ಬುಧವಾರ, ಆಗಸ್ಟ್ 4, 2021
20 °C
ಉಸ್ತುವಾರಿ ಸಚಿವ ಎಸ್‌.ಸುರೇಶ್‌ಕುಮಾರ್‌, ಗುಂಡ್ಲುಪೇಟೆ ಶಾಸಕರ ವಿರುದ್ಧ ಪುಟ್ಟರಂಗಶೆಟ್ಟಿ ಅಸಮಾಧಾನ

ನನ್ನ ಕ್ಷೇತ್ರದ ವಿಷಯಕ್ಕೆ ನಿರಂಜನ್‌ ಬರುವುದು ಬೇಡ: ಪುಟ್ಟರಂಗಶೆಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ನಾನು ಮೂರು ಬಾರಿ ಶಾಸಕನಾಗಿದ್ದೇನೆ. ನನ್ನ ಕ್ಷೇತ್ರದ ಅಭಿವೃದ್ಧಿ ಹೇಗೆ ಮಾಡುವುದು ಎಂದು ಗೊತ್ತಿದೆ. ಗುಂಡ್ಲುಪೇಟೆ ಶಾಸಕ ಸಿ.ಎಸ್‌.ನಿರಂಜನ್‌ಕುಮಾರ್‌ ಅವರು ನನ್ನ ಕ್ಷೇತ್ರದ ವಿಷಯಕ್ಕೆ ತಲೆ ಹಾಕುವುದು ಬೇಡ. ಎರಡು ವರ್ಷಗಳಲ್ಲಿ ಗುಂಡ್ಲುಪೇಟೆ ಕ್ಷೇತ್ರವನ್ನು ಎಷ್ಟು ಅಭಿವೃದ್ಧಿ ಮಾಡಿದ್ದಾರೆ ಎಂದು ಅವರು ತೋರಿಸಲಿ’ ಎಂದು ಚಾಮರಾಜನಗರ ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಸವಾಲು ಹಾಕಿದರು.  

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ನಿರಂಜನ್‌ ಕುಮಾರ್‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ‘ಜುಲೈ 5ರಂದು ನಡೆದ ವಿವಿಧ ಸಭೆಗಳಿಗೆ ನಮಗೆ ಆಹ್ವಾನ ಇರಲಿಲ್ಲ ಎಂಬ ಕಾರಣಕ್ಕೆ ನಾವು ಸಚಿವ ಸುರೇಶ್‌ ಕುಮಾರ್‌ ಅವರಿಗೆ ಘೇರಾವ್‌ ಹಾಕಿದ್ದೆವು. ಕೋವಿಡ್‌–19 ವಿಚಾರದಲ್ಲಿ ನಾನು ಮತ್ತು ಹನೂರು ಶಾಸಕ ನರೇಂದ್ರ ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ನಾವು ಯಾವ ರೀತಿ ರಾಜಕೀಯ ಮಾಡುತ್ತಿದ್ದೇವೆ ಎಂದು ಅವರು ಹೇಳಬೇಕು. ಕೋವಿಡ್‌–19 ಸಂಬಂಧಿಸಿದಂತೆ ಅಧಿಕಾರಿಗಳು ಮಾಡುವ ಎಲ್ಲ ಕೆಲಸಗಳಿಗೆ ಸ್ಪಂದಿಸುತ್ತಿದ್ದೇವೆ. ಇವರೇ ರಾಜಕೀಯ ಮಾಡುತ್ತಿದ್ದಾರೆ’ ಎಂದರು. 

‘ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ಕುಮಾರ್‌ ಅವರು ನಮ್ಮನ್ನು ಕಡೆಗಣಿಸುತ್ತಿರುವುದಕ್ಕೆ ನಿರಂಜನ್‌ ಕುಮಾರ್‌ ಅವರೇ ಕಾರಣ. ನಮ್ಮ ಕ್ಷೇತ್ರದಲ್ಲಿ ನಡೆಯುವ ಸಭೆಯಲ್ಲಿ ಬಂದು ಭಾಗವಹಿಸುವುದು ಎಷ್ಟು ಸರಿ? ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಆದರೆ, ಪಕ್ಷಪಾತ ಮಾಡುತ್ತಿದ್ದಾರೆ. ಆರಂಭದಿಂದಲೂ ಸಭೆಗೆ ನಮ್ಮನ್ನು ಕರೆಯುತ್ತಿಲ್ಲ. ಮೂರು ಬಾರಿ ಅವರ ಗಮನಕ್ಕೆ ತಂದಿದ್ದೇನೆ. ಒಮ್ಮೆ ಕ್ಷಮೆ ಕೇಳಿ ಮತ್ತೆ ಮತ್ತೆ ಅದೆ ತಪ್ಪನ್ನು ಮಾಡುತ್ತಿದ್ದಾರೆ’ ಎಂದು ಅತೃಪ್ತಿ ಹೊರ ಹಾಕಿದರು.

ಭೇಟಿ ಬಗ್ಗೆ ಗಮನಕ್ಕೆ ತರುತ್ತಿಲ್ಲ: ‘ಹಿಂದಿನ ಬಿಜೆಪಿ ಸರ್ಕಾರದಲ್ಲಿ ಉಸ್ತುವಾರಿ ಸಚಿವರಾಗಿದ್ದ ಸೋಮಣ್ಣ, ಹಾಲಪ್ಪ, ರೇಣುಕಾಚಾರ್ಯ ಅವರು ಜಿಲ್ಲೆಗೆ ಬರುವಾಗ ಅಧಿಕಾರಿಗಳ ಮೂಲಕ ಹೇಳುತ್ತಿದ್ದರು. ನಾವು ಅವರಿಗೆ ಕಾಯುತ್ತಿದ್ದೆವು. ಆದರೆ, ಸುರೇಶ್‌ ಕುಮಾರ್‌ ಅವರು ಆ ರೀತಿ ಮಾಡುತ್ತಿಲ್ಲ. ಇದರಿಂದಾಗಿ ನನ್ನ ಹಕ್ಕುಚ್ಯುತಿಯಾಗುತ್ತಿದೆ’ ಎಂದು ಹೇಳಿದರು. 

ಪ್ರತಿಭಟನೆ: ಜಿಲ್ಲಾ ಕಾಂಗ್ರೆಸ್‌ ಸಮಿತಿ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್‌ ಅವರು ಮಾತನಾಡಿ, ‘ಸಭೆ ನಡೆಸುವಾಗ ಆಯಾ ಕ್ಷೇತ್ರದ ಶಾಸಕರನ್ನು ಕರೆಯುವುದು ಶಿಷ್ಟಾಚಾರ. ಉಸ್ತುವಾರಿ ಸಚಿವರು ಅವರ ಪಕ್ಷದ ಶಾಸಕರನ್ನು ಕರೆಸಿ ಸಭೆ ನಡೆಸುವುದು ಸರಿಯಲ್ಲ. ಕಾಂಗ್ರೆಸ್‌ ಶಾಸಕರನ್ನು ಇದೇ ರೀತಿ ನಿರ್ಲಕ್ಷ್ಯ ಮಾಡಿದರೆ, ಪಕ್ಷದ ಕಾರ್ಯಕರ್ತರು ಸಚಿವರ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು. 

‘ನಾಲಾಯಕ್‌ ಮಂತ್ರಿ’

ಚಾಮರಾಜನಗರದ ಕಾಂಗ್ರೆಸ್‌ ಮುಖಂಡ ನಂಜುಂಡಸ್ವಾಮಿ ಅವರು ಮಾತನಾಡಿ, ‘ಶಾಸಕರನ್ನು ಕಡೆಗಣಿಸಿರುವ ವಿ‌ಚಾರವಾಗಿ ಮೂರು ಬಾರಿ ಕ್ಷಮೆ ಕೋರಿದ್ದರೂ, ಮತ್ತೆ ಅದೇ ತಪ್ಪು ಮಾಡುತ್ತಿರುವ ಸುರೇಶ್‌ ಕುಮಾರ್‌ ಅವರು ನಲಾಯಕ್‌ ಮಂತ್ರಿ. ಕೇವಲ ಪ್ರಚಾರಕ್ಕಾಗಿ ಜಿಲ್ಲೆಗೆ ಬರುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು. 

‘ಕೊಡಗು ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ವಿ.ಸೋಮಣ್ಣ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಿದರೆ, ಜಿಲ್ಲೆಯು ಸ್ವಲ್ಪ ಅಭಿವೃದ್ಧಿಯಾದರೂ ಆಗಬಹುದು’ ಎಂದು ಅವರು ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು