ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾವು ತಡೆಯಲು ಲಸಿಕೆಯೊಂದೇ ಅಸ್ತ್ರ’

ಗುಂಡ್ಲುಪೇಟೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಟಾಸ್ಕ್‌ಫೋರ್ಸ್‌ ಸಭೆ ನಡೆಸಿದ ಸುರೇಶ್‌ ಕುಮಾರ್‌
Last Updated 9 ಜೂನ್ 2021, 3:07 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಕೋವಿಡ್‌ ಸೋಂಕಿತರ ಪ್ರಮಾಣ ಕಡಿಮೆ ಮಾಡಲು ಪ್ರತಿಯೊಂದು ಹಳ್ಳಿಗಳಲ್ಲೂ ಪ್ರಾಥಮಿಕ, ದ್ವಿತೀಯ ಸಂಪರ್ಕಿತರನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಮಂಗಳವಾರ ಸಲಹೆ ನೀಡಿದರು.

ತಾಲ್ಲೂಕಿನ ಬಾಚಹಳ್ಳಿ, ಹುಂಡೀಪುರ, ಶಿವಪುರ, ಅಣ್ಣೂರು ಗ್ರಾಮಗಳಲ್ಲಿ ಪಂಚಾಯಿತಿ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಸಭೆ ನಡೆಸಿ ಮಾತನಾಡಿದ ಅವರು, ‘ಸಾವಿನ ಪ್ರಮಾಣ ತಡೆಗಟ್ಟಲು ಕೊರೊನಾ ಲಸಿಕೆ ಅಸ್ತ್ರವಾಗಿದ್ದು, ಅದನ್ನು ಪ್ರತಿಯೊಬ್ಬರಿಗೂ ನೀಡಬೇಕು. ಜನರು ಬೇಡವೆಂದು ತಿರಸ್ಕರಿಸಿದರೂ ಅವರ ಮನವೊಲಿಸಿ ಲಸಿಕೆ ಹಾಕಿಸುವ ಕೆಲಸಕ್ಕೆ ಗ್ರಾಮ ಪಂಚಾಯಿತಿ ಸದಸ್ಯರು, ಪಿಡಿಒಗಳು ಹಾಗೂ ಸ್ಥಳೀಯ ಮುಖಂಡರು ಮುಂದಾಗಬೇಕು’ ಎಂದು ಮನವಿ ಮಾಡಿದರು.

ಆಶಾ ಕಾರ್ಯಕರ್ತರಿಗೆ ಧೈರ್ಯ ತುಂಬಿ:‘ಕೋವಿಡ್‌ ಕುರಿತು ಹಲವು ಮಂದಿ ಅಪನಂಬಿಕೆ ಉಂಟು ಮಾಡಿದ್ದಾರೆ. ಈಗ ಅದರ ನಡುವೆಯೇ ಕೆಲಸ ಮಾಡಬೇಕಾಗಿದೆ. ಇದಕ್ಕೆ ಯಾರು ಎದೆಗುಂದದೆ ಕೋವಿಡ್ ನಿಗ್ರಹ ಮಾಡಬೇಕು. ಆಶಾ ಕಾರ್ಯಕರ್ತೆಯರು ಇದರಲ್ಲಿ ಹೆಚ್ಚಿನ ಶ್ರಮ ವಹಿಸುತ್ತಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಆದ್ದರಿಂದ ಪ್ರತಿಯೊಬ್ಬ ಗ್ರಾಮಸ್ಥರು ಇವರಿಗೆ ಬೆಂಬಲವಾಗಿ ನಿಂತು ಆತ್ಮಸ್ಥೈರ್ಯ ತುಂಬುವ ಮೂಲಕ ಗ್ರಾಮಗಳಲ್ಲಿ 100ರಷ್ಟು ಲಸಿಕೆ ಹಾಕುವ ಗುರಿ ಹೊಂದಬೇಕು’ ಎಂದು ತಿಳಿಸಿದರು.

‘ಅಂಗವಿಕಲರಿಗೆ ಕಡ್ಡಾಯವಾಗಿ ಲಸಿಕೆ ನೀಡಬೇಕು. ಆಸ್ಪತ್ರೆಗಳಿಗೆ ಅವರು ಬರಲು ಸಾಧ್ಯವಾಗದಿದ್ದರೆ ಮನೆಗಳಿಗೆ ಹೋಗಿ ಹಾಕಬೇಕು. ಆಂದೋಲನ ರೂಪದಲ್ಲಿ ಲಸಿಕೆ ಅಭಿಯಾನ ಮಾಡಿದರೆ ಯಾರ ಮನೆಯಲ್ಲೂ ಕೋವಿಡ್ ಸಾವು ಸಂಭವಿಸದಂತೆ ನೋಡಿಕೊಳ್ಳಬಹುದು. ತಾಲೂಕಿನಲ್ಲಿ ನಾಲ್ಕು ಕಡೆ 650 ಹಾಸಿಗೆ ಸಾಮರ್ಥ್ಯದ ಕೋವಿಡ್ ಕೇರ್ ಕೇಂದ್ರಗಳನ್ನು ತೆರೆಯಲಾಗಿದೆ. ಸೋಂಕಿತರು ಇಲ್ಲಿಗೆ ದಾಖಲಾಗುವ ಮೂಲಕ ಗುಂಡ್ಲುಪೇಟೆಯನ್ನು ಕೋವಿಡ್‌ ಮುಕ್ತ ತಾಲ್ಲೂಕು ಆಗಿಸಲು ಪಣ ತೊಡಬೇಕು ಎಂದು ಸಲಹೆ ನೀಡಿದರು.

ಶಾಸಕ ಸಿ.ಎಸ್.ನಿರಂಜನಕುಮಾರ್ ಅವರು ಮಾತನಾಡಿ, ‘ಕಟ್ಟುನಿಟ್ಟಿನ ಕ್ರಮ ವಹಿಸಿದರೆ ಕೋವಿಡ್‌ ನಿಯಂತ್ರಣ ಮಾಡಬಹುದು. ಲಸಿಕೆ ಬಗ್ಗೆ ಜನರಿಗೆ ಇದೀಗ ಅರ್ಥವಾಗಿದ್ದು, ಹೆಚ್ಚಿನ ಮಂದಿ ಲಸಿಕೆ ಪಡೆಯಲು ಮುಂದೆ ಬರುತ್ತಿದ್ದಾರೆ. ಪ್ರತಿಯೊಂದು ಗ್ರಾಮ ಪಂಚಾಯಿತಿಗಳಲ್ಲಿ ಯುವಕರು ವಾರಿಯರ್ಸ್‍ಗಳಂತೆ ಕೆಲಸ ಮಾಡಿ ಲಸಿಕೆ ಪಡೆಯದವರಿಗೆ ಹಾಕಿಸಿಕೊಳ್ಳುವಂತೆ ಮನವೊಲಿಸಲು ಮುಂದಾಗಬೇಕು’ ಎಂದರು.

ತಹಶೀಲ್ದಾರ್ ರವಿಶಂಕರ್, ತಾಲ್ಲೂಕು ಪಂಚಾಯಿತಿ ಇಒ ಶ್ರೀಕಂಠರಾಜೇ ಅರಸ್, ತಾಲ್ಲೂಕು ಆರೋಗ್ಯಾಧಿಕಾರಿ ರವಿಕುಮಾರ್, ಸಿಡಿಪಿಒ ಚಲುವರಾಜು, ಕೃಷಿ ಇಲಾಖೆ ಸಹಾಯ ನಿರ್ದೇಶಕ ರಂಗಸ್ವಾಮಿ, ಡಿವೈಎಸ್‍ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಇನ್‌ಸ್ಪೆಕ್ಟರ್ ಮಹದೇವಸ್ವಾಮಿ, ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎನ್.ಮಲ್ಲೇಶ್, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಣಯ್ ಸೇರಿದಂತೆ ಇತರರು ಹಾಜರಿದ್ದರು.

ಬೆದರಿಕೆ ಹಾಕುತ್ತಾರೆ:ಆಶಾ ಕಾರ್ಯಕರ್ತೆ ಅಳಲು

ಬಾಚಹಳ್ಳಿ ಗ್ರಾಮದ ಆಶಾ ಕಾರ್ಯಕರ್ತೆಯೊಬ್ಬರು ಮಾತನಾಡಿ, ‘ಕೋವಿಡ್ ಪರೀಕ್ಷೆ ಅಥವಾ ಲಸಿಕೆ ಪಡೆದುಕೊಳ್ಳುವಂತೆ ತಿಳಿ ಹೇಳಿದರೂ ಗ್ರಾಮದ ಕೆಲವು ಮಂದಿ ಅವಾಚ್ಯ ಶಬ್ದಗಳಿಂದದ ನಿಂದಿಸಿ, ಬೆದರಿಕೆ ಹಾಕುತ್ತಾರೆ. ‘ಆರೋಗ್ಯವಾಗಿರುವ ನಮಗೆ ಲಸಿಕೆ ಹಾಕಬೇಡಿ. ಒಂದು ವೇಳೆ ಲಸಿಕೆ ಹಾಗಿ ಆರೋಗ್ಯದಲ್ಲಿ ವ್ಯತ್ಯಯ ಉಂಟಾದರೆ ನೀವೇ ಜವಾಬ್ದಾರಿ ತೆದುಕೊಳ್ಳುತ್ತೀರಾ? ಈ ಬಗ್ಗೆ ನಮಗೆ ಬಾಂಡ್ ಪೇಪರ್‌ನಲ್ಲಿ ಬಡೆದುಕೊಡಿ’ ಎಂದು ಹೇಳುತ್ತಾರೆ’ ಎಂದು ಸಚಿವರ ಮುಂದೆ ಅಳಲು ತೋಡಿಕೊಂಡರು.

‘ಕೋವಿಡ್ ಮುಕ್ತ ಕರ್ನಾಟಕವಷ್ಟೇ ಗುರಿ’

ಕೋವಿಡ್ ಮುಕ್ತ ಕರ್ನಾಟಕ ಮತ್ತು ಉತ್ತಮ ಆಡಳಿತ ನೀಡುವುದು ಸರ್ಕಾರದ ಗುರಿ. ಇದನ್ನು ಬಿಟ್ಟು ಬೇರೆ ಯಾವುದೇ ಉದ್ದೇಶವಿಲ್ಲ ಎಂದು ಸಚಿವ ಸುರೇಶ್‌ ಕುಮಾರ್ ಅವರು ಹೇಳಿದರು.

ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಕೋವಿಡ್ ನಿಯಂತ್ರಣ ಮಾಡುವ ದಿನಗಳಲ್ಲಿ ರಾಜಕಾರಣದ ಬೆಳವಣಿಗೆ ಮಾತನಾಡುವುದು ಸೂಕ್ತವಲ್ಲ. ಆದ್ದರಿಂದ ಮುಖ್ಯಮಂತ್ರಿಗಳ ಬದಲಾವಣೆ ವಿಚಾರಕ್ಕೆ ಹೆಚ್ಚಿನ ಮಹತ್ವ ನೀಡುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT