳದ ಕಸಾಯಿ ಖಾನೆಗಳಿಗೆ ಸಾಗಿಸಲಾಗುತ್ತಿದೆ.

ಸೋಮವಾರ ನಡೆಯುವ ಬೇಗೂರು ಸಂತೆ ಮತ್ತು ಗುರುವಾರ ನಡೆಯುವ ತೆರಕಣಾಂಬಿ ಸಂತೆಯಲ್ಲಿ ರೈತರಿಂದ ಜಾನುವಾರುಗಳನ್ನು ಖರೀದಿಸಿ ಅಲ್ಲಿಂದ ರೈತರ ಸೋಗಿನಲ್ಲಿ ತಮಿಳುನಾಡಿನ ಗಡಿ ಭಾಗ ತಾಳವಾಡಿಗೆ ಕಾಲ್ನಡಿಗೆ ಮತ್ತು ಆಟೊಗಳ ಮೂಲಕ ತಲುಪಿಸಿ ಅಲ್ಲಿಂದ ಕೇರಳಕ್ಕೆ ಕಳುಹಿಸಲಾಗುತ್ತಿದೆ ಎಂಬ ಮಾಹಿತಿಯನ್ನು ಸ್ಥಳೀಯರು ನೀಡಿದ್ದಾರೆ.

ಬೇಗೂರಿನ ಸಂತೆಯಲ್ಲಿ ರೈತರಿಂದ ಜಾನುವಾರುಗಳನ್ನು ಖರೀದಿಸುವ ಸ್ಥಳೀಯ ದಲ್ಲಾಳಿಗಳ ತಂಡ, ಚಾಮರಾಜನಗರ ತಾಲ್ಲೂಕಿನ ಯಾನಗಳ್ಳಿ ಮೂಲಕ ಕಾಲುದಾರಿಯಲ್ಲಿ ತಾಳವಾಡಿ ಗಡಿ ಭಾಗಕ್ಕೆ ತಲುಪಿಸಿ ಅಲ್ಲಿಂದ ಕೇರಳ, ತಮಿಳುನಾಡಿಗೆ ಜಾನುವಾರುಗಳನ್ನು ಕಳುಹಿಸಲಾಗುತ್ತಿದೆ.

ಈ ವಿಷಯ ಆಯಾ ಠಾಣಾ ವ್ಯಾಪ್ತಿಯ ಸಿಬ್ಬಂದಿಗೆ ತಿಳಿದಿದ್ದರೂ, ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

‘ಸಂತೆಗಳು ನಡೆದ ದಿನ ಜಾನುವಾರುಗಳನ್ನು ಸಾಗಿಸುವ ಸಂದರ್ಭದಲ್ಲಿ ತೆರಕಣಾಂಬಿ ಮತ್ತು ಬೇಗೂರು ಠಾಣೆಯ ಗುಪ್ತಮಾಹಿತಿ ಸಿಬ್ಬಂದಿಗೆ ಒಂದು ಜಾನುವಾರಿಗೆ ಇಂತಿಷ್ಟು ಎಂದು ದಲ್ಲಾಳಿಗಳು ಹಣ ನೀಡುತ್ತಾರೆ. ಹಾಗಾಗಿ, ಅವರು ಸುಮ್ಮನಾಗುತ್ತಾರೆ. ಸ್ಥಳೀಯರು ಜಾನುವಾರುಗಳು ಕಸಾಯಿಖಾನೆಗೆ ಹೋಗುವ ಬಗ್ಗೆ ಮಾಹಿತಿ ನೀಡಿದರೂ ಕ್ರಮಕೈಗೊಳ್ಳುವುದಿಲ್ಲ’ ಎಂದು ಬೇಗೂರು ಹೋಬಳಿಯ ಹಾಲಹಳ್ಳಿ ಗ್ರಾಮದ ರಾಜಗೋಪಾಲ್ ದೂರಿದರು.

‘ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ ಮೂಲಕ ಜಾನುವಾರುಗಳನ್ನು ದಲ್ಲಾಳಿಗಳು ಸಾಗಿಸುವುದಿಲ್ಲ. ಚೆಕ್‌ಪೋಸ್ಟ್‌ನಲ್ಲಿ ಹಿಡಿಯುತ್ತಾರೆ ಎಂಬ ಕಾರಣಕ್ಕೆ ಗ್ರಾಮೀಣ ರಸ್ತೆಗಳಲ್ಲಿ ಗಡಿಭಾಗಕ್ಕೆ ಸಾಗಿಸಿ, ಮತ್ತೆ ಅಲ್ಲಿಂದ ಲಾರಿಗಳಲ್ಲಿ ಕಸಾಯಿ ಖಾನೆಗೆ ಕಳುಹಿಸಲಾಗುತ್ತಿದೆ. ತಮಿಳುನಾಡಿನಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿಲ್ಲದಿರುವುದರಿಂದ, ಅಲ್ಲಿ ಸಾಗಣೆಗೆ ಯಾವುದೇ ಸಮಸ್ಯೆ ಇಲ್ಲ. ತಮಿಳುನಾಡಿನ ಮೂಲಕ ಕೇರಳಕ್ಕೂ ಸಾಗಣೆಯಾಗುತ್ತದೆ’ ಎಂದು ರೈತ ಮುಖಂಡರೊಬ್ಬರು ಹೇಳಿದರು.

‘ಪ್ರತಿ ವಾರ ಈ ಎರಡು ಸಂತೆಗಳಿಂದ ಎರಡು ಮೂರು ಲಾರಿಗಳಿಗೆ ಜಾನುವಾರುಗಳನ್ನು ಲೋಡ್ ಮಾಡಲಾಗುತ್ತದೆ. ಅಂತರ ರಾಜ್ಯದ ನೋಂದಣಿಯ ಕಂಟೈನರ್ ಲಾರಿಗಳ ಮೂಲಕ ಜಾನುವಾರುಗಳನ್ನು ಸಾಗಣೆ ಮಾಡುತ್ತಾರೆ ಎಂದು ಮಾಹಿತಿ ಇದ್ದರೂ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗುತ್ತಿಲ್ಲ’ ಎಂದು ಅವರು ದೂರಿದರು.

ಕಾರ್ಯಾಚರಣೆಗೆ ಕ್ರಮ: ಎಸ್‌ಪಿ

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪದ್ಮಿನಿ ಸಾಹು‘ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಣೆ ಮಾಡುತ್ತಿರುವವರ ವಿರುದ್ಧ ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಿಸಲಾಗುತ್ತಿದೆ.  ಜಾನುವಾರುಗಳನ್ನು ಗಡಿಭಾಗಕ್ಕೆ ಕೊಂಡು ಹೋಗಿ ಅಲ್ಲಿಂದ ಸಾಗಾಟ ಮಾಡುತ್ತಿದ್ದರೆ ಕ್ರಮ ವಹಿಸಲಾಗುವುದು’ ಎಂದು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT